ADVERTISEMENT

ಜವಾಬ್ದಾರಿ ಹಂಚಿಕೊಂಡರೆ ಸಂಸಾರ ಸರಾಗ...

ನಳಿನಿ ಟಿ.ಭೀಮಪ್ಪ
Published 17 ಏಪ್ರಿಲ್ 2015, 19:30 IST
Last Updated 17 ಏಪ್ರಿಲ್ 2015, 19:30 IST

ಮದುವೆಯಾಗಲು ಹೆಣ್ಣಿಗೆ 25ರಿಂದ 27ವರ್ಷ ನಿಜವಾಗಿಯೂ ಸೂಕ್ತ ವಯಸ್ಸೆನ್ನಬಹುದು.  ಈಗಿನ ಹೆಣ್ಣುಮಕ್ಕಳು ತಮ್ಮ ಕೆರಿಯರ್ ಬಗ್ಗೆ ನಿಶ್ಚಿತ ಗುರಿ ಇಟ್ಟುಕೊಂಡಿರುತ್ತಾರೆ.  ಆದ್ದರಿಂದ ಈ  ವಯಸ್ಸು ತಲುಪುವುದರಲ್ಲಿ ಅವರ ವಿದ್ಯಾಭ್ಯಾಸ ಒಂದು ಘಟ್ಟ ತಲುಪಿರುತ್ತದೆ, ಜೊತೆಗೆ ಹಟ, ಕೋಪದ ಸ್ಥಾನದಲ್ಲಿ ಸಹನೆ ಹೊಂದಾಣಿಕೆ ಮನೋಭಾವ ಮೇಳೈಸಿರುತ್ತದೆ. 

ಕುಟುಂಬ, ವೃತ್ತಿ  ಎರಡನ್ನೂ ನಿಭಾಯಿಸುವಷ್ಟು ನಿಪುಣರಾಗಿರುತ್ತಾರೆ.  ಮದುವೆಯ ವಯಸ್ಸನ್ನು ಅನಾವಶ್ಯಕವಾಗಿ ಮುಂದೂಡದೇ, ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗ ಅರಸುವುದರ ಜೊತೆಗೆ  ಪಾಲಕರು ಮದುವೆಯ ಬಗ್ಗೆ ನಿರ್ಧಾರ ಮಾಡುವುದು ಸೂಕ್ತವೆನಿಸುತ್ತದೆ.  ಆದರೆ ಮದುವೆಯ ಸಂದರ್ಭದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ವೃತ್ತಿಯ ಬಗ್ಗೆ ತಮ್ಮ ತಮ್ಮ ಸ್ಪಷ್ಟ ನಿಲುವುಗಳನ್ನು ಎರಡೂ ಮನೆತನದವರು ಸಂಬಂಧದ ಮಾತುಕತೆಗೆ ಸೇರಿದಾಗ ಸ್ಪಷ್ಟಪಡಿಸಿ ಒಮ್ಮತದ ನಿರ್ಧಾರಕ್ಕೆ ಬರುವುದು ಒಳ್ಳೆಯದು. 

ನಾಗಾಲೋಟದಲ್ಲಿ ಓಡುತ್ತಿರುವ ಇಂದಿನ ಆಧುನಿಕ ಜಗತ್ತಿನ ಸಮಕ್ಕೆ ಹೆಜ್ಜೆ ಹಾಕಬೇಕಾದರೆ ಹೆಣ್ಣುಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕಂತೂ ಮೊದಲ ಆದ್ಯತೆ ನೀಡಲೇಬೇಕಾಗಿದೆ. ಜೊತೆಗೆ ವೃತ್ತಿಯ ಪ್ರಶ್ನೆ ಬಂದಾಗ ಈಗ ಅದು ಹೆಣ್ಣುಮಕ್ಕಳಿಗೆ ಟೈಮ್ ಪಾಸ್ ಆಗಿ ಉಳಿದಿಲ್ಲ. ಅದು ಅನಿವಾರ್ಯ ಹಾಗೂ ಅವಶ್ಯಕತೆಯಾಗಿದೆ. ಜೊತೆಗೆ ಹೆಣ್ಣಿನ ಆತ್ಮವಿಶ್ವಾವನ್ನು ಹೆಚ್ಚಿಸುತ್ತಿದೆ. ಗಂಡಿನ ಸಮಕ್ಕೆ ಜವಾಬ್ದಾರಿ ಹಂಚಿಕೊಳ್ಳುವಲ್ಲಿ ಹೆಣ್ಣು ಸಫಲಳಾಗಿದ್ದಾಳೆ ಎಂದರೆ ಇದು ಸಬಲೀಕರಣವಲ್ಲದೆ ಮತ್ತೇನು?

ಇನ್ನು ಮದುವೆಯ ವಿಷಯಕ್ಕೆ ಬಂದಾಗ ಈಗ ಬಹಳಷ್ಟು ವಿದ್ಯಾವಂತ ಯುವಕರು ಸೌಂದರ್ಯಕ್ಕಿಂತ ವಿದ್ಯಾವಂತೆ ಹಾಗೂ ಉದ್ಯೋಗದಲ್ಲಿರುವ ಸಂಗಾತಿಯನ್ನೇ ಆಯ್ಕೆ ಮಾಡಲು ಇಚ್ಛಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಪ್ರತಿಯೊಂದು ಹೆಜ್ಜೆಯಲ್ಲೂ  ಹೆಣ್ಣಿಗೆ ಸಂಗಾತಿಯ ಬೆಂಬಲ ಸಿಕ್ಕರೆ ಜೀವನದಲ್ಲಿ ಎಂಥಹ ಸನ್ನಿವೇಶವನ್ನೂ ಆರಾಮವಾಗಿ ನಿಭಾಯಿಸಬಲ್ಲಳು.  ಮದುವೆಯಾದ ನಂತರ ಎಷ್ಟೋ ಜನ ಗಂಡಂದಿರು ಹೆಂಡತಿಗೆ ಮನೆಕೆಲಸದಲ್ಲಿ ಸರಿಸಮವಾಗಿ ಕೈಜೋಡಿಸುತ್ತಿದ್ದಾರೆ.  ಸ್ವಲ್ಪ ತಾಳ್ಮೆ ಬೇಕಾಗಿರುವುದು ಮಕ್ಕಳಾದ ಬಳಿಕ ಎನಿಸುತ್ತದೆ. ಆದರೆ ಈಗಿನ ಕಾಲದಲ್ಲಿ ಎಷ್ಟೋ ಜನ ಅತ್ತೆ-ಮಾವಂದಿರು  ಸೊಸೆಗೆ ತಂದೆ- ತಾಯಿ ಸ್ಥಾನದಲ್ಲಿ  ನಿಂತು ಮೊಮ್ಮಕ್ಕಳನ್ನು ಪೋಷಿಸುವುದರಲ್ಲಿ ಸಹಕರಿಸಿ  ಅವರ ವೃತ್ತಿಯ ಏಳಿಗೆಗೆ ಕಾರಣರಾಗುತ್ತಿರುವುದನ್ನು ಬಹಳ ಕಡೆ ಕಾಣುತ್ತಿದ್ದೇವೆ.

  ತಾಯಿತಂದೆಯರ ಸಹಕಾರವಂತೂ ಹೆಣ್ಣಿಗೆ ಯಾವತ್ತೂ ಇದ್ದೇ ಇರುತ್ತದೆ. ಆದ್ದರಿಂದ ಮನೆಯ ಪ್ರತಿಯೊಬ್ಬರೂ ಜವಾಬ್ದಾರಿಗಳನ್ನು ಹಂಚಿಕೊಂಡಾಗ ಪ್ರತಿ ಹೆಜ್ಜೆಯೂ ಹೆಣ್ಣಿಗೆ ಸರಾಗವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.