ADVERTISEMENT

ಕುಂಬಳಕಾಯಿ ಅಡುಗೆ ರುಚಿ

ಎಂ.ಅಹಲ್ಯ
Published 30 ಜೂನ್ 2017, 19:30 IST
Last Updated 30 ಜೂನ್ 2017, 19:30 IST
ಸಿಹಿಗುಂಬಳದ ಗೊಜ್ಜು
ಸಿಹಿಗುಂಬಳದ ಗೊಜ್ಜು   

ಸಿಹಿಗುಂಬಳಕಾಯಿ ಅಥವಾ ಚೀನಿಕಾಯಿ ಎಂದು ಕರೆಯುವ ಈ ತರಕಾರಿ ಬಾಯಿಗೂ ರುಚಿ, ದೇಹಾರೋಗ್ಯಕ್ಕೂ ಉತ್ತಮ. ಚೀನಿ ಕಾಯಿ ತಿನ್ನುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ಇದರಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯಕ್ಕೂ ಉತ್ತಮ.

ಸಿಹಿಗುಂಬಳದ ನಾರಿಯಲ್ಲಿ ಕ್ಯಾಲೊರಿ ಅಂಶ ಕಡಿಮೆ ಇರುವುದರಿಂದ ದೇಹ ತೂಕ ಇಳಿಸಿಕೊಳ್ಳಲು ಕೂಡ ಸಿಹಿಗುಂಬಳಕಾಯಿ ಸಹಕಾರಿ. ಇಷ್ಟೆಲ್ಲಾ ಅನುಕೂಲ ಇರುವ ಈ ಗುಂಬಳಕಾಯಿಯಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳನ್ನು ಇಲ್ಲಿ ವಿವರಿಸಿದ್ದಾರೆ 

ಸಿಹಿಗುಂಬಳದ ಗೊಜ್ಜು
ಬೇಕಾಗುವ ಸಾಮಗ್ರಿಗಳು:
ಸಿಹಿಗುಂಬಳದ ಹೋಳುಗಳು – 2 ಕಪ್‌, ಕೆಂಪುಮೆಣಸು – 8,9, ಕಾಯಿತುರಿ – 1/2 ಕಪ್‌, ಹುರಿಗಡ್ಲೆ – 1 1/2 ಕಪ್‌, ಧನಿಯ – 1/2 ಚಮಚ, ಕಾಳುಮೆಣಸು – 5, ಮೆಂತೆ – ಜಿರಿಗೆ – 1/4 ಚಮಚ, ಕರಿಬೇವು – ಸ್ವಲ್ಪ, ಉಪ್ಪು – ರುಚಿಗೆ, ಎಣ್ಣೆ – ಸ್ವಲ್ಪ, ಬೆಲ್ಲ –  1 ಚೂರು, ಹುಣಸೆಹಣ್ಣು – 1 ಇಂಚು, ಅರಶಿನಪುಡಿ – ಚಿಟಿಕೆ, ಸಾಸಿವೆ – 1/4 ಚಮಚ

ADVERTISEMENT

ತಯಾರಿಸುವ ವಿಧಾನ: ಕುಂಬಳದ ಹೋಳುಗಳನ್ನು ಸಾಕಷ್ಟು ನೀರಿನಲ್ಲಿ ಬೇಯಿಸಿ. ಕೆಂಪುಮೆಣಸು, ಧನಿಯಾ, ಕಾಳುಮೆಣಸು, ಮೆಂತೆ, ಜೀರಿಗೆಯನ್ನು ಹುರಿಯಬೇಕು. ಕೆಂಪುಮೆಣಸನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು ಉಳಿದ ಹುರಿದ ಸಾಮಗ್ರಿಗಳನ್ನು ಮತ್ತು ಕಾಯಿತುರಿ, ಅರಶಿನಹುಡಿ,ಹುಣಸೆಹಣ್ಣು, ಹುರಿಗಡ್ಲೆಯನ್ನು ಸೇರಿಸಿ ರುಬ್ಬಿ ಬೆಂದ ಕುಂಬಳದ ಹೋಳುಗಳಿಗೆ ಸೇರಿಸಿ ಸ್ವಲ್ಪ ಹೊತ್ತು ಬೇಯಿಸಿ, ನಂತರ ಸಾಸಿವೆಯನ್ನು ಹುರಿದು ಕರಿಬೇವುವನ್ನು ಸೇರಿಸಿ ಕುದಿಸಿದರೆ ರುಚಿಯಾದ ಕುಂಬಳಗೊಜ್ಜು ರೆಡಿ. ಅಕ್ಕಿರೊಟ್ಟಿ, ಚಪಾತಿ ಮತ್ತು ದೋಸೆಗೆ ಇದು ಹೊಂದುತ್ತದೆ.

ಬೂದುಗುಂಬಳ ಕಾಯಿ ಕಾಶಿಹಲ್ವ
ಬೇಕಾಗುವ ಸಾಮಗ್ರಿಗಳು
ಬೂದು ಕುಂಬಳಕಾಯಿ ತುರಿ – 2 ಕಪ್‌, ಸಕ್ಕರೆ – 3/4 ಕಪ್‌, ಏಲಕ್ಕಿಪುಡಿ – ಸ್ವಲ್ಪ, ತುಪ್ಪ – 5 ಚಮಚ, ಕೋವಾ – 2ರಿಂದ 3 ಚಮಚ, ಗೋಡಂಬಿ, ಬಾದಾಮಿ ಚೂರು – ಸ್ವಲ್ಪ

ತಯಾರಿಸುವ ವಿಧಾನ: ಬೂದುಗುಂಬಳದ ತುರಿಯನ್ನು ಕುಕ್ಕರಿನಲ್ಲಿಟ್ಟು ಆವಿಯಲ್ಲಿ ಬೇಯಿಸಿ ತಣಿದ ನಂತರ ದಪ್ಪ ತಳದ ಬಾಣಲಿಯಲ್ಲಿ ಸಕ್ಕರೆಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ. ಸಕ್ಕರೆ ಕರಗಿ ಅಂಟು ಪಾಕ ಬಂದಾಗ ಬೆಂದ ತುರಿಯನ್ನು ಹಾಕಿ ಕೆದಕುತ್ತಿರಬೇಕು. ಸ್ವಲ್ಪ ಸಮಯದ ನಂತರ ತುಪ್ಪ ಹಾಗೂ ಖೋವಾವನ್ನು ಸೇರಿಸಿ, ಕೆದಕಿ ಏಲಕ್ಕಿಪುಡಿಯನ್ನು ಸೇರಿಸಬೇಕು. ಗೋಡಂಬಿ ಮತ್ತು ಬಾದಾಮಿಯ ಚೂರುಗಳನ್ನು ತುಪ್ಪದಲ್ಲಿ ಹುರಿದು ಸೇರಿಸಿದರೆ ರುಚಿಯಾದ ಹಲ್ವ ರೆಡಿ.

ಸಿಹಿಗುಂಬಳದ ಪಲ್ಯ
ಬೇಕಾಗುವ ಸಾಮಗ್ರಿಗಳು
ಕುಂಬಳದ ಹೋಳುಗಳು – 2 ಕಪ್‌, ಬೆಲ್ಲದಪುಡಿ – 1/4 ಕಪ್‌, ಕಾಯಿತುರಿ – 2 ಚಮಚ, ತುಪ್ಪ – ಸ್ವಲ್ಪ

ತಯಾರಿಸುವ ವಿಧಾನ: ಬಾಣಲಿಯಲ್ಲಿ ತುಪ್ಪ ಬಿಸಿ ಮಾಡಿ ಕುಂಬಳದ ಹೋಳುಗಳನ್ನು ಸ್ವಲ್ಪ ಮೆತ್ತಗಾಗುವಂತೆ ಹುರಿದು, ಬೆಲ್ಲದ ಪುಡಿಯನ್ನು ಸೇರಿಸಿ ಕೆದಕಿ. ಬೆಲ್ಲ ಕರಗಿ ಹೋಳುಗಳಿಗೆ ಸೇರಿದ ನಂತರ ಕಾಯಿತುರಿಯನ್ನು ಸೇರಿಸಿದರೆ ಸವಿಯಲು ಸಿದ್ಧ.

ಬೂದುಕುಂಬಳ ಮಜ್ಜಿಗೆ ಹುಳಿ
ಬೇಕಾಗುವ ಸಾಮಗ್ರಿಗಳು
ಬೂದುಕುಂಬಳದ ಹೋಳುಗಳು – 2 ಕಪ್‌, ಹಸಿರುಮೆಣಸು – 9ರಿಂದ 10, ಜೀರಿಗೆ – 1/4 ಚಮಚ, ಕಾಳುಮೆಣಸು – 6, ಹಸಿಶುಂಠಿ– 1 ಚೂರು, ಉಪ್ಪು – ರುಚಿಗೆ, ಅರಶಿನಪುಡಿ – 1/4 ಚಮಚ, ಕಡಳೆಬೇಳೆ – 2 ಚಮಚ, ಬೆಳ್ಳುಳ್ಳಿ – 3 ಎಸಳು, ಕಾಯಿತುರಿ – 1/4 ಕಪ್‌, ಸಾಸಿವೆ – 1 ಚಮಚ, ಕರಿಬೇವು – ಸ್ವಲ್ಪಕೊತ್ತುಂಬರಿಸೊಪ್ಪು ಸ್ವಲ್ಪ ಹಾಗೂ ಹುಳಿ ಮಜ್ಜಿಗೆ – ಅಗತ್ಯವಿರುವಷ್ಟು.

ತಯಾರಿಸುವ ವಿಧಾನ: ಬೂದುಗುಂಬಳದ ಹೋಳುಗಳನ್ನು ಸಾಕಷ್ಟು ನೀರಿನಲ್ಲಿ ಬೇಯಿಸಬೇಕು. ಕಡ್ಲೆಬೇಳೆಯನ್ನು ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ಎಣ್ಣೆ, ಸಾಸಿವೆ, ಕರಿಬೇವು, ಹೊರತು ನೆನೆದ ಕಡಳೆಬೇಳೆಗೆ ಮೇಲೆ ತಿಳಿಸಿದ ಸಾಮಗ್ರಿಗಳನ್ನು ಸೇರಿಸಿ ರುಬ್ಬಿ ಬೆಂದ ಹೋಳುಗಳಿಗೆ ಸೇರಿಸಿ ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಬೇಯಿಸಬೇಕು. ಬೇಯುವಾಗ ಕಲಕುತ್ತಲೇ ಇರಬೇಕು. ತಣಿದ ನಂತರ ಕಡೆದ ಮಜ್ಜಿಗೆಯನ್ನು ಸೇರಿಸಿದರೆ ಸವಿಯಲು ರೆಡಿ. ಇದು ಅನ್ನ ಹಾಗೂ ಚಪಾತಿಯ ಜೊತೆ ತಿನ್ನಲು ರುಚಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.