ADVERTISEMENT

ಕೆಲಸಕ್ಕೆ ಹೋದ್ರೂ ಎದೆಹಾಲುಣಿಸಮ್ಮ...

ಡಾ.ವೀಣಾ ಭಟ್ಟ‌ ಭದ್ರಾವತಿ
Published 31 ಜುಲೈ 2015, 19:45 IST
Last Updated 31 ಜುಲೈ 2015, 19:45 IST

ಆಗಸ್ಟ್‌ ಮೊದಲನೇ ವಾರ (1ರಿಂದ 7ರವರೆಗೆ) ವಿಶ್ವದಾದ್ಯಂತ 1991ರಿಂದಲೂ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಸ್ತನ್ಯಪಾನ ಕ್ರಿಯಾಚಟುವಟಿಕೆಯ ವಿಶ್ವ ಒಕ್ಕೂಟವು ಸ್ತನ್ಯಪಾನವನ್ನು ಉತ್ತೇಜಿಸಿ, ರಕ್ಷಿಸಿ, ಪೋಷಿಸುವುದಕ್ಕಾಗಿ ಪ್ರತಿವರ್ಷವು ನಡೆಸುವ ಈ ಸಪ್ತಾಹದಲ್ಲಿ ಈ ಬಾರಿಯ ಘೋಷವಾಕ್ಯ ‘ಸ್ತನ್ಯಪಾನ ಹಾಗೂ ಮಹಿಳೆಯ ದುಡಿಮೆ ನಾವಿದನ್ನು ಕಾರ್ಯಸಾಧ್ಯವಾಗಿಸೋಣ’ ಎನ್ನುವುದು. 22 ವರ್ಷಗಳ ಹಿಂದೆಯೆ ಅಂದರೆ 1993ರಲ್ಲಿಯೂ ‘ಮಾತೃಸ್ನೇಹಿ ಕಾರ್ಯಸ್ಥಳ’ಎನ್ನುವುದು ಘೋಷವಾಕ್ಯವಾಗಿತ್ತು.

ಪ್ರತಿ ಮಹಿಳೆಯು ತಾಯ್ತನದ ಅಮೂಲ್ಯ ಹಕ್ಕನ್ನು ಹೊಂದಿರುವ ಹಾಗೆ ತನ್ನ ಮಗುವಿಗೆ ಎದೆ ಹಾಲುಣಿಸುವ ಹಕ್ಕನ್ನು ಹೊಂದಿರುತ್ತಾಳೆ, ಅಷ್ಟೇ ಅಲ್ಲ ಎಲ್ಲ ಜೀವಿಗಳಿಗೂ ಅವರವರ ಬದುಕಿಗಾಗಿ ದುಡಿಯುವ ಹಕ್ಕೂ ಇದೆ. ಮಹಿಳೆಯು ಇದಕ್ಕೆ ಹೊರತಾಗಿಲ್ಲ ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ಹಕ್ಕು, ಎದೆ ಹಾಲು ಕುಡಿಸುವ ಪ್ರಕ್ರಿಯೆ ಇವುಗಳ ನಡುವಿನ ಘರ್ಷಣೆಯಾಗಿ ಗೊಂದಲವಾಗಿ ಮಾರ್ಪಟ್ಟು ಎಷ್ಟೋ ಬಾರಿ ಇವೆರಡರ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯ ವಾಗದೇ ದುಡಿಯುವ ಮಹಿಳೆ ಸ್ತನ್ಯಪಾನವನ್ನು ನಿಲ್ಲಿಸಿ ಹತಾಶಳಾಗುವ ಸಂದರ್ಭಗಳು ಇವೆ.

ಸ್ತನ್ಯಪಾನ ಮಗುವಿನ ಪಾಲಿಗೆ ಅಮೃತ ಸಮಾನ. ನೈಸರ್ಗಿಕ ಪರಿಪೂರ್ಣ ಪೌಷ್ಟಿಕ, ಸಮತೋಲಿತ, ಖರ್ಚಿಲ್ಲದ, ರುಚಿಕರ, ಭಾವನಾತ್ಮಕ, ದೈಹಿಕ, ದೃಢತೆ ಹೆಚ್ಚಸುವ, ಹಲವಾರು, ಕರುಳಿನ, ಚರ್ಮದ, ಶ್ವಾಸಕೋಶದ ಹಾಗೂ ಇನ್ನಿತರ ಸೋಂಕುಗಳನ್ನು ತಡೆಗಟ್ಟುವ ಸಂಜೀವಿನಿ ಎನ್ನುವುದಕ್ಕೆ ಯಾವುದೇ ಸಾಕ್ಷಿ ಪುರಾವೆಗಳು ಬೇಕಿಲ್ಲ.

ತಾಯಿಯಲ್ಲೂ ಮಗುವಿನ ಜೊತೆ ಬಾಂಧವ್ಯ ಹೆಚ್ಚಿಸಿ, ಹೆರಿಗೆಯ ನಂತರ ರಕ್ತಸ್ರಾವ ಕಡಿಮೆ ಮಾಡಿ, ಅನವಶ್ಯಕ ಬೊಜ್ಜು ಕರಗಿಸುವ ಸಾಧನ ಈ ಸ್ತನ್ಯಪಾನ. ಅಂಡಾಶಯ, ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್‌ಗಳ ಸಂಭವವನ್ನು ಕಡಿಮೆ ಮಾಡುತ್ತದೆ. ಆರ್ಥಿಕ ಹೊರೆ ಕಡಿಮೆ ಮಾಡಿ, ಪರಿಸರ ಸಮತೋಲನವನ್ನು ಕಾಪಾಡುತ್ತದೆ. ಇಷ್ಟೆಲ್ಲ ಧನಾತ್ಮಕ ಅಂಶಗಳನ್ನು ಹೊಂದಿರುವ ಸ್ತನ್ಯಪಾನ ಹಾಗೂ ಮಹಿಳೆಯ ದುಡಿಯುವ ಹಕ್ಕು ಇವೆರಡರ ನಡುವೆ ಸಮನ್ವಯ ಸಮತೋಲನ ಕಾಯ್ದುಕೊಳ್ಳಲೆಂದೇ ಮತ್ತೆ ಈ ಬಾರಿಯ ಘೋಷವಾಕ್ಯವೂ ‘ದುಡಿಯುವ ಮಹಿಳೆ ಹಾಗೂ ಸ್ತನ್ಯಪಾನ ನಾವಿದನ್ನು ಕಾರ್ಯಗತಗೊಳಿಸೋಣ’ಎನ್ನುವುದು.

ಸ್ತನ್ಯಪಾನದ ಬಗೆಗಿರುವ ಅಜ್ಞಾನವೋ ಅಥವಾ ದುಡಿಯುವ ಮಹಿಳೆಯರ ತಾಕಲಾಟವೋ ಒಟ್ಟಿನಲ್ಲಿ ವಿಶ್ವದಾದ್ಯಂತ ಕೇವಲ ಶೇ.38ರಷ್ಟು  ಮಂದಿಗೆ  ಮಾತ್ರ  ಇಂದಿಗೂ ಕೇವಲ ಸ್ತನ್ಯಪಾನ ಭಾಗ್ಯ ಅನುಭವಿಸುತ್ತಿದ್ದಾರೆ. ನಿರೀಕ್ಷೆಗಿಂತ ಕಡಿಮೆ ಸ್ತನ್ಯಪಾನದಿಂದಾಗುವ ತೊಂದರೆಗಳಿಂದಾಗಿ 8ಲಕ್ಷಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಆದ್ದರಿಂದ ಸ್ತನ್ಯಪಾನವನ್ನು ಬಹು ಆಯಾಮಗಳಿಂದ ಚ್ಯೆತನ್ಯಗಳಿಸಿ ಎಲ್ಲಾ ವರ್ಗದ ಕಾರ್ಯನಿರತ ಮಹಿಳೆಯರನ್ನು ಪ್ರೋತ್ಸಾಹಿಸಿ, ಬೆಂಬಲಿಸುವ ಅನಿವಾರ್ಯತೆ ಇಂದಿಗಿದೆ.

ಮಹಿಳೆಯ ದುಡಿಯುವ ಹಕ್ಕು ಮತ್ತು ಸ್ತನ್ಯಪಾನ ಎರಡನ್ನು ಒಟ್ಟಿಗೆ ಬೆಂಬಲಿಸಬೇಕು. ಯಶಸ್ಸು ಕಾಣಲು ಮುಖ್ಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಲೇಬೇಕು. ಅವುಗಳೇ ಕಾಲ, ಸ್ಥಳಾವಕಾಶ ಅಥವಾ ಸಾಮಿಪ್ಯ ಮತ್ತು ಆಧಾರ ಬೆಂಬಲ. ಕಾಲ ಅಥವಾ ಸಮಯ- ಹೆರಿಗೆಗೂ ಮುನ್ನವೇ ಸಂಬಂಧಪಟ್ಟ ಆಧಿಕಾರಿಗಳ ಜೊತೆ ರಜೆಯ ಅವಧಿಗಳ ಬಗ್ಗೆ ಚರ್ಚಿಸಿ ಅದು ಸಂಬಳ ಸಹಿತ ರಜೆ, ನಂತರ ಸಂಬಳ ರಹಿತ ರಜೆ, ಹಳೆಯ ಬಾಕಿ ರಜೆಗಳನ್ನು ಉಪಯೋಗಿಸಿಕೊಳ್ಳುವ ಬಗ್ಗೆ ಎಲ್ಲವನ್ನೂ ಮುಕ್ತವಾಗಿ ಚರ್ಚಿಸಿ ಹೆರಿಗೆಗೂ ಮೊದಲೆ  ನಿಮ್ಮ ಪೂರ್ವ ಸಿದ್ದತೆಗಾಗಿ ರಜೆಯನ್ನು ತೆಗೆದುಕೊಳ್ಳವ. ಕನಿಷ್ಟ 6 ತಿಂಗಳು ಎದೆಯ ಹಾಲು ಕುಡಿಸುವುದು ಅತಿ ಮುಖ್ಯ.

ಮಗು ಅವಧಿಗೆ ಮುನ್ನವೇ ಹುಟ್ಟಿದರೆ ತೂಕ ಕಡಿಮೆ ಇದ್ದರೆ ಹೆಚ್ಚು ಕಾಲ ಬೇಕಾಗಬಹುದು. ನಂತರ ಕೆಲಸಕ್ಕೆ ಹಿಂದುರುಗಿದ ನಂತರವೂ ತಡವಾಗಿ ಹೋಗಿ ಬೇಗನೇ ಹಿಂದಿರುಗುವ ಹಾಗೆ ಏರ್ಪಾಡು ಮಾಡಿಕೊಳ್ಳಿ. ಇಲ್ಲವೆ ಕೆಲಸದ ಮಧ್ಯೆ ಬಿಡುವು ಮಾಡಿಕೊಳ್ಳಿ. ದೀರ್ಘ ಲಂಚ್ ಬ್ರೇಕ್ ತೆಗೆದುಕೊಳ್ಳಿ. ಮೊದಲೇ  ಕೆಲಸ  ಹಾಗೂ ಸ್ತನ್ಯಪಾನ ಎರಡನ್ನೂ  ಸುರಕ್ಷಿತವಾಗಿ ನಡೆಸುವ ಬಗ್ಗೆ ಸಲಹೆ ಪಡೆಯಿರಿ. ಹತ್ತಿರದ ನೆಂಟರು ನಂಬಿಕಸ್ಥರ ಸಹಾಯಕ್ಕೆ ಕೈಚಾಚಿ ಮನೆಯಿಂದಲೇ ಕೆಲಸ ಮಾಡುವ ಸಾಧ್ಯತೆ ಇದ್ದರೆ ಮಾಡಿ.

ಸ್ಥಳಾವಕಾಶ/ಸಾಮೀಪ್ಯತೆ– ಮತ್ತೆ ಕೆಲಸ ಪ್ರಾರಂಭಿಸಿದರೂ ಕೆಲಸದ ಸ್ಥಳದಲ್ಲಿ ಮಗುವನ್ನು ನೋಡಿಕೊಳ್ಳುವ ವ್ಯವಸ್ಥೆ ಇದ್ದರಂತೂ ಸಂತೋಷ. ಅಲ್ಲಿಯೂ ಎದೆಹಾಲು ನೀಡುವಿಕೆಗೇ ಪ್ರಾಮುಖ್ಯತೆ ಕೊಡಬೇಕು. ಕಾರ್ಯಸ್ಥಳಗಳಲ್ಲಿ ಶಿಶುಕೇಂದ್ರ ತೆರೆಯಲು ವ್ಯವಸ್ಥಾಪಕರಿಗೆ ತಿಳಿಸಿ, ಇಲ್ಲವೇ ಹಾಲು ಹಿಂಡಿ ತೆಗೆಯಲು ಖಾಸಗಿ ಸ್ಥಳ ಹಾಗೂ ಹಾಲು ಶೇಖರಿಸಲು ಫ್ರಿಡ್ಜ್, ಪ್ಲಾಸ್ಕ್ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು.

ಹಾಲುಣಿಸುವ ಸ್ಥಳ ಸ್ವಚ್ಛ ಹಾಗೂ ಮೂಕ್ತ ವಾತಾವರಣದಿಂದ ಕೂಡಿದ್ದಾಗಿರಬೇಕು. ಮಗುವನ್ನು ನೋಡಿಕೊಳ್ಳುವವರು ಕಾರ್ಯಸ್ಥಳದ ಹತ್ತಿರೆವೇ ಇದ್ದಲ್ಲಿ ಬಿಡುವಿನ ವೇಳೆಯಲ್ಲಿ ಮಗುವನ್ನು ತಾಯಿಯ ಹತ್ತಿರ ಕರೆದುಕೊಂಡು ಬಂದು ಹಾಲುಣಿಸಿ ಹಿಂದುರುಗಿಸುವ ವ್ಯವಸ್ಥೆ  ಮಾಡಿಕೊಳ್ಳಬಹುದು. ಇಲ್ಲವೇ ವಾಸಸ್ಥಳ ಹತ್ತಿರವಿದ್ದರೆ ತಾಯಿಯೆ ಮಗುವಿನ  ಹತ್ತಿರ ಹೋಗಿ ಹಾಲುಣಿಸಿ ನಂತರ ವಾಪಸಾಗಬಹುದು.

ಈ ಮೇಲಿನ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗದಿದ್ದರೆ ಮಗು ದೂರದಲ್ಲಿದ್ದಾಗ ಬಹಳ ಹೊತ್ತು ಹಾಲು ಕುಡಿಸದೆ ಇದ್ದಾಗ, ಹಾಲು ಕಟ್ಟಿ ಎದೆ ಬಾವು ಬರುವುದನ್ನು ತಡೆಗಟ್ಟಲು ಮತ್ತು ಹಾಲಿನ ಉತ್ಪಾದನೆ ಕಡಿಮೆಯಗದಂತೆ ನೋಡಿಕೊಳ್ಳಲು ಪ್ರತಿ 3ಗಂಟೆಗೊಮ್ಮೆ ಹಾಲು ಹಿಂಡಿ ತೆಗೆಯಬೇಕು. ಯಾಕೆಂದರೆ ಹಾಲು ಉತ್ಪಾದನೆ ಬೇಡಿಕೆ ಹಾಗೂ ಸರಬರಾಜು ಸಿದ್ದಾಂತದ ಮೇಲೆ ಅವಲಂಬಿಸಿರುತ್ತದೆ. ಆದ್ದರಿಂದ ನಿಯಮಿತ ಹಾಲು ತೆಗೆಯುವಿಕೆ ಬಹಳ ಮುಖ್ಯ.

ಹಾಲು ಸಂಗ್ರಹಿಸುವ ವಿಧಾನ
ಹಾಲನ್ನು ಮುಚ್ಚಳವಿರುವ ಸ್ವಚ್ಛವಾದ ಬಾಟಲಿಯಲ್ಲಿ ಸಂಗ್ರಹಿಸಿ. ಕೋಣೆಯ ಉಷ್ಣಾಂಶದಲ್ಲಿ 6-8 ಗಂಟೆಗಳ ಕಾಲ ಇಡಬಹುದು. ಫ್ರಿಡ್ಜ್‌ನಲ್ಲಾದರೆ ಹಾಲನ್ನು 24 ಗಂಟೆಗಳ ಕಾಲ ಇಡಬಹುದು ಮತ್ತು  ಆ ಹಾಲನ್ನು ಮತ್ತೆ ಉಪಯೋಗಿಸಬೇಕಾದರೆ ಬಿಸಿನೀರಿನ ಪಾತ್ರೆಯಲ್ಲಿಟ್ಟು ಕೋಣೆಯ ಉಷ್ಣಾಂಶಕ್ಕೆ ತಂದನಂತರ ಉಪಯೋಗಿಸಬಹುದು. ಆದರೆ ಆ ಹಾಲನ್ನೇ ಬಾಟಲಿಯಲ್ಲಿಟ್ಟು ಯಾವ ಕಾರಣಕ್ಕೂ ಬಾಟಲಿ ಯಿಂದಲೆ ನೇರವಾಗಿ ಮಗುವಿಗೆ ಕೊಡಬಾರದು. ಚಮಚ, ಒಳಲೆ ಇತ್ಯಾದಿ ಬಳಸಬಹುದು.

ಬೆಂಬಲ/ಸಹಕಾರ- ಪ್ರತಿ ಮಹಿಳೆಯೂ ತಾಯ್ತನ ಹಾಗು ಹಾಲುಣಿಸುವಿಕೆಯಲ್ಲಿ ಅವರ ಕಾರ್ಯ ಕ್ಷೇತ್ರದಲ್ಲಿ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ತಿಳಿದಿರಲೇಬೇಕು. ಜೊತೆಗಿರುವ ಸಹೋದ್ಯೋಗಿಗಳ ಸಲಹೆ  ಬೆಂಬಲ ಹಾಗೂ ಮೇಲಧಿಕಾರಿಗಳ ಸಹಕಾರ ಮುಖ್ಯ. ಅವರೆಲ್ಲರೂ ತಾಯ್ತನದ ಹಾಗೂ ಹಾಲುಣಿಸುವಿಕೆಯ ಬಗ್ಗೆ ಸೌಹಾರ್ದ ಭಾವನೆ ಹೊಂದಿದ್ದು, ಸ್ತನ್ಯಪಾನ ಪ್ರೋತ್ಸಾಹಿಸಬೇಕು ಮತ್ತು  ತಾಯ್ತನವನ್ನು ಆಧಾರವಾಗಿಟ್ಟುಕೊಂಡು ಯಾವುದೇ ತಾರತಮ್ಯ ತೋರಬಾರದು.

ಗಂಡ, ತಂದೆ, ತಾಯಿ ಕುಟುಂಬದ ಇತರ ಸದಸ್ಯರ ಬೆಂಬಲವೂ ಅತಿ ಮುಖ್ಯವಾದದ್ದು. ಒಟ್ಟಿನಲ್ಲಿ ದುಡಿಯುವ ಮಹಿಳೆ ಸ್ತನ್ಯಪಾನ ಹಾಗೂ ಉದ್ಯೋಗ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳಲು ಸಾಕಷ್ಟು ಪೂರ್ವ ತಯಾರಿ ಅಗತ್ಯ  ಹಾಗೂ ಕುಟುಂಬದಲ್ಲಿ ಮತ್ತು  ಕಾರ್ಯಸ್ಥಳದಲ್ಲಿ ಎಲ್ಲರ ಬೆಂಬಲ ಅತ್ಯಗತ್ಯ.

ಪ್ರಸವಪೂರ್ವ ಅವಧಿಯಲ್ಲಿ ವೈದ್ಯರು, ದಾದಿಯರು ಮತ್ತು ಬೆಂಬಲ ಗುಂಪಿನವರು ಸ್ತನ್ಯಪಾನದ ಮಹತ್ವವನ್ನು ಪೌಷ್ಟಿಕ ಆಹಾರ ಸೇವನೆಯ ಮಹತ್ವವನ್ನು, ಎದೆ ತೊಟ್ಟಿನ ಬಗ್ಗೆ ಕಾಳಜಿ ವಹಿಸುವುದನ್ನು ತಿಳಿಹೇಳಬೇಕು. ಕನಿಷ್ಟ ಆರು ತಿಂಗಳು ಎದೆ ಹಾಲನ್ನು ಕುಡಿಸಲೇಬೇಕು ಮತ್ತು ಉದ್ಯೋಗದ ಕಾರಣಕ್ಕಾಗಿ ಎಷ್ಟೋ ಮಹಿಳೆಯರು ಪೂರಕ ಆಹಾರವನ್ನು ಬೇಗನೇ ಪ್ರಾರಂಭಿಸುವುದು ತಪ್ಪು.
ಮತ್ತು ಫಾರ್ಮುಲಾ ಆಹಾರಗಳನ್ನು ಹಾಕಲು ಪ್ರಯತ್ನಿಸ ಬಾರದು.

ಕೆಲಸಕ್ಕೆ ಮತ್ತೆ ಹೋಗಲು ಪ್ರಾರಂಭಿಸಿದ ಮೇಲೆ ಕುಟುಂಬದವರ, ಆತ್ಮೀಯರ, ಮೇಲ್ವಿಚಾರ ಕರ ಸಹಕಾರದಿಂದ ಹಿಂಡಿದ ಹಾಲನ್ನು ಹಾಕುತ್ತ ಇಲ್ಲವೆ ಹತ್ತಿರವಿದ್ದರೆ ಲಂಚ್, ಕಾಫಿ ಸಮಯದಲ್ಲಿ ಹತ್ತಿರವೇ ಇದ್ದರೆ ಮಗುವನ್ನು ಕರೆಸಿ ಇಲ್ಲವೇ ತಾವೇ ಹೋಗಿ ಹಾಲುಣಿಸುವುದು ಮಾಡಬೇಕು. ಕಚೇರಿಗೆ ಹೋಗುವ ಮೊದಲು ಮತ್ತು ಬಂದ ತಕ್ಷಣವೇ ಹಾಲುಣಿಸುವುದು, ಮನೆಯಲ್ಲಿದ್ದಾಗ, ರಾತ್ರಿಯ ಹೊತ್ತು, ರಜಾ ದಿನಗಳಲ್ಲಿ ಹೆಚ್ಚೆಚ್ಚು ಹಾಲು ಕುಡಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮಹಿಳೆ ತನ್ನ ದುಡಿಯುವ ಹಕ್ಕು ಹಾಗೂ ಸ್ತನ್ಯಪಾನದ ಹಕ್ಕು ಎರಡನ್ನೂ ಪ್ರತಿಪಾದಿಸಲು ಸಾಧ್ಯವಾಗುತ್ತದೆ.
***
ಎದೆ ಹಾಲು ಹಿಂಡುವ ವಿಧಾನ
ಪ್ರತಿ ತಾಯಿ, ದುಡಿಯುವ ಮಹಿಳೆಯಂತೂ ಎದೆ ಹಾಲು ಹಿಂಡಿ ತೆಗೆಯುವ ವಿಧಾನವನ್ನು ನಿಖರವಾಗಿ ತಿಳಿದಿರಲೇಬೆಕು. ಈಗ ಬೇರೆ ಬೇರೆ ತರಹದ ಬ್ರೆಸ್ಟ್‌ಪಂಪ್‌ಗಳು ಮಾರುಕಟ್ಟೆಯಲ್ಲಿ ದೊರಕುತ್ತವೆ. (ವಿದ್ಯುತ್ ಚಾಲಿತ/ಮಾನವ ಚಾಲಿತ ಇತ್ಯಾದಿ) ಈ ಯಂತ್ರಗಳೇನು ಅನಿವಾರ್ಯವಲ್ಲ. ಕೈಯಿಂದಲೆ  ಹಾಲನ್ನು ಹಿಂಡಬಹುದು.

ಈ  ವಿಧಾನದಲ್ಲಿ ಹಾಲು ಹಿಂಡುವ ಬಟ್ಟಲನ್ನು  ಸ್ವಚ್ಛವಾಗಿ ತೊಳೆದಿಟ್ಟುಕೊಳ್ಳಬೇಕು. ನಂತರ ಕೈಗಳನ್ನೂ ಸ್ವಚ್ಛವಾಗಿ  ತೊಳೆದಿಟ್ಟುಕೊಳ್ಳಿ. ಎದೆ ತೊಟ್ಟಿನ ಮೇಲೆ (ನಿಪ್ಪಲ್) ಹೆಬ್ಬರೆಳು ಉಳಿದ ಬೆರಳುಗಳನ್ನು ತೊಟ್ಟಿನ ಕೆಳಗೆ ಕಿರುಡದ (ಏರಿಯೋಲಾ) ಮೇಲಿಡಿ ಹೆಬ್ಬೆರಳು ಮತ್ತು ತೋರುಬೆರಳು ಸಮಾನಾಂತರವಾಗಿರುತ್ತದೆ.

ಹೆಬ್ಬೆರಳು ಹಾಗೂ ತೋರುಬೆರಳಿಂದ ಎದೆಯನ್ನು ಒತ್ತಿ ನಂತರ ಕೈಬೆರಳನ್ನು ಸರಿಸದೆಯೇ ಕಿರುಡನ್ನು ಒತ್ತಿ ಹೀಗೆ 3ರಿಂದ 5 ನಿಮಿಷಗಳ ಕಾಲ ಒತ್ತಿ ಒತ್ತಿ ಹಾಲನ್ನು ಸಂಗ್ರಹಿಸಿ. ಇದೇ ರೀತಿ ಇನ್ನೊಂದು ಸ್ತನದ ಮೇಲೆ ಪುನರಾವರ್ತಿಸಿ ಕಿರುಡದ ಸುತ್ತಲೂ ಬೆರಳುಗಳನ್ನು ಚಲಿಸುತ್ತಾ ಹಾಲು ಹೊರಬರುವಂತೆ ಮಾಡಬೇಕು. ಆರಂಭದಲ್ಲಿ ಹಾಲು ಸಲೀಸಾಗಿ ಬರದೇ ಇರಬಹುದು. ನಂತರ ಏರಿಯೋಲಾ ಹಿಂದಿನ ಹಾಲಿನ ಕೋಶಗಳನ್ನು ಪದೇ ಪದೇ ಒತ್ತಿದಾಗ ನಿಧಾನವಾಗಿ ಹಾಲು ಚಿಮ್ಮಲು ಪ್ರಾರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.