ADVERTISEMENT

ಓಗೋರಹಿಂದೆ ಓಗೋಕ್ಕಾಯ್ತದಾ..?

ಎಸ್.ವಿಜಯ ಗುರುರಾಜ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ಕೆಲಸ ಮಾಡುವ ಲಲಿತಾ 20 ದಿವಸಗಳಿಂದ ಕೈಕೊಟ್ಟಿದ್ಲು. ಎಲ್ಲಾ ಕೆಲ್ಸ ನಾನೇ ಮಾಡಿಕೊಂಡು ಹೈರಾಣಾಗಿದ್ದೆ. ಅವಳ ಮೇಲೆ  ಸಾಕಷ್ಟು ಕೋಪವೂ ಬಂದಿತ್ತು. ಅಂದು ಮುಂಜಾನೆಯೆ ಬಂದು ಕೆಲಸ ಪ್ರಾರಂಭಿಸಿದಳು. ಅವಳನ್ನು ನೋಡಿ, ಗಾಬರಿಯೇ ಆಯಿತು.

ತಲೆ ತುಂಬ ಹೂ ಮುಡಿದು, ಕಾಸಿನಗಲ ಕುಂಕುಮವಿಟ್ಟು ಬಣ್ಣ, ಬಣ್ಣದ ನೈಲಾನ್ ಸೀರೆಯುಟ್ಟು ಲಕಲಕನೆ ಬರುತ್ತಿದ್ದವಳು. ಆದರೆ ಇಂದು ಹಣೆಗೆ ಕುಂಕುಮವಿಲ್ಲದೆ ಮುದುಡಿದ ಸೀರೆಯಲ್ಲಿ ಮ್ಲಾನಗೊಂಡ ಮುಖದಿಂದ ಕಸಗುಡಿಸುತ್ತಿದ್ದಳು. ಬೈಬೇಕಾದ ಮಾತಿನಲ್ಲಿ ಅನುನಯದ ಪ್ರಶ್ನೆ ಬಂತು, ‘ಏನಾಯ್ತು ಲಲಿತಾ?’  .

‘ಅಕ್ಕಾ, ನಮ್ಮೆಜಮಾನ ತರ್ಕಾರಿ ವ್ಯಾಪಾರಕ್ಕೆ ಗಾಡಿ ತಳ್ತಿದ್ದಂಗೆ ಎದೆ ನೋವು ಬಂದು ಅಲ್ಲೆ ಬಿದ್ದೋದ್ನಂತೆ. ಅಲ್ಲಿದ್ದೋರೆಲ್ಲ ಆಸ್ಪತ್ರೆಗೆ ಸೇರ್ಸಿದ್ರಂತೆ ಅಲ್ಲೇ ಪಿರಾಣ ಬಿಟ್ಟವ್ನೆ ಕಣಕ್ಕ. ನನ್ನ ಮಕ್ಕಳನ್ನ ನಡ್ ನೀರಾಗ್ ಬಿಟ್ಟೋದ ನಾನೇನ್ಮಾಡ್ಲಿ ಸಿವ್ನೇ? ಮಗಳ್ನ ಬಾಣ್ತ್ ನಕ್ ಕರ್ಕಾಬಂದಿವ್ನಿ ಮಗ್ನು ಎಸ್ ಲ್ ಸಿ ಓದ್ತಾವ್ನೆ’ ಎಂದು ಕಣ್ ತುಂಬಿಕೊಂಡಾಗ ನನ್ನ ಕೋಪವೆಲ್ಲಾ ಇಳಿದು ಹೋಯ್ತು. ‘ಲಲ್ತಾ ಸಮಾಧಾನ ಮಾಡ್ಕೊ, ತಗೊ ಎರಡ್ ಸಾವಿರ್ ರೂಪಾಯಿ ಏನ್ ಮಾಡೋದಮ್ಮ ಬಂದಿದೆಲ್ಲ ಅನುಭವಿಸಬೇಕು’ ಎಂದು ಬಿಸಿ ಕಾಫಿ ಕೊಟ್ಟು ಕಳುಹಿಸಿದೆ.

ಕ್ರಮೇಣ ವರ್ಷ ಕಳೆಯುತ್ತಿದ್ದಂತೆ ಹಣೆಗೆ ಸ್ಟಿಕ್ಕರ್ ಇಟ್ಟುಕೊಂಡು ನೀಟಾಗಿ ಸೀರೆವುಟ್ಟು ಕಾಲಿಗೆ ಚೈನು ಧರಿಸಿ ಬಂದು ಅಚ್ಚಕಟ್ಟಾಗಿ ಕೆಲಸ ಮಾಡತೊಡಗಿದಳು. ಆಗ ನಾನು ‘ಲಲ್ತಾ ಪರವಾಗಿಲ್ಲವ ಸಂಸಾರ ತೂಗಸ್ತಾಇದ್ದೀಯ’ ಎಂದೆ.

‘ಅಕ್ಕಾ, ಓಗೋರಿಂದೆ ನಾವೂ ಓಗಕ್ಕಾಯ್ತದೇನಕ್ಕಾ ಅವ್ನ್ ಜಲುಮ ಅಷ್ಟೆ ಅಂತ ಸಿವ ಬರ್ದುಬುಟ್ಟವ್ನೇ ಪರ್ಪಂಚದಾಗೆ ನಾವ್ ಉಟ್ಟದ್  ಮ್ಯಾಕೆ ನಮ್ಮ್ ಬದಕು ನಾವೇ ಈಸ್ಬೇಕು ಕನಕ್ಕ’ ಎಂದು ವೇದಾಂತಿಯಂತೆ ಮಾತನಾಡುತ್ತಿದ್ದರೆ ಕೇಳುತ್ತಿದ್ದ ನಾನು ಅವಕ್ಕಾಗಿದ್ದೆ.
ಅಡಿಕೆ ಹೋಳನ್ನು ಬಾಯಿಗೆಸೆದು ಕೊಂಡವಳೆ ನನ್ನನ್ನೇ ನೋಡುತ್ತಾ ‘ಮಗಳ್ ಹೆರಿಗೆ ಆಗಿ ಹೆಣ್ಮಗ ಉಟ್ಟ್ಟತು. ಬಾಣ್ತ್ನನ ಮಾಡಿ ಅತ್ತೇ ಮನೇಗ್ ಬಿಟ್ಟ ಬಂದೆ. ಈ ಸಲ ಮಗನು ಪಿ.ಯು.ಸಿ ಕಾಲೇಜ್‌ಗೆ ಬತ್ತಾನೆ. ಇಲ್‌ನೋಡ್ರಕ್ಕ್  ನಾನ್ ತಾಳಿ ಕೂಡಾ ಬಿಚ್ಚಿಕ್ಕಿಲ್ಲ. ಅವ್ನ್ ನೆಪ್ಪಗೆ ಅಂತ ಆಕ್ಕಂಡಿವ್ನೀ. ಒಂಟೀ ಎಣ್ಣೂ ಅಂತ ಕೆಟ್ಟ ಜನ್ರು ಕಣ್ಣಾಕ್ತಾರೆ ಗಂಡ ಇಲ್ದೋಳು ಅಂತ ದಿಟ್ಟೀ ಮಡ್ಗತ್ತಾರೆ ಅದ್ಕೇ ಈ ಏಸ ಎಲ್ಲ ಅಕ್ಕಂಡ್ ಧೈರ್ಯ್ ಮಾಡ್ಕ್ಂಡ ಬದುಕ್ ಮಾಡ್ತಾ ಇದ್ದೀನ್ ಕಣಕ್ಕ’ ಎಂದು ಹೇಳಿ ಸರ ಸರನೆ ಹೋದವಳತ್ತ ಬೆಪ್ಪಳಂತೆ ನೋಡತೊಡಗಿದೆ. ಬದುಕಿನ ಸತ್ಯದ ಸಾರವನ್ನು ಏನೂ ಓದದೆ ಅರ್ಥಮಾಡಿಕೊಂಡು ಸಂಸಾರದ ನೊಗ ಹೊತ್ತ ಅವಳ ಆತ್ಮ ವಿಶ್ವಾಸಕ್ಕೆ ಎಣೆಯುಂಟೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.