ADVERTISEMENT

ಉಳಿಸಿಕೊಂಡಂತೆ ಉಂಟು ನಂಟು

ಡಾ.ವಾಣಿ ಸಂದೀಪ್
Published 21 ಏಪ್ರಿಲ್ 2017, 19:30 IST
Last Updated 21 ಏಪ್ರಿಲ್ 2017, 19:30 IST
ಉಳಿಸಿಕೊಂಡಂತೆ ಉಂಟು ನಂಟು
ಉಳಿಸಿಕೊಂಡಂತೆ ಉಂಟು ನಂಟು   

ಫೋನ್ ಮಾಡಿದಾಗ, ಅಮ್ಮ ಎರಡನೇ ರಿಂಗ್‌ಗೆ ಫೋನ್ ಎತ್ತಿಕೊಂಡಿದ್ದಳು. ‘ನಿನ್ನನ್ನೇ ನೆನಪು ಮಾಡಿಕೊಳ್ಳುತ್ತಿದ್ದೆ, ಮಾತನಾಡಬೇಕು ಅನ್ನಿಸಿತ್ತು. ನಿನ್ನ ಕರೆ ಬಂತು. ಈಗ ನಿರಾಳ, ಮನಸ್ಸು ಹಗುರವಾಯ್ತು’ ಎಂದಳು. ಪ್ರತಿಸಲ ಫೋನ್‌ ಮಾಡಿದಾಗಲೂ ಅಮ್ಮ ಕಡಿಮೆಯೆಂದರೂ ಮುಕ್ಕಾಲು ಗಂಟೆ ಮಾತನಾಡುತ್ತಾಳೆ.

ಗೆಳೆಯನೊಬ್ಬ – ‘ಬೆಂಗಳೂರಿನ ನಿನ್ನ ಮನೆಯ ಎದುರುಗಡೆ ಇದ್ದೇನೆ, ಮಾತನಾಡಬೇಕು ಅನ್ನಿಸಿತು, ಕಾಲ್ ಮಾಡಿಯೇ ಬಿಟ್ಟೆ, ಬಿಜಿ ಇರುವೆಯಾ?’ ಎಂದಾಗ ಮನಸ್ಸು ತುಂಬಿಬರುತ್ತದೆ. ಅಮ್ಮ ಎನ್ನುವುದು ಮಮತೆ, ಆಪ್ತತೆ. ‘ಬಿಜಿ ಇರುವೆಯಾ?’ ಎನ್ನುವ ಗೆಳೆಯನದು ಸಲಿಗೆ. ಒಂದು ರಕ್ತಸಂಬಂಧ, ಇನ್ನೊಂದು ಸ್ನೇಹಸಂಬಂಧ. ಎರಡೂ ಸಂಬಂಧಗಳು – ಪ್ರೀತಿ, ಗೌರವ, ನಿಷ್ಕಲ್ಮಷ ಭಾವನೆಗಳ ಮೂಲಕ ನಮ್ಮನ್ನು ಜೀವಂತವಾಗಿರಿಸುತ್ತವೆ.

‘ಮಾವಿನ ಹಣ್ಣು ಊರಲ್ಲಿ ಬಹಳ, ನೋಡಿದಾಗಲೆಲ್ಲ ನಿನ್ನ ನೆನಪು. ಈಗ ಜೋರು ಮಳೆ ಬಂದಾಗಲೂ ನಿನ್ನ ನೆನಪಾಗುವುದು. ಮಳೆಯಲ್ಲಿ ತೋಯ್ದಿದ್ದು ನೆನಪಿದೆಯಾ? ಬಾ ಊರಿಗೆ’ ಎನ್ನುವುದು ಗೆಳತಿಯ ಆಹ್ವಾನ. ಮನಸು ಹಾತೊರೆಯುತ್ತದೆ ಆ ನೆನಪುಗಳಿಗೆ.  ಕೈ ಕೈ ಹಿಡಿದು ಮಳೆಯ ನೀರಿನಲ್ಲಿ ಜಿಗಿದ ಆ ಬಂಧವನ್ನು ಮರೆಯುವುದು ಸಾಧ್ಯವೆ? ಮಳೆಗೆ ಜೊತೆಯಾದ ಬಣ್ಣ ಬಣ್ಣದ ಛತ್ರಿಯನ್ನು ಹೇಗೆ ಮರೆಯುವುದು? ಚಿಕ್ಕ ಮಗು ಆರಂಭದಲ್ಲಿ ಅಮ್ಮನ ಕೈ ಹಿಡಿದು ನಡೆಯುತ್ತದೆ. ಕ್ರಮೇಣ ವಾಹನಸಂಚಾರದ ರಸ್ತೆಯಲ್ಲಿ ಒಂಟಿಯಾಗಿ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳುತ್ತದೆ. ಹಾಗೆ ನಡೆಯುವಾಗ, ಅಮ್ಮನ ಆ ಕೈಯ ಬಿಸುಪನ್ನು ನೆನಪಾಗದೆ  ಇದ್ದೀತಾ? ಅಸಹಾಯಕತೆಯಲ್ಲಿ, ನೋವಿನಲ್ಲಿ ಕೈ ಹಿಡಿದು ಮೇಲೆತ್ತಿದ ಆಸರೆಯನ್ನು, ಮನಸಾರೆ ಹರಸಿ ಮುದ್ದಿಟ್ಟ ಅಜ್ಜ–ಅಜ್ಜಿಯನ್ನು, ಆಪ್ತರನ್ನು ಮರೆಯುವುದು ಅಸಾಧ್ಯ. ದೂರದೂರಿನಲ್ಲಿ, ಸಾಗರಗಳಾಚೆ ನೆಲೆಸಿದ್ದರೂ ‘ಸಂಬಂಧ’ಗಳು ನಮ್ಮನ್ನು ಹಿಂಬಾಲಿಸುತ್ತವೆ. ಹಾಂ, ಈ ಸಂಬಂಧಗಳನ್ನು ನಿಭಾಯಿಸುವುದು ಸುಲಭವೇನಲ್ಲ, ಅದೊಂದು ಸಾಧನೆಯೇ ಸರಿ.

ADVERTISEMENT

ಬದುಕು ನಡೆಯುವುದನ್ನು ಮರೆತು ಓಡುತ್ತಿರುವ, ಬೆರಳ ತುದಿಯಲ್ಲಿ ಸಂಬಂಧಗಳು ಹುಟ್ಟಿಕೊಳ್ಳುತ್ತಿರುವ ದಿನಗಳಿವು. ವೈರುಧ್ಯ ನೋಡಿ: ಆಧುನಿಕತೆ, ತಂತ್ರಜ್ಞಾನ ಹೆಚ್ಚಿದಂತೆ ಸಂಬಂಧಗಳು ದುರ್ಬಲಗೊಳ್ಳುತ್ತಿವೆ.

ಸಂಬಂಧ ಎನ್ನುವುದು ಫಾಸ್ಟ್‌ ಫುಡ್‌ನಂತಲ್ಲ. ಪ್ರತಿ ಸಂಬಂಧಕ್ಕೂ ತನ್ನದೇ ಆದ ನಿರೀಕ್ಷೆ ಇರುತ್ತದೆ. ಕತ್ತಿಯ ಅಂಚಿನ ಮೇಲೆ ನಡೆದಂತೆ ಸಂಬಂಧಗಳನ್ನು ನಿಭಾಯಿಸುವ ಕಲೆ ಮೈಗೂಡಿಸಿಕೊಳ್ಳಬೇಕಾಗಿದೆ. ‘ವಸುದೈವ ಕುಟುಂಬಕಂ’ ಎನ್ನುವ ಭಾರತೀಯ ಮೌಲ್ಯ ವಿಶ್ವಪ್ರಸಿದ್ಧ. ಭಾರತೀಯ ಕುಟುಂಬಗಳಲ್ಲಿನ ಆತ್ಮೀಯತೆ ವಿಶ್ವಕ್ಕೆ ಮಾದರಿ. ಅಂಕಲ್–ಆಂಟಿಗೆ ಸೀಮಿತವಲ್ಲದ ನಮ್ಮ ಪ್ರೀತಿಯ ಪರಿಭಾಷೆ ವಿಸ್ತಾರವಾಗಿ ಹಬ್ಬಿದೆ. ಅಮ್ಮ–ಅಪ್ಪ, ಅಕ್ಕ–ತಮ್ಮ, ಅಜ್ಜ–ಅಜ್ಜಿ, ಅಣ್ಣ–ಅತ್ತಿಗೆ, ಸ್ನೇಹಿತರು... ಹೀಗೆ ಮುಂದುವರಿಯುತ್ತದೆ ನಮ್ಮ ಸಂಬಂಧಗಳ ಬಳ್ಳಿ. ಸ್ವಲ್ಪ ಸಮಯ ಮೀಸಲಿಟ್ಟರೆ, ಕೇಳಿಸಿಕೊಳ್ಳುವ ತಾಳ್ಮೆಯಿದ್ದರೆ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಸಂಬಂಧದ ಅನುಭೂತಿ ಸ್ಮರಣೀಯ.

ಮನುಷ್ಯನ ಶರೀರಕ್ಕೆ ಮುಪ್ಪು ಆವರಿಸುವುದು ಸಹಜ. ಆದರೆ, ಹೃದಯ–ಮನಸ್ಸುಗಳಿಗೆ ಮುಪ್ಪು ತಾಗದಂತೆ ಎಚ್ಚರವಹಿಸುವುದು ನಮ್ಮ ಕೈಯಲ್ಲೇ ಇದೆ. ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡಾಗ ಬಂಧ–ಅನುಬಂಧಗಳು ಅರ್ಥಹೀನವೆನಿಸುತ್ತವೆ – ರಕ್ತ ಸಂಬಂಧವಿರಲಿ, ಸ್ನೇಹವಿರಲಿ. ನಾಜೂಕು, ತಾಳ್ಮೆ, ನಂಬಿಕೆ ಇಲ್ಲದಿದ್ದರೆ ಯಾವ ಸಂಬಂಧವನ್ನೂ ಉಳಿಸಿಕೊಳ್ಳಲಾರೆವು.

ಜಗತ್ತಿನ ಅತಿ ದೊಡ್ಡ ಶಕ್ತಿ ಪ್ರೀತಿ. ಭೌತಿಕವಾಗಿ ಎಷ್ಟೇ ದೂರವಿದ್ದರೂ ಮಾನಸಿಕವಾಗಿ ತುಂಬಾ ಹತ್ತಿರ ಎನ್ನಿಸುವ ಭಾವನೆ ಉಂಟುಮಾಡುವ ಶಕ್ತಿ ಪ್ರೀತಿಗಿದೆ. ಈ ಪ್ರೀತಿ ಸಂಬಂಧಗಳನ್ನು ಜೀವಂತವಾಗಿಡುವ ಶಕ್ತಿಯೂ ಹೌದು. ನಂಟುಗಳನ್ನು ಉಳಿಸಿಕೊಳ್ಳಲು ಸುಳ್ಳಾಡದ, ಸ್ವಾರ್ಥಿಯಾಗದ ಮನೋಭಾವವೂ ಮುಖ್ಯ.

ಮನುಷ್ಯನಿಗೆ ನಡೆಯಲು ಕಾಲು ಸಹಾಯ ಮಾಡಿದರೆ, ಕೆಲಸ ಮಾಡಲು ಕೈ ಬೇಕು. ವಿಚಾರ ಮಾಡಲು ಮೆದುಳಿದೆ. ಚೈತನ್ಯವನ್ನು ಪಸರಿಸಲು ಹೃದಯವಿದೆ. ನೋಟಕ್ಕೆ ಕಣ್ಣು, ಸ್ಪರ್ಶದ ಅನುಭವಕ್ಕೆ ಚರ್ಮ, ಆಲಿಸಲು ಕಿವಿ, ಆಘ್ರಾಣಿಸಲು ಮೂಗು – ಇವೆಲ್ಲ ಅಂಗಗಳು ತಮ್ಮ ತಮ್ಮ ಕೆಲಸ ಸರಿಯಾಗಿ ನಿರ್ವಹಿಸಿದಾಗಲೇ ಬದುಕು ಸಲೀಸು. ಇವೆಲ್ಲದರ ಸಮ್ಮಿಲನವೇ ಮನುಷ್ಯ ಅನ್ನುವ ಯಂತ್ರ. ಯಾವುದೇ ಅಂಗ ತನ್ನ ಕ್ರಿಯೆಯನ್ನು ಮರೆತರೆ ಕಷ್ಟವಾದೀತು. ಅಂತೆಯೇ ಸಂಬಂಧಗಳು – ನಂಬಿಕೆ, ವಿಶ್ವಾಸ, ಸಹನೆ, ತಾಳ್ಮೆ, ಮುಂತಾದ  ಮೌಲ್ಯಗಳನ್ನು ಅವಲಂಬಿಸಿವೆ. ಒಂದರಲ್ಲಿ ಸಮತೋಲನ ತಪ್ಪಿದರೂ ಕಷ್ಟವೇ. ಒಂದು ಕಣ್ಣು ಮಿಟುಕಿಸಲು ಆಗದು, ಎರಡೂ ಕಣ್ಣುಗಳು ಮಿಟುಕುತ್ತವೆ. ಒಂದು ಕಣ್ಣು ಇನ್ನೊಂದು ಕಣ್ಣನ್ನು ನೋಡಲಾರದು. ಎರಡೂ ಕಣ್ಣುಗಳು ಸೇರಿ ದೃಷ್ಟಿ ಉದ್ಭವವಾಗುವುದು, ಒಬ್ಬರನ್ನೊಬ್ಬರು ಅರಿತರೆ ಮಾತ್ರ ಸಂಬಂಧದ ಬೇರು ನೆಲೆಯೂರಲು ಸಾಧ್ಯ.

ಸಂಬಂಧ ಜೀವನದ ಅತಿ ಮುಖ್ಯ ಮಜಲು. ಇದರ ಮಹತ್ವ ಅರಿಯಲೂ ಒಳ್ಳೆಯ ಹೃದಯ, ಮಾನವೀಯತೆಯ ಬುನಾದಿ ಅವಶ್ಯ.

ಮನುಷ್ಯ ನಿಂತ ನೀರಾಗಬಾರದು, ಹರಿವೇ ಜೀವನ ಎನ್ನುವುದು ಸತ್ಯ. ಆದರೆ, ಈ ಚಲನಶೀಲತೆಯ ಭರದಲ್ಲಿ ಸಂಬಂಧಗಳನ್ನು ಉಳಿಸಿಕೊಳ್ಳದೆ ಹೋದರೆ ಬದುಕು ಬರಡಾಗುವುದೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.