ADVERTISEMENT

ಒಂಟಿತನದಲ್ಲಿ ನೆನಪಾಗುವ ಹರಿಕಥಾಮೃತಸಾರ

ನಂದಾ ಕೇಶವ್ ಜಹಗೀರದಾರ್
Published 17 ಅಕ್ಟೋಬರ್ 2014, 19:30 IST
Last Updated 17 ಅಕ್ಟೋಬರ್ 2014, 19:30 IST
ಒಂಟಿತನದಲ್ಲಿ ನೆನಪಾಗುವ ಹರಿಕಥಾಮೃತಸಾರ
ಒಂಟಿತನದಲ್ಲಿ ನೆನಪಾಗುವ ಹರಿಕಥಾಮೃತಸಾರ   

ನನ್ನ ಜೀವನದಲ್ಲಿ ಮರೆಯಲಾಗದ ಕರಾಳ ದಿನವದು. ಅಮ್ಮ, ಅಣ್ಣ, ಅಕ್ಕ, ನಾನು ಹತಾಶರಾಗಿ ವೈದ್ಯರ ಬಳಿ ಅಪ್ಪನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದೆವು. ಏನಾದರೂ ಪವಾಡವಾಗಿ ಅಪ್ಪ ಸಾವಿನ ದವಡೆಯಿಂದ ಪಾರಾಗಿ ಮತ್ತೆ ಮನೆಯಲ್ಲಿ ಸಂತೋಷ ನೆಲೆಸುವಂತಾಗಲೆಂದು ದೇವರಲ್ಲಿ ಮೊರೆಯಿಡುತ್ತಿದ್ದೆವು. ಆದರೆ ವಿಧಿ ಅಪ್ಪನನ್ನು ನಮ್ಮೊಟ್ಟಿಗಿರಲು ಬಿಡಲಿಲ್ಲ.

ದುಃಖದ ಕಟ್ಟೆಯೊಡೆದಿತ್ತು, ಅಂತ್ಯಸಂಸ್ಕಾರ ಮಾರನೆ ದಿನ ಮಾಡಿದ್ದರಿಂದ ಇಡೀ ರಾತ್ರಿ ಅಪ್ಪನ ಮುಖವನ್ನೆ ದಿಟ್ಟಿಸುತ್ತಾ ಕುಳಿತಿದ್ದೆ. ಈ ಮುಖ ಇನ್ನೆಂದಿಗೂ ನೋಡಲು ಸಿಗುವುದಿಲ್ಲವಲ್ಲ ಎನಿಸಿ ಗಂಟಲುಬ್ಬಿ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಮನೆ, ಸಂಸಾರ, ಮಕ್ಕಳ ಭವಿಷ್ಯಕ್ಕಾಗಿ ಇದ್ದಷ್ಟು ದಿನ ನಿಮಗೆಲ್ಲ ಆದರ್ಶನಾಗಿದ್ದ ನಮ್ಮಪ್ಪ ಇನ್ನಿಲ್ಲವಾಗಿದ್ದರು. 13 ದಿನಗಳ ಕ್ರಿಯಾಗಳೆಲ್ಲ ಮುಗಿದು ಗಂಡ, ಮಕ್ಕಳೊಡನೆ ಊರಿಗೆ ಮರಳಿದ್ದೆ, ಅದೇಕೋ ಅಪ್ಪನ ನೆನಪು ಕ್ಷಣ ಕ್ಷಣಕ್ಕೂ ಕಾಡುತ್ತಿತ್ತು. 

‘ಮಕ್ಕಳು ಗಾಬರಿಯಾಗುತ್ತಾರೆ ಮನಸ್ಸು ಗಟ್ಟಿ ಮಾಡಿಕೋ. ಈಗಲೂ ಅಪ್ಪ ಅಲ್ಲಿದ್ದಾರೆ ಅಂತಾನೆ ಭಾವಿಸಿಕೊ’ ಅಂತೆಲ್ಲಾ ಪರಿಪರಿಯಾಗಿ ಉದಾಹರಣೆ ಕೊಟ್ಟು ಸಮಾಧಾನ ಹೇಳಿದರೂ ನನ್ನ ಕಣ್ಣೀರು ನಿಲ್ಲಲಿಲ್ಲ. ಅಮ್ಮನ ಮುಖ ನೆನಪಾಗಿ ಸಂಕಟವಾಗುತ್ತಿತ್ತು. ದೇವರ ಪುಸ್ತಕಗಳು ಕಣ್ಣಿಗೆ ಬಿದ್ದವು ಒಂದನ್ನು ಕೈಗೆತ್ತಿಕೊಂಡೆ, ಶ್ರೀ ಜಗನ್ನಾಥದಾಸ ವಿರಚಿತ ಹರಿಕಥಾಮೃತಸಾರವದು. ಅದರಲ್ಲಿನ ಕೆಲ ಸಾಲುಗಳು ನನ್ನ ಮನಸ್ಸನ್ನು ಹಗುರಗೊಳಿಸಿದವು.

ಭಗವಂತನನ್ನು ಸ್ಮರಿಸಿದರೆ ನಮ್ಮ ಕಷ್ಟಗಳನ್ನು ಪರಿಹರಿಸುವನು. ಭಗವಂತನನ್ನು ಒಲಿಸಲು ತಿಳಿಯದ ಜನ  ಜನನ ಮರಣಾದಿ ಸಂಸಾರ ಚಕ್ರಕ್ಕೆ ಸಿಕ್ಕಿ ಬಳಲುತ್ತಾರೆ. ಮಕ್ಕಳು ಮರಳಲ್ಲಿ ಕಾಗೆಗೂಡು ಕಟ್ಟಿ ಸ್ವಲ್ಪಕಾಲ ಆಟವಾಡಿ ನಂತರ ಅದನ್ನು ಕೆಡಿಸುತ್ತಾರೆ. ಹಾಗೆಯೇ ಭಗವಂತನು ಹಲವು ತೆರನಾಗಿ ಲೋಕಗಳನ್ನು ನಿರ್ಮಿಸುತ್ತಾನೆ. ಹುಟ್ಟಿದ ಪ್ರತಿ ಜೀವಿಗೂ ಸಾವು ಅನಿವಾರ್ಯ. ನಾವೆಲ್ಲ ಭೂಮಿಯ ಮೇಲೆ ಬಂದು ಹೋಗುವ ಅತಿಥಿಗಳು. ಇರುವಷ್ಟು ದಿನ ನೋವು-ನಲಿವು ಸುಖ-ದುಃಖ ಹುಟ್ಟು-ಸಾವು ಇವುಗಳನೆಲ್ಲ ಎದುರಿಸಬೇಕಾದ ಅನಿವಾರ್ಯ.

ಮಾತಾ ಪಿತರು ತಮ್ಮ ಶಿಶುವಿಗೆ ಒದಗಿ ಬಂದ ಭಯಗಳನ್ನು ಪರಿಹರಿಸುವಂತೆ ದೇವ ದೇವನು ನಮ್ಮ ಹಿಂದು ಮುಂದೆ ಎಡ ಬಲದಲ್ಲಿ, ಒಳ ಹೊರಗೆ ನಮ್ಮನ್ನೆಲ್ಲ ಆವರಿಸಿರುವ ಆಕಾಶದಂತೆ ರಕ್ಷಿಸಿಕೊಂಡು ಬರುತ್ತಾನೆ ಎಂಬ ವಿಚಾರಗಳು ನನ್ನ ಮನಸ್ಸಿಗೆ ಸಮಾಧಾನ ನೀಡಿದವು. ಜಗನ್ನಾಥದಾಸರು ಒಟ್ಟು 32 ಸಂಧಿಗಳು ಇರುವ ಹರಿಕಥಾಮೃತಸಾರ ಗ್ರಂಥದಲ್ಲಿ ಜೀವನದ ಹಾದಿ ಅಂತ್ಯಗಳನ್ನು ಭಗವಂತನು ಕರುಣೆಯನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಬೇಸರ-ದುಃಖಗಳನ್ನು ನಿಯಂತ್ರಿಸುವಲ್ಲಿ ಸಹಕಾರಿಯಾದ ಹರಿಕಥಾಮೃತಸಾರವನ್ನು ಒಂಟಿತನ ಕಾಡಿದಾಗಲೆಲ್ಲ ಓದುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.