ADVERTISEMENT

ಅಪ್ಪ ಅಂದ್ರ ನನ್ನ ಅಪ್ಪ!

ಗುರುಪ್ರಸಾದ ಕುರ್ತಕೋಟಿ
Published 26 ಜೂನ್ 2015, 19:30 IST
Last Updated 26 ಜೂನ್ 2015, 19:30 IST

ನನ್ನ ಅಪ್ಪ ಒಂಥರಾ ನನ್ನ ದೋಸ್ತ್ ಇದ್ದಂಗ ಬಿಡ್ರಿ! ನನಗ ಆತು, ನನ್ನ ತಮ್ಮಗ ಆತು ಅಂವ ಎಂದೂ ಹೊಡದು ಬಡದು ಮಾಡಿದ್ದ ಇಲ್ಲ. ಅಭ್ಯಾಸ ಮಾಡ್ರಿ, ಅವರಿವ್ರ ಜೊತಿ ಸ್ಪರ್ಧಾಮಾಡ್ರಿ ಅಂತ ಯಾವತ್ತೂ ನಮ್ಮ ಮ್ಯಾಲೆ ಒತ್ತಡ ಹೇರಲಿಲ್ಲ. ನನಗ ಇನ್ನೂ ಕಣ್ಣ ಮುಂದ ಅದ. ನಾನು ಎಸ್.ಎಸ್.ಎಲ್.ಸಿ ಪರೀಕ್ಷಾ ಬರಿಲಿಕತ್ತಿದ್ದೆ. ಎಷ್ಟೋ ಅಪ್ಪಂದ್ರು ತಮ್ಮ ಮಕ್ಕಳಿಗೆ ಕಾಪಿ ಮಾಡಸಲಿಕ್ಕೆ ತಯಾರಿ ನಡಸಿದ್ರ ನನ್ನಪ್ಪ ನಿನಗ ಎಷ್ಟು ಬರ್ತದ ಅಷ್ಟು ಬರಿ ಕಾಪಿ ಗೀಪಿ ಮಾಡಬ್ಯಾಡ ಅಂತ ಹೇಳಿದ್ದ. ಆ ಮಾತು ನನ್ನ ಅಪ್ಪನ ಮ್ಯಾಲಿನ ನನ್ನ ಅಭಿಮಾನ ಇನ್ನೂ ಜಾಸ್ತಿ ಮಾಡಿತ್ತು!

ನನ್ನ ಅಪ್ಪನೊಳಗ ನನಗ ಭಾಳ ಸೇರು ಅಂಥದ್ದು ಅಂದ್ರ ಅವ್ನ ಕ್ಷಮಾಗುಣ. ಅಂವ ಎಂಥೆತವ್ರನ್ ಕ್ಷಮಿಸ್ಯಾನ ಅಂತೀರಿ? ಹಿಂಗ ಒಬ್ಬಾವ ಒಂದ ಸಲಾ, ಇವ ಬೆವರು ಸುರಿಸಿ ಗಳಿಸಿದ್ ಆಸ್ತಿನ ಹೋಡಕೋಳಿಕ್ಕೆ ಕೋರ್ಟ್‌ಗೆ ಹೋಗಿದ್ದ. ನನ್ನಪ್ಪಾ ಅವನ್ನ ಮಗನ ಹಂಗ ನೋಡಕೊಂಡಿದ್ದ. ಆದ್ರ ಅಂವ ಮಾತ್ರ ಇಂವಗ ವಿಶ್ವಾಸ ದ್ರೋಹ ಮಾಡಿದ್ದ. ಅಂಥಾ ಮನಶ್ಯಾನ ಕ್ಷಮಾ ಮಾಡಿದಾ. ಹಂಗ ಮಾಡ್ಲಿಕ್ಕೆ ದೊಡ್ಡ ಮನಸ್ಸು ಬೇಕು.

ಎಷ್ಟೋ ಸರ್ತಿ ಹಿಂಗ ಆದಾಗ, ಏನಪಾ ಅವಂಗ ಕ್ಷಮಿಸಿ ಬಿಟ್ಯಲ್ಲ... ಅಂತ ನಾವ್ ಅಂದ್ರ, ಹೋಗ್ಲಿ ಬಿಡಲೇ.... ಅಂತಾನ! ನಾನು ಕಲಿಲಿಕ್ಕೆ ಅಂತ ಬಾಗಲಕೋಟಿ ಊರಾಗ ಇದ್ದೆ. ನಮ್ಮ ಊರೊಳಗ ಅಪ್ಪ, ಅಮ್ಮ ಮತ್ತ ನನ್ನ ತಮ್ಮ ಇರತಿದ್ರು. ಅವನದು ಮುಂಜಾನೆ ಯೋಳ್ ಗಂಟೆಕ್ಕ ಕಾಲೇಜಿನ್ಯಾಗ ಪ್ರೊಫೆಸರ್ ಕೆಲಸ. ಅವಾಗ ಅಮ್ಮಗ ಭಾಳ ಆರಾಮ ಇರಲಿಲ್ಲ. ಇಂವ ಮುಂಜಾನೆ ಜಲ್ದಿ ಎದ್ದು ಅಕಿಗೆ ತಿನ್ಲಿಕ್ಕೆ ಮಾಡಿ ಇಟ್ಟು, ಕಾಲೇಜಿಗೆ ಹೋಗಿ, ಮತ್ತ ಮಧ್ಯಾಹ್ನ ಬಂದು ಅಡಿಗಿ ಮಾಡಿ, ಆಕಿಗೆ ಊಟಕ್ಕ ಹಾಕತಿದ್ದ. ನರ್ಸಿನಂಗ ಆಕಿ ಔಷಧ, ಉಪಚಾರಾ ಎಲ್ಲಾ ಮಾಡಿದಾ.

ಆ ಪರಿ ಆಕಿ ಸೇವಾ ಮಾಡಿದ್ರೂನು ಒಂದ ಒಂದು ಸಲಾನೂ ಬ್ಯಾಸರಾ ಮಾಡಕೊಂಡಿದ್ದು ನಾನು ನೋಡಲಿಲ್ಲ. ಇಂಥಾದ್ರಾಗ ಒಮ್ಮೆ ಸ್ಕೂಟರ್ ಕಾಲ್ ಮ್ಯಾಲೆ ಹಾಕ್ಕೊಂಡು ಬಿದ್ದಿದ್ದ. ಕಾಲು ಬಾವು ಬಂದಿತ್ತು. ಅಮ್ಮಗ ಉಪಚಾರ ಮಾಡೋದ್ರಾಗ ಅದರ ಬಗ್ಗೆ ಲಕ್ಷಾನೂ ಕೊಡಲಿಲ್ಲ. ಫ್ರಾಕ್ಚರ್ ಆಗಿತ್ತೋ ಏನೋ ಗೊತ್ತಿಲ್ಲ. ಸ್ವಲ್ಪ ದಿವಸದ ಮ್ಯಾಲೆ ಅದು ತಾನ ಕಡಿಮ್ಯಾತು.

ನನ್ನ ಓದಿಗಂತೂ ಯಾವಾಗಲೂ ಕಡಿಮಿ ಮಾಡ್ಲಿಲ್ಲ. ತನಗ ಖರ್ಚು ಜಾಸ್ತಿ ಆವ ಅಂತ ನನಗ ಗೊತ್ತ ಆಗ್ಲಿಕ್ಕೂ ಬಿಡ್ಲಿಲ್ಲ. ತಾನು ಕಷ್ಟ ಪಟ್ಟು ನಮಗ ಒಂದು ಒಳ್ಳೆ ದಾರಿ ತೋರ್ಸಿದಾ. ಇಂಥಾ ಅಪ್ಪನ್ನ ಪಡಿಲಿಕ್ಕೆ ನಾನು ಹೋದ ಜನಮದಾಗ ಭಾಳ ಪುಣ್ಯ ಮಾಡಿದ್ದೆ ಅಂತ ನನಗನಸ್ತದ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.