ADVERTISEMENT

ನಾನೂ.. ನನ್ನ ಮಗಳೂ, ಮುಗಿಯದ ಪ್ರಶ್ನೆಯೂ..!

ಒಡಲ ದನಿ

ಗುರು ಪಿ.ಎಸ್‌
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST
ನಾನೂ.. ನನ್ನ ಮಗಳೂ, ಮುಗಿಯದ ಪ್ರಶ್ನೆಯೂ..!
ನಾನೂ.. ನನ್ನ ಮಗಳೂ, ಮುಗಿಯದ ಪ್ರಶ್ನೆಯೂ..!   

ಅಪ್ಪಾ... ರೇಪ್‌ ಅಂದ್ರೇನು ? ಕೇಳಿದಳು ಐದು ವರ್ಷದ ಮಗಳು. ಟಿ.ವಿ ಕಾರ್ಯಕ್ರಮದಲ್ಲಿ ‘ರೇಪ್‌ ರಾಜ್ಯ’ ಎಂಬ ಭಯಂಕರ ಟೈಟಲ್‌ ಕೊಟ್ಟು, ಅದಕ್ಕಿಂತಲೂ ಭಯಂಕರವಾಗಿ ವಾದ ಮಂಡಿಸುತ್ತಿದ್ದ ನಿರೂಪಕಿಯ ಮಾತು ಕೇಳುತ್ತಾ ಕುಳಿತಿದ್ದ ನನಗೆ, ಮಗಳ ಅನಿರೀಕ್ಷಿತ ಪ್ರಶ್ನೆಗೆ ಏನು ಉತ್ತರ ಕೊಡಬೇಕೋ ಗೊತ್ತಾಗಲಿಲ್ಲ. ಸ್ವಲ್ಪ ಯೋಚಿಸಿ, ‘ಕೆಟ್ಟವರು ಕೆಟ್ಟ ಕೆಲಸ ಮಾಡೋದನ್ನು ರೇಪ್‌ ಅಂತಾರೆ ಪುಟ್ಟಿ’ ಅಂದೆ.

ಏನೋ ಅರ್ಥ ಆದವರಂತೆ ಸುಮ್ಮನಾದಳು ಮಗಳು. ಇನ್ನಾವ ಪ್ರಶ್ನೆಯೂ ಕೇಳಲಾರಳು ಎಂದುಕೊಂಡು ಟಿ.ವಿ ಕಡೆ ದೃಷ್ಟಿ ನೆಟ್ಟೆ. ‘ಅಪ್ಪಾ ಕೆಟ್ಟವರು ಅಂದ್ರೆ ಯಾರು?’ ಬಾಣದಂತೆ ತೂರಿ ಬಂತು ಮಗಳ ಮತ್ತೊಂದು ಪ್ರಶ್ನೆ. ನಿನಗೆ ಪಾಠ ಮಾಡೋ ಮೇಷ್ಟ್ರುಗಳಲ್ಲಿ ಯಾರಾದರೊಬ್ಬರು ಎಂದು ಹೇಳಲಾ? ನಿನ್ನನ್ನ ವ್ಯಾನ್‌ನಲ್ಲಿ ಸ್ಕೂಲ್‌ಗೆ ಕರ್ಕೊಂಡ್ ಹೋಗ್ತಾರಲ್ಲ ಅವರು ಎಂದು ಹೇಳಲಾ? ನಿನಗೆ ಚಾಕಲೇಟ್‌ ತಂದು ಕೊಡೋ ಮಾಮಾ, ಮುದ್ದಾಡೋ ಪಕ್ಕದ ಮನೆ ಅಂಕಲ್‌ಗಳಲ್ಲಿ ಯಾರಾದರೊಬ್ಬರು ಅಂತಾ ಹೇಳಲಾ? ಏನ್‌ ಹೇಳಬೇಕೋ ಗೊತ್ತಾಗಲಿಲ್ಲ. ‘ಕೆಟ್ಟ ಕೆಲಸ ಮಾಡುವವರು’ ಎಂದಷ್ಟೇ ಉತ್ತರಿಸಿದೆ.

ಅತ್ಯಾಚಾರಕ್ಕೆ ಒಳಗಾಗಿದ್ದ ಸುಮಾರು 8–10 ವರ್ಷ ವಯಸ್ಸಿನ ಬಾಲಕಿಯ ಮುಖವನ್ನು ಮಸುಕು ಮಾಡಿ, ಟಿ.ವಿ.ಯಲ್ಲಿ ತೋರಿಸುತ್ತಿದ್ದರು. ನಡೆದದ್ದನ್ನ ಹೇಳುತ್ತಾ ಆ ಹುಡುಗಿ ಅಳುತ್ತಿದ್ದಳು. ‘ಅಪ್ಪಾ ಆ ಅಕ್ಕ ಕೆಟ್ಟವಳಾ?’ ಮಗಳ ಮತ್ತೊಂದು ಪ್ರಶ್ನೆ. ‘ಅಲ್ಲಮ್ಮಾ, ಆ ಅಕ್ಕ ಒಳ್ಳೆಯವಳು. ಯಾರೋ ಕೆಟ್ಟವರು ಕೆಟ್ಟ ಕೆಲಸ ಮಾಡಿದ್ದಾರೆ. ಅದಕ್ಕೆ ಅಕ್ಕ ಅಳ್ತಿದ್ದಾಳೆ’ ಅಂದೆ. ‘ಕೆಟ್ಟ ಕೆಲಸ ಮಾಡ್ದೋರು ತಾನೆ ಅಳಬೇಕು. ಈ ಒಳ್ಳೆಯ ಅಕ್ಕ ಯಾಕೆ ಅಳಬೇಕು’ ಮಗಳ ಮತ್ತೊಂದು ಬೌನ್ಸರ್‌.

ಪ್ರಶ್ನೆ ಕೇಳಿದ್ದು ಸಾಕು, ಹೋಗಿ ಓದ್ಕೋ ಅಂತಾ ಗದರಿಸಬೇಕು ಅನಿಸಿದ್ರೂ, ಮಕ್ಕಳ ಕುತೂಹಲ ಚಿವುಟಬೇಡಿ, ಅವರು ಕೇಳುವ ಪ್ರಶ್ನೆಗೆ ಸಾಧ್ಯವಾದಷ್ಟು ಉತ್ತರಿಸಲು ಪ್ರಯತ್ನಿಸಿ ಎಂಬ ಎಲ್ಲೋ ಓದಿದ್ದ ಸಾಲುಗಳು ನೆನಪಿಗೆ ಬಂದವು. ‘ಕೆಟ್ಟವರು ಕೆಟ್ಟದ್ದನ್ನ ಮಾಡಿದರೂ, ಅಳಬೇಕಾದವರು ಒಳ್ಳೆಯವರೇ ಪುಟ್ಟಿ. ಈ ಜಗತ್ತಿರೋದೆ ಹಾಗೆ’ ಎಂದು ತತ್ವಜ್ಞಾನಿಯಂತೆ ಉತ್ತರಿಸಿದೆ. ನಾನು ಹೇಳಿದ್ದು ಅರ್ಥವಾಗದಿದ್ದರೂ ತಕ್ಷಣಕ್ಕೆ ಏನೂ ಕೇಳಲು ಹೊಳೆಯದೇ ನಮ್ಮ ಮನೆಯ ‘ಕ್ವಶ್ಚನ್‌ ಮೆಷಿನ್‌’ ಟಿ.ವಿ ಕಡೆಗೆ ಮುಖ ತಿರುಗಿಸಿತು.
ಶಾಲೆಯೊಂದರಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿದ್ದನ್ನ ‘ನಮ್ಮ ಇಂಪ್ಯಾಕ್ಟ್‌’ ಎಂಬ ದೊಡ್ಡ ಅಕ್ಷರಗಳ ವಾಟರ್‌ಮಾರ್ಕ್‌ ಹಾಕ್ಕೊಂಡು ಸುದ್ದಿ ಬಿತ್ತರಿಸುತ್ತಿತ್ತು ಟಿ.ವಿ ಚಾನೆಲ್‌ ಒಂದು. ‘ಅಪ್ಪಾ.. ಅಪ್ಪಾ ಅದೇನ್‌ ಅಪ್ಪಾ?’ ಪ್ರಶ್ನೆಗಳ ಟ್ವೆಂಟಿ ಟ್ವೆಂಟಿ ಮ್ಯಾಚ್‌ ಮತ್ತೆ ಪ್ರಾರಂಭವಾಯ್ತು. ಅದು ‘ಸಿ.ಸಿ ಕ್ಯಾಮೆರಾ ಮಗಳೇ’ ಎಂದೆ.

‘ಅಪ್ಪಾ ನಮ್‌ ಸ್ಕೂಲ್‌ನಲ್ಲೂ ಇದೇ ತರಹ ಕ್ಯಾಮೆರಾ ಹಾಕಿದ್ದಾರೆ. ಸ್ಕೂಲ್‌ನಲ್ಲಿ ಕ್ಯಾಮೆರಾ ಯಾಕಪ್ಪಾ ಹಾಕ್ತಾರೆ ?’ ಕೇಳಿದಳು ಮಗಳು.
‘ಕೆಟ್ಟವರು ಕೆಟ್ಟ ಕೆಲಸ ಮಾಡಿದರೆ ಅದರಲ್ಲಿ ಎಲ್ಲ ರೆಕಾರ್ಡ್‌ ಆಗುತ್ತೆ. ಆಗ ಅವರನ್ನು ಹಿಡಿಬಹುದು ಎಂಬ ಕಾರಣಕ್ಕೆ ಶಾಲೆಯಲ್ಲೂ ಹಾಕ್ತಾರೆ’ ಅಂದೆ. ‘ಸ್ಕೂಲ್‌ನಲ್ಲೂ ಕೆಟ್ಟವರಿರ್ತಾರಾ ಅಪ್ಪಾ?’ ಮಗಳ ಪ್ರಶ್ನೆ ನನ್ನನ್ನ ವಿಚಲಿತನನ್ನಾಗಿಸಿತು.

ಹೂಂ ಅಂದ್ರೂ ಕಷ್ಟ. ಊಹೂಂ ಅಂದ್ರೂ ಕಷ್ಟ. ‘ಕೆಟ್ಟವರು ಇದ್ದೇ ಇರ್ತಾರೆ ಅಂತಾ ಅಲ್ಲ ಮಗಳೇ, ಯಾರೂ ಕೆಟ್ಟದ್ದನ್ನು ಮಾಡಬಾರದು ಅನ್ನೋದಕ್ಕೆ ಸಿ.ಸಿ ಕ್ಯಾಮೆರಾ ಹಾಕ್ತಾರೆ’ ಅಂದೆ. ಎಲ್ಲವೂ ಅರ್ಥವಾದವರಂತೆ ‘ಹೌದಾ’ ಎಂದು ಸುಮ್ಮನಾದಳು. ಚಾನೆಲ್‌ ಚೇಂಜ್‌ ಮಾಡಿದೆ. ಆ ಚಾನೆಲ್‌ನಲ್ಲೂ ಬ್ರೇಕಿಂಗ್‌ ನ್ಯೂಸ್‌ ! 65 ವರ್ಷದ ಮಹಿಳೆ ಮೇಲೆ ಅತ್ಯಾಚಾರ... ವೃದ್ಧೆಯನ್ನೂ ಬಿಡದ ಕಾಮುಕರು...

ಥತ್ತೇರಿ ಅಂದುಕೊಂಡು ಟಿ.ವಿ ಆಫ್‌ ಮಾಡಿದೆ. ಪೇಪರ್‌ ಕೈಗೆತ್ತಿಕೊಂಡೆ. ದೊಡ್ಡ ಸುದ್ದಿ. ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ! ನನ್ನ ಪುಣ್ಯ. ಮಗಳಿಗೆ ಕನ್ನಡ ಓದಲು ಬರುವುದಿಲ್ಲ. ಬಂದಿದ್ದರೆ ಈ ಕುರಿತ ಅವಳ ಪ್ರಶ್ನೆಗೆ ಏನು ಉತ್ತರ ಕೊಡಬೇಕು ಎಂಬುದನ್ನು ನೆನಸಿಕೊಂಡರೆ ಭಯ, ಮುಜುಗರ, ನಾಚಿಕೆ, ಹೇಸಿಗೆ ಎಲ್ಲವೂ ಒಟ್ಟಿಗೇ ಆದಂತಾಯ್ತು. ಪೇಪರನ್ನೂ ಬಿಸಾಕಿದೆ.

ಮರುದಿನ. ಯೂನಿಫಾರಂ ಹಾಕಿಕೊಂಡು, ಹೆಗಲಿಗೊಂದು ಬ್ಯಾಗು, ಕೈಯಲ್ಲೊಂದು ಊಟದ ಬ್ಯಾಗು ಹಿಡ್ಕೊಂಡು ನನ್ನ ಪುಟ್ಟಮ್ಮ ಶಾಲೆಗೆ ಹೊರಟು ನಿಂತಳು. ‘ಬೈ ಅಪ್ಪಾ’ ಎಂದು ಅವಳು ನಾಲ್ಕು ಹೆಜ್ಜೆಗಳನ್ನು ಹಾಕಿರಲಿಲ್ಲ. ನನಗರಿವಿಲ್ಲದಂತೆ ನನ್ನ ಕೈಗಳೆರಡೂ ಸೇರಿದವು. ‘ದೇವರೇ ನನ್ನ ಕಂದನ ಮೇಲೆ ಯಾವ ಕೆಟ್ಟ ಕಣ್ಣೂ ಬೀಳದಿರಲಪ್ಪಾ..’ ಎಂಬ ಮಾತು ಬಾಯಿಂದ ಹೊರಬಿತ್ತು. ಜೊತೆಗೆ ಹನಿ ಕಣ್ಣೀರೂ... 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.