ADVERTISEMENT

ಮಗು ನೀಡಲು ಇತರರಿಗೆ ಇರುವ ಅಧಿಕಾರ

ನಿಮಗಿದು ತಿಳಿದಿರಲಿ

ಡಾ.ಗೀತಾ ಕೃಷ್ಣಮೂರ್ತಿ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಕೆಲವು ಸಂದರ್ಭಗಳಲ್ಲಿ ಮಗುವಿನ ಪೋಷಕನಿಗೆ ಮಗುವನ್ನು ದತ್ತು ನೀಡಲು ಅವಕಾಶವಿರುತ್ತದೆ, ಪೋಷಕ ಎಂದರೆ ಮಗುವನ್ನು ಮತ್ತು ಅವನ ಆಸ್ತಿಯನ್ನು ನೋಡಿಕೊಳ್ಳುತ್ತಿರುವ ವ್ಯಕ್ತಿ. ಉಯಿಲಿನ ಮೂಲಕ ಮಗುವಿನ ಪೋಷಕನೆಂದು ಯಾರನ್ನಾದರೂ ನಿಯೋಜಿಸಿದ್ದರೆ ಅಂಥ ವ್ಯಕ್ತಿ ಅಥವಾ ಪೋಷಕನೆಂದು ನ್ಯಾಯಾಲಯ ನಿಯೋಜಿಸಿದ ವ್ಯಕ್ತಿ ಸಹ ಪೋಷಕ ಎನಿಸಿಕೊಳ್ಳುತ್ತಾನೆ.

ಮಗುವಿನ ತಂದೆ ತಾಯಿಯರಿಬ್ಬರೂ ಮರಣ ಹೊಂದಿದ್ದರೆ, ತಂದೆ ತಾಯಿಯರಿಬ್ಬರೂ ಮಗುವನ್ನು ತೊರೆದಿದ್ದರೆ, ತಂದೆ ತಾಯಿಯರಿಬ್ಬರೂ ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ, ಮಗುವಿನ ತಂದೆ ತಾಯಿಯರು ಯಾರು ಎಂಬುದು ಗೊತ್ತಿಲ್ಲದಿದ್ದರೆ, ಅಂಥ ಸಂದರ್ಭಗಳಲ್ಲಿ ಮಗುವನ್ನು ದತ್ತು ಕೊಡಲು ಪೋಷಕನಿಗೆ ಅಧಿಕಾರವಿರುತ್ತದೆ. ಅಂಥ ಸಂದರ್ಭಗಳಲ್ಲಿ ಅಂಥ ಮಗುವನ್ನು ಪೋಷಕ ತಾನೇ ದತ್ತು ತೆಗೆದುಕೊಳ್ಳಬಹುದು ಅಥವಾ ಇತರ ವ್ಯಕ್ತಿಗೆ ದತ್ತು ಕೊಡಬಹುದು. ಆದರೆ ಹಾಗೆ ಮಾಡುವುದಕ್ಕೆ ಅವರು ನ್ಯಾಯಾಲಯದ ಅನುಮತಿಯನ್ನು ಪಡೆದಿರಬೇಕು. ನ್ಯಾಯಾಲಯ ಹಾಗೆ ಅನುಮತಿ ನೀಡುವಾಗ ಮಗುವಿನ ಯೋಗಕ್ಷೇಮಕ್ಕೆ ಮೊದಲ ಆದ್ಯತೆಯನ್ನು ನೀಡುತ್ತದೆ. ಮಗು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಪಡೆದಿದೆ ಎಂದು ನ್ಯಾಯಾಲಯ ಭಾವಿಸಿದರೆ ಆಗ ನ್ಯಾಯಾಲಯ ಮಗುವಿನ ಆಸೆಗಳಿಗೆ ಮೊದಲ ಆದ್ಯತೆಯನ್ನು ನೀಡುತ್ತದೆ. ಅನುಮತಿ ನೀಡುವುದಕ್ಕೆ ಮುಂಚೆ, ದತ್ತು ನೀಡುತ್ತಿರುವ ಪೋಷಕ ದತ್ತಕಕ್ಕೆ ಪ್ರತಿಯಾಗಿ ಯಾವುದೇ ಪ್ರತಿಫಲವನ್ನೂ ಪಡೆದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತದೆ.

ದಂಪತಿ ಈಗಾಗಲೇ ಒಂದು ಗಂಡು ಮಗುವನ್ನು ದತ್ತು ಪಡೆದಿದ್ದರೆ ಮತ್ತೊಂದು ಗಂಡು ಮಗುವನ್ನು ಅಥವಾ ಒಂದು ಹೆಣ್ಣು ಮಗುವನ್ನು ದತ್ತು ಪಡೆದಿದ್ದರೆ ಮತ್ತೊಂದು ಹೆಣ್ಣು ಮಗುವನ್ನು ದತ್ತು ಪಡೆಯಲು ಬರುವುದಿಲ್ಲ. ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗುವನ್ನು, ಒಟ್ಟಿನಲ್ಲಿ ಇಬ್ಬರು ಮಕ್ಕಳನ್ನು ಮಾತ್ರ ದತ್ತು ಪಡೆಯಬಹುದು.

ಹಿಂದೂ ಮಹಿಳೆ ಒಂದು ಗಂಡು ಮಗುವನ್ನು ದತ್ತು ಪಡೆಯುತ್ತಿದ್ದಲ್ಲಿ, ಅವಳಿಗೆ ಮತ್ತು ಮಗುವಿಗೆ 21 ವರ್ಷಗಳ ಅಂತರವಿರಬೇಕು. ಹಾಗೆಯೇ ಹೆಣ್ಣು ಮಗುವನ್ನು ದತ್ತು ಪಡೆಯುವ ಪುರುಷ ಮತ್ತು ಮಗುವಿನ ನಡುವೆ 21 ವರ್ಷಗಳ ಅಂತರವಿರಬೇಕು.

ದತ್ತು ಮಗು ತಂದೆತಾಯಿಯರ ಸಹಜ ಮಗುವಿಗೆ ಇದ್ದಿರಬಹುದಾದ ಎಲ್ಲ ಹಕ್ಕುಗಳನ್ನೂ ಹೊಂದಿರುತ್ತದೆ. ಅದು ದತ್ತು ತಂದೆ ತಾಯಿಯರ ವಿಧ್ಯುಕ್ತ ವಾರಸುದಾರನಾಗುವುದರಿಂದ ಆಸ್ತಿ ವಾರಸುದಾರಿಕೆಯ ಹಕ್ಕನ್ನೂ ಮಗು ಪಡೆಯುತ್ತದೆ. ತಂದೆತಾಯಿಯರು ಮಗುವನ್ನು ದತ್ತು ತೆಗೆದುಕೊಂಡ ಮಾತ್ರಕ್ಕೆ ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಇತರರಿಗೆ ವರ್ಗಾವಣೆ ಮಾಡುವ ಹಕ್ಕನ್ನಾಗಲೀ ಅಥವಾ ಮರಣಶಾಸನ ಬರೆಯುವ ಮೂಲಕ ಆಸ್ತಿಯನ್ನು ಇತರ ವ್ಯಕ್ತಿಗೆ ನೀಡುವ ಹಕ್ಕನ್ನಾಗಲೀ ಕಳೆದುಕೊಳ್ಳುವುದಿಲ್ಲ.

ಮಗುವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಂದ ದತ್ತು ನೀಡುವುದು ಅಥವಾ ದತ್ತು ನೀಡಲು ಹಣ ಪಡೆಯುವುದು ಕಾನೂನು ರೀತ್ಯಾ ಅಪರಾಧ ಮತ್ತು ಶಿಕ್ಷಾರ್ಹ. ಹಣ ಪಡೆಯುವ ಹಾಗೂ ಹಣ ನೀಡುವ ವ್ಯಕ್ತಿಗಳಿಬ್ಬರನ್ನೂ ಆರು ತಿಂಗಳ ಕಾರಾವಾಸ ಮತ್ತು ಜುಲ್ಮಾನೆಯಿಂದ ಶಿಕ್ಷಿಸಬಹುದಾಗಿರುತ್ತದೆ.

ದತ್ತು ಮಗು ತನ್ನ ದತ್ತು ತಂದೆತಾಯಿಗಳ ಸಹಜ ಮಗುವಿನ ಎಲ್ಲ ಹಕ್ಕುಗಳನ್ನೂ ಪಡೆಯುವುದರಿಂದ ತನ್ನ ಸಹಜ ತಂದೆತಾಯಿಯ ಮನೆಯಲ್ಲಿ ತನಗಿದ್ದ ಎಲ್ಲ ಹಕ್ಕುಗಳನ್ನೂ ಕಳೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.