ADVERTISEMENT

ಕ್ಷಮಾಪಣೆ

ಮಿನಿ ಕಥೆ

ಶಾರದಾ ಎನ್.ಕೆ
Published 4 ಜನವರಿ 2013, 19:59 IST
Last Updated 4 ಜನವರಿ 2013, 19:59 IST
ಕ್ಷಮಾಪಣೆ
ಕ್ಷಮಾಪಣೆ   

`ಕಂಗ್ರಾಟ್ಸ್, ಹೆಣ್ಣು ಮಗು'.
ನನಗೆ ಬೇಜಾರಾಗಿತ್ತು, ಆದರೂ ಮೊದಲನೇ ಮಗು ಎಂದು ಸಮಧಾನ ಪಟ್ಟುಕೊಂಡೆ. ಮನೆಯಲ್ಲಿ ಅಷ್ಟೇನೂ ಸಂಭ್ರಮವಿಲ್ಲದೆ ಮಗುವಿನ ಆಗಮನವಾಯಿತು. ನನ್ನ ಹೆಂಡತಿ ಎರಡನೇ ಬಾರಿ ಗರ್ಭ ಧರಿಸಿದಾಗ ಸ್ನೇಹಿತನ ಸಹಾಯದಿಂದ ಹೇಗೋ ಲಿಂಗ ಪತ್ತೆ ಮಾಡಿಸಿದೆ. ಅದೂ ಹೆಣ್ಣು ಮಗು ಅಂತ ತಿಳಿಯಿತು. ಮನಸ್ಸಿಗೆ ತುಂಬಾ ಬೇಸರ ಮತ್ತು ಸಿಟ್ಟು ಕೂಡಾ ಬಂತು.

ಹೇಗಾದರೂ ಮಾಡಿ ಮಗುವನ್ನು ತೆಗೆಸಿಬಿಡಬೇಕೆಂದು ನಿರ್ಧಾರ ಮಾಡಿದೆ. ಹೆಂಡತಿಯ ಜೊತೆ ಮಾತಾಡಿದೆ. ಅವಳು ಮೊದಲು ಒಪ್ಪಲಿಲ್ಲ. ಆದರೆ ಮನೆಯವರ ಜೊತೆ ಸೇರಿ ಒತ್ತಾಯ ಮಾಡಿ ಅವಳ ಗರ್ಭಪಾತ ಮಾಡಿಸಿದೆ. ಜನರ ದೃಷ್ಟಿಯಲ್ಲಿ  ನಾವು ಕೆಟ್ಟವರಾಗಬಾರದೆಂಬ ಕಾರಣಕ್ಕೆ, `ಮಗು ಸಂಪೂರ್ಣ ಅಂಗವಿಕಲವಾಗಿದೆ, ಗರ್ಭದಲ್ಲೇ ಸಾಯೋ ಸಂಭವವಿದೆ, ತಡವಾದರೆ ತಾಯಿ ಪ್ರಾಣಕ್ಕೇ ಅಪಾಯ ಅಂತ ವ್ಯೆದ್ಯರು ಹೇಳಿದ್ದಾರೆ. ಅದಕ್ಕೆ ಗರ್ಭಪಾತ ಮಾಡಿಸಿಬಿಟ್ಟೆವು' ಅಂತ ಹೇಳಿ ನಮ್ಮ ತಪ್ಪನ್ನು ಮುಚ್ಚಿಬಿಟ್ಟೆವು.

ಹೆಂಡತಿ ಮತ್ತೊಮ್ಮೆ ಗರ್ಭವತಿಯಾದಳು. ನನಗೆ ಗಂಡು ಮಗು ಬೇಕೇ ಬೇಕಿತ್ತು. ಮತ್ತೆ ಸ್ಕ್ಯಾನ್ ಮಾಡಿಸಿದೆ. ರಿಪೋರ್ಟ್ ನೋಡಿ 100 ವೋಲ್ಟ್ ಕರೆಂಟ್ ಹೊಡೆದಂಗೆ ಆಯಿತು. ಯಾಕೆಂದರೆ ಅದು ಕೂಡ ಹೆಣ್ಣು. `ಇರಲಿ ಬಿಡು, ನಮ್ಮ ಹಣೆಬರಹದಲ್ಲಿ ಗಂಡು ಮಗು ಇಲ್ಲವೆಂದು ದೇವರು ಬರೆದಿದ್ದಾನೆ' ಎಂದು ಹೇಳಿ ಹೆಂಡತಿಯನ್ನು ಸಮಾಧಾನ ಮಾಡಿದೆ.

ನನ್ನ ಮಾತು ಕೇಳಿ ಅವಳಿಗೆ ಭಾರಿ ಅಚ್ಚರಿ ಆಯಿತು. ಒಂದು ದಿನ ಹೆಂಡತಿ ಮಾಳಿಗೆ ಮೇಲೆ ಬಟ್ಟೆ ಒಣ ಹಾಕಲು ಹೋದವಳು ಬರಲೇ ಇಲ್ಲ. ನಾನು ನೋಡಿಕೊಂಡು ಬರಲು ಹೋದೆ, ಅವಳು ಅಲ್ಲಿ ಹೆಣವಾಗಿ ಬಿದ್ದಿದ್ದಳು. ನಾನು ಜೋರಾಗಿ ಬೊಬ್ಬೆ ಇಟ್ಟೆ, ಸುತ್ತಮುತ್ತಲಿನ ಜನ ಓಡಿ ಬಂದರು. ಅಕಸ್ಮಾತಾಗಿ ಅಲ್ಲೇ ನೀರಿನ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೇ ಅದರ ಮೇಲೆ ಕಾಲಿಟ್ಟು ಶಾಕ್ ಹೊಡೆದು ಅವಳು ಸತ್ತು ಹೋಗಿದ್ದಳು. ಆದರೆ ಅದು ಅಕಸ್ಮಾತಾಗಿ ಆದ ಸಾವಲ್ಲ, ಕೊಲೆ ಎಂಬುದು ನನಗೊಬ್ಬನಿಗೆ ಮಾತ್ರ ಗೊತ್ತಿತ್ತು.

ಗಂಡು ಮಗು ಬೇಕೇಬೇಕು ಎಂಬ ಹುಚ್ಚು ಹಟದಿಂದ ನಾನು ಎರಡನೇ ಮದುವೆ ಮಾಡಿಕೊಂಡೆ. ಆ ದಿನ ನನ್ನ ಮೊಬೈಲ್ ರಿಂಗ್ ಆಯ್ತು. ತೆಗೆದು ನೋಡಿದೆ `ಅಂಕಿತಾ ಬರ್ತ್‌ಡೇ' ಅಂತ ರಿಮೈಂಡರ್ ಬಂತು. ಅಂದು ನನ್ನ ಮಗಳ ಮೊದಲನೇ ವರ್ಷದ ಬರ್ತ್‌ಡೇ. ನನ್ನ ತಮ್ಮನ ಕೈಯಲ್ಲಿದ್ದ ಮಗಳನ್ನು ಎತ್ತಿಕೊಂಡು ಮುತ್ತು ಕೊಟ್ಟೆ. ಕೆಲವು ತಿಂಗಳ ನಂತರ ನನ್ನ ಎರಡನೇ ಹೆಂಡತಿ ಗರ್ಭವತಿಯಾದಳು. ಈ ಬಾರಿಯೂ ನಾನು ಕಾನೂನು ಬಾಹಿರವಾಗಿ ಸ್ಕ್ಯಾನ್ ಮಾಡಿಸಿದೆ. ಅದೃಷ್ಟ ನನ್ನ ಕಡೆಗಿತ್ತು.

ಮನೆಯವರು, ಬಂಧು ಬಳಗದವರಿಗೆಲ್ಲ ಸಿಹಿ ಹಂಚಿ ಸಂತೋಷಪಟ್ಟೆ. ಕೂಸು ಹುಟ್ಟೋಕೆ ಮೊದಲೇ ಕುಲಾವಿ ಹೊಲಿಸಿದರು ಅನ್ನೋ ಹಾಗೆ ಮಗ ಹುಟ್ಟೋಕೆ ಮೊದಲೇ ಅವನಿಗೆ ಇಡಲು ಕಂಡ ಕಂಡವರನ್ನೆಲ್ಲ ಒಳ್ಳೆಯ ಹೆಸರಿಗಾಗಿ ವಿಚಾರಿಸಿದೆ. ಕಡಿಮೆ ಎಂದರೂ 100 ಹೆಸರುಗಳ ಪಟ್ಟಿ ಮಾಡಿ, ಕೊನೆಗೂ ಎಲ್ಲದರಲ್ಲೂ ಜಯ ಗಳಿಸುವಂತಾಗಲಿ ಎಂಬ ಆಸೆಯಿಂದ `ಅಜಯ' ಎಂದು ಹೆಸರಿಡಲು ನಿರ್ಧಾರ ಮಾಡಿದೆ. ಗಂಡು ಮಗು ಮನೆಗೆ ಬಂದು ಬಿಟ್ಟಿತು. ಊರವರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸಿದೆ.

ತಿಂಗಳುಗಳು ಕಳೆದವು. ಮಗುವಿನ ಅಳುವಿನ ದನಿ ಕ್ಷೀಣಿಸುತ್ತಾ ಬಂತು, ಕೈ ಕಾಲುಗಳು ದಪ್ಪಗಾಗಲಿಲ್ಲ. ವೈದ್ಯರ ಬಳಿ ಹೋದಾಗ `ಅಂತಾದ್ದೇನೂ ಇಲ್ಲ ಮುಂದೆ ಎಲ್ಲಾ ಸರಿಹೋಗುತ್ತೆ' ಅಂತ ಹೇಳಿ ಕಳಿಸಿಬಿಟ್ರು. ಮತ್ತೊಂದು ತಿಂಗಳಾಯಿತು. ಮಗುವಿನ ಕೈ ಕಾಲುಗಳು ಇನ್ನಷ್ಟು ನಿಶ್ಯಕ್ತವಾದವು. ಮಗು ಯಾವುದಕ್ಕೂ ಪ್ರತಿಕ್ರಿಯೆ ತೋರುತ್ತಿರಲಿಲ್ಲ. ಕೊನೆಗೆ ಒಳ್ಳೆಯ ವೈದ್ಯರ ಹತ್ತಿರ ಹೋಗಿ ತಪಾಸಣೆ ಮಾಡಿಸಿದೆವು. ಅವರ ಮಾತಿನಿಂದ ಸಿಡಿಲು ಬಡಿದ ಹಾಗೆ ಆಯಿತು. `ನಿಮ್ಮ ಮಗು ದೈಹಿಕ ಮತ್ತು ಮಾನಸಿಕವಾಗಿ ಸಂಪೂರ್ಣ ಅಂಗವಿಕಲವಾಗಿದೆ' ಎಂದು ಹೇಳಿಬಿಟ್ಟರು. ಹುಟ್ಟಿದ ಏಕೈಕ ಗಂಡು ಮಗುವಿಗೆ ಹೀಗಾದದ್ದು ತಿಳಿದು ದಿಗ್ಭ್ರಮೆ ಆಯಿತು.

ಒಂದು ದಿನ ಹೆಂಡತಿಗೆ `ಇವತ್ತು ರಾತ್ರಿ ಅಡುಗೆ ಮಾಡಬೇಡ ನಾನೇ ಹೊರಗಿಂದ ಊಟ ತರುತ್ತೇನೆ' ಅಂತ ಹೇಳಿ ಹೋದೆ. ತಮ್ಮನ ಮನೆಯಲ್ಲಿ ಇದ್ದ ಮಗಳನ್ನೂ ಜೊತೆಗೆ ಕರೆದುಕೊಂಡು ಹೋದೆ. ಅವಳ ಹಣೆಗೆ ಜೋರಾಗಿ ಮುತ್ತಿಟ್ಟು, ಅವಳ ಕಾಲು ಮುಟ್ಟಿ ಕ್ಷಮೆ ಕೇಳಿದೆ.

ಇದರ ಪರಿವೆಯೇ ಇಲ್ಲದೆ ಮಗು ಐಸ್‌ಕ್ರೀಮ್ ತಿನ್ನುತ್ತಿತ್ತು. ಊಟ ಕಟ್ಟಿಸಿಕೊಂಡು ಅವಳನ್ನು ಮತ್ತೆ ತಮ್ಮನ ಮನೆಯಲ್ಲೇ ಬಿಟ್ಟು ಬಂದೆ. ನಾವು ಊಟ ಶುರು ಮಾಡಿದೆವು. `ಸಾಂಬಾರು ಯಾಕೋ ಕಹಿಯಾಗಿದೆ' ಎಂದು ಗೊಣಗಿದ ಹೆಂಡತಿಗೆ ಏನೋ ಕಾರಣ ಕೊಟ್ಟು ಬಾಯಿ ಮುಚ್ಚಿಸಿದೆ. ಊಟ ಮುಗಿಸಿ ಮಗನಿಗೆ ಹಾಲು ಕುಡಿಸಿ ಮಲಗಿದಳು. ಹೆಂಡತಿ, ಮಗನ ಮುಖ ನೋಡಿದೆ, ಅವರು ಇನ್ನೆಂದೂ ಏಳುವುದಿಲ್ಲ ಎಂಬುದು ಗೊತ್ತಿತ್ತು.

ಬಳಿಕ ಪತ್ರ ಬರೆಯಲು ಪೆನ್ನು ಕೈಗೆತ್ತಿಕೊಂಡೆ- `ನನ್ನ ಮೊದಲನೇ ಹೆಂಡತಿ, ಅವಳ ಗರ್ಭದಲ್ಲಿದ್ದ ಎರಡು ಹೆಣ್ಣು ಮಕ್ಕಳು, ನನ್ನ ಎರಡನೇ ಹೆಂಡತಿ ಹಾಗೂ ಮಗನ ಸಾವಿಗೆ ನಾನೇ ಕಾರಣ ಮತ್ತು ನನ್ನ ಸಾವಿಗೂ'.
ನನ್ನನ್ನು ಕ್ಷಮಿಸಿ,
ಚಂದ್ರಕಾಂತ 
                   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.