ADVERTISEMENT

ಗುಟ್ಟನ್ನು ಮೀರುವ ಪ್ರಯತ್ನ

ಸುರೇಖಾ ಹೆಗಡೆ
Published 7 ಅಕ್ಟೋಬರ್ 2016, 19:30 IST
Last Updated 7 ಅಕ್ಟೋಬರ್ 2016, 19:30 IST
ಗುಟ್ಟನ್ನು ಮೀರುವ ಪ್ರಯತ್ನ
ಗುಟ್ಟನ್ನು ಮೀರುವ ಪ್ರಯತ್ನ   

ಟಿ.ವಿ. ಪರದೆಗಳ ಮೇಲೆ, ಜಾಹೀರಾತುಗಳಲ್ಲಿ ಬಿಕಿನಿ ತೊಟ್ಟು ಕಾಣಿಸಿಕೊಳ್ಳುವ ಜಮಾನ ಇದು. ಆದರೂ ಒಳ ಉಡುಪಿನ ಬಗ್ಗೆ ಸಾಮಾನ್ಯವಾಗಿ ಚರ್ಚಿಸುವ, ಅವುಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ವಿಷಯದಲ್ಲಿ ಇಂದಿಗೂ ಹೆಣ್ಣುಮಕ್ಕಳು ಮುಜುಗರಪಟ್ಟುಕೊಳ್ಳುತ್ತಾರೆ.

ಆದರೆ ಬೆಂಗಳೂರಿನವರೇ ಆದ ಪೂರ್ಣಿಮಾ ಮುಜುಗರದ ಪರದೆ ಸರಿಸುವ ಉದ್ದೇಶದಿಂದ ಒಳಉಡುಪುಗಳಿಗೆ ಸಂಬಂಧಿಸಿದ ಕಂಪೆನಿಯೊಂದನ್ನು ಪ್ರಾರಂಭಿಸಿದ್ದಾರೆ. ಅದಕ್ಕೆ ಸೀಕ್ರೆಟ್‌ ಏಂಜೆಲ್ಸ್‌ ಎಂದೂ ಹೆಸರಿಟ್ಟಿದ್ದಾರೆ.

ಕಳೆದ ಮೂರು ವರ್ಷದಿಂದ ಸೀಕ್ರೆಟ್‌ ಏಜೆಲ್ಸ್‌ ಪರಿಕಲ್ಪನೆಯೊಂದಿಗೆ ಒಳಉಡುಪಿಗೆ ಸಂಬಂಧಿಸಿದ ಕಂಪೆನಿ ಪ್ರಾರಂಭಿಸಿದ ಪೂರ್ಣಿಮಾ ಅವರು ಅನೇಕ ಪ್ರಯೋಗಗಳನ್ನು ಮಾಡುತ್ತಾ ಏಳುಬೀಳಿನ ದಾರಿ ಸವೆಸಿದ್ದಾರೆ. ಎಲ್ಲ ಕ್ಷೇತ್ರದಲ್ಲಿಯೂ ಆನ್‌ಲೈನ್‌ ಮಾಧ್ಯಮ ಮೇಲುಗೈ ಸಾಧಿಸುತ್ತಿರುವ ಇಂದಿನ ಯುಗದಲ್ಲಿ ಏಂಜೆಲ್‌ಗಳು ಮಾತ್ರ ಅಂತರ್ಜಾಲ ಮಾಧ್ಯಮಕ್ಕೆ ಅಂಟಿಕೊಳ್ಳಲಿಲ್ಲ.

‘ಎಂಟು ರಾಜ್ಯಗಳ 72 ಸಿಟಿಗಳಲ್ಲೀಗ ನಾವು ಅಸ್ತಿತ್ವ ಸಾಧಿಸಿದ್ದೇವೆ. ಆದರೆ ಆನ್‌ಲೈನ್‌ ವ್ಯಾಪಾರ ಕುದುರಿಸಲು ಪ್ರಯತ್ನ ಪಟ್ಟಾಗಲೆಲ್ಲಾ ನಾವು ಹಿನ್ನೆಡೆ ಸಾಧಿಸಿದ್ದೇವೆ. ಹೆಚ್ಚಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು ಏಜೆಲ್‌ಗಳಾಗಿರುವುದರಿಂದ (ಸೀಕ್ರೆಂಟ್‌ ಏಜೆಲ್ಸ್‌ನಲ್ಲಿ ಸದಸ್ಯತ್ವ ಪಡೆದವರಿಗೆ ಏಂಜೆಲ್‌ ಎನ್ನಲಾಗುತ್ತದೆ) ಅವರು ಯಾವುದೇ ಕಾರಣಕ್ಕೂ ಅಂತರ್ಜಾಲವನ್ನು ನಂಬಲು ತಯಾರಿಲ್ಲ.

ಹೀಗಾಗಿ ಅಂತರ್ಜಾಲದೆಡೆಗೆ ಹೆಜ್ಜೆ ಇಟ್ಟಿದ್ದ ನಾವು ಪುನಃ ಕ್ಯಾಟ್‌ಲಾಗ್‌ ಮಾಧ್ಯಮಕ್ಕೆ ಕಾಲಿರಿಸಿದೆವು’ ಎಂದು ವಿವರಿಸುವ ಪೂರ್ಣಿಮಾ ಪ್ರತಿ ತಿಂಗಳು ವಿವಿಧ ರಾಜ್ಯಗಳ ಹಳ್ಳಿಗಳಲ್ಲಿ, ಮಹಿಳಾ ಸಂಘಟನೆಗಳ ಮುಖಾಂತರ ಒಳಉಡುಪು ಹೇಗಿರಬೇಕು, ಅಳತೆಯನ್ನು ನಿಖರಪಡಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಉಪನ್ಯಾಸ ಕೈಗೊಂಡು ಮಾಹಿತಿ ನೀಡುತ್ತಾರೆ.

ಸೀಕ್ರೆಟ್‌ ಏಂಜೆಲ್‌ಗಳು ಗ್ರಾಹಕರಿಂದ ಆರ್ಡರ್‌ ಪಡೆದು ಕಂಪೆನಿಗೆ ಸೂಚಿಸುತ್ತಾರೆ. ಆಯಾ ಅಳತೆಗನುಗುಣವಾಗಿ ಒಳಉಡುಪುಗಳು ತಯಾರಾಗುತ್ತವೆ. ಬ್ರಾ, ಪ್ಯಾಂಟೀಸ್‌, ನೈಟ್‌ ಡ್ರೆಸ್‌, ಮೆಟರ್ನಿಟಿ ವೇರ್‌, ಮೆಟರ್ನಿಟಿ ಬ್ರಾ, ಮೆಟರ್ನಿಟಿ ಪ್ಯಾಂಟೀಸ್‌, ಲೆಗ್ಗಿಂಗ್ಸ್‌ಗಳು ಇಲ್ಲಿ ಲಭ್ಯವಿವೆ.

ರಾಮನಗರ, ಮದ್ದೂರು, ಹಾವೇರಿಯ ಹಳ್ಳಿಗಳಿಂದ ಸೀಕ್ರೆಟ್‌ ಏಂಜೆಲ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದನ್ನು ಇನ್ನೂ ಅನೇಕ ಹಳ್ಳಿಗಳಿಗೆ ವಿಸ್ತರಿಸಿ ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಕಂಪೆನಿಯನ್ನು ಜನಪ್ರಿಯಗೊಳಿಸುವ ಉದ್ದೇಶ ಪೂರ್ಣಿಮಾ ಅವರದ್ದು.

ಇದುವರೆಗೆ 2000 ಏಂಜೆಲ್‌ಗಳು ಕಂಪೆನಿಯೊಂದಿಗೆ ಕೈಜೋಡಿಸಿದ್ದು ಮುಂದಿನ ವರ್ಷದೊಳಗೆ 5000 ಏಂಜೆಲ್‌ಗಳನ್ನು ಸೇರಿಸಿಕೊಳ್ಳುವ ಗುರಿಯಿದೆ. ಮಹಿಳೆಯರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವುದು ಹಾಗೂ ಅತಿಸಣ್ಣ ಉದ್ಯಮವನ್ನು ಪ್ರೋತ್ಸಾಹಿಸುವುದು ಕಂಪೆನಿಯ ಕನಸು.

ವ್ಯವಸ್ಥೆಯನ್ನೇ ನೆಚ್ಚಿಕೊಂಡು 72 ನಗರಗಳಿಂದ ಆರ್ಡರ್‌  ಬರುವುದರಿಂದ ಸ್ವಂತವಾಗಿ ಒಳ ಉಡುಪು ತಯಾರಿಕಾ ಘಟಕವನ್ನೂ ಪ್ರಾರಂಭಿಸಲಾಗಿದ್ದು ಅಲ್ಲಿ 30 ಮಹಿಳೆಯರಿಗೆ ಉದ್ಯೋಗವನ್ನೂ ಪೂರ್ಣಿಮಾ ಒದಗಿಸಿದ್ದಾರೆ.

ಬ್ರೆಸ್ಟ್‌ ಕ್ಯಾನ್ಸರ್‌ ಪೀಡಿತರನೇಕರು ಇಲ್ಲಿ ವಿಶೇಷ ಬ್ರಾಗಳನ್ನು ಆರ್ಡರ್‌ ಮಾಡಿ ಖರೀದಿಸುತ್ತಾರೆ. ಅನೇಕ ಮಹಿಳಾ ಸಂಘಟನೆಗಳ ಜೊತೆ ಕೈಜೋಡಿಸಿರುವ ಸೀಕ್ರೆಟ್‌ ಏಂಜೆಲ್ಸ್‌ ಕಂಪೆನಿ ಬಾಯಿ ಮಾತಿನಿಂದಲೇ ದೊಡ್ಡ ಪ್ರಚಾರ ಗಿಟ್ಟಿಸಿಕೊಂಡಿದೆ. ಮಹಿಳಾ ಸಬಲೀಕರಣ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಜಾಗೃತಿ ಮೂಡಿಸುವತ್ತ ಕಂಪೆನಿ ದಾಪುಗಾಲು ಇಡುತ್ತಿದೆ.

**
ಮಹಿಳೆಯರಿಗೆ ಜಾಗೃತಿ

ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಗೋವಾ, ಅರುಣಾಚಲ ಪ್ರದೇಶ, ಪಂಜಾಬ್‌, ಗುಜರಾತ್‌ಗಳಲ್ಲಿ ಸೀಕ್ರೆಟ್‌ ಏಂಜೆಲ್ಸ್‌ ಅಸ್ತಿತ್ವ ಹೊಂದಿದ್ದು ನಿರಂತರವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಕಂಪೆನಿಯ ಪ್ರಯೋಗ ಹಾಗೂ ಸಾಧನೆಗೆ ಶ್ರಮಿಸುತ್ತಿರುವವರು ಪೂರ್ಣಿಮಾ ವಿನಯ್‌ಕುಮಾರ್‌. ತಮ್ಮ 18ನೇ ವಯಸ್ಸಿನಲ್ಲಿಯೇ ವ್ಯಾಪಾರ ಒಂದನ್ನು ಪ್ರಾರಂಭಿಸುವ ಮೂಲಕ ಉದ್ಯಮಿಯಾಗಿದ್ದವರು ಪೂರ್ಣಿಮಾ. ಕಂಪ್ಯೂಟರ್‌ಗೆ ಸಂಬಂಧಿಸಿದ ಆ ಕಂಪೆನಿಯನ್ನು ನಾಲ್ಕು ವರ್ಷ ನಡೆಸಿ ಮಹಿಳೆಯರಿಗಾಗಿಯೇ ತಾನೇನಾದರೂ ಮಾಡಬೇಕು ಎಂಬ ಆಸೆಯೊಂದಿಗೆ ಸೀಕ್ರೆಟ್‌ ಏಂಜೆಲ್ಸ್‌ ಕಂಪೆನಿಗೆ ನಾಂದಿ ಹಾಡಿದರು.

ಬಯೊಟೆಕ್‌ ವಿಷಯದಲ್ಲಿ ಬಿಎಸ್‌ಸಿ, ಐಐಎಂ ಬೆಂಗಳೂರಿನಲ್ಲಿ ಮ್ಯಾನೇಜ್‌ಮೆಂಟ್‌ ಪ್ರೋಗ್ರಾಂ ಆನ್‌ ವಿಮೆನ್‌ ಎಂಥ್ರಪ್ರಿನರ್‌ಶಿಪ್‌ ಹಾಗೂ ಮ್ಯಾನೇಜ್‌ಮೆಂಟ್‌ ಪ್ರೋಗ್ರಾಂ ಇನ್‌ ಫ್ಯಾಮಿಲಿ ಬ್ಯುಸಿನೆಸ್‌ ಕುರಿತು ಅವರು ಪದವಿಯನ್ನೂ ಮಾಡಿದ್ದಾರೆ. 

ಸಂಪರ್ಕ ಹೇಗೆ?
ಸೀಕ್ರೆಟ್‌ ಏಂಜೆಲ್‌ನಲ್ಲಿ ಏಂಜೆಲ್‌ ಆಗಬಯಸುವವರು ಕಂಪೆನಿಯ 080 49403300/ 9964244888 ನಂಬರ್‌ಗೆ ಕರೆ ಇಲ್ಲವೆ ಮಿಸ್‌ಕಾಲ್‌ ಮಾಡಬೇಕು. ನಂತರ ಕಂಪೆನಿಯವರೇ ಕರೆ ಮಾಡಿ ರೀತಿರಿವಾಜುಗಳ ಬಗೆ ಮಾಹಿತಿ ನೀಡುತ್ತಾರೆ.

ಕಂಪೆನಿ ಮೂರು ಹೊಲಿಗೆ ಮೆಶಿನ್‌ನಿಂದ ಪ್ರಾರಂಭಿಸಿ ಇದೀಗ 20 ಮೆಶಿನ್‌ ಅನ್ನು ಇಟ್ಟುಕೊಂಡು ಬೇಡಿಕೆಗಳನ್ನು ಪೂರೈಸುತ್ತಿದೆ. ಆಯಾ ಕಾಲಕ್ಕೆ ತಕ್ಕಂತೆಯೂ ಒಳ ಉಡುಪುಗಳಿಗೆ ಬಳಸುವ ಬಟ್ಟೆಯನ್ನು ಬದಲಾಯಿಸಲಾಗುತ್ತಿದೆ. ಹಳ್ಳಿಯ ಅನೇಕ ಮಹಿಳೆಯರು ಭಾಗವಹಿಸುತ್ತಿರುವುದರಿಂದ ಪ್ರತಿ ತಿಂಗಳು ಕನ್ನಡದಲ್ಲಿ ಕ್ಯಾಟ್‌ಲಾಗ್‌ ನಿರ್ಮಿಸಿ ನೀಡುವ ಯೋಜನೆ ಕಂಪೆನಿಯದ್ದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.