ADVERTISEMENT

ಒಲ್ಲದ ಬಾಂಧವ್ಯ

ಡಾ.ಪೂರ್ಣಿಮಾ ಶಶಿಧರ್
Published 20 ಮಾರ್ಚ್ 2015, 19:30 IST
Last Updated 20 ಮಾರ್ಚ್ 2015, 19:30 IST

ಇಲ್ಲಿ ಹೇಳಹೋರಟಿರುವ  ಪದಗಳಿಗೆ ‘ಮುರಿದ ಮದುವೆ’ಗೆ ಬದಲು ‘ಒಲ್ಲದ ಬಾಂಧವ್ಯ’ ಎಂದೇ ಹೆಸರಿಡೋಣ. ಖ್ಯಾತ ವಿಮರ್ಶಕ ಮ್ಯಾಕೆಬೆಲ್ ಮಾರ್ಗನ್ ಹೆಳಿದಂತೆ ‘ಮದುವೆ ಯಶಸ್ವಿ ಆಗುವುದು ಸರಿಯಾದ ಜೀವನ ಸಂಗಾತಿಯನ್ನು ಹುಡುಕುವುದರಿಂದಲ್ಲ ಸರಿಯಾದ ಜೀವನ ಸಂಗಾತಿ ಆಗುವುದರಿಂದ’ ಎಂಥ ಅದ್ಭುತವಾದ ಸಾಲುಗಳಿವು. ಮದುವೆ ಆಗುವವರಿಗೂ, ಮದುವೆ ಆಗಿರುವವರಿಗೂ ಅನ್ವಯಿಸುವ ಮಾತುಗಳಿವು.

ಆಕೆ ವಿದ್ಯಾವಂತೆ, ತುಂಬ ಚುರುಕಿನ, ಭಾವನೆಗಳಿಗೆ, ಸಂಬಂಧಗಳಿಗೆ ಬೆಲೆ ಕೊಡುವ ಸಹೃದಯಿ. ಇಂತಿಪ್ಪ ಆಕೆಗು ಮದುವೆ ನಿಶ್ಚಯವಾಗಿ ಸಂಭ್ರಮದಿಂದ ನಿಶ್ಚಿತಾರ್ಥವು ನಡೆಯಿತು. ಆದರೆ ಕೆಲವೇ ದಿನಗಳಲ್ಲಿ ಹುಡುಗನ ನಡವಳಿಕೆಯಲ್ಲಿ ಬದಲಾವಣೆ ಕಂಡಿದೆ. ಅವನಲ್ಲಿದ್ದ ನ್ಯೂನ್ಯತೆಗಳೊಂದಿಗೂ ಹೊಂದಿಕೊಂಡು ಹೋಗುವ ಪ್ರಯತ್ನ ನಡೆಸಿದ್ದಾಳೆ. ಪೋಷಕರಿಗೆ ತಿಳಿಸಿದರೆ ಎಲ್ಲಿ ನೊಂದುಕೊಂಡಾರು ಎಂದು ತಾನೆ ‘ಸಾವಾಧಾನ’ದಿಂದ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸಿದ್ದಾಳೆ. ಆದರೆ ಯಾಕೋ ಅವರಿಬ್ಬರ ಮಧ್ಯೆ ಎಲ್ಲವೂ ಸರಿ ಇಲ್ಲ ಎಂದಾಗ ಕುಟುಂಬದ ಸದಸ್ಯರೊಟ್ಟಿಗೆ ನಡೆಯುತ್ತಿರುವ ಸಮಸ್ಯೆ ಯನ್ನು ಹಂಚಿಕೊಂಡಿದ್ದಾಳೆ ಹಾಗೆ ಆಕೆ ‘ಮದುವೆ ಮರಿದುಬಿತ್ತು ಎನ್ನುವ ಕಾರಣಕ್ಕೆ ಕುಟುಂಬದ ಮರ್ಯಾದೆ ಹೋಗುತ್ತದೆ ಎನ್ನುವುದಾದರೆ ಅವನೊಟ್ಟಿಗೆ ಹೊಂದಿ ಕೊಂಡು ಹೋಗಲು ಸಿದ್ಧ’ ಎಂದಿದ್ದಾಳೆ.

ಈ ಎಲ್ಲ ವಿಚಾರಗಳನ್ನು ಪೋಷಕರ ಗಮನಕ್ಕೆ ತರುವುದಕ್ಕೆ ಮುಂಚಿನಿಂದ ತಾನೊಬ್ಬಳೆ ಹುಡುಗನಿಂದಾಗಿ ಒಂದಿಲ್ಲೂಂದು ಮಾನಸಿಕ ಹಿಂಸೆಯನ್ನು ಅನುಭವಿಸಿ, ಕುಟುಂಬದಲ್ಲಿ ನಡೆಯುತ್ತಿದ್ದ ಸಮಾರಂಭಗಳಿಗೆ ಸಹಜವಾಗಿ ಎಲ್ಲರೊಟ್ಟಿಗೆ ಬೆರೆತು ತನ್ನ ನೋವನ್ನು ಯಾರಿಗೂ ತೋರುಗೊಡದೆ ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಂಡಿದ್ದಾಳೆ.  ಆದರೆ ಈ ಎಲ್ಲ ಸಮಸ್ಯೆಗಳನ್ನು ಪ್ರಬುದ್ಧಳಾಗಿ ಎದುರಿಸಿದ ಆಕೆಯ ಮಾನಸಿಕ ಸಾಮರ್ಥ್ಯಕ್ಕೆ ನಾವೆಲ್ಲ ಮೂಕಪ್ರೇಕ್ಷಕರಾಗಿದ್ದುದು ಸುಳ್ಳಲ್ಲ. ಸಮಸ್ಯೆಗೆ ಪರಿಹಾರ ಎನ್ನುವಂತೆ ನಾವೇ ಎಲ್ಲರೂ ‘ನಿನ್ನ ಬಾಳಸಂಗಾತಿ ಆಗಲು ಮತ್ತು ನಿನ್ನ ಪ್ರೀತಿ ಪಡೆಯಲು ಆ ವ್ಯಕ್ತಿ ಅರ್ಹನಲ್ಲ’ ಎಂಬ ತೀರ್ಮಾನಕ್ಕೆ ಬಂದೆವು. ಆದರೆ ಉತ್ಸಾಹದ ಬುಗ್ಗೆಯಂತಿದ್ದ ಆಕೆಗೆ ಈ ಆಘಾತವಾದದ್ದು ತುಂಬ ನೋವಿನ ಸಂಗತಿ. ಕಹಿ ಘಟನೆಗಳನ್ನು ಮರೆತು  ಮತ್ತದೇ ಉತ್ಸಾಹದ ಚಿಲುಮೆಯಾಗಿ ಬದಲಾದಳು ಆ ಹುಡುಗಿ. ಆಕೆಯ ಬತ್ತದ ಜೀವನ ಪ್ರೀತಿಗೆ ಒಂದು ಸಲಾಂ. ಮಗಳ ಬದುಕಿಗಾಗಿ ಪ್ರತಿಷ್ಠೆಯನ್ನು ಬದಿಗಿರಿಸಿದ ಆ ಹೆತ್ತವರೂ ಅಭಿನಂದನಾರ್ಹರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.