ADVERTISEMENT

ಕಣ್ಣಲ್ಲಿ ಕಣ್ಣಿಟ್ಟು ನೋಡಮ್ಮ ...

ಸುಶೀಲಾ ಡೋಣೂರ
Published 11 ನವೆಂಬರ್ 2016, 19:30 IST
Last Updated 11 ನವೆಂಬರ್ 2016, 19:30 IST
ಕಣ್ಣಲ್ಲಿ ಕಣ್ಣಿಟ್ಟು ನೋಡಮ್ಮ ...
ಕಣ್ಣಲ್ಲಿ ಕಣ್ಣಿಟ್ಟು ನೋಡಮ್ಮ ...   

ಬೆಳ್ಳಂಬೆಳಿಗ್ಗೆ ಸಿಹಿನಿದ್ರೆಯಿಂದೆದ್ದು ತನ್ನ ಪುಟ್ಟ ಕೈಗಳನ್ನು ಪಕ್ಕಕ್ಕೆ ಚೆಲ್ಲುವ ಕಂದ, ಅಮ್ಮನ ಬೆಚ್ಚಗಿನ ಅಪ್ಪುಗೆಗಾಗಿ ಹಂಬಲಿಸುತ್ತಲೇ ಕಣ್ಣು ಬಿಡುತ್ತದೆ. ಆ ದಿನದ ಮೊದಲ ನಿರಾಶೆಯದು. ಅಲ್ಲಿ ಅಮ್ಮನಿರುವುದಿಲ್ಲ. ಅಡುಗೆಮನೆಯಲ್ಲಿ ಪಾತ್ರೆಗಳ ಸದ್ದು ಕೇಳುತ್ತದೆ. ‘ಓಹ್‌! ಅಲ್ಲಿದ್ದಾಳೆ ಅಮ್ಮ, ಈಗ ಬರಬಹುದೇನೊ; ಇನ್ನೇನು ಬಂದೇ ಬಿಡುತ್ತಾಳೆ; ಇಷ್ಟು ಹೊತ್ತಾಯಿತಲ್ಲ,  ಈಗಂತೂ ಬರದೇ ಇರಲಾರಳು’ ಎನ್ನುತ್ತಲೆ ನಾಲ್ಕು ಬಾರಿ ಮಗ್ಗಲು ಬದಲಿಸುತ್ತ ನಿರುತ್ಸಾಹದಿಂದ ಅಳುವ ದನಿ ಹೊರಡುತ್ತದೆ...

ಒದ್ದೆ ಮಾಡಿ ಅಸಹನೆಯಿಂದ ಅರಚಿದಾಗಲೇ ಕೈಗಳನ್ನು ಒರೆಸಿಕೊಳ್ಳುತ್ತ ಓಡಿ ಬರುತ್ತಾಳೆ ಅಮ್ಮ. ಅವಳ ಮುಖ ನೋಡುತ್ತ, ಆ ಬಿಸಿಅಪ್ಪುಗೆಗಾಗಿ ಹಂಬಲಿಸುತ್ತ, ಅಮ್ಮನ ಮುಖವನ್ನೇ ದಿಟ್ಟಿಸುವ ಕಂದನಿಗೆ ಮತ್ತೊಮ್ಮೆ ಹತಾಶೆಯ ಹೊಡೆತ...

ಅವಸರದಲ್ಲಿಯೇ ಬಟ್ಟೆ ಬದಲಿಸುವ ಅಮ್ಮ, ಬಾಯಿಗೆ ಹಾಲಿನ ಬಾಟಲಿಯ ನಿಪ್ಪಲ್‌ ಇಡುತ್ತ ಗುನುಗುತ್ತಾಳೆ – ಈಗ ಬಂದೆ ಚಿನ್ನ, ಇದಿಷ್ಟು ಹಾಲು ಕುಡಿದು ಬಿಡು, ಬಂದು ಬಿಡ್ತೇನೆ... ಬೇಕೊ ಬೇಡವೊ... ಕೂಸು ಪ್ಲಾಸ್ಟಿಕ್‌ ನಿಪ್ಪಲ್‌ನ್ನೇ ಎಳೆಯುತ್ತ ಹಸಿವಿನ ಹಂಗು  ಕಡೆದುಕೊಳ್ಳಲೆತ್ನಿಸುತ್ತದೆ.

ಕಣ್ಣ ಮುಂದೆ ರಾಶಿ ರಾಶಿ ಆಟಿಕೆಗಳು, ಜೀವವಿಲ್ಲದ ಬೊಂಬೆಗಳ ಒಳನಾಟದಲ್ಲೇ ಒಂದಷ್ಟು ಹೊತ್ತು ಕಳೆದು ಹೋಗುತ್ತದೆ. ಬೆಡ್‌ ರೂಮಿನ ಬಾಗಿಲನ್ನೇ ದಿಟ್ಟಿಸುವ ಕೂಸಿಗೆ ಹೊಟ್ಟೆ ತುಂಬಿದರೂ  ಒಣಗಿದ ತುಟಿಗಳಲ್ಲಿ ತೀರದ ದಾಹ...

ಅಡುಗೆಮನೆಯ ಕೆಲಸ ತೀರಿಸಿ, ಸ್ನಾನ–ತಿಂಡಿ ಮುಗಿಸಿ ಕಂದನ ಬಳಿ ಸುಳಿಯುವ ಅಮ್ಮನ ಸಾಮೀಪ್ಯಕ್ಕೆ ಕಣ್ಣರಳಿಸಿ, ಬೊಚ್ಚುಬಾಯಿ ಬಿರಿದು ನಗೆಯುಕ್ಕಿಸುತ್ತ, ಅವಳ ತೊಡೆಯ ಮೇಲೆ ಮೈಚೆಲ್ಲಿ, ಕೈ–ಕಾಲು ಬಡಿಯುತ್ತ ತನ್ನ ಒಡಲಾಳದ ಸಂತಸವನ್ನು ಹೊರಚೆಲ್ಲುತ್ತದೆ.

ಹಾಲುಣಿಸುವ ಅಮ್ಮನ ಮನದಲ್ಲಿ ಬೇರೆಯದೇ ಚಿತ್ತ...  ಒಂದರ್ಧ ಗಂಟೆಯಲ್ಲಿ ಆಯಾ ಬರಬೇಕು, ದಿನವಿಡಿ ಮಗುವಿನ ಆಹಾರದ ಪಟ್ಟಿಯನ್ನು ಮತ್ತೊಮ್ಮೆ ಅವಳಿಗೊಪ್ಪಿಸುವುದಿದೆ. ಕಚೇರಿಯಲ್ಲಿ ಮಾಡಬೇಕಿರುವ ಕೆಲಸದ ರಾಶಿ, ರಾತ್ರಿ ಅಡುಗೆಯ ಚಿಂತೆ, ತಿಂಗಳ ಕೊನೆಯ ವಾರವಾದ್ದರಿಂದ ಮನೆಯ ಬಜೆಟ್‌ ತಯಾರಿಸಬೇಕು,

ಹಾಲಿನವನಿಗೆ, ಪೇಪರ್‌ ಹಾಕುವವನಿಗೆ ದುಡ್ಡು ಕೊಡಬೇಕು. ತಿಂಗಳ ದಿನಸಿ ತಂದು ಹಾಕಬೇಕು, ತಿಂಗಳಾಯಿತು ಪಾರ್ಲರ್‌ಗೊಮ್ಮೆ ಹೋಗಿ ಬರಲೇಬೇಕು.  ಪತಿಯ ಬಟ್ಟೆಗಳನ್ನೆಲ್ಲ ಇಸ್ತ್ರಿಯವನಿಗೆ ಕೊಟ್ಟು ಬರಬೇಕು, ಶೂ–ರ್‍ಯಾಕ್‌ ಸ್ವಚ್ಛ ಮಾಡದೇ ಎಷ್ಟೋ ದಿನವಾಯಿತು, ಫ್ರಿಡ್ಜ್‌ನಲ್ಲಿ ಗಬ್ಬು ವಾಸನೆ, ಈ ವಾರ ಅದನ್ನೊಮ್ಮೆ ಗೊಡವಿ ತೆಗೆಯಲೇಬೇಕು... ಎದುರಿಗಿರುವ ಗೋಡೆಯ ಮೇಲಿನ ಕ್ಯಾಲೆಂಡರನ್ನೇ ದೃಷ್ಟಿಸುವ ಅಮ್ಮ, ಅವಳ ಒಂದು ನೋಟಕ್ಕೆ ಕಾಯುವ ಕಂದನಿಗೆ ಮೂರನೇ ನಿರಾಶೆ.

ಹಾಲುಣ್ಣುತ್ತ ಹಾಗೇ ಮುಂಜಾನೆಯ ಮತ್ತೊಂದು ಸಣ್ಣ ನಿದ್ರೆಗೆ ಜಾರುತ್ತಿರುವ ಕಂದನನ್ನು ಮೆಲ್ಲಗೆ ಆಚೆ ಸರಿಸಿ, ಪಕ್ಕದಲ್ಲೊಂದು ದಿಂಬು ಇಟ್ಟು ಕಚೇರಿಗೆ ಹೊರಟು ನಿಲ್ಲುತ್ತಾಳೆ ಅಮ್ಮ. ಅರೆ ನಿದ್ರೆಯಲ್ಲಿರುವ ಕಂದನಿಗೆ ದಿಂಬಿನ ಒರಟು ಸ್ಪರ್ಶ ಮತ್ತೊಮ್ಮೆ ಅವಳ ಅನುಪಸ್ಥಿತಿಯನ್ನು ಸಾರುತ್ತದೆ.

ಗೊತ್ತದಕ್ಕೆ... ಇನ್ನೂ ಕನಿಷ್ಠ 8–10 ಗಂಟೆ ಈ ದಿಂಬು, ಆ ಬೊಂಬೆಯೇ ತನಗಾಸರೆ ಎಂದು. ಎಷ್ಟು ಹೊತ್ತಾದರೂ ತನ್ನ ಬಿಟ್ಟು ಒಂದಿಷ್ಟೂ ಆಚೆ ಸರಿಯದ ದಿಂಬು, ದಿನವಿಡೀ ತನ್ನ ಕಣ್ಣಲ್ಲಿ ಕಣ್ಣಿಟ್ಟು ಕೂರುವ ಬೊಂಬೆ... ಅರೆ ತೆರೆದ ಕಣ್ಗಳಿಂದ ಮತ್ತೆ ಮತ್ತೆ ಅವನ್ನೇ ದಿಟ್ಟಿಸುವ ಕಂದನ ಮನದಲ್ಲಿ ಮತ್ತೇನೇನು ನಡೆಯುತ್ತದೊ ಯಾರಿಗೆ ಗೊತ್ತು?

ಅಪ್ಪುಗೆಯ ಅನುಬಂಧ
ತಾಯಿ–ತಂದೆ ಮಗುವನ್ನು ಅಪ್ಪಿ ಮುದ್ದಾಡುವುದು, ಕಣ್ಣಲ್ಲಿ ಕಣ್ಣಿಟ್ಟು ನೋಡುವುದು, ಮಾತನಾಡುವುದು ಬಹಳ ಮುಖ್ಯ ಎನ್ನುತ್ತಾರೆ ಮಕ್ಕಳ ತಜ್ಞರು. ‘ಸಣ್ಣ ಕೂಸು. ಅದಕ್ಕೇನು ತಿಳಿಯುತ್ತದೆ’ ಎಂದು ಎಣಿಸುವುದು ತಪ್ಪು. ಅದಕ್ಕೆ ಏನೂ ಅರ್ಥವಾಗದೇ ಇರಬಹುದು. ಆದರೆ ಭಾವನಾತ್ಮಕ ಅನುಬಂಧಕ್ಕಾಗಿ ಅದು ಸದಾ ಹಂಬಲಿಸುತ್ತಿರುತ್ತದೆ ಎನ್ನುತ್ತಾರೆ ಅವರು.

ಕೆಲಸದ ಒತ್ತಡವಿದ್ದರೂ ತಂದೆ–ತಾಯಿ ಮಗುವಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡಲೇಬೇಕು. ಅದರಲ್ಲೂ ದುಡಿಯುವ ತಾಯಿಯ ವೇಳಾಪಟ್ಟಿಯಲ್ಲಿ ಕಂದನಿಗೆ ಸಮಯವಿರಲೇಬೇಕು. ಮಗುವಿನೊಂದಿಗೆ ಕಳೆವ ಕ್ಷಣಗಳು ಅಮ್ಮನ ಪಾಲಿಗೂ ಮುಖ್ಯವೇ. ತಾಯಿಯ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಎದೆ ಹಾಲಿನ ಉತ್ಪತ್ತಿಗೂ ಇದರಿಂದ ಅನುಕೂಲವಾಗಲಿದೆ ಎನ್ನುತ್ತವೆ ಅಧ್ಯಯನಗಳು.

ಅಷ್ಟೇ ಅಲ್ಲ, ತಾಯಿಯ ಸಾಮೀಪ್ಯ ಮಗುವಿನ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ಮಕ್ಕಳ ಐಕ್ಯೂ  ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ. ಮಾತು ಬಾರದ ಕಂದ ಎಲ್ಲವನ್ನೂ ಕಣ್ಣೋಟದಿಂದಲೇ ತಿಳಿಸಲೆತ್ನಿಸುತ್ತದೆ.

ಸಂತೋಷವಾದಾಗ ಕಣ್ಣರಳಿಸಿ ನಗುವುದು, ಬೇಸರ, ದುಃಖ, ಅಸಮಾಧಾನವಾದಾಗ ಮುಖ ಸಪ್ಪಗೆ ಮಾಡುವುದು, ಅಳುವುದು ಅಥವಾ ಶೂನ್ಯ ನೋಟದಲ್ಲಿ ಉಳಿದು ಬಿಡುವುದು ಇದೆಲ್ಲ ಮಾತು ಬಾರದ ಎಳೆ ಕಂದಮ್ಮಗಳ ಭಾಷೆ. ಅದನ್ನು ಅರ್ಥೈಸಿಕೊಳ್ಳುವ ಮನಸ್ಸು, ಸಂಯಮ ತಾಯಂದಿರಿಗೆ ಇರಬೇಕು. ಸಮಯ ಕೈ ಜಾರಿ ಹೋಗುವ ಮುನ್ನವೇ ತನ್ನ ಪಾತ್ರವನ್ನು ಕುಂದಿಲ್ಲದಂತೆ ನಿರ್ವಹಿಸಲು ಯತ್ನಿಸಬೇಕು. ಏಕೆಂದರೆ ಮತ್ತೆಂದೂ ಮರಳಿ ಬಾರದ ದಿನಗಳವು. 

ದಿನದ 24 ಗಂಟೆಗಳನ್ನು ದುಡಿಯುವ ತಾಯಂದಿರು ಮೂರು ಭಾಗಗಳನ್ನಾಗಿ ವಿಂಗಡಿಸಬೇಕು. 8 ಗಂಟೆ (ಕೆಲವೊಮ್ಮೆ 10 ಗಂಟೆ) ವಿಧಿಯಿಲ್ಲದೇ ಕಚೇರಿಯಲ್ಲಿ ಕಳೆದು ಹೋಗುತ್ತವೆ. ಇನ್ನು 8 ಗಂಟೆಯನ್ನು ಸಂಪೂರ್ಣವಾಗಿ ಮಗುವಿನ ಆರೈಕೆ ಹಾಗೂ ಅನುಬಂಧಕ್ಕಾಗಿ ಮೀಸಲಿಡಬೇಕು. ಉಳಿವ 8 ಗಂಟೆಯಲ್ಲಿ ಮನೆಗೆಲಸ, ಇತರೆ ಕೆಲಸ ಹಾಗೂ ನಿದ್ರೆ ಮಾಡಬೇಕು.

***
* ಸಾಧ್ಯವಾದಷ್ಟು ಮನೆ–ಕಚೇರಿಯ ಅಂತರ ಕಡಿಮೆ ಇರುವಂತೆ ನೋಡಿಕೊಳ್ಳಿ.

* ನಿಮ್ಮ ಅನುಪಸ್ಥಿತಿಯಲ್ಲಿ ಮಗು ಆಯಾ ಅಥವಾ ಪ್ಲೇಹೋಮ್‌ನಲ್ಲಿ ಇರುವ ಬದಲು ಮನೆಯ ಸದಸ್ಯರೊಂದಿಗೆ ಇರುವಂತಿದ್ದರೆ, ಅದರಲ್ಲೂ ಅಜ್ಜ–ಅಜ್ಜಿಯೊಂದಿಗೆ ಇರುವುದಾದರೆ ಒಳ್ಳೆಯದು. (ಆದರೆ ದಿನದ  ಆರಂಭದಲ್ಲಿ ಹಾಗೂ ಕೊನೆಯಲ್ಲಿ ನಿಮ್ಮ ಸಾಮೀಪ್ಯ ಅತ್ಯಮೂಲ್ಯವಾದುದು)

* ಆಗಾಗ್ಗೆ ನಿಮ್ಮ ರಜೆಗಳನ್ನು ಪಡೆದು ಮಗುವಿನೊಂದಿಗೆ ಸಮಯ ಕಳೆಯಿರಿ.

* ನಿಮ್ಮ ಮಗುವನ್ನು ನೀವು ಸರಿಯಾಗಿ ಬೆಳೆಸಬೇಕು ಎಂದಿದ್ದರೆ ಮೊದಲು ನೀವು ಆರೋಗ್ಯವಾಗಿರಬೇಕು. ಅದಕ್ಕಾಗಿ ಸರಿಯಾದ ಸಮಯಕ್ಕೆ ಊಟ, ಉಪಚಾರ ಮಾಡಿಕೊಳ್ಳಿ.

*ನಿಮ್ಮ ನಿದ್ರೆಗೂ ಮಹತ್ವವಿದೆ. ಕನಿಷ್ಠ ದಿನಕ್ಕೆ 7 ಗಂಟೆ ನಿದ್ರೆ ಮಾಡಿ.

ಮುದ್ದು ಕಂದನ ಮನವರಿಯಿರಿ...
ಮುದ್ದು ಹಾಗೂ ಅಪ್ಪುಗೆಯ ರೂಪಗಳಲ್ಲಿ ತಾಯಿಯ ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆಯುವ ಮಗು, ಕಡಿಮೆ ಒತ್ತಡ ಮತ್ತು ಸಾಹಸ ಮನೋಧರ್ಮದಲ್ಲಿ ಬೆಳೆಯುತ್ತದೆ.ತಂದೆ–ತಾಯಿಯ ನಡುವಿನ ಸಂಬಂಧವೂ ಸಹ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಅವರಿಬ್ಬರೂ ಪರಸ್ಪರ ಎಷ್ಟು ಹೊಂದಾಣಿಕೆಯಿಂದ, ಪ್ರೀತಿಯಿಂದ ವರ್ತಿಸುತ್ತಾರೆ ಎನ್ನುವುದು ಮಗುವಿನ ಮುಂದಿನ ಸಾಮಾಜಿಕ ಹಾಗೂ ಕೌಟುಂಬಿಕ ಜೀವನವನ್ನು ನಿರ್ಧರಿಸುತ್ತದೆ.

ಮಗುವಿಗೆ ಎಲ್ಲವನ್ನು ತಿಳಿಸಿ ಹೇಳಬೇಕಾಗಿಲ್ಲ. ತಂದೆ–ತಾಯಿ ಹಾಗೂ ಕುಟುಂಬದ ಸದಸ್ಯರ ವರ್ತನೆ, ಮಾತು, ಅನುಬಂಧವನ್ನು ನೋಡಿಯೇ ಶೇ. 90ರಷ್ಟು ಅಂಶಗಳನ್ನು ಅಳವಡಿಸಿಕೊಳ್ಳುತ್ತದೆ.

ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುವುದು, ಹಾಲುಣಿಸುವುದು, ಮಾತನಾಡಿಸುವುದು, ಆಟ ಆಡಿಸುವುದು, ಮಸಾಜ್‌ ಮಾಡುವುದು, ಸ್ನಾನ ಹಾಕುವುದು... ಇಂತಹ ಚಟುವಟಿಕೆಗಳಿಂದ ತಾಯಿ–ಮಗು ಇಬ್ಬರಲ್ಲಿಯೂ ಒಂದು ತೆರನಾದ ‘feel-good’ ಹಾರ್ಮೋನ್‌ ಉತ್ಪತ್ತಿಯಾಗುತ್ತದೆ.

ಆದರೆ ದುಡಿಯುವ ತಾಯಿಗೆ ಇಷ್ಟೆಲ್ಲ ಸಮಯವನ್ನು ನೀಡಲು ಕಷ್ಟಸಾಧ್ಯವೆಂದೇ ಹೇಳಬಹುದು. ಇದಕ್ಕೆಲ್ಲ ತಾಯಿಯೊಬ್ಬಳನ್ನೇ ಹೊಣೆಯಾಗಿಸುವುದು ತರವಲ್ಲ. ಭಾರತದಲ್ಲಿ  ಸಾಮಾಜಿಕ, ಆರ್ಥಿಕ, ಕೌಟುಂಬಿಕ ವ್ಯವಸ್ಥೆಗಳೂ ಸಹ ತಾಯಿಗೆ ಪೂರಕ ವಾತಾವರಣ ಕಲ್ಪಿಸುವುದಿಲ್ಲ. ಹೆರಿಗೆ ರಜೆಗಳು ಕಡಿಮೆ, ಕಚೇರಿ ಕೆಲಸಗಳ ಒತ್ತಡ, ಮನೆಯ ಜವಾಬ್ದಾರಿಗಳು ಕಂದನನ್ನು ಬಹು ಬೇಗ ಅವಳ ಮಡಿಲಿನಿಂದ ಇತರರ (care taker) ಮಡಿಲಿಗೆ ಹಾಕುವಂತೆ ಮಾಡುತ್ತವೆ.

ಮಗುವನ್ನು ಅತ್ಯುತ್ತಮ ವಾತಾವರಣದಲ್ಲಿ ಬೆಳೆಸುವ ಹೊಣೆ  ಸಂಗಾತಿ, ಕುಟುಂಬದವರು, ಸಮಾಜ ಹಾಗೂ ಸಹೋದ್ಯೋಗಿಗಳ ಮೇಲೂ ಇರುತ್ತದೆ. ಕೊನೆಯದಾಗಿ ಹೇಳುವುದಾದರೆ ದುಡಿಯುವ ತಾಯಂದಿರಾಗಿ ನೀವು ನಿಮ್ಮ ಮಕ್ಕಳೊಂದಿಗೆ ಎಷ್ಟು ಸಮಯ ಕಳೆಯುತ್ತೀರಿ ಎನ್ನುವುದಕ್ಕಿಂತ ಆ ಸಮಯವನ್ನು ಹೇಗೆ ಕಳೆಯುತ್ತೀರಿ ಎನ್ನುವುದು ಬಹಳ ಮುಖ್ಯ.

ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ಮರೆತರೂ ತಾಯಿಯಾಗಿ ನೀವು ಸೋಲಬಾರದು. ನಿಮ್ಮ ಪ್ರೀತಿ, ವಾತ್ಸಲ್ಯ, ಅಪ್ಪುಗೆ ನಿಮ್ಮ ಮಗುವನ್ನು ಅನಾರೋಗ್ಯಗಳಿಂದ ತಪ್ಪಿಸುತ್ತದೆ, ಅದರ ಮುಂದಿನ ಭವಿಷ್ಯತ್ತನ್ನು ರೂಪಿಸುತ್ತದೆ, ನಾಳಿನ ವರ್ತನೆ, ಆಲೋಚನಾ ಕ್ರಮ, ಸಂಬಂಧಗಳನ್ನು ನಿರ್ವಹಿಸುವ ಬಗೆ ಎಲ್ಲಕ್ಕೂ ಇದೇ ಆಧಾರ ಎನ್ನುವುದನ್ನು ಮರೆಯದಿರಿ.
-ಡಾ. ದೀಪಕ್‌ ಶಾ, ಸತ್ವಂ ಸ್ಪೆಶಾಲಿಟಿ ಕ್ಲಿನಿಕ್‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.