ADVERTISEMENT

ನಾನು ಹೆಣ್ಣು ಅಂದ್ರ ನಂಬಲೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2011, 19:30 IST
Last Updated 25 ನವೆಂಬರ್ 2011, 19:30 IST

ಜಾನಪದ, ಗ್ರಾಮೀಣ- ವೃತ್ತಿರಂಗಭೂಮಿಯ ಪ್ರತಿಭಾವಂತರನ್ನು ಮೇರು ಪ್ರಶಸ್ತಿಗೆ ಗುರುತಿಸುವ ಹೊತ್ತಿಗೆ ಅವರು ಹಣ್ಣು ಹಣ್ಣು ಮುದುಕರಾಗಿರುತ್ತಾರೆ! ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಂಗಭೂಮಿಯ ವೃತ್ತಿ ಕಲಾವಿದರಿಗೆ ನೀಡುವ ಅತ್ಯುನ್ನತ ಗುಬ್ಬಿ ವೀರಣ್ಣ ಪ್ರಶಸ್ತಿಗೆ(2010) ಭಾಜನರಾಗಿರುವವರು ಹಿರಿಯ ನಟಿ ಪ್ರಮೀಳಾ ಗುಡೂರು.
 
ರಂಗದ ಮೇಲೆ ರಾಣಿಯಂತೆ ಮೆರೆದ ಪ್ರಮೀಳಾ ಅವರು ಕಳೆದ ಎರಡು ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. `ಮುತ್ತಿನ ತೋರಣ~ ಟಿವಿ ಧಾರಾವಾಹಿಯಲ್ಲಿ ಹಿರಿಯಜ್ಜಿ ಪಾತ್ರದಲ್ಲಿ ನಟಿಸುತ್ತಿದ್ದ ಪ್ರಮೀಳಮ್ಮನಿಗೆ ಪಾರ್ಶ್ವ ಹೊಡೆದಾಗ ಇರಲು ನೆಲೆ ಇರಲಿಲ್ಲ. ಬಾಗಲಕೋಟೆ ಜಿಲ್ಲೆ ಹುನುಗುಂದ ತಾಲ್ಲೂಕಿನ ಗುಡೂರಿನ ತಮ್ಮ ಮಗಳ ಮನೆಯಲ್ಲಿ ಹೋಗಿ ಆಶ್ರಯ ಪಡೆದರು.
 
ಕನ್ನಡದ ಸುಪ್ರಸಿದ್ಧ ನಾಟಕ ಕಂಪೆನಿಗಳಲ್ಲಿ ಪ್ರಮುಖ ನಟಿಯಾಗಿ ಐದಾರು ದಶಕಗಳ ಕಾಲ ಮೆರೆದವರು ಅವರು. `ಏರಿದ ನಂಜು~ ನಾಟಕದ ಊರ್ಮಿಳಾ, `ಸತಿ ಪತಿ~ಯ ಸುಶೀಲಾ, `ದೇವರಿಲ್ಲದ ಗುಡಿ~ಯ ಸುಜಾತ, `ಗರೀಬಿ ಹಟಾವೊ~ದ ಸರೋಜ, `ಗೆದ್ದ ಸೊಸೆ- ಬಿದ್ದ ಮಾವ~ ನಾಟದಕ ಎಂಎಲ್‌ಎ ಪಾತ್ರದಲ್ಲಿ ಪ್ರಮೀಳಮ್ಮನನ್ನು ನೋಡಿದ ಆ ಕಾಲದ ರಂಗಾಸಕ್ತರ ನೆನಪಿನಲ್ಲಿ ಅವರ ಪಾತ್ರದ ವೈಖರಿ ಇನ್ನೂ ಅಚ್ಚೊತ್ತಿದ ಹಾಗಿದೆ. ಅಸ್ಖಲಿತ ಸಂಭಾಷಣೆ, ಬಿಡುಬೀಸಾದ ಚೆಲ್ಲುತನ ಅವರ ಅಭಿನಯದ ಯಶಸ್ಸಿನ ಗುಟ್ಟು. ನಾಟಕದ ಈ ಗಟ್ಟಿಗಿತ್ತಿಗೆ ಆರ್ಥಿಕ ಗಟ್ಟಿತನ ಮಾತ್ರ ಒದಗಿ ಬರಲಿಲ್ಲ. ಬಹುತೇಕ ವೃತ್ತಿ ಕಲಾವಿದೆಯರ ಪರಿಸ್ಥಿತಿಯೇ ಅದು.

ತಮ್ಮ ಇಳಿ ವಯಸ್ಸಿನಲ್ಲಿ ಪುಟ್ಟದೊಂದು ಆಶ್ರಯ ಮನೆ ಕಟ್ಟಿಕೊಳ್ಳಲು ಅವರು ಪರದಾಡಬೇಕಾಯಿತು.

* ರಂಗನಟಿ ಪಯಣ ಎಂದರೆ ಅದು ಕಲ್ಲು ಮುಳ್ಳಿನ ಹಾದಿ. ಗೊತ್ತಿದ್ದೂ ಆಯ್ಕೆ ಮಾಡಿಕೊಂಡಿರಾ?
ಅದೇನೋ ಗೊತ್ತಿರಲಿಲ್ಲ ನನಗ. ಗುಡೂರಿನ ಬಡ ಕುಟುಂಬದಾಗ ಹುಟ್ಟಿದಾಕಿ ನಾನು. ಫಕ್ರುಸಾಬ್ ತಂದಿ, ಇಮಾಂಬಿ ತಾಯಿ. ಅವರು ಇಟ್ಟ ಹೆಸರು ಫಾತಿಮಾ. ನಾಟಕ ಕಂಪನಿಯೊಳಗ ಪ್ರಮೀಳಾ ಆದ್ನಿ.
 
ನಮ್ಮ ದಾದಿ ಶೇಕವ್ವ ಅಂತ ಇದ್ದಳು. ಸಣ್ಣವಳಿದ್ದಾಗ ನನ್ನನ್ನ ಅವರು ಓದಸಾಕ ಅಂತ ಬಾಗಲಕೋಟೆಗೆ ಕರಕೊಂಡು ಹೋದರು. 3ನೇಯತ್ತ ಓದ್ತಾ ಇದ್ದೆ. ಬಾಳ ಚುರುಕಾಗಿದ್ದೆ. ಅಲ್ಲಿ ಇಲ್ಲಿ ನೋಡಿ ಕಲಿತು ಡ್ಯಾನ್ಸ್ ಮಾಡತಿದ್ದೆ. ಸ್ವಲ್ಪ ಡ್ಯಾನ್ಸ್ ಕಲತ ಮ್ಯಾಗ ಎಲ್ಲೆರ ನಾಟಕ ನಡದರ ಅಲ್ಲಿಗೆ ನನ್ನ ಕರಕೊಂಡು ಹೋಗಿ ಡ್ಯಾನ್ಸ್ ಮಾಡಸತಿದ್ದರು. 10-15ರೂಪಾಯಿ ಸಂಭಾವನೆ ಕೊಡತಿದ್ದರು. ಆಗಿನ ಕಾಲಕ್ಕ ಬಾಳ ರೊಕ್ಕ ಅನಿಸತಿತ್ತು. ಮನಿ ಪರಿಸ್ಥಿತಿ ಗಂಭೀರ ಇತ್ತು. ಆಮ್ಯಾಗ ಯಾರೋ ಹೇಳಿದರು ಅಂತ ವಸಂತ ಸಾ ನಾಕೋಡ ಅವರ ನಾಟಕ ಕಂಪನಿಗೆ ಕರಕೊಂಡು ಹೋದ್ರು. ಅಲ್ಲಿ ಅವರು ನನಗ `ರಕ್ತರಾತ್ರಿ~ ನಾಟಕದಾಗ ಪಾರ್ವತಿ ಪಾತ್ರ ಕೊಟ್ಟರು.

* ಡ್ಯಾನ್ಸ್ ಗೊತ್ತಿತ್ತು, ಸರಿ. ಪಾತ್ರ ಹ್ಯಂಗ ಮಾಡಿದಿರಿ?
ಬಾಳ ಹುರುಪಿತ್ತು. ಪಾರ್ವತಿ ಪಾತ್ರಕ್ಕ ಒಂದ ಮಾತಿತ್ತು. ಹೋದ ದಿನಾನ ಕಲಿತುಬಿಟ್ಟೆ. ಪಾತ್ರಕ್ಕ ಚಂದ ಕಂಡೆ ಅಂದರು. ಚಲೋ ಪಾತ್ರ ಮಾಡಬೇಕು ಅಂತ ಉತ್ಸಾಹ ಬಂದುಬಿಡ್ತು. ಹಂಗ ಪಾತ್ರ ಸಿಕ್ಕೊಂತಾನ ಹೋದವು. `ಸೌಭಾಗ್ಯಲಕ್ಷ್ಮಿ~ ನಾಟಕದಾಗ ಶಾರದಾ ಎಂಬ ಒಳ್ಳೆಗುಣದ ವೇಶ್ಯೆ ಪಾತ್ರ. `ನಾರಿ ಸಾಹಸ~ದ ದೇವಿ ಪಾತ್ರ, ಹೂಗಾರರ `ಕಮಲಾಕ್ಷಿ~, ದುರ್ಗಾದಾಸರ `ನಿರ್ಮಲಾ~- ಹಿಂಗ ಚಲೋ ಚಲೋ ಪಾತ್ರ ಸಿಕ್ಕವು. ನಾ ಇನ್ನೂ ಚೆಂದ ಪಾತ್ರ ಮಾಡೂದನ್ನ ಕಲೀಬೇಕು ಅನ್ನೂ ವಯಸ್ಸಿನಾಗ ಎಚ್.ಟಿ.ಮಹಾಂತೇಶ ಶಾಸ್ತ್ರಿ ಕವಿಗಳು ಹೇಳಿಕೊಟ್ಟರು. `ಸಾದ್ವಿ ಪಾತ್ರಕ್ಕ ನೇರ ನೋಟ ಇರಬೇಕು. ವಾರಿಗಣ್ಣಿಲೆ ನೋಡಬಾರದು. ಗಯ್ಯಾಳಿ ಪಾತ್ರ ಆದರ ಹಿಂಗ, ಹಾಸ್ಯ ಪಾತ್ರ ಆದರ ಹಿಂಗ- ಇಂತಿಂತಾ ಮಾತಿಗೆ ಹಿಂಗ ಭಾವನಿ ಬರಬೇಕು. ಆಗ ಕಣ್ಣಾಗ ನೀರು ತನ್ನಿಂದ ತಾನ ಬರ‌್ತಾವ. ಇಲ್ಲ ಅಂದರ ಎಣ್ಣಿ ಹಚ್ಚಿ ಅಳಬೇಕಾಗತದ..~ ಅಂತ ತಿಳಿಸಿಕೊಟ್ಟರು. ಅರಿಷಿಣಗೋಡಿಯವರೂ ಹೇಳಿಕೊಟ್ಟರು.

* ಅರಿಷಿಣಗೋಡಿಯವರ ನಾಟಕ ಕಂಪನ್ಯಾಗ ಬಾಳ ವರ್ಷ ಇದ್ದಿರಿ...

ದೊಡ್ಡವಳಾದಂಗ ಬ್ಯಾರೆ ಬ್ಯಾರೆ ನಾಟಕ ಕಂಪನಿ ಸೇರಿದ್ನಿ. ಪಡೇಸೂರು ಸಿದ್ಧಲಿಂಗೇಶ್ವರ ನಾಟ್ಯಸಂಘ, ಮೈಂದರಗಿ ನಾಟಕ ಕಂಪನಿ. ಅದು ಆದಮ್ಯಾಗ ಅರಿಷಿಣಗೋಡಿಯವರ ನಾಟಕ ಕಂಪನಿ. ಅಲ್ಲೇ ಬಾಳ ವರ್ಷ ಉಳಿದ್ನಿ. ಅಲ್ಲಿ ದೊಡ್ಡ ಹೆಸರು ಬಂತು.

* ನಟಿ ಅಂದರ ತಾತ್ಸಾರದಿಂದ ನೋಡೂದು ಇತ್ತಲ್ಲ. ಹ್ಯಂಗ ನಿಭಾಯಿಸಿದಿರಿ?

ನಾನು ನಾಟಕ ಕಂಪನಿಗೆ ಹೋದ ಮ್ಯಾಗ ಹಿಂದಿನಿಂದ ಏನೇನು ಆಡಿಕೊಂಡರೋ ನನಗ ಗೊತ್ತಿಲ್ಲ. ಅದಕ್ಕ ಕಿವಿಗೊಡತಿದ್ದಿಲ್ಲ. ನನ್ನ ನಾಟಕ ನೋಡಿದ ಪ್ರೇಕ್ಷಕರು, ಊರಾಗಿನ ಮಂದಿ, ಪಾತ್ರ ಚಂದ ಮಾಡಿದಿ ಅನ್ನೋರು. ಅಷ್ಟಕ್ಕ ನನಗ ಸಮಾಧಾನ ಅಕ್ಕಿತ್ತು. ಇನ್ಯಾವ ಗೊಡವಿಗೆ, ಉಸಾಬರಿಗೆ ಹೊಕ್ಕಿದ್ದಿಲ್ಲ ನಾ...

ನಾಟಕ ಕಂಪನ್ಯಾಗ ಮದುವಿ ಆತು. ಮತ್ತಷ್ಟು ಪ್ರಬುದ್ಧಳಾದ್ನಿ. ಆಗ ನಾಟಕದ ಹುಡುಗಿ ಅಂತಾನೂ ಯಾರೂ ಹಗುರಕ್ಕ ಮಾತಾಡಲಿಲ್ಲ. ಗೌರವ ಕೊಡಾಕ ಸುರು ಮಾಡಿದರು.

* ಗಂಡು ಪಾತ್ರದಾಗೂ ಹೆಸರು ಮಾಡೀರಿ...

ಹಳ್ಳಿಯೊಳಗ ಆಡೂ ಅಮೆಚೂರ್ ನಾಟಕದಾಗ ನಟಿಸಾಕು ಹೊಕ್ಕಿದ್ನಿ. ಒಮ್ಮೆ ರಬಕವಿಯಾಗ `ರಕ್ತರಾತ್ರಿ~ ನಾಟಕಕ್ಕ ಕರೆದಿದ್ದರು. ಅಶ್ವತ್ಥಾಮನ ಪಾತ್ರ  ಮಾಡು ಅಂದರು. ಅದು ದೊಡ್ಡ ಪಾತ್ರ. ಮಾಡಿದ್ನಿ. ಬಳ್ಳಾರಿ ಹತ್ರ ಶಂಕರಬಂಡಿಗೆ ನಾಟಕಕ್ಕ ಹೋದಾಗ ವಾಜಪ್ಪ ಮೇಷ್ಟ್ರು ಗಂಡು ಪಾತ್ರ ಮಾಡು ಅಂದರು. ಹಂಗಾರ ದುರ್ಯೋಧನನ ಪಾತ್ರ ಮಾಡತೀನಿ ಅಂದಿನ್ರಿ. ಅದ ಯಾಕ ಬೇಕು ಅಂದರು. ಬರೀ ಹೊಗಳಿಸಿಕೊಳ್ಳೂದು ಬ್ಯಾಡ. ಪ್ರೇಕ್ಷಕರು ನನ್ನ ಪಾತ್ರ ನೋಡಿ ಬೈಯಬೇಕು- ಅಂತಾ ಪಾತ್ರನೂ ಕೊಡ್ರಿ ಅಂದ್ನಿ. `ಗೌಡ್ರಗದ್ಲ~ದ ಗೌಡ, `ಮಲಮಗಳು~ ರಂಗಣ್ಣ, `ಹಡದವ್ವ~ ಹಕಾರಿ ಪಾತ್ರಗಳಿಗೆ ಭಾರಿ ಮೆಚ್ಚುಗೆ ಬಂತು.

`ರೇಣುಕಾ ಯಲ್ಲಮ್ಮ~ ನಾಟಕದಾಗ ಪರಶುರಾಮ ಪಾತ್ರ ಮಾಡಿದ್ದೆ. ನನ್ನನ್ನ ಗಂಡು ಅಂತ ತಿಳಿಕೊಂಡು ಹರೇದ ಹುಡಿಗಿ ಒಬ್ಬಾಕಿ ನನ್ನನ್ನ ಮೋಹಿಸಿದಳು. ಕೊಡೇಕಲ್‌ನಾಗ ಒಮ್ಮೆ ಈ ನಾಟಕ ನಡದಾಗ ಅವಳು ನಾನು ಹೆಣ್ಣು ಅಂದ್ರ ನಂಬಲೇ ಇಲ್ಲ. ರಂಗಪಾರ್ಟಿಯೊಳಗ ಕರಕೊಂಡು ಬಂದು ನಾನು ಹೆಣ್ಣು ಅಂಬೂದ ಸಾಬೀತುಪಡಿಸಿದ ಮ್ಯಾಗ ಆಕಿ ಭ್ರಮಿ ಬಿಟ್ಟತು.

* ನಾನೂ ನಿಮ್ಮ ಅಭಿನಯ ನೋಡೀನಿ. ಬಾಳ ಚಂದ ಮಾಡ್ತಿದ್ದಿರಿ..
`ಜಾಗೀರದಾರರ ಜಗಳ~ ಅನ್ನೂ ನಾಟಕದೊಳಗ ನಾನು ಕಾತ್ಯಾಯನಿ ದೇಸಾಯಿ ಅನ್ನೂ ಪಾತ್ರ ಮಾಡಿತಿದ್ನಿ. ಬಾಳ ಹೆಸರಾಗಿತ್ತು. ಚಿತ್ರನಟಿ ಕಲ್ಪನಾ ಅವರಿಗೂ ಆ ಪಾತ್ರ ಮಾಡಾಕ ಇಷ್ಟ ಆಗಿತ್ತಂತ. ದಾವಣಗೆರಿಗೆ ನನ್ನ ಪಾತ್ರ ನೋಡಾಕ ಬಂದ್ರು. ನನ್ನ ಪಾತ್ರ ನೋಡಿದ ಮ್ಯಾಗ ಇದನ್ನ ನಾನು ಮಾಡಾಕ ಒಲ್ಲೆ ಅಂದುಬಿಟ್ಟರಂತೆ. ನನ್ನ ಪಾತ್ರಕ್ಕ ಮೆಚ್ಚಿಗೆಂಡು ರೇಷ್ಮೆ ಸೀರೆ, ಒಡವೆ ಕಳಿಸಿಕೊಟ್ಟಿದ್ದರು. ಇದು ನನಗ ಮರಿಲಾರ‌್ದ ಘಟನೆ.

* ಮಕ್ಕಳನ್ನ ಯಾಕ ಈ ರಂಗಕ್ಕ ತರಲಿಲ್ಲ?

ಇದು ನಮ್ಮ ಜೀವನಕ್ಕ ಸಾಕು ಬಿಡ್ರಿ. ನನಗೆ ಇಬ್ಬರು ಹೆಣ್ಣುಮಕ್ಕಳು- ಅಮೀನಾ, ಶಕೀಲಾ. ಇಬ್ಬರನ್ನು ಮದುವಿ ಮಾಡಿಕೊಟ್ಟಿನಿ. ರೊಟ್ಟಿ ಚಟ್ನಿ ತಿನ್ನಲಿ- ನೆಮ್ಮದಿಯಾಗಿ ಇರ‌್ತಾರ.. ಆದರ ನಾಟಕಕ್ಕ ಬ್ಯಾಡರೀ. ನಾನು ನಡುಬರಾಕ ಬಾಳ ನೋವು ಅನುಭವಿಸೀನಿ. ಅದನ್ನೆಲ್ಲ ಹೇಳೂಕಾಗೂದಿಲ್ಲ.

* ಪ್ರಶಸ್ತಿ ಬಂದಾಗ ಹ್ಯಂಗ ಅನಿಸ್ತು?
ನನ್ನ ಗುರುತಿಸ್ಯಾರ. ಅದು ಸಂತೋಷ ಆಗೈತಿ. ಎಲ್ಲೋ ಒಂದು ಹಳ್ಯಾಗ ಇದ್ದಾಕೀನ ಹುಡುಕಿ ತಗದ್ರಲ್ಲ... ಅದು ನನಗ ಬಾಳ ಖುಷಿ ಕೊಡ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.