ADVERTISEMENT

ಮದುವೆ ವ್ಯವಹಾರವೋ, ಸಂಬಂಧವೋ?

ಜ್ಯೋತಿ ಎಸ್‌.ಹೆಬ್ಬಾರ್‌
Published 20 ಮಾರ್ಚ್ 2015, 19:30 IST
Last Updated 20 ಮಾರ್ಚ್ 2015, 19:30 IST

‘ನಿಶ್ಚಿತಾರ್ಥದ ತಯಾರಿ ಭರ್ಜರಿಯಾಗೇ ನಡೆದಿತ್ತು. ಆದರೆ ಹುಡುಗನ  ಚಿಕ್ಕಪ್ಪ ತೀರಿಹೋದದ್ದರಿಂದ ನಿಶ್ಚಿತಾರ್ಥ ಮುಂದೂಡಲಾಯ್ತು. ಇನ್ನೊಮ್ಮೆ ನಿಶ್ಚಿತಾರ್ಥಕ್ಕೆ ಮುಹೂರ್ತ ನಿಗದಿಪಡಿಸಿದಾಗ ನಮ್ಮ ಮಾವನಿಗೆ ತುಂಬಾ ಆರೋಗ್ಯ ಕೆಟ್ಟಿದಿಯೆಂದು ಸುದ್ದಿ ಬಂತು. ಅಕ್ಕನ ತಮ್ಮನಾಗಿ ಆಕೆಗೆ ಸಾಂತ್ವನ ನೀಡಲಾದರೂ ಅಲ್ಲಿ ನಮ್ಮ ತಂದೆಯ ಅವಶ್ಯಕತೆಯಿತ್ತು. ಅಲ್ಲದೆ ನಮ್ಮದೇ ಕುಟುಂಬದ ಒಂದು ಜೀವ ಮರಣಶಯ್ಯೆಯಲ್ಲಿರುವಾಗ ನಾವಾದರೂ ಹೇಗೆ ನಿಶ್ಚಿತಾರ್ಥ ಮಾಡಿ ಸಂಭ್ರಮಿಸಲು ಸಾಧ್ಯ?

ಘಟನೆ ನಡೆದಿದ್ದು ನನ್ನ ಅಕ್ಕನ ಬಾಳಿನಲ್ಲಿ. ಎರಡು ಕುಟುಂಬಗಳು ಕೂಡಿ, ನಿರ್ಧರಿಸಿಯೇ ಮದುವೆ ತಯಾರಿ ನಡೆಸಿದ್ದೆವು. ಅದಕ್ಕೆ ಪೂರ್ವಭಾವಿಯಾಗಿ ನಿಶ್ಚಿತಾರ್ಥದ ತಯಾರಿ ಭರ್ಜರಿಯಾಗೇ ನಡೆದಿತ್ತು. ಆದರೆ ಹುಡುಗನ  ಚಿಕ್ಕಪ್ಪ ತೀರಿಹೋದದ್ದರಿಂದ ನಿಶ್ಚಿತಾರ್ಥ ಮುಂದೂಡಲಾಯ್ತು. ಇನ್ನೊಮ್ಮೆ ನಿಶ್ಚಿತಾರ್ಥಕ್ಕೆ ಮುಹೂರ್ತ ನಿಗದಿಪಡಿಸಿದಾಗ ನಮ್ಮ ಮಾವನಿಗೆ ತುಂಬಾ ಆರೋಗ್ಯ ಕೆಟ್ಟಿದಿಯೆಂದು ಸುದ್ದಿ ಬಂತು. ಅಕ್ಕನ ತಮ್ಮನಾಗಿ ಆಕೆಗೆ ಸಾಂತ್ವನ ನೀಡಲಾದರೂ ಅಲ್ಲಿ ನಮ್ಮ ತಂದೆಯ ಅವಶ್ಯಕತೆಯಿತ್ತು. ಅಲ್ಲದೆ ನಮ್ಮದೇ ಕುಟುಂಬದ ಒಂದು ಜೀವ ಮರಣಶಯ್ಯೆಯಲ್ಲಿರುವಾಗ ನಾವಾದರೂ ಹೇಗೆ ನಿಶ್ಚಿತಾರ್ಥ ಮಾಡಿ ಸಂಭ್ರಮಿಸಲು ಸಾಧ್ಯ? ಆದ್ದರಿಂದ ತಂದೆ ಅವರು ಹುಡುಗನ ಕಡೆಯವರಲ್ಲಿ ನಿಶ್ಚಿತಾರ್ಥವನ್ನು ಮುಂದೂಡೋಣವೆಂದಾಗ, ಹುಡುಗನ ಅಕ್ಕ ನಮ್ಮನ್ನು ಬಾಯಿಗೆ ಬಂದಂತೆ ಬಯ್ದು ,‘ಈಸಂಬಂಧವೇ ಬೇಡ. ನಿಮ್ಮಂತ ಚೀಪ್‌ ಜನರೊಂದಿಗೆ ವ್ಯವಹರಿಸಿದ್ದು ನಮ್ಮ ತಪ್ಪು’ ಎಂದೆಲ್ಲಾ ಕೂಗಾಡಿ ಫೋನ್ ಕುಕ್ಕಿದ್ದರು. ಆದರೆ ಊರಲ್ಲೆಲ್ಲಾ ಮದುವೆಯ ಸುದ್ದಿ ಹಬ್ಬಿಯಾಗಿತ್ತು. ಅಷ್ಟೇ ಅಲ್ಲ, ಮದುವೆ ಮುರಿದು ಬಿದ್ದದ್ದೂ ಗೊತ್ತಿತ್ತು. ಇಷ್ಟಾದರೂ ಜನರಿಗೆ ತೃಪ್ತಿ ಇರಬೇಕಲ್ಲ? ನಾವು ಮನೆಯಿಂದ ಹೊರಗೆ ಹೊರಟರೆ ಸಾಕು, ಗುಸು-ಗುಸು ಮಾತಾಡುವ ಜನರೊಂದೆಡೆಯಾದರೆ, ಖುದ್ದು ನಮ್ಮಲ್ಲೇ ಪ್ರಶ್ನೆ ಕೇಳಿ ನಮ್ಮಿಂದಲೇ ಅನುಮಾನ ಪರಿಹರಿಸಿಕೊಳ್ಳುವವರು, ಪ್ರಶ್ನೆ ಕೇಳಿದಾಗ ನಮ್ಮ ಮುಖದಲ್ಲಿ ತೋರುತ್ತಿದ್ದ ಅವಮಾನ, ನಾಚಿಕೆ, ಕೀಳರಿಮೆಯನ್ನೆಲ್ಲಾ ನೋಡಿ ಮಜ ತೆಗೆದುಕೊಳ್ಳುತ್ತಿದ್ದವರು ಇನ್ನೊಂದೆಡೆ.

ಬಹುಶಃ ವರನ ಕಡೆಯವರು ಇದನ್ನು  ಒಂದು ‘ಸಂಬಂಧ’ ಎಂದು ಭಾವಿಸಿದ್ದರೆ ಹೀಗಾಗುತ್ತಿರಲಿಲ್ಲವೇನೋ? ಆದರೆ ಇದು ಅವರ ಪಾಲಿಗೆ ‘ವ್ಯವಹಾರ’ವಾಗಿತ್ತು. ಅಕ್ಕ ಜನರ ಚುಚ್ಚುಮಾತು, ಕೊಂಕು ನುಡಿಗಳಿಂದ ಬೇಸತ್ತು ಮನೆಯಿಂದ ಹೊರ ಬರುವುದನ್ನೇ ಬಿಟ್ಟಿದ್ದಳು; ಖಿನ್ನತೆ ಆವರಿಸಿತ್ತು. ಊರಿನಲ್ಲೇ ಸಂಬಂಧ ಬೆಳೆಸಿದ್ದರಿಂದ ಇಷ್ಟೊಂದು ಅವಮಾನ ಎದುರಿಸಬೇಕಾಯ್ತು. ಏನು ಮಾಡುವುದು? ಆದದ್ದಕ್ಕೆ ಚಿಂತಿಸಿ ಫಲವಿಲ್ಲ ಎಂದು ಮೊದಲು ಅಕ್ಕನಿಗೆ ಧೈರ್ಯ ತುಂಬಿ, ಮೊದಲಿನಂತೆ ಮಾಡಲು ಪ್ರಯತ್ನಿಸಿ ಸಫಲರಾಗುತ್ತಿದ್ದೇವೆ. ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದುಕೊಂಡು ಭವಿಷ್ಯದತ್ತ ಮುನ್ನುಗ್ಗುತ್ತಿದ್ದೇವೆ. ಅವನಲ್ಲದಿದ್ದರೇನು? ಈ ಪ್ರಪಂಚದಲ್ಲಿ ಬೇರೆ ಯಾವ ಹುಡುಗನೂ ಇಲ್ಲವೇ? ಎಂದು ಆಕೆಗೂ ಮನದಟ್ಟಾಗಿದೆ. ಸುಮ್ಮನೆ ಕೂತರೆ ಇಲ್ಲದ ಆಲೋಚನೆಗಳು ಬರುತ್ತವೆ ಎಂದು ಅಕ್ಕನನ್ನು ಹೊಲಿಗೆ, ಬ್ಯಾಂಕ್‌ ಪರೀಕ್ಷೆ ತರಬೇತಿಗೆ ಸೇರಿಸಿದ್ದಾಯಿತು. ಈಗ ಆಕೆಗೂ ಗೊತ್ತಾಗಿದೆ; ಜೀವನ ಎಂದರೆ ಇದೆಲ್ಲಾ ಮಾಮೂಲಿ ಎಂದು. ಆಕೆಯ ಕಣ್ಣಲ್ಲಿನ ಆತ್ಮವಿಶ್ವಾಸದ ಬೆಳಕನ್ನು ಕಂಡಾಗ ನಮಗೂ ಸಂತೋಷವಾಗುತ್ತದೆ. ಈಗ ಬೇರೆ  ಹುಡುಗನೊಂದಿಗೆ  ಮದುವೆ  ತಯಾರಿ ಜೋರಾಗಿ ನಡೆಯುತ್ತಿದೆ. ಗೆದ್ದೆತ್ತಿನ ಬಾಲ ಹಿಡಿಯುವವರು, ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲೆಸೆಯುವವರು ಎಲ್ಲಾ ಕಡೆ ಇರುತ್ತಾರೆ. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಸ್ಥಿತಪ್ರಜ್ಞರಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT