ADVERTISEMENT

ಮಕ್ಕಳ ಮೇಲೆ ಅತ್ಯಾಚಾರ

ನಿಮಗಿದು ತಿಳಿದಿರಲಿ

ಡಾ.ಗೀತಾ ಕೃಷ್ಣಮೂರ್ತಿ
Published 25 ಜುಲೈ 2014, 19:30 IST
Last Updated 25 ಜುಲೈ 2014, 19:30 IST

ಮಕ್ಕಳ ಮೇಲೆ ನಡೆಸುವ ಅತ್ಯಾಚಾರ ಅಮಾನವೀಯ ಹಾಗೂ ಅತ್ಯಂತ ಘೋರ ಅಪರಾಧ. ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಅವರ ವಯಸ್ಸಿನ ಕಾರಣದಿಂದಾಗಿ ಹೆಚ್ಚು ಹೆಚ್ಚು ಅತ್ಯಾಚಾರಕ್ಕೆ ಗುರಿಯಗುತ್ತಿದ್ದಾರೆ. ಇಂಥವರಲ್ಲಿ ತಾನೆಂಥ ಅಪರಾಧದ ಬಲಿ ಪಶುವಾಗತ್ತಿದ್ದೇನೆಂಬ ಅರಿವೂ ಮೊಳೆಯದ ಎಳೆಯ ಮಕ್ಕಳು.

2012 ರವರೆಗೆ ಮಕ್ಕಳ ಮೇಲಾಗುವ ದೌರ್ಜನ್ಯವನ್ನೇ ಕೇಂದ್ರವಾಗಿಟ್ಟ ಮತ್ತು ಅದನ್ನು ಶಿಕ್ಷಾರ್ಹ ಅಪರಾಧವನ್ನಾಗಿಸುವ ಯಾವ ಕಾನೂನೂ ಇರಲಿಲ್ಲ. ಭಾರತ ದಂಡ ಸಂಹಿತೆಯಲ್ಲಿ ವಯಸ್ಕರಿಗೆ ಅನ್ವಯವಾಗುವ ಪ್ರಕರಣಗಳನ್ನೇ ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯದ ಮೊಕದ್ದಮೆಗಳಲ್ಲಿ ಅನ್ವಯಿಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಪ್ರಸಂಗ ಒದಗುತ್ತಿತ್ತು.

ಇಂಥ ದೌರ್ಜನ್ಯಗಳ ಸಂದರ್ಭದಲ್ಲಿ ಮಕ್ಕಳಿಗೆ ಅನ್ವಯವಾಗುವಂಥ ಕಾನೂನು ಇಲ್ಲದುದಕ್ಕೆ ಕಾರಣ ಮಕ್ಕಳ ಮೇಲೆ ಇಂಥ ದೌರ್ಜನ್ಯ ನಡೆಯುವುದೇ ಇಲ್ಲ ಅಥವಾ ನಡೆದರೂ ತೀರ ಕಡಿಮೆ ಎಂಬ ಭಾವನೆ ಇದ್ದದ್ದು. ಆದರೆ ಇದನ್ನು ಸುಳ್ಳು ಎಂದು ಸಾಬೀತು ಪಡಿಸಿದ್ದು, 2007 ರಲ್ಲಿ ಮಕ್ಕಳು ಮತ್ತು ಮಹಿಳಾ ಅಭಿವೃದ್ಧಿ ಮಂತ್ರಾಲಯ ನಡೆಸಿದ ಸಮೀಕ್ಷೆಯ ವರದಿ. ಸಮೀಕ್ಷೆಗೊಳಪಟ್ಟ 2211 ಮಕ್ಕಳ ಪೈಕಿ ಶೇಕಡಾ 42 ರಷ್ಟು ಮಕ್ಕಳು ಒಂದಲ್ಲ ಒಂದು ಬಗೆಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದು ಬೆಳಕಿಗೆ ಬಂತು. ಈ ಹಿನ್ನೆಲೆಯಲ್ಲಿ ‘ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳಿಗೆ ರಕ್ಷಣೆ ಅಧಿನಿಯಮ, 2012’ ಜಾರಿಗೆ ಬಂದಿತು.

ಈ ಕಾನೂನಿನ ಪ್ರಕಾರ 18 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಬಾಲಕ ಬಾಲಕಿಯರೆಲ್ಲ ‘ಮಕ್ಕಳು’. ಮಕ್ಕಳ ಮೇಲೆ ಎಸಗುವ ಯಾವುದೇ ಬಗೆಯ ಲೈಂಗಿಕ ದೌರ್ಜನ್ಯ ಶಿಕ್ಷಾರ್ಹ ಅಪರಾಧ. ಅಪರಾಧದ ಸ್ವರೂಪಕ್ಕೆ ತಕ್ಕಂತೆ ಶಿಕ್ಷೆ 3 ರಿಂದ 5 ವರ್ಷಗಳು ಮತ್ತು ಇದನ್ನು 7 ವರ್ಷಗಳವರೆಗೆ ವಿಸ್ತರಿಸಬಹುದಾಗಿರುತ್ತದೆ. ಈ ಅಧಿನಿಯಮ ಮಕ್ಕಳ ಲೈಂಗಿಕ ಶೋಷಣೆಯ ಸಂದರ್ಭದಲ್ಲಿ ಇಡೀ ವಿಚಾರಣೆಯನ್ನು ಮಕ್ಕಳಿಗೆ ಸ್ನೇಹಮಯವಾಗಿರುವಂತೆ ರೂಪಿಸಲು ಮಾಡಿರುವ ಪ್ರಯತ್ನ. ಈ ಕಾನೂನು ಜಾರಿಗೊಳಿಸುವವರೆಗೆ ಈ ಅಂಶದ ಬಗ್ಗೆ ಗಮನವನ್ನೇ ಕೊಟ್ಟಿರಲಿಲ್ಲ.

ಮುಖ್ಯವಾಗಿ ಮಗುವಿನ ಹೇಳಿಕೆಯನ್ನು ಮಗುವಿನ ಮನೆಯಲ್ಲಿಯೇ ತೆಗೆದುಕೊಳ್ಳಬೇಕು, ಯಾವುದೇ ಸಂದರ್ಭದಲ್ಲಿಯೂ ಆರೋಪಿ ಮಗುವಿನ ಸಂಪರ್ಕಕ್ಕೆ ಬರಬಾರದು, ಮಗುವಿನ ಹೇಳಿಕೆಯನ್ನು ಮಗುವಿನ ತಂದೆ ತಾಯಿ ಅಥವಾ ಮಗು ನಂಬಿಕೆ ಮತ್ತು ವಿಶ್ವಾಸವಿರಿಸುವಂಥ ವ್ಯಕ್ತಿಯ ಸಮ್ಮುಖದಲ್ಲಿ ಪಡೆಯಬೇಕು, ವೈದ್ಯಕೀಯ ಪರೀಕ್ಷೆಯನ್ನು ವೈದ್ಯೆಯೇ ಮಾಡಬೇಕು, ಮತ್ತು ಬಾಲಕಿಗೆ ನಂಬಿಕೆ ಮತ್ತು ವಿಶ್ವಾಸವಿರುವವರ ಉಪಸ್ಥಿತಿಯಲ್ಲಿಯೇ ಮಾಡಬೇಕು, ನಿರಪರಾಧಿತ್ವವನ್ನು ರುಜುವಾತುಪಡಿಸುವ ಹೊಣೆ ಆರೋಪಿಯ ಮೇಲಿರುತ್ತದೆ, ವಿಚಾರಣೆ ಮಕ್ಕಳ ಸ್ನೇಹಿಯಾಗಿರಬೇಕು, ವಿಚಾರಣೆಯ ವೇಳೆಯಲ್ಲಿ ಮಗುವಿಗೆ ಬಿಡುವು ಕೊಡಬೇಕು, ಗಾಬರಿಗೊಳಿಸುವ ಪ್ರಶ್ನೆಗಳನ್ನು ಹಾಕಬಾರದು, ಮಗುವಿನ ಗುರುತನ್ನು ಬಹಿರಂಗಗೊಳಿಸಬಾರದು ಮತ್ತು ವಿಚಾರಣೆಯನ್ನು ಗೌಪ್ಯವಾಗಿ ನಡೆಸಬೇಕು.

ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸುವ ದೃಷ್ಟಿಯಿಂದ ಮಗುವಿನ ಸಾಕ್ಷ್ಯವನ್ನು 30 ದಿನಗಳೊಳಗಾಗಿ ದಾಖಲು ಮಾಡಿಕೊಳ್ಳಬೇಕು, ಇದಕ್ಕಾಗಿ ಇರುವ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಒಂದು ವರ್ಷದ ಅವಧಿಯೊಳಗಾಗಿ ಪೂರ್ಣಗೊಳಿಸಬೇಕು. ಮಾಧ್ಯಮ ಕೇಂದ್ರಗಳು, ಹೊಟೆಲ್ಲುಗಳು ಹಾಗೂ ವಸತಿಗೃಹಗಳು ಅವರ ಗಮನಕ್ಕೆ ಬರುವ ಪ್ರಕರಣಗಳನ್ನು ಕಡ್ಡಾಯವಾಗಿ ವರದಿ ಮಾಡಬೇಕು, ಗಮನಕ್ಕೆ ಬಂದಿದ್ದೂ ವರದಿ ಮಾಡದಿದ್ದಲ್ಲಿ ಆರು ತಿಂಗಳ ಕಾರಾವಾಸ ಶಿಕ್ಷೆಗೆ ಬದ್ಧರಾಗುತ್ತಾರೆ. ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗ ಮಕ್ಕಳಿಂದ ಕೂಡಿದೆ, 440 ದಶಲಕ್ಷದಷ್ಟು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಾರೆ.  ಮಕ್ಕಳ ಹಕ್ಕು ರಕ್ಷಣೆ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.