ADVERTISEMENT

ನೆನಪಿನ ‘ಭಿತ್ತಿ’ಯಿಂದ ಶಾರದಾ ವಿಲಾಸ

ಎಸ್‌.ಎಲ್‌.ಭೈರಪ್ಪ / ನಿರೂಪಣೆ: ಬಿ.ಜೆ.ಧನ್ಯಪ್ರಸಾದ್‌
Published 3 ಏಪ್ರಿಲ್ 2015, 19:30 IST
Last Updated 3 ಏಪ್ರಿಲ್ 2015, 19:30 IST

ಮೈಸೂರಿನ ಶಾರದಾ ವಿಲಾಸ ವಿದ್ಯಾಸಂಸ್ಥೆಗೆ ಈಗ 150ರ ಸಂಭ್ರಮ. ತಾತಯ್ಯ ಅವರ ಸಾರಥ್ಯದಲ್ಲಿ ಬೆಳೆದ ಈ ಸಂಸ್ಥೆಯಲ್ಲಿ ನಾಡಿನ ಹಲವಾರು ಮಹನೀಯರು ವಿದ್ಯಾಭ್ಯಾಸ ಮಾಡಿದ್ದಾರೆ. ಏ. 6 ಮತ್ತು 7ರಂದು ಈ ಸಂಸ್ಥೆಯ ಶತೋತ್ತರ ಸುವರ್ಣ ಮಹೋತ್ಸವ ನಡೆಯಲಿದೆ. ಈ ಸಂಸ್ಥೆಯಲ್ಲಿ ಓದಿದ ಸಾರಸ್ವತ ಲೋಕದ ದಿಗ್ಗಜ ಎಸ್‌.ಎಲ್‌. ಭೈರಪ್ಪ ಅವರು ಶಾರದಾ ವಿಲಾಸ ಪ್ರೌಢಶಾಲಾ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

“ಚನ್ನರಾಯಪಟ್ಟಣದಲ್ಲಿ ಹೈಸ್ಕೂಲಿಗೆ ಸೇರಿದ್ದೆ. ಅಲ್ಲಿ ಮುಖ್ಯಶಿಕ್ಷಕ ಸಿ. ಕೃಷ್ಣ ಅವರ ಕೋಪ, ದಬ್ಬಾಳಿಕೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಇತರ ಶಿಕ್ಷಕರೂ ‘ಬ್ರೈಟ್‌’ ಆಗಿರಲಿಲ್ಲ. ಶಿಸ್ತು, ಶಿಕ್ಷೆ ಇವೇ ಅವರಿಗೆ ಹೆಚ್ಚಾಗಿ ಗೊತ್ತಿದ್ದವು. ಆ ವಾತಾವರಣ ಬೇಸರ ಮೂಡಿಸಿತ್ತು. ಮೊದಲ ವರ್ಷ ಪೂರೈಸಿದೆ. ಮೈಸೂರಿನಲ್ಲಿ ಓದುತ್ತಿದ್ದ ಗೆಳೆಯ ರಾಜನ ಸಹಕಾರದಿಂದ ಶಾರದಾ ವಿಲಾಸ ಹೈಸ್ಕೂಲಿಗೆ ಎರಡನೇ ವರ್ಷಕ್ಕೆ ಸೇರಿದೆ. ಪ್ರಾಯಶಃ ಈ ಶಾಲೆಗೆ ಸೇರಿದ್ದರಿಂದಲೇ ಜೀವನದಲ್ಲಿ ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು ಎಂದರೆ ತಪ್ಪಾಗಲಾರದು. ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿದ್ದೇ ಇಲ್ಲಿ. 

ಶಾರದಾ ವಿಲಾಸ ಶಾಲೆಗೆ ಸೇರಿದ 15 ದಿನದಲ್ಲಿ ಹಾರ್ಡ್ವಿಕ್‌ ಶಾಲೆಯವರು ಅಂತರಪ್ರೌಢಶಾಲೆಗಳ ಚರ್ಚಾ ಸ್ಪರ್ಧೆ ಆಯೋಜಿಸಿದ್ದರು. ಈ ಸ್ಪರ್ಧೆಗೆ ನಮ್ಮ ಶಾಲೆಯಿಂದ ನಾನು ಸೇರಿದಂತೆ ಇಬ್ಬರನ್ನು ಆಯ್ಕೆ ಮಾಡಿ ಕಳುಹಿಸಿದ್ದರು. ಈ ಸ್ಪರ್ಧೆಯಲ್ಲಿ ನನಗೆ ಪ್ರಥಮ ಬಹುಮಾನ, ಶಾಲೆಗೆ ಶೀಲ್ಡ್‌ ಬಂತು. ಶಿಕ್ಷಕರು ಅಭಿನಂದಿಸಿ ನನ್ನ ಬಗ್ಗೆ ವಿಚಾರಿಸಿದರು.

ಶಿಕ್ಷಕರ ಬಳಿ ಸ್ಥಿತಿಯನ್ನು (ಊಟ, ವಸತಿ ಸಮಸ್ಯೆ) ಹೇಳಿಕೊಂಡೆ. ಇತಿಹಾಸ ಶಿಕ್ಷಕ ಸೋಸಲೆ ರಾಜಗೋಪಾಲ್‌ ಅಯ್ಯಂಗಾರ್‌ (ಎಸ್‌.ಆರ್) ಅವರು ಅನಾಥಾಲಯಕ್ಕೆ ಶಿಫಾರಸು ಮಾಡಿದರು. ಅನಾಥಾಲಯದಲ್ಲಿ ಸೀಟುಗಳು ಮುಗಿದಿದ್ದರಿಂದ ವಾರ ಮಾತ್ರ ಕೊಡುವುದಾಗಿ ಹೇಳಿದರು. ಹಾಗಾದರೆ ಏಳು ವಾರ ಕೊಡಿ ಎಂದು ಎಸ್‌.ಆರ್ ಕೇಳಿದರು. ಏಳು ವಾರ ಕೊಡುವುದು ಸಾಧ್ಯ ಇಲ್ಲ ಎಂದು ಅನಾಥಾಲಯದವರು ನಾಲ್ಕು ವಾರ ಕೊಟ್ಟರು. ಹೊಯ್ಸಳ ಕರ್ನಾಟಕ ಹಾಸ್ಟೆಲ್‌ನಲ್ಲಿ ಮೂರು ವಾರ ಕೊಡಿಸಿದರು. ಊಟದ ಸಮಸ್ಯೆ ಬಗೆ ಹರಿಯಿತು. ಲಕ್ಷ್ಮೀಪುರಂನಲ್ಲಿ ರೂಮು ಮಾಡಿದ್ದೆ. ಮಾಧ್ಯಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಟ್ಯೂಶನ್‌ ಹೇಳಿ ರೂಮಿನ ಬಾಡಿಗೆ ಕಟ್ಟುತ್ತಿದ್ದೆ.

ಎಸ್‌.ಆರ್ ಅವರ ಬಳಿ ಚರ್ಚಾಸ್ಪರ್ಧೆಗೆ ಪಾಯಿಂಟ್ಸ್ ಹೇಳಿಕೊಡುವಂತೆ ಕೇಳಿದೆ. ವಿಷಯ ಪರ ಮತ್ತು ವಿರೋಧ ಅಂಶಗಳನ್ನು ಪಟ್ಟಿಮಾಡಿಕೊಳ್ಳಬೇಕು. ಇತರರು ಮಂಡಿಸುವ ಅಂಶಗಳನ್ನು ಗ್ರಹಿಸಬೇಕು. ಸರದಿ ಬಂದಾಗ ಸಮರ್ಥವಾಗಿ ವಾದ ಮಂಡಿಸಬೇಕು. ಸ್ವಂತಬುದ್ಧಿ ಬಹಳ ಮುಖ್ಯ ಎಂದು ಹೇಳಿಕೊಟ್ಟರು.

ಎಸ್‌.ಆರ್‌ ಅವರು ಇತಿಹಾಸವನ್ನು ತುಂಬಾ ಚೆನ್ನಾಗಿ ಬೋಧಿಸುತ್ತಿದ್ದರು. ವಿಷಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದರು. 
ಮಹಾರಾಜ ಕಾಲೇಜಿನಲ್ಲಿ ನಡೆಯುತ್ತಿದ್ದ ವಿದ್ವಾಂಸರ ಭಾಷಣ ಕೇಳಲು ಹೋಗು, ಜ್ಞಾನ ವೃದ್ಧಿಯಾಗುತ್ತೆ ಎಂದು ಎಸ್‌.ಆರ್‌. ಪ್ರೇರೇಪಿಸುತ್ತಿದ್ದರು. ತರಗತಿ ಶಿಕ್ಷಕರ ಅನುಮತಿ ಪಡೆದು ಹಾಜರಿ ನೀಡುವಂತೆ ಕೋರಿ ಭಾಷಣ ಕೇಳಲು ಹೋಗುತ್ತಿದ್ದೆ. ಪ್ರೌಢಶಾಲಾ ಹಂತದಲ್ಲೇ ಭಾಷಣ ಕೇಳುವ ಅಭ್ಯಾಸ ಬೆಳೆದದ್ದು ಜ್ಞಾನವನ್ನು ಬೆಳೆಸಿಕೊಳ್ಳಲು ಸಹಕಾರಿಯಾಯಿತು.

ವಿಜ್ಞಾನ ಶಿಕ್ಷಕ ರಾಮಣ್ಣ ಅವರು ಪಠ್ಯದ ಜೊತೆಗೆ ಗ್ರಂಥಾಲಯದಲ್ಲಿನ  ಪುಸ್ತಕಗಳನ್ನು ಓದಬೇಕು ಎಂದು ಹೇಳಿ ಪ್ರೋತ್ಸಾಹಿಸಿದರು. ಅ.ನ. ಕೃಷ್ಣರಾಯ, ಕಾರಂತ, ಗಳಗನಾಥ ಮೊದಲಾದವರ ಕಾದಂಬರಿಗಳನ್ನು ಓದಲು ಆರಂಭಿಸಿದೆ. ಇದರಿಂದ ನನ್ನ ಭಾಷೆ ಉತ್ತಮವಾಯಿತು.
ಲೋ ನೀನು, ಸರಿಯಾಗಿ ಓದದೇ ಹೋದರೆ ನಿನಗೆ ಕೋಡು ಬಳೆ (ಸೊನ್ನೆ) ಬರುತ್ತೆ ಎಂದು ಶಿಕ್ಷಕ ರಾಮಣ್ಣ ತಮಾಷೆ ಮಾಡುತ್ತಿದ್ದರು.
ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸಲಿಗೆಯಿಂದ ಇರುತ್ತಿದ್ದರು. 

ಗೋವಿಂದರಾಜಶೆಟ್ಟಿ ಎಂಬ ಸ್ನೇಹಿತ ಇದ್ದ, ಅವನು ಶ್ರೀಮಂತರ ಹುಡುಗ.   ಸಿನಿಮಾ ಬಿಡುಗಡೆಯಾದಾಗ ಮೊದಲ ಪ್ರದರ್ಶನ ನೋಡಬೇಕು ಎಂಬ ಹುಚ್ಚು ಇತ್ತು. ಅವನು ದುಡ್ಡುಹಾಕಿಕೊಂಡು ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತಿದ್ದ.   ಚನ್ನರಾಯಪಟ್ಟಣದಲ್ಲಿ ನನಗೆ ವರ್ಗಾವಣೆ ಪತ್ರ (ಟಿ.ಸಿ) ಕೊಟ್ಟಾಗ ಅದರಲ್ಲಿ  ಯಾವುದೇ ‘ಫ್ರೀಶಿಪ್‌’ ಇಲ್ಲ ಎಂದು ನಮೂದಿಸಿದ್ದರು. ಹೀಗಾಗಿ ಶಾರದಾ ವಿಲಾಸದಲ್ಲಿ ‘ಫ್ರೀಶಿಪ್‌’ ನೀಡಲು ನಿರಾಕರಿಸಿದರು. ಶ್ರೀಮಂತರ ಹುಡುಗ ಗೋವಿಂದರಾಜ ಶೆಟ್ಟಿಗೆ ‘ಫ್ರೀಶಿಪ್’ ಕೊಟ್ಟಿದ್ದೀರಾ ಅತ್ಯಂತ ಬಡಹುಡುಗನಾದ ನನಗೆ ಯಾಕೆ ಕೊಡುತ್ತಿಲ್ಲ ಎಂದು ಕೇಳಿದೆ.

ಈ ಕುರಿತು ರಾಮಣ್ಣ ಮೇಷ್ಟ್ರು ಗೋವಿಂದರಾಜ ಶೆಟ್ಟಿ ಅವರ ತಂದೆ ಅವರನ್ನು ವಿಚಾರಿಸಿದ್ದಾರೆ. ನೀವು ಇಷ್ಟೆಲ್ಲ ಅನುಕೂಲವಾಗಿದ್ದು ಮಗನಿಗೆ ಫ್ರೀಶಿಫ್‌ ಸೌಲಭ್ಯ ಪಡೆದುಕೊಳ್ಳುವುದು ತಪ್ಪಲ್ಲವಾ ಎಂದು ಮೇಷ್ಟ್ರು ಕೇಳಿದ್ದಕ್ಕೆ, ತಾವು ಹಾಗೆ ನಮೂದಿಸಿಲ್ಲ ಎಂದು ಅವರು ಹೇಳಿದ್ದಾರೆ.

ಗೋವಿಂದರಾಜ ಶೆಟ್ಟಿಯೇ ಅರ್ಜಿಯಲ್ಲಿ ತಾನು ಬಡವ ಎಂದು  ನಮೂದಿಸಿ ‘ಫ್ರೀಶಿಪ್‌’ ಪಡೆದಿರುವುದು ಇದರಿಂದ ಗೊತ್ತಾಯಿತು. ಆಮೇಲೆ, ರಾಮಣ್ಣ ಮೇಷ್ಟ್ರು ಅವನಿಗೆ ರೂಲು ದೊಣ್ಣೆಯಿಂದ ಎರಡು ಏಟು ಕೊಟ್ಟರು. ಅವನ ಫ್ರೀಶಿಫ್‌ ಅನ್ನು ಕ್ಯಾನ್ಸಲ್‌ ಮಾಡಿ ನನಗೆ ಕೊಟ್ಟರು.

ಭಾರತಿ ಎಂಬ ಕನ್ನಡ ಪಂಡಿತರು ಆಶುಕವಿ ಎಂದೇ ಖ್ಯಾತರಾಗಿದ್ದರು. ಅವರು ತರಗತಿಗೆ ಬಂದು ಬಾಗಿಲು ಹಾಕಿ ಮೇಜಿನ ಮೇಲೆ ಚಕ್ಳಮಕ್ಳ ಹಾಕಿಕೊಂಡು ಕುಳಿತು ಪಠ್ಯದಲ್ಲಿನ ಕುಮಾರವ್ಯಾಸ ಭಾರತದ ಪದ್ಯಗಳನ್ನು ರಾಗವಾಗಿ ಹೇಳುತ್ತಿದ್ದರು. ಹೇಳುವ ರೀತಿಯಲ್ಲೇ ಅದನ್ನು ಅರ್ಥ ಮಾಡಿಸುತ್ತಿದ್ದರು.

ಕೆ.ವಿ. ನಾರಾಯಣ ಅಂಥ ರಸಾಯನವಿಜ್ಞಾನ ಮೇಷ್ಟ್ರು ಇದ್ದರು. ತುಂಬಾ ಚೆನ್ನಾಗಿ ಕೆಮಿಸ್ಟ್ರಿ ಪಾಠ ಮಾಡುತ್ತಿದ್ದರು. ಒಂದು ದಿವಸ ಇಂಗ್ಲಿಷ್‌ ಪಾಠ ಮಾಡೋ ಮೇಷ್ಟು ಬಂದಿರಲಿಲ್ಲ. ಅವರ ತರಗತಿಯನ್ನು ಕೆ.ವಿ ನಾರಾಯಣ ತೆಗೆದುಕೊಂಡರು. ವರ್ಡ್ಸ್‌ವರ್ತ್‌ನ ‘ಫಿಡಿಲಿಟಿ’ ಪದ್ಯವನ್ನು ಮಾಡಿದರು. ಇಂಗ್ಲಿಷ್‌ ಶಿಕ್ಷಕನಿಗಿಂತ ಚೆನ್ನಾಗಿ ಪಾಠ ಮಾಡಿದರು. ಇನ್ನು ಮುಂದೆ ಇಂಗ್ಲಿಷ್‌ ವಿಷಯನ್ನು ಇವರೇ ಬೋಧನೆ ಮಾಡ್ಲಿ  ಅನ್ನುವಷ್ಟರ ಮಟ್ಟಿಗೆ ಪಾಠ ಮಾಡಿದರು. ಈ ತರಹ ಶಿಕ್ಷಕರಿಗೆ ತಮ್ಮ ವಿಷಯದ ಹೊರತಾಗಿ ಬೇರೆ ವಿಷಯದಲ್ಲೂ ಪರಿಣತಿ ಇತ್ತು.

ಸುಬ್ಬರಾಯ ಎಂಬುವರು ಗ್ರಂಥಪಾಲಕ ರಾಗಿದ್ದರು. ಅವರು ರಾಜ್‌ಕಪೂರ್‌ ಭಕ್ತರು. ಒಂದಿನ ಸುಬ್ರಾಯರ ಜೊತೆ ಮಾತಾಡುತ್ತಿದ್ದಾಗ ಅವರು ರಾಜ್‌ಕಪೂರ್‌ ನಂಥ ನಟ ಯಾರೂ ಇಲ್ಲ ಎಂದರು. ಅದಕ್ಕೆ, ರಾಜ್‌ಕಪೂರ್‌ ಚೆನ್ನಾಗಿಲ್ಲ ಎಂದು ಹೇಳಿದೆ. ಮಾರನೇ ದಿನ ಪುಸ್ತಕ ತೆಗೆದುಕೊಳ್ಳಲು ಹೋದರೆ ಅವರು ಕೊಡಲಿಲ್ಲ. ಗೋವಿಂದರಾಜಶೆಟ್ಟಿ ಬಳಿ ನಡೆದ ವಿಷಯ ಹೇಳಿದೆ. ಅವನು ನಾನೊಂದು ಉಪಾಯ ಮಾಡುತ್ತೇನೆ ಎಂದು ಹೇಳಿ, ರಾಜ್‌ಕಪೂರ್‌ ಮತ್ತು ನರ್ಗಿಸ್‌ ನಟಿಸಿದ ಚಿತ್ರದ ಪೋಸ್ಟರ್‌ ಅನ್ನು ತಂದು ರೂಮಿನಲ್ಲಿ ಅಂಟಿಸಿದ. ಕೆಳಗಡೆ ಗಂಧದ ಕಡ್ಡಿ ಇಟ್ಟ. ಸಾಯಂಕಾಲ ರೂಮಿಗೆ ಸುಬ್ರಾಯ ಅವರನ್ನು ಕರೆದುಕೊಂಡು ಬಂದ.

ನನ್ನನ್ನು ನೋಡಿದ ಸುಬ್ರಾಯ ಅವರು, ಓಹ್‌ ಇವನೋ ಬಹಳ ಬುದ್ಧಿವಂತ ಅಂದರು.
ಸಾರ್‌, ಹಾಗನ್ನಬೇಡಿ. ರಾಜ್‌ಕಪೂರ್‌ ಅಂದ್ರೆ ಇವ್ನಿಗೂ ಇಷ್ಟ. ತಮಾಷೆಗೆ ಇಷ್ಟ ಇಲ್ಲ ಅಂತ ಹೇಳಿದ್ದು. ಅಷ್ಟಕ್ಕೇ ನೀವು ಕೋಪಮಾಡಿಕೊಂಡು ಪುಸ್ತಕ ಕೊಡುವುದನ್ನೇ ಬಿಡುವುದೇ ಎಂದ.
ಆಗ, ಸುಬ್ರಾಯರು ಹೌದೇನೊ ಎಂದು ಕೇಳಿ ರಾಜ್‌ಕಪೂರ್‌ನ ಯಾವ್ಯಾವ ಸಿನಿಮಾ ನೋಡಿದ್ದಿಯಾ ಎಂದು ಕೇಳಿದರು.
‘ಬರ್‌ಸಾತ್‌’, ‘ಆಗ್‌’ ಮೊದಲಾದ ಸಿನಿಮಾಗಳ ಹೆಸರು ಹೇಳಿದೆ.
ಆಗ ಅವರು ನೀನು ಒಳ್ಳೆಯ ಹುಡುಗ ಎಂದು ತಬ್ಬಿಕೊಂಡರು. ನಾಳೆಯಿಂದ ಬಾ.. ಎಷ್ಟು ಬೇಕಾದರೂ ಪುಸ್ತಕಗಳನ್ನು ಕೊಡುತ್ತೇನೆ ಎಂದರು.

ಶಾರದಾ ವಿಲಾಸ ಶಾಲೆಯಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ಇತ್ತು. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವುದೇ ಘನತೆಯ ವಿಷಯವಾಗಿತ್ತು. ಈ ವಿದ್ಯಾಸಂಸ್ಥೆ ರಾಜ್ಯದಲ್ಲಿ ಹೆಸರುವಾಸಿಯಾಗಿತ್ತು. ಈ ಶಾಲೆಗೆ ಒಂದಲ್ಲ ಒಂದು ರ್‌್ಯಾಂಕ್‌ ಬರುತ್ತಿತ್ತು. ಸೀಟಿಗೆ ಅಂಕದ ಮಾನದಂಡ ನಿಗದಿಪಡಿಸಿರಲಿಲ್ಲ. ಇಲ್ಲಿ ಎಲ್ಲರಿಗೂ ಸೀಟು ಕೊಡುತ್ತಿದ್ದರು”.
*

ಕಾಪಿ ಮಾಡಿದ್ದೆ!

‘ಬೀಜಗಣಿತ ನನಗೆ ಕಷ್ಟದ ವಿಷಯವಾಗಿತ್ತು, ಆಸಕ್ತಿಯೂ ಕಡಿಮೆ,  ಇತ್ತು. ರೇಖಾಗಣಿತದಲ್ಲಿ ಚುರುಕು ಇದ್ದೆ. ನಂಜುಂಡ ಶರ್ಮಾ ಎಂಬುವರು ಬೀಜಗಣಿತ ಪಾಠ ಮಾಡುತ್ತಿದ್ದರು. ಅವರ ಬಳಿ ಕಷ್ಟ ತೋಡಿಕೊಂಡೆ. ಪರೀಕ್ಷೆಯ ಹಿಂದಿನ ದಿನ ಸಂಜೆ ಮನೆಗೆ ಬರುವಂತೆ ಅವರು ಸೂಚಿಸಿದರು. ಅಂತೆಯೇ ಅವರ ಮನೆಗೆ ಹೋದೆ. ಕೆಲವು ಸೂತ್ರಗಳನ್ನು ಬಾಯಿಪಾಠ ಮಾಡಿಕೊಳ್ಳುವಂತೆ ತಿಳಿಸಿದರು. ಗ್ಯಾರಂಟಿಯಾಗಿ ಕೇಳುವ ಕೆಲವು ಪ್ರಶ್ನೆಗಳ ಸ್ವರೂಪವನ್ನು ತಿಳಿಸಿದರು. ಮೊದಲು ಗೊತ್ತಿಲ್ಲದ್ದನ್ನು ಬರೆಯಲು ಹೋಗಿ ಗೊಂದಲ ಮಾಡಿಕೊಳ್ಳಬೇಡ ಎಂದು ಸಲಹೆ ನೀಡಿದರು. ನಂಜುಂಡ ಶರ್ಮಾ ಅವರು ಹೇಳಿದ್ದನ್ನೆಲ್ಲ ಬೆರಳುಗಳ ಸಂಧಿಯಲ್ಲಿ ಬರೆದುಕೊಂಡು ಪರೀಕ್ಷೆಗೆ ಹೋದೆ. ಅವರು ಹೇಳಿದ್ದ ಕೆಲ ಪ್ರಶ್ನೆಗಳು ಇದ್ದವು. ಮೊದಲು ಕೈಯಲ್ಲಿ ಬರೆದುಕೊಂಡಿದ್ದನ್ನೆಲ್ಲ ‘ಕಾಪಿ’ ಮಾಡಿದೆ. ಕುಡಿಯಲು ನೀರು ಕೇಳಿ, ಕೈತೊಳೆದುಕೊಂಡು ಬಿಟ್ಟೆ. ಗಣಿತದಲ್ಲಿ 60 ಅಂಕ ಬಂದಿತ್ತು.

ಪ್ರಥಮ ದರ್ಜೆಯಲ್ಲಿ ಎಸ್ಸೆಸ್ಸೆಲ್ಸಿ ಪಾಸು ಮಾಡಿದ್ದೆ. ಮುಂದೆ ಇಂಟರ್‌ಮಿಡಿಯೆಟ್‌ಗೆ ಯುವರಾಜ ಕಾಲೇಜಿನಲ್ಲಿ ಆರ್ಟ್ಸ್‌ಗೆ ಸೇರಬೇಕು ಎಂದು ವರ್ಗಾವಣೆ ಪತ್ರ ಕೇಳಲು ಹೋದೆ. ಶಾರದಾ ವಿಲಾಸದಲ್ಲಿ ಪ್ರಾಂಶುಪಾಲ ರಾಮಸ್ವಾಮಿ ಅವರು ವಿಜ್ಞಾನ ವಿಭಾಗಕ್ಕೆ ಸೇರಿಕೊ ಒತ್ತಾಯಿಸಿದರು. ನನಗೆ ಕಲಾ ವಿಭಾಗದಲ್ಲಿ ಆಸಕ್ತಿ ಇದೆ ಎಂದು ಹೇಳಿದರೂ ಕೇಳಲಿಲ್ಲ. ಆಗ, ಗಣಿತದಲ್ಲಿ 60 ಅಂಕ ಬಂದಿದ್ದು ಹೇಗೆ ಅಂತ ನಿಜ ಹೇಳಿದೆ. ಅವರು ನಕ್ಕು, ಆಯ್ತು ಕಲಾ ವಿಭಾಗದಲ್ಲೇ ಓದು ಎಂದು ಟಿ.ಸಿ. ಕೊಟ್ಟರು’.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.