ADVERTISEMENT

ಎಲ್ಲಿಂದ ಬಂದೆವ್ವಾ

ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ – 2017

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST
ಎಲ್ಲಿಂದ ಬಂದೆವ್ವಾ
ಎಲ್ಲಿಂದ ಬಂದೆವ್ವಾ   
-ಹೇಮಲತಾ ಎಸ್. ಪೂಜಾರಿ
 
**
ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ – 2017 ಎರಡನೆಯ ಬಹುಮಾನ ಪಡೆದ ಪ್ರಬಂಧ
 
**
ಡಿಯೋ ಆನ್ ಮಾಡಿದಾಗ ‘ಎಲ್ಲಿದ್ದೆ ಇಲ್ಲಿತನಕ ಎಲ್ಲಿಂದ ಬಂದೆವ್ವಾ ನಿನಕಂಡು ನಾನ್ಯಾಕೆ ಮರುಗಿದೆನೋ’ ಎಂದು ಕನ್ನಡ ಚಲನಚಿತ್ರಗೀತೆಯು ತೇಲಿ ಬರುತ್ತಿರಲು ಮನಸ್ಸು ನೋವಾಗಿ ಹೃದಯ ಹಿಂಡಿದ ಅನುಭವಾಯಿತು. ಗತಕಾಲದ ನೆನಪಿನ ಬುತ್ತಿ ತಂತಾನೆ ಬಿಚ್ಚಿಕೊಂಡಿತು.
 
ಅಪ್ಪ ಅಮ್ಮನ ನಾಲ್ಕು ಮಕ್ಕಳಲ್ಲಿ ಕೊನೆಯ ಮುದ್ದಿನ ಮಗಳಾಗಿ ಬೆಳೆದು, ಕೂಡಿ ಮನೆತನದ ದೊಡ್ಡ ಮನೆತನದವರ ಚಿಕ್ಕ ಸೊಸೆಯಾಗಿಯೇನೋ ಹೋದೆ. ಆದರೆ ಅದು ತಲೆಯ ಮೇಲೆ ದೊಡ್ಡ ಬೆಟ್ಟವನ್ನೇ ಹೊತ್ತಂತೆ ಆಗಿತ್ತು. ಮನೆ ತುಂಬ ಆಳು ಕಾಳು. ಅತ್ತೆ ಮತ್ತು ಹಿರಿ ಓರಗಿತ್ತಿಯವರ ದರ್ಬಾರು, ಮಕ್ಕಳ ಹಠಮಾರಿತನ; ಮನೆ ತುಂಬಾ ಗಿಜಿಬಿಜಿ. ನನಗೆ ಇನ್ನೊಂದು ಪ್ರಪಂಚದ ಪರಿಚಯ ಮಾಡಿಕೊಟ್ಟಿತು. ನನ್ನವರು ಕೆಲಸದ ನಿಮಿತ್ತ ಬೇರೆ ಊರಿನಲ್ಲಿ ಇದ್ದುದರಿಂದ ನಾನು ಪರಕೀಯಳೇನೋ ಅನ್ನಿಸಿ ದುಃಖವಾಗುತ್ತಿತ್ತು. ಆದರೆ ಹೇಳಲಾರಿಗೆ? ಹೀಗೆಯೇ ಎರಡು ತಿಂಗಳು ಕಳೆದಮೇಲೆ ನಿಧಾನವಾಗಿ ಮನೆಯವರ ಜೊತೆ ಬೆರೆಯಲಾರಂಭಿಸಿದೆ. ಆದರೂ ತುಂಬಾ ಕಷ್ಟದಾಯಕವಾಗಿತ್ತು. ಗಂಟೆ ಹನ್ನೊಂದಾದರೂ ತಿಂಡಿ ತಿನ್ನುವ ಹಸಿವೇ ಯಾರಿಗೂ ಆಗುತ್ತಿರಲಿಲ್ಲವೇನೋ? ಹಾಗೂ ಹೀಗೂ ಎಲ್ಲರ ಸ್ನಾನವಾಗಿ, ಹನ್ನೆರಡು ಗಂಟೆ ನಾವು ತಿಂಡಿ ತಿನ್ನಬೇಕಾದರೆ! ಮಕ್ಕಳು ಊಟದ ವೇಳೆ ಆನಂತರ ಗಂಡಸರ ಊಟ ಆಮೇಲೆ. ಮತ್ತೆ ಮೂರು ಗಂಟೆಗೆ ನಮ್ಮ ಅಂದರೆ ಹೆಂಗಸರ ಊಟ. ಅಬ್ಬಾ! ಹೀಗೆ ದಿನ ಕಳೆಯುತ್ತಿರಲು ರೊಟ್ಟಿ ತಟ್ಟುತ್ತಾ ಒಲೆಯ ಮುಂದೆ ಕುಳಿತು ಮಲ್ಲಕ್ಕ ‘ಯವ್ವಾ ಬಸಪ್ಪಾಯಿ ಬರ್ತಾಳಂತೆ ಖರೆಯೇನು?’ ಅಂತಾ ಕೇಳಿದಳು. ‘ಯಾರವ್ವಾ ಅದು ನನಗೇನು ಗೊತ್ತು’ ಎಂದು ಸುಮ್ಮನಾದೆ ಆದರೆ ದೊಡ್ಡ ಓರಗಿತ್ತಿಯವರು ‘ಬಸಪ್ಪಾಯಿ ಇನ್ನು ಮುಂದೆ ಇಲ್ಲೇ ಇರ್ತಾಳಂತೆ’ ಎಂದು ಖುಷಿಯಿಂದ ಮಾತನಾಡ್ತಾ ಇದ್ದರು. ಅಂತೂ ನಾನು ಧೈರ್ಯ ಮಾಡಿ ನನ್ನತ್ತೆಯನ್ನು ‘ಬಸಪ್ಪಾಯಿ ಯಾರು’ – ಎಂದು ಕೇಳಿದೆ. ‘ಅಯ್ಯೋ ಅವೇನ್ ಕೇಳ್ತೀಯವಾ ಬಂದ ಮೇಲೆ ನಿನಗೆ ಗೊತ್ತಾಗತೈತೆ ಬಿಡು’ ಎಂದರು. ಎಲ್ಲರೂ ಇಷ್ಟು ಕಾಯುವ ಬಸಪ್ಪಾಯಿ ಬಗ್ಗೆ ನಂಗೆ ಇನ್ನಿಲ್ಲದ ಕುತೂಹಲ. ಅಂತೂ ಆ ದಿನ ಬಂತು ಬಸಪ್ಪಾಯಿ ಸವಾರಿ ಹಳ್ಳಿಗೆ ಬಂದು ಇಳಿಯಿತು. ನಾಲ್ಕು ಅಡಿಯ ಸಣ್ಣ ಕಡ್ಡಿಯಂತಹ ಹೆಣ್ಣುಮಗಳು. ಪುಟ್ಟ ಹಣೆಗೆ ಎರಡು ರೂಪಾಯಿ ಅಗಲದ ಕುಂಕುಮ. ಮೊಣಕಾಲ ಕೆಳಗೆ ಸೀರೆ, ಕಾಲಲ್ಲಿ ಹಾಕಿದ ಕಬ್ಬಿಣದಂತಹ ಕಾಲುಂಗುರ, ಕೆಂಪಾದ ಹಲ್ಲು, ಬಾಯಿತುಂಬ ಅಡಿಕೆ ಎಲೆ, ತಲೆಗಿಂತ ದೊಡ್ಡದಾದ ತುರುಬು – ಅಬ್ಬಾ ಇಷ್ಟೆ ಅಲ್ಲರಿ, ಎರಡು ಸೂಟ್‌ಕೇಸ್ ತುಂಬಿದರೂ ಹಿಡಿಸಲಾಗದಷ್ಟು ಭಾರ ಅವಳ ಜಂಪರದಲ್ಲಿ! ನೋಡಲು ತುಂಬ ಅಸಹ್ಯವಾಗಿ ನಾನು ಒಂದು ಮಾರು ಹಿಂದೆ ಜಿಗಿದೆ. ಅವಳೂ ನನ್ನನ್ನು ವಿಚಿತ್ರವಾಗಿ ನೋಡಿ ನಕ್ಕಳು ಅಷ್ಟೆ.
  
ದಿನಕಳೆದಂತೆ ಗೊತ್ತಾಯಿತು ಯಾರು ಯಾವ ಕೆಲಸ ಹೇಳಿದರೂ ತುಟಿಕ್ ಪಿಟಿಕ್ ಎನ್ನದೆ ನಗುತ್ತಲೆ ಎಲ್ಲಾ ಕೆಲಸ ಮಾಡುವಳು.
ಬೆಳಿಗ್ಗೆಯಿಂದ 2–3 ಗ್ಲಾಸ್ ಚಹಾ ಕುಡಿದರೆ ಸಾಕು, ಸ್ನಾನ ಆಗುವವರೆಗೂ ಏನೂ ತಿನ್ನುತ್ತಿರಲಿಲ್ಲ. ಅವಳ ಸ್ನಾನ ಸಾಯಂಕಾಲ ನಾಲ್ಕು ಅಥವಾ ಐದಕ್ಕೆ; ಯಾರೆಷ್ಟೇ ಹೇಳಿದರೂ ಬೇಗ ಸ್ನಾನ ಮಾಡಿ ತಿಂದವಳಿಲ್ಲ. ಸ್ನಾನ ಮಾಡಿ ಲಿಂಗಪ್ಪನ ಪೂಜೆ ಮಾಡಿಕೊಂಡು ಬಸನಣ್ಣೆಪ್ಪನ ಗುಡಿಗೆ ಹೋಗಿ ಕೈಮುಗಿದು ಬಂದ ಮೇಲೇನೇ ಊಟ. ಅವಳ ಮುಂದೆ ಕುಳಿತು ಏನೂ ತಿಂದರೂ ಆಸೆ ಪಡುವವಳಲ್ಲ. ಹೀಗೆ ವರ್ಷ ಕಳೆಯಿತು. ನಾನು ಬಸಪ್ಪಾಯಿ ಜೊತೆ ಅಷ್ಟಕ್ಕಷ್ಟೆ ಇದ್ದೆ. ಮತ್ತೆರಡು ವರ್ಷ ಕಳೆಯುವುದರಲ್ಲಿ ನಾನು ಎರಡು ಮಕ್ಕಳ ತಾಯಾಗಿದ್ದೆ. ಅಷ್ಟರಲ್ಲಿ ಯಾವ ಕಾಯಿಲೆ ಇಲ್ಲದ ಗಟ್ಟಿ ಮುಟ್ಟಾದ ನನ್ನ ಅಮ್ಮ 52ನೇ ವಯಸ್ಸಿಗೆ ಶಿವನ ಪಾದ ಸೇರಿಬಿಟ್ಟಳು. ಊಹಿಸಲೂ ಆಗದಂತ ಘಟನೆ ನನ್ನ ಮನಸ್ಸಲ್ಲಿ ಅಗಾಧ ನೋವನ್ನು ನೀಡಿತ್ತು. ಅಪ್ಪಾಜಿ ಅಮ್ಮನ ಕಾಳಜಿ ಪ್ರೀತಿಯ ಮಳೆ ಸುರಿಸುತ್ತಿತ್ತು, ತನ್ನ ದುಃಖದ ಬದಿಕೊಟ್ಟು. ಆದರೂ ಅಮ್ಮ ಅಮ್ಮನೇ ಅಲ್ಲವೇ?
 
ಬರದ ನಾಡಿನಲ್ಲಿ ನನ್ನ ಗಂಡನ ಮನೆ ಇದ್ದುದು. ಅಲ್ಲಿ ನಲ್ಲಿಯಲ್ಲಿ 10 ದಿನಗಳಿಗೊಮ್ಮೆ ನೀರು ಬಂದರೆ ಸಾಕ್ಷಾತ್ ದೇವರೇ ಧರೆಗಿಳಿದು ಬಂದನೇನೋ ಅನ್ನುವ ಸಡಗರ. ನಮ್ಮ ಮನೆಯಲ್ಲಿ ಮನೆ ತುಂಬ ಜನ. ಅದರಲ್ಲಿ ಈ ನೀರಿನ ಬವಣೆ. ಕೊಡಪಾನ ಅಂದರೆ ಬಿಂದಿಗೆ ಹೊತ್ತು ಅಭ್ಯಾಸವಿರದ ನನಗೆ ಕೊಡಪಾನ ಹೊತ್ತು ಹೊತ್ತು ಸೊಂಟದ ಮೇಲೆ ಮರೆಯಲಾಗದ ಗುರುತನ್ನೇ ಬಿಟ್ಟಿತು. ಮಕ್ಕಳು ಯಾವಾಗಲಾದರೂ ನೀರಿಗೆ ಬರುವುದುಂಟು. ಖಾಯಂ ಮನೆಯಲ್ಲಿರುವವರು ನಾನು ಮತ್ತೆ ಬಸಪ್ಪಾಯಿ. ಉಳಿದವರೆಲ್ಲಾ ನನಗಿರದ ಹೊಟ್ಟೆನೋವು, ಕಾಲುನೋವು ಇದೆ ಎಂದು ಹೇಳುತ್ತಿದ್ದರು. ಹಾಗಾಗಿ ವಿಧಿ ಇಲ್ಲದೆ ಬಸಪ್ಪಾಯಿ ಜೊತೆ ನೀರಿಗೆ ಹೋಗಲೇಬೇಕಾದ ಪರಿಸ್ಥಿತಿ. ಓಣಿಯಲ್ಲಿ ಸರಕಾರಿ ನಳಕ್ಕೆ ಒಡೆದ ಜಗ್ಗು, ಟಬ್ಬು, ಪಾತ್ರೆ – ಹೀಗೆ ಏನೇನೋ ಪಾಳೆಗೆ ಇಟ್ಟು ಕಾಯಬೇಕು. ಆಮೇಲೆ ಜಗಳ, ಕೂಗಾಟ; ಅಬ್ಬಾ ಭಗೀರಥಪ್ರಯತ್ನ ಮಾಡಬೇಕಾಗಿತ್ತು. ಬಸಪ್ಪಾಯಿ ಮಾತ್ರ ಯಾವುದಕ್ಕೂ ಸೋಲದ ನಳದ ಗುಂಡಿಯಲ್ಲಿ ಇಳಿದು ಹಿಡಿ ತಂಗಿ ಎಂದು ತುಂಬಿದ ಬಿಂದಿಗೆ ಕೊಡುತ್ತಿದ್ದಳು. ಮನೆಯಲ್ಲಿ ಕುಕ್ಕರ್, ಮಿಕ್ಸರ್, ಜಾರ್, ಕುಡಿಯುವ ನೀರಿನ ಗ್ಲಾಸ್ ಕೂಡ ತುಂಬಿಡುತ್ತಿದ್ದೆವು. ಇಷ್ಟಾದರೂ ನಾನು ಬಸಪ್ಪಾಯಿ ಜೊತೆ ಅಷ್ಟಕ್ಕಷ್ಟೆ. ಒಂದೆರಡು ಸಲ ಹೇಳಲು ಪ್ರಯತ್ನಿಸಿದೆ– ‘ನಿನಗೆ ಬೇಕಾದರೆ ಎರಡು ಸೂಟ್‌ಕೇಸ್ ಕೊಡುತ್ತೇವೆ; ನೀನು ಚೆಂದಾಗಿ ಇರು. ನೋಡು ಅಸಹ್ಯವಾಗಿ ಕಾಣಿಸ್ತೀಯಾ’ ಅಂದಾಗ ಅವಳು ಮಾರಿ ತಿರುವಿ ತನ್ನ ಕೆಲಸದ ಕಡೆ ಗಮನಕೊಡುವವಳೇ ವಿನಾ ಅದನ್ನು ತೆಗೆಯಲು ತಯಾರಿರಲಿಲ್ಲ.
 
ಹೀಗೆ ಕಾಲಚಕ್ರ ಉರುಳುತ್ತಿರಲು ಮನೆಯಲ್ಲಿಯ ಜಂಜಾಟಕ್ಕೆ ಬೇಸತ್ತು ಹೋದೆ. ಹೊರಗಿನ ಪ್ರಪಂಚದ ಅರಿವೇ ಇರಲಿಲ್ಲ. ಹೋಗು ಬರುವವರ ಮಕ್ಕಳ ಚಾಕರಿ ಮಾಡುವುದರಲ್ಲಿಯೇ ಬೆಳಗಾಗುತ್ತಿತ್ತು. ನನ್ನ ಮಗಳನ್ನು ಶಾಲೆಗೆ ಬಿಡಲೆಂದು ಹೋದಾಗ ಅಲ್ಲಿಯ ಮುಖ್ಯಶಿಕ್ಷಕಿ ನನ್ನ ಜೊತೆ ಮಾತನಾಡುತ್ತ ನಾನೇಕೆ ಅಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಬಾರದು ಎಂದು ಕೇಳಿದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಯಜಮಾನರ ಪರವಾಗಿಯೂ ದೊರೆತ ಮೇಲೆ ಇನ್ನು ಸಂತಸ ಹೊರ ವಾತಾವರಣದಲ್ಲಿ ಮಕ್ಕಳ ಸಾಂಗತ್ಯದಲ್ಲಿ ನನಗೆ ಹೊಸ ಜೀವನ ಕಂಡುದಾಗಿತ್ತು. ಹಾಗೆ ಒಂದು ದಿನ ಅಮ್ಮನ ಆರೆಂಜ್ ಬಣ್ಣದ ಸೀರೆ ಉಟ್ಟುಕೊಂಡು ಶಾಲೆಯಿಂದ 12 ಘಂಟೆಗೆ ಮನೆಗೆ ಬಂದೆ. ಬಸಪ್ಪಾಯಿ ಮಾಮೂಲಿನಂತೆ ರೊಟ್ಟಿ ಮಾಡುತ್ತ ಕುಳಿತ್ತಿದ್ದಳು. ನಾನು ಕಾಲು ತೊಳೆಯಲು ಬಚ್ಚಲಿಗೆ ಹೋದಾಗ ತಲೆ ಎತ್ತಿ ನನ್ನ ನೋಡಿದವಳೇ ಅದೇನೆನಿಸಿತೋ ಕಾಣೆ ‘ಅಯ್ಯೋ ತಂಗಿ ಇರು ಒಂದ್ನಿಮಿಷ; ಈ ಬಿಸಿಲ್ನಾಗ ಆರೆಂಜ್ ಸೀರೆ ಯಾಕ ಉಟ್ಕೊಂಡು ಹೋದೆ? ನೆದರ ಆದಂಗೈತೆ ತಡಿ ದೃಷ್ಟಿ ತೆಗೀತೀನಿ’ ಎಂದು ಎಡಗೈನಲ್ಲಿ ಏನೋ ಹಿಡಿದು ನನ್ನ ಮಾರಿ ಮೇಲೆ ನಿವಾಳಿಸಿ ರೊಟ್ಟಿ ಮಾಡುವ ಒಲೆಯಲ್ಲಿ ಒಗೆದಾಗ ಚಟಚಟ ಎಂದು ಸದ್ದು ಮಾಡಿತು. ‘ನೋಡು ಎಷ್ಟು ದೃಷ್ಟಿ ಆಗಿತ್ತು’  ಅಂತ ಹೇಳಿ ಒಲೆ ಮುಂದಿನ ಬೂದಿಯನ್ನು ಒಂದು ಬೆರಳಿನಿಂದ ಪ್ರಸಾದ ಎಂದು ನನ್ನ ಹಣೆಗಿಟ್ಟಳು. 
 
ನನ್ನ ಕಣ್ಣಂಚಿನಿಂದ ತಟ್ಟನೆ ಮುತ್ತೊಂದು ಜಾರಿತು. ಅಮ್ಮನ ಪ್ರೀತಿಯ ನೆನಪನ್ನು ಬಸಪ್ಪಾಯಿ ನನಗೆ ಹರಿಸಿದಳು. ನನ್ನ ಕಂಗಳನ್ನು ತನ್ನ ಸೀರೆಯ ಸೆರಗಿನಿಂದ ಒರೆಸಿ ‘ಬಾ ತಂಗಿ’ ಎಂದು ಬಿಸಿಬಿಸಿ ರೊಟ್ಟಿ, ಪಲ್ಯೆ, ಮೊಸರು, ಅಗಸಿ ಚಟ್ನಿ ಹಚ್ಚಿ ತಾಟನ್ನು ಕೈಗೆ ಕೊಟ್ಟರೆ ನನಗೆ ಹೇಳಲಾರದ ಅನುಭವ; ಯಾವ ಬಸಪ್ಪಾಯಿಯನ್ನು ಅಸಹ್ಯವಾಗಿ ಕಾಣುತ್ತಿದ್ದೆನೋ ಆಕೆ ನನಗೀಗ ತಾಯಿಪ್ರೀತಿ – ಅದೂ ನಿಃಸ್ವಾರ್ಥಸೇವೆಯಂತೆ ಉಣಿಸಿದ್ದಳು. ಇದೇ ನಮ್ಮ ದಿನಚರಿಯಾಗಿ ಬಸಪ್ಪಾಯಿ ಈಗ ನನಗೆ ಆಯಿ ಆಗಿದ್ದಳು. ನಾನು ಹೊರಗೆ ಹೋಗಬೇಕಾದಾಗಲೆಲ್ಲಾ ‘ಆಯಿ ನಿನಗೇನಾದರೂ ತರಬೇಕಾ’ ಅಂದಾಗ ಎರಡು ರೂಪಾಯಿ ತಂಬಾಕು, ಎರಡು ರೂಪಾಯಿ ಎಲೆ ಅನ್ನುತ್ತಿದ್ದಳಷ್ಟೆ.
 
ನಮ್ಮ ಅತ್ತೆಗೂ ಬಸಪ್ಪಾಯಿಗೂ ಅನುಬಂಧ. ಬಸ್ಸಿ ಅಂದರೆ ಸಾಕು ಅವರ ಮುಂದೆ ಹಾಜರು. ಅವರು ಊಟಕ್ಕೆ ಬಂದಾಗಲೆ ಹಂಚಿನ ಮೇಲೆ ಬಿಸಿ ರೊಟ್ಟಿ ತಯಾರು. ಅವಳೇನು ದೇವಮಾನವಳೋ ಗೊತ್ತಿಲ್ಲ. ಏಕೆಂದರೆ ಹುಷಾರಿಲ್ಲ ಎಂದು ಅವಳು ಮಲಗಿದ್ದೇ ಇಲ್ಲ. ನಾನು ಒಂದಿನ ಕೇಳಿದೆ ‘ಆಯಿ ನೀನ್ಯಾರು? ನಿನ್ನ ಕಥೆ ಏನು’ ಅಂತಾ. ‘ಅಯ್ಯೋ ಅದನ್ನ ತಿಳ್‌ಕೊಂಡು ಏನ್‌ಮಾಡ್ತಿ ; ನಾನು ನಿಮ್ಮ ಮನೆ ಹೆಣ್ಣುಮಗಳು. ಸಾಕಾ ಕೇಳಿದ್ದು’ ಅಂದಳು. ನಾನು ಬಾಯಿ ಮುಚ್ಚಿಕೊಂಡು ತೆಪ್ಪಗಾದೆ.
 
ಇಷ್ಟೊಂದು ಓರಗಿತ್ತಿಯವರು ಅವರ ಬೀಗರು ಎಲ್ಲರ ಮಧ್ಯೆ ಬೇಕಾದವಳು ಬಸಪ್ಪಾಯಿ. ಯಾರಿಗೂ ಜಗಳ ಹಚ್ಚದ ಆಯಿ ನನ್ನ ಮದುವಿಯಾಗೆ ಮುಂದೆ ನಮ್ಮವರು ದೂರದ ಊರಿಗೆ ವರ್ಗ ಆದಾಗ ನಮ್ಮನ್ನು ಅತ್ತೆಯವರನ್ನು ಕರೆದುಕೊಂಡು ಹೋಗಲು ನಿರ್ಧರಿಸಿದರು. ಆಗಲೂ ಆಯಿ ನನ್ನ ಜೊತೆಗೆ ಬಂದಳು. ನಾನು ಟ್ಯೂಷನ್ ಹೇಳುವಾಗ ನನ್ನ ಜೊತೆಯೆ ಕುಳಿತುಕೊಂಡು ಕೇಳುವವರು. ‘ಆಯಿ ನೀನು .......... ಮಾಡು; ಇಲ್ಲವೇ ಬಾ ಇಲ್ಲಿ. ನಿನಗೂ ಓದಲು ಕಲಿಸುವೆ’ ಎಂದಾಗ ದೊಡ್ಡ ಬಾಯಿ ನಕ್ಕು ಹೇಳಿದಳು, ‘ಅಯ್ಯೋ ನಾನು ಶಾಲೆಯ ಮುಂದೆ ಅಲ್ಲ, ಹಿಂದೆ ಕೂಡ ಹೋಗಿಲ್ಲಾ. ನಂಗೆಲ್ಲಿ ಓದಾಕ ಬರಬೇಕು; ಒಲ್ಲೆವಾ’ ಎಂದಳು. ಆದರೂ ಒಂದು ಪಟ್ಟಿಯನ್ನು ತಂದು ಅವಳ ಕೈ ಹಿಡಿದು ‘ಬಸವಾ’ ಎಂದು ಬರೆಯಿಸಿದಾಗ ಅವಳಿಗೆ ಹಿಗ್ಗೋ ಹಿಗ್ಗು, ‘ಏ ತಂಗಿ ನಿಮ್ಮ ಅತ್ತಿ ಮುಂದೆ ಹೇಳಬ್ಯಾಡವ್ವಾ ನಗತಾರೆ’ ಎಂದಳು ಪಾಪ.
 
ಏನೂ ತಿನ್ನಲು ಕೊಟ್ಟರೂ ‘ಮಕ್ಕಳಿಗಿರಲಿ ಬೇಡಾ’ ಅಂತಾನೇ ಹೇಳುವಳು. ಎಲ್ಲರ ಮಕ್ಕಳಿಗೂ ಎಣ್ಣೆ ಹಚ್ಚಿ ಸ್ನಾನ ಮಾಡಿಸುವವಳು. ತಿಂಗಳಿಗೊಮ್ಮೆ ದೊಡ್ಡವರಿಗೂ ಕೂಡ. ಹಂಡೆ ನೀರು ಖಾಲಿ ಮಾಡಿ ಮತ್ತೆ ‘ನೀರು ಖಾಲಿ ಮಾಡಿದಳು’ ಅಂತಾ ಎಲ್ಲರ ಕೈಲಿ ಬಯ್ಯಸಿಕೊಳ್ಳುವಳು. ಹಾಗೆ ಟ್ಯೂಷನ್ ದುಡ್ಡಿನಿಂದ ಆಯಿಗೆ ನಾನು ಇಪ್ಪತ್ತು ಸವರನ್‌ನ ಎರಡು ಬಳೆ ಮಾಡಿಸಿ ತಂದಾಗ ಅವಳ ಕಣ್ಣಿನಲ್ಲಿ ಅಶ್ರುಧಾರೆ. 
 
‘ಹುಚ್ಚಿ, ನೀ ಸಣ್ಣಾಕಿ; ನೀ ಹಾಕ್ಕೋ ನನಗ್ಯಾಕ’ ಎಂದಳು. ‘ಆಯಿ, ಇದು ನನ್ನ ಪ್ರೀತಿ; ನೀ ಬ್ಯಾಡ ಅನ್ನಬೇಡ’ ಅಂದಾಗ, ‘ಹಂಗಾರೆ ಕೆಲಸ ಮಾಡಿ ಬಳೆಗಳು ಸವೆದು ಹೋಗುತ್ತವೆ; ನನಗೆ ಕೊರಳಲ್ಲಿ ಒಂದು ಎಳೆ ಮಾಡಿಸು’ ಎಂದಳು. ನಾನು ಆಗಲಿ – ಎಂದು ಇಪ್ಪತ್ತು ಗ್ರಾಂನ ಕನಕಮಾಲೆ ಎಳೆಯನ್ನು ಮಾಡಿಸಿ ಕೊಟ್ಟೆ. ಅದೂ ಅವಳ ಕುತ್ತಿಗೆಯಲ್ಲಿದ್ದುದು ಎರಡೇ ದಿನ. ಮಾರನೆಯ ದಿನಕ್ಕೆ ಅವಳ ಎಲಿಚೀಲಕ್ಕೆ ಸೇರಿತ್ತು. ನಾನೂ ಬೈದರೂ ಕೇಳಲಿಲ್ಲ ‘ಆಯಿ ನೀನು ಚೆನ್ನಾಗಿರಲಿ ಅಂತಾ ಮಾಡಿಸಿದೆ. ಸತ್ತಮೇಲೆ ಹಾಕ್ಕೊಂತೀಯಾ ಹೇಗೆ’ ಅಂತಾ ಬೈದೂ ಆಯಿತು. ಜಪ್ಪೆನ್ನಲಿಲ್ಲ ಆಸಾಮಿ.
 
ಅಲ್ಲಿಂದ ಊರಲ್ಲಿ ನಮ್ಮ ದೂರದ ನೆಂಟರು ತೀರಿಹೋದ ಸುದ್ದಿ ಕೇಳಿ ಮಣ್ಣಿಗೆಂದು ನಮ್ಮ ಅತ್ತೆ, ಬಸಪ್ಪಾಯಿ ಊರಿಗೆ ಹೋದರು. ನನಗೆ ಮನೆ ಎಲ್ಲಾ ಖಾಲಿ ಖಾಲಿ ಎನಿಸುತ್ತಿತ್ತು. ಸುಗ್ಗಿ ಬಂದಿದೆ ಮನೆಯಲ್ಲಿ ಕೆಲಸ ಜಾಸ್ತಿ, ತಿಂಗಳೊಂದಿದ್ದು ಕಳೆದ ಮೇಲೆ ಬರುತ್ತೇನೆ ಎಂದರು. ಅತ್ತೆಯವರು ಅಲ್ಲಿ ಕಾಲುಜಾರಿ ಬಿದ್ದ ನೆಲದ ಮೇಲೆಯೇ ಶಿವನ ಪಾದ ಸೇರಿದರು. ಈಗ ಬಸಪ್ಪಾಯಿ ಊರಲ್ಲಿಯೇ ಖಾಯಂ ಆದಳು. ಊರಿಗೆ ಹೋದಾಗಲೆಲ್ಲಾ ಅವಳನ್ನು ಕೇಳುತ್ತಿದ್ದೆ – ‘ಆಯಿ ನಿನ್ನ ನೆನಪು ಬಹಳ ಆಕ್ಕೇವೆ ಯಾವಾಗ ನಂಜೊತೆ ಬರ್ತೀಯಾ’ ಅಂತಾ. ’ಮುಂದಿನ ವಾರ ಖಂಡಿತ ಬರ್ತೇನೆ’ ಎನ್ನುವವಳು. ‘ಏನಾದ್ರೂ ಬೇಕಾ’ ಅಂದ್ರೆ, ‘ಪೆನ್ನಿನಾ ಗುಟ್ಕಾ, ಎಲೆ ತಂಬಾಕು, ಅಡಿಕೆ’ ಇಷ್ಟು ಬಿಟ್ಟು ಏನೂ ಕೇಳುತ್ತಿರಲಿಲ್ಲ. ನಾನು ಜುಲ್ಮೆಯಿಂದ ನೂರು ರೂಪಾಯಿ ಕೈನಲ್ಲಿಟ್ಟರೆ ‘ನಂಗ್ಯಾಕ ಬೇಕಪ್ಪಾ ದುಡ್ಡು, ನಾನೇನು ಮಾಡ್ಲಿ’ ಅನ್ನುವವಳು. ನಾನು ದುಃಖ ತಡೆಯಲಾಗದೆ ಅವಳನ್ನು ಒಲ್ಲದ ಮನಸ್ಸಿನಿಂದ ಬಿಟ್ಟು ಬರುತ್ತಿದ್ದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಊರಿನ ಕಡೆ ಹೋಗಿರಲಿಲ್ಲ. ನನಗಿದ್ದ ದೊಡ್ಡ ಚಿಂತೆಯೆಂದರೆ ’ಆಯಿ ಎಲ್ಲರಿಗೂ ಇಷ್ಟು ಅಕ್ಕರೆ ತೋರಿಸ್ತಾಳೆ. ಎಲ್ಲರೂ ಅವಳನ್ನು ಕೆಲಸದ ಆಳಾಗಿ ಮಾತ್ರ ನೋಡ್ತಾರೆ. ಅವಳಿಗೇನಾದರೂ ಆದರೆ ಅವಳನ್ನು ನೋಡುವವರು ಯಾರು?’ ಎಂದು. ಒಂದು ಸಾರಿ ಕೇಳಿಯೂ ಬಿಟ್ಟೆ. ಆಗ ಅವಳು ಹೇಳಿದ್ದು ‘ಶಿವನಿದ್ದಾನೆ ಬಿಡು. ಆ ಕೆದ್ರ ಲಿಂಗ ನೋಡಿಕೊಳ್ತಾನೆ’ ಎಂದು. ನಾನು ಕೆದ್ರಲಿಂಗ ಅಂದ್ರೆ ಏನು – ಅಂತಾ ತಲೆಕೆರೆದು ಯೋಚಿಸಿದಾಗ ಗೊತ್ತಾಗಿತ್ತು ‘ಕೇದಾರಲಿಂಗ’ ಎಂದು. ಪಾಪ ಆಯಿಗೆ ಅದು ಕೆದ್ರಲಿಂಗ ಆಗಿತ್ತು. ನಗುತ್ತಾ ಹೇಳಿದೆ ‘ಏ ಆಯಿ ಕೇದಾರಲಿಂಗ ಅನ್ನು; ದೇವರ ಹೆಸರ ಕೆಡಿಸಬೇಡ’ ಅಂತಾ. ‘ನಾ ಹಂಗ ಹೇಳಾಕಿ’ ಅಂದಳು ಮಂಡ ಹೆಣ್ಣಮಗಳು.
 
ಒಂದು ದಿನ ಊರಿನಿಂದ ನಮ್ಮ ಭಾವನ ಊರಿಂದ ಫೋನ್ ಬಂದಿತು: ‘ಬಸಪ್ಪಾಯಿ 2–3 ತಿಂಗಳಿನಿಂದ ಊಟ ಬಿಟ್ಟಿದಳು. ಒಂದು ಖೋಲಿಯಲ್ಲಿಯೇ ಇರುತ್ತಿದ್ದಳು. ಅಲ್ಲಿಯೇ ಚಹಾ, ನೀರು ಕೊಡುತ್ತಿದ್ದೆವು, ನಿನ್ನೆ ದಿನ ಇದ್ದಕ್ಕಿಂತೆಯೇ ತೀರಿಹೋಗಿದ್ದಾಳೆ. ಶರೀರ ಸೆಟೆದುಬಿಟ್ಟಿತ್ತು. ಹಾಗಾದ ಆಳುಗಳು ಮುಂದಿನ ಕಾರ್ಯ ಮುಗಿಸಿದರು.’ ನನಗೆ ದುಃಖ ಉಮ್ಮಳಿಸಿ ಬಂತು. ‘ನನಗೆ ಹೇಳಿದರೆ ಆಯಿಯ ಕೊನೆಯ ಮುಖ ನೋಡುತ್ತಿರಲಿಲ್ಲವೇ?’ ಎಂದೆ. ಏನೆಂದರೂ ಉಪಯೋಗವಿರಲಿಲ್ಲ. ನಾನೂ ಮತ್ತೊಮ್ಮೆ ಅಮ್ಮನನ್ನು ಕಳೆದುಕೊಂಡು ಅನಾಥಳಾದೆ ಅನಿಸಿತು. ಈಗ ಕಾಣದ ಅವಳ ರಕ್ತಸಂಬಂಧ ಅವಳ ಅಳಿದುಳಿದ ದುಡ್ಡು, ಜಂಪರಿನಲ್ಲಿದ್ದ ಚಿಲ್ಲರೆ ಕಾಸು, ಹಾಗೂ ಬಂಗಾರದ ಎಳೆ, ಎಲ್ಲವನ್ನೂ ತೆಗೆದುಕೊಂಡು ಹೋದ ಅಂತಾ! ಮಾನವ, ಮಾನವೀಯತೆಯ ಮರೆತೇಬಿಟ್ಟಿದ್ದಾನೆ ಅನಿಸಿತು. ಇದ್ದಾಗ ಅವಳ ಸಂಬಂಧಿಕರು ಅಂತಾ ಯಾರೂ ಬಂದಿರಲಿಲ್ಲ. ಗಾಣದ ಎತ್ತಿನ ಹಾಗೆ ನಮ್ಮ ಮನೆಗೆ ದುಡಿದ ಬಸಪ್ಪಾಯಿ ಇಲ್ಲವಾಗಿದ್ದಳು. ನನ್ನ ಮೇಲೆಯೆ ನನಗೆ ಅರಿಯದ ಕೋಪ ಬರುತ್ತಾ ಇತ್ತು. ನಾನು ನಿಜವಾದ ಬಂಗಾರದ ಜೀವಾನಾ ಕಳ್ಕೊಂಡೆ ಅನಿಸಿತ್ತು. 
 
ಆಯಿ ಜನ್ಮ ಜನ್ಮಗಳಿಗೂ ಬೇಕಾದ ಪ್ರೀತಿ ಉಣಿಸಿದ ನಿನ್ನ ಆತ್ಮಕ್ಕೆ ಚಿರಶಾಂತಿ ಸಿಗಲಿ. ಆಯೀ ನೀನ್ಯಾರೋ ಏನೋ? ವಾಸಕ್ಕೆ ಇಲ್ಲಿ ಬಂದೆ. ಎಲ್ಲಿಂದ ಬಂದೆ? ಏನುಂಡು ಹೋದೆ? ನಿನ್ನ ಪ್ರೀತಿಯ ಋಣವ ಯಾವ ಜನ್ಮಕ್ಕೆ ತೀರಿಸೋದು? ಪ್ರೀತಿಗೆ ಸಾವಿಲ್ಲ. ಆಯಿ ನಾನು ನಿನ್ಯಾದರೇನು ನಿನ್ನ ಪ್ರೀತಿಗೆ ನಾನು ಚಿರಋಣಿ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.