ADVERTISEMENT

ಕಾಲಕ್ಕೆ ತಕ್ಕಂತೆ ಬದಲಾಗಬೇಕು

​ಪ್ರಜಾವಾಣಿ ವಾರ್ತೆ
Published 23 ಜೂನ್ 2017, 19:30 IST
Last Updated 23 ಜೂನ್ 2017, 19:30 IST
ಕಾಲಕ್ಕೆ ತಕ್ಕಂತೆ ಬದಲಾಗಬೇಕು
ಕಾಲಕ್ಕೆ ತಕ್ಕಂತೆ ಬದಲಾಗಬೇಕು   

‘ಜೀವನದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ಪೇಸ್ ಬೇಕು, ಈಗ ಹಿಂದಿನ ಅವಿಭಕ್ತ ಕುಟುಂಬಗಳು ಉಳಿಯುತ್ತಿಲ್ಲವೆಂದಾಗ ಅದರ ಅರ್ಥವಾದರೂ ಏನು? ವ್ಯವಸ್ಥೆ ಅಷ್ಟಾಗಿ ಸರಿಯಿಲ್ಲವೆಂದೇ ಅರ್ಥ. ಅಂದಮಾತ್ರಕ್ಕೆ ಕುಟುಂಬದ ಇತರ ಸದಸ್ಯರನ್ನು ಕಂಡರೆ ದ್ವೇಷವೇನಿಲ್ಲ; ಆದರೆ ಒಂದೇ ಸೂರಿನಡಿ, ಒಂದೇ ಅಡುಗೆಮನೆ ಅಷ್ಟಾಗಿ ಹೊಂದಿಕೆಯಾಗಲಾರದು. ಹತ್ತಿರವಿರಲಿ, ಆದರೆ ಜೊತೆಗೆ ಬೇಡ; ಅಂಟಿಯೂ ಅಂಟದಂತೆ ಇದ್ದರೆ ಎಲ್ಲರಿಗೂ ಕ್ಷೇಮ. ಬಹಳಷ್ಟು ಯುವಜನರ ಅಭಿಪ್ರಾಯವೂ ಇದೇ ಆಗಿದೆ’–  ಎನ್ನುತ್ತಾರೆ, ಯುವವೈದ್ಯ ಡಾ. ಹರಿಕಿರಣ್.

ಮೂವತ್ತು ವರ್ಷ ತುಂಬಿದ ಸಂಸಾರದಲ್ಲಿದ್ದು ಈಗ ಮಗ–ಸೊಸೆಯ ಜೊತೆ ಇರುವ ಅರವತ್ತು ವರ್ಷದ ಜಾನಕಿಯಮ್ಮ  ‘ನಮ್ಮ ತುಂಬಿದ ಸಂಸಾರದಲ್ಲಿ ಮೈ ಮುರಿಯುವಷ್ಟು ಕೆಲಸವೂ ಇರುತ್ತಿತ್ತು. ಹಾಗೆಯೇ ಎಲ್ಲರೂ ಕುಳಿತು ಮಾತನಾಡುವಾಗ ತಮಾಷೆಯಾಗಿಯೂ ಇರುತ್ತಿತ್ತು. ಅನೇಕ ಬಾರಿ ಬೇಸರವಾದದ್ದೂ ಇದೆ. ಈಗ ನಮ್ಮದು ಚಿಕ್ಕ ಸಂಸಾರ. ಈಗಲೂ ಕೆಲಸವಿಲ್ಲದೆ ಇಲ್ಲ. ಆದರೆ ಆಗಲೇ ಚೆನ್ನಾಗಿತ್ತು.

ಅದೊಂದು ರೀತಿಯ ಹೊಂದಾಣಿಕೆಯನ್ನೂ ಸೈರಣೆಯನ್ನೂ ಕಲಿತದ್ದೇ ನಾನು ಅಲ್ಲಿ. ದೊಡ್ಡವರೆಂದರೆ ಗೌರವವಿತ್ತು. ಈಗಿನ ಮಕ್ಕಳು ಸ್ವಲ್ಪ ದೂರವಿರಲು ಬಯಸುತ್ತಾರೆ, ಡಿಸ್ಟೆನ್ಸ್ ಮೈನ್‍ಟೈನ್ ಮಾಡ್ತಾರೆ, ಅಂತೂ ಎಲ್ಲ ಬದಲಾವಣೆಗಳಿಗೂ ನಮ್ಮ ಪೀಳಿಗೆ ಸಿದ್ಧವಾಗಿರುತ್ತದೆ; ಇಲ್ಲವಾದಲ್ಲಿ ಮನೆಯ ಶಾಂತಿ ಕದಡುತ್ತದೆ’ ಎಂದು ನಿಟ್ಟುಸಿರುಬಿಡುತ್ತಾರೆ.

ADVERTISEMENT

‘ಈಗ ಅವಿಭಕ್ತ ಕುಟುಂಬಗಳು ಕಾಣೆಯಾಗುತ್ತಿವೆ; ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಆದರೆ ಎರಡರಲ್ಲೂ ತಮ್ಮದೇ ಆದ ಸಕಾರಾತ್ಮಕ ಮತ್ತು ನಕಾರಾತ್ಮಕ ವಿಷಯಗಳಿವೆ. ಅವಿಭಕ್ತ ಕುಟುಂಬಗಳಲ್ಲಿ ಅನುಸರಣೆ, ಹಿರಿಯರಿಗೆ ಗೌರವ ಮತ್ತು ಹಂಚಿಕೊಳ್ಳುವಿಕೆ ಇರುತ್ತಿತ್ತು. ಆದರೆ ಈಗಿನ ಮನೋಭಾವಕ್ಕನುಗುಣವಾಗಿ ಒಂದೇ ಮನೆಯಲ್ಲಿರುವುದು ಸಾಧ್ಯವಿಲ್ಲವಾದರೂ ಸಂಬಂಧಗಳನ್ನು ಕಡಿದುಕೊಳ್ಳುವ ಅಗತ್ಯವಿಲ್ಲ.

ಟುಂಬವೆನ್ನುವುದು ನಮ್ಮ ಸಂಸ್ಕೃತಿಯ ಜೀವಾಳ. ಅದು ಗಟ್ಟಿಯಾಗಿಲ್ಲದಿರುವುದರಿಂದಲೇ ವಿದೇಶಗಳಲ್ಲಿ ಬಹಳ ಚಿಕ್ಕ ಮಕ್ಕಳೂ ಸಹ ಮನೋರೋಗದಿಂದ ನರಳುವುದು. ವಿಭಕ್ತ ಕುಟುಂಬದಲ್ಲಿದ್ದೂ ಸಹ ಮಕ್ಕಳಲ್ಲಿ ಶಿಸ್ತು ಮತ್ತು ಸಮಯ ಪಾಲನೆಯ ಜೊತೆ ನಮ್ಮ ಹಿರಿಯರಿಗೆ ಗೌರವ, ಹಂಚಿ ಕೊಳ್ಳುವಿಕೆಯಂತಹ ಸಾಂಸ್ಕೃತಿಕ ಮೌಲ್ಯಗಳನ್ನು ಮೂಡಿಸಿದಲ್ಲಿ ಅದು ಖಂಡಿತ ಯಶಸ್ವೀ ಕುಟುಂಬವೆನಿಸಿಕೊಳ್ಳುತ್ತದೆ.

ಆಪ್ತ ಸಲಹಾಕಾರ್ತಿಯಾಗಿ ನಾನು ಕಂಡಂತೆ ಸಂಸಾರದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಮಹಿಳೆಯ ಪಾತ್ರ ಬಹಳ ದೊಡ್ಡದು, ಮೂಲತಃ ಅವಳು ತ್ಯಾಗಮನೋಭಾವದವಳು. ಅವಳು ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದಲ್ಲಿ ಖಂಡಿತ ಅದು ಗಟ್ಟಿ ಕುಟುಂಬವಾಗಿ ಉಳಿಯುತ್ತದೆ’ ಎಂದು ‘ಪ್ರಸನ್ನ ಆಪ್ತ ಸಲಹಾ ಕೇಂದ್ರ’ದ ಆಪ್ತ ಸಲಹಾಗಾರ್ತಿ ಪೂರ್ಣಿಮಾ ಪುರೋಹಿತ್ ಅವರು ಅಭಿಪ್ರಾಯ ಪಡುತ್ತಾರೆ.

ಅಂತೆಯೇ ಅವಿಭಕ್ತ ಕುಟುಂಬ ಬೇಡ ಎಂದು ತಂದೆ ತಾಯಿಯಿಂದ ಪ್ರತ್ಯೇಕ ವಾಸವಿರುವ ಉದ್ಯೋಗಸ್ಥ ದಂಪತಿಗಳು ಮಕ್ಕಳಾದ ಮೇಲೆ ತಮ್ಮ ಮಕ್ಕಳ ಸಲುವಾಗಿ ತಂದೆ ತಾಯಿಯರನ್ನು ಕರೆಸಿಕೊಂಡಿರುವುದೂ ಉಂಟು. ವಿದೇಶದಲ್ಲಿರುವ ಮಕ್ಕಳಿಗಂತೂ ತಮ್ಮ ಮಕ್ಕಳ ಸಲುವಾಗಿಯಾದರೂ ಅಜ್ಜ–ಅಜ್ಜಿ ಬೇಕಾಗುತ್ತದೆ.

ಆದರೂ ಕ್ರಷ್‌ಗಳು, ವೃದ್ಧಾಶ್ರಮಗಳೂ ಹೆಚ್ಚಾಗುತ್ತಲೇ ಇವೆ; ವಿಚ್ಛೇದನಗಳೂ ಬಹಳ ಸಾಮಾನ್ಯವಾಗಿಬಿಟ್ಟಿವೆ. ಕುಟುಂಬದ ಪರಿಭಾಷೆ ಕಾಲಕ್ಕನುಸಾರವಾಗಿ ಬದಲಾಗುತ್ತಿದೆ. ಒಂದೇ ಸೂರಿನಡಿ ತಂದೆ–ತಾಯಿ–ಮಕ್ಕಳು–ಮೊಮ್ಮಕ್ಕಳು ಇರುವ ಕಾಲ ಬದಲಾಗಿದೆ. ಆದರೂ ದೂರ ಇದ್ದೂ ವಿಶ್ವಾಸದಿಂದಿರುವ, ಪರಸ್ಪರ ಕಷ್ಟ ಸುಖಕ್ಕೆ ಸ್ಪಂದಿಸುವ ಸಂಸಾರಗಳು ಇಲ್ಲದೇ ಇಲ್ಲ.

ಕಾಲಾಯ ತಸ್ಮೈ ನಮಃ; ಕಾಲಕ್ಕೆ ತಕ್ಕಂತೆ ಬದಲಾಗುವುದು ಅನಿವಾರ್ಯ, ಈಗಿನ ಪದ್ಧತಿಗಳಾಗಲೀ ನಂಬಿಕೆಗಳಾಗಲೀ ಮುಂದೆಯೂ ಇರಬೇಕೆಂದೇನಿಲ್ಲ. ಸರಿ ಎನ್ನಿಸದಿದ್ದಾಗ ಬದಲಾವಣೆಗೆ ಯಾವಾಗಲೂ ಅವಕಾಶವಂತೂ ಇದ್ದೇ ಇದೆ. ಏನೇ ಆಗಲಿ, ‘ವಸುದೈವ ಕುಟುಂಬಕಂ’ ಎನ್ನುವುದು ನಮ್ಮ ದೇಶದ ಉಕ್ತಿಯೇ ಸರಿ.
-ಮಂಜುಳಾ ರಾಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.