ADVERTISEMENT

ತಾಯಿಯೂ ಆಗಿದ್ದ...

ಮಲ್ಲಿಕಾರ್ಜುನ ಹುಲಗಬಾಳಿ
Published 26 ಜೂನ್ 2015, 19:30 IST
Last Updated 26 ಜೂನ್ 2015, 19:30 IST

ಒಂಬತ್ತು ತಿಂಗಳ ಹಸುಗೂಸಾಗಿರುವಾಗ ನನ್ನ ತಾಯಿ ತೀರಿಕೊಂಡಳು. ತಂದೆಯ ಹೊಣೆಗಾರಿಕೆಯೊಂದಿಗೆ, ಅಂತಃಕರಣದ ತಾಯಿಯಾಗಿ, ತಪ್ಪಿದಾಗ ನಿರ್ದಯ ವಾಗಿ ಶಿಕ್ಷಿಸುವ ಗುರುವಾಗಿ ನಮ್ಮನ್ನು ಬೆಳೆಸಿದವನು ನಮ್ಮಪ್ಪ.

ಆತ ಪ್ರೌಢಶಾಲಾ ಶಿಕ್ಷಕನಾಗಿದ್ದ. ಏರುಜವ್ವನ ಕಾಲದಲ್ಲಿ ಹೆಂಡತಿಯನ್ನು ಕಳೆದು ಕೊಂಡರೂ, ಮರುಮದುವೆಯಾಗಲಿಲ್ಲ. ನಾನೂ ಸೇರಿದಂತೆ ಮೂರು ಸಣ್ಣ ಮಕ್ಕಳು. ಮಕ್ಕಳಿಗೆ ಮಲತಾಯಿಯಾಗಿ ಬರುವವಳು ಹೇಗೊ ಏನೋ..? ತನ್ನ ಸುಖಕ್ಕಿಂತ ಮಕ್ಕಳ ಯೋಗಕ್ಷೇಮ ಆತನಿಗೆ ಮುಖ್ಯವಾಗಿತ್ತು. ಸನ್ಯಾಸಿಯ ಬದುಕು ಸವೆಸಿದ. ಸಂತನಂತೆ ಶಿವನ ಪಾದ ಸೇರಿದ.

ನಮಗಾಗಿ ಆತ ಪಟ್ಟ ಕಷ್ಟ ಸಾಮಾನ್ಯ ವಾದುದೇನಲ್ಲ. ನಮ್ಮ ಓದಿಗೆ ಮಾರ್ಗದರ್ಶನ ಮಾಡುತ್ತ, ಆತ ನಮ್ಮೊಂದಿಗೆ ರಾತ್ರಿ ಜಾಗರಣೆ ಮಾಡಿದ. ಕ್ಲಾಸಿನಲ್ಲಿ ಪಾಠ ಹೇಳಿದ. ಎಂಥ ಕಷ್ಟ ಬಂದರೂ ಮತ್ತೊಬ್ಬರ ಮುಂದೆ ಕೈಚಾಚಬಾರದು. ನಾವು ಉಂಡ ತಟ್ಟೆ, ನಮ್ಮ ಬಟ್ಟೆ ಬರೆ ನಾವೇ ಸ್ವಚ್ಛ ಮಾಡಬೇಕು. ಯಾರಿಗೂ ಹೊರೆಯಾಗಬಾರದು. ಇದು ಆತ ನಮಗೆ ಹೇಳಿಕೊಟ್ಟ ಸ್ವಾಭಿಮಾನದ ಹಾಗೂ ಸ್ವಾವಲಂಬನೆಯ ಪಾಠ.

ಸಹಾಯ ಕೇಳಿಬಂದವರನ್ನು ಹಾಗೆಯೆ ಬರಿಗೈಯಲ್ಲಿ ಕಳುಹಿಸಬಾರದು. ಸಾಧ್ಯವಿದ್ದಷ್ಟು ನೆರವಾಗಬೇಕು ಎಂದು ಆದರ್ಶದ ದಾರಿ ತೋರಿಸಿದ. ನುಡಿದಂತೆ ನಡೆದ. ಬಡ ವಿದ್ಯಾರ್ಥಿಗಳಿಗೆ ಪುಕ್ಕಟ್ಟೆಯಾಗಿ ಮನೆಪಾಠ ಹೇಳಿದ. ತನ್ನ ವಿದ್ಯಾರ್ಥಿಗಳನ್ನು ಮಕ್ಕಳಂತೆ ಪ್ರೀತಿಸಿದ. ಅವರ ಕಷ್ಟಕ್ಕೆ  ಸ್ಪಂದಿಸಿದ.

ಅವನಂತೆಯೇ ನಾನು ಶಿಕ್ಷಕನಾದೆ. (ನಿವೃತ್ತನಾಗಿರುವೆ) ಮೂರು ಮಕ್ಕಳ ತಂದೆಯೂ ಕೂಡಾ. ಆದರೆ ಅಪ್ಪನಂತೆಯೆ ಬದುಕಬೇಕು ಎನ್ನುವ ಆಸೆ ಈಡೇರಿಲ್ಲ. ಆದರೂ, ಜಸ್ಟ್ ಪಾಸಿಂಗ್ ಮಾರ್ಕ್ಸ್ ಗಳಿಸಿರುವ ಸಮಾಧಾನ. ನನ್ನಪ್ಪ ನನ್ನ ರೋಲ್ ಮಾಡೆಲ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.