ADVERTISEMENT

ಮಹಿಳೆಯರಿಗೆ ಇರುವ ಹಕ್ಕುಗಳು-2

ಡಾ.ಗೀತಾ ಕೃಷ್ಣಮೂರ್ತಿ ನ್ಯಾಯವಾದಿ
Published 4 ಸೆಪ್ಟೆಂಬರ್ 2015, 19:41 IST
Last Updated 4 ಸೆಪ್ಟೆಂಬರ್ 2015, 19:41 IST

ಅಪರಾಧಕ್ಕೆ ಒಳಗಾದಾಗ ದೂರು ಕೊಡುವುದಕ್ಕಾಗಿ ಅಥವಾ ಒಂದು ಅಪರಾಧದ ಸಂಬಂಧದಲ್ಲಿ ವಿಚಾರಣೆಗಾಗಿ ಪೊಲೀಸು ಠಾಣೆಗೆ ಹೋಗಬೇಕಾಗಿ ಬಂದರೆ ಆ ಬಗ್ಗೆ ನಿಮಗಿರುವ ಹಕ್ಕುಗಳನ್ನು ತಿಳಿದಿರುವುದು ಒಳಿತು.

ವೈದ್ಯರು ನಿರ್ಣಾಯಕರಲ್ಲ-ದಂಡ ಪ್ರಕ್ರಿಯಾ ಸಂಹಿತೆಯ 164ನೇ ಪ್ರಕರಣದ ಪ್ರಕಾರ ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಆಕೆ ಲೈಂಗಿಕ ಕ್ರಿಯೆಗೆ ಒಳಗಾಗಿದ್ದಾಳೆಯೇ ಇಲ್ಲವೇ ಎಂಬುದಷ್ಟನ್ನು ಮಾತ್ರ ವೈದ್ಯರು ವರದಿ ಮಾಡುತ್ತಾರೆ.

ವೈದ್ಯಕೀಯ ವರದಿ ಮಹಿಳೆಯ ಮೇಲೆ ಅತ್ಯಾಚಾರವಾಗಿದೆಯೇ ಇಲ್ಲವೇ ಎಂಬುದಕ್ಕೆ ರುಜುವಾತಾಗುತ್ತದೆ. ವೈದ್ಯಕೀಯ ವರದಿಯ ಪ್ರತಿಯನ್ನು ಪಡೆಯಲು ಅತ್ಯಾಚಾರ ಸಂತ್ರಸ್ಥೆಗೆ ಹಕ್ಕಿದೆ. ಅತ್ಯಾಚಾರ ನಡೆಯಿತೇ ಇಲ್ಲವೆ ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯ.

ದೂರು ಸಮಿತಿಯ ರಚನೆ ಕಡ್ಡಾಯ-ಎಲ್ಲ ಸರ್ಕಾರಿ, ಸರ್ಕಾರೇತರ ಉದ್ಯೋಗ ಸಂಸ್ಥೆಗಳಲ್ಲೂ ಮಹಿಳೆಯರಿಗೆ ಲೈಂಗಿಕ ಕಿರುಕುಳದಿಂದ ರಕ್ಷಣೆ ನೀಡುವುದಕ್ಕಾಗಿ ಒಂದು ದೂರು ಸಮಿತಿಯನ್ನು ರಚಿಸುವುದು ಕಡ್ಡಾಯ. ಈ ಸಮಿತಿಗೆ ಮಹಿಳೆಯೇ ಅಧ್ಯಕ್ಷಳಾಗಿರಬೇಕು ಮತ್ತು ಅರ್ಧಕ್ಕಿಂತ ಹೆಚ್ಚು ಸದಸ್ಯರು ಮಹಿಳೆಯರಾಗಿರಬೇಕು ಮತ್ತು ಒಬ್ಬರು ಮಹಿಳಾಪರ ಸಂಘಟನೆಗೆ ಸೇರಿದವರಾಗಿರಬೇಕು.

ವಿಚಾರಣೆಗಾಗಿ ಪೊಲೀಸು ಠಾಣೆಗೆ ಬರಲೇಬೇಕೆಂದು ಒತ್ತಾಯಿಸಲಾಗದು-ದಂಡ ಪ್ರಕ್ರಿಯಾ ಸಂಹಿತೆಯ 160ನೇ ಪ್ರಕರಣದ ಅಡಿಯಲ್ಲಿ ಮಹಿಳೆಯನ್ನು ವಿಚಾರಣೆಗಾಗಿ ಪೊಲೀಸು ಠಾಣೆಗೆ ಕರೆಸಿಕೊಳ್ಳುವಂತಿಲ್ಲ. ಪೊಲೀಸರು ಮಹಿಳೆಯ ವಿಚಾರಣೆಯನ್ನು ಆಕೆಯ ಮನೆಯಲ್ಲಿಯೇ ಆಕೆಯ ಕುಟುಂಬದವರ ಅಥವಾ ಸ್ನೇಹಿತರ ಎದುರಿನಲ್ಲಿ ವಿಚಾರಣೆ ನಡೆಸಬಹುದು. ವಿಚಾರಣೆಗಾಗಿ ಪೊಲೀಸು ಠಾಣೆಗೇ ಬರಬೇಕೆಂದು ಪೊಲೀಸರು ಒತ್ತಾಯಿಸಿದರೆ ಅಥವಾ ಕಿರುಕುಳ ಕೊಟ್ಟರೆ ನಿಮಗಿರುವ ಈ ಹಕ್ಕನ್ನು ನೀವು ಚಲಾಯಿಸಬಹುದು.

ರಾತ್ರಿ ದಸ್ತಗಿರಿ ಮಾಡಲಾಗದು- ಮಹಿಳೆಯನ್ನು ಸೂರ್ಯೋದಯಕ್ಕೆ ಮುಂಚೆ ಮತ್ತು ಸೂರ್ಯಾಸ್ತದ ನಂತರ ದಸ್ತಗಿರಿ ಮಾಡುವಂತಿಲ್ಲ. ಮಹಿಳಾ ಪೊಲೀಸು ಜೊತೆಗಿದ್ದರೂ ರಾತ್ರಿ ವೇಳೆಯಲ್ಲಿ ಮಹಿಳೆಯನ್ನು ದಸ್ತಗಿರಿ ಮಾಡುವಂತಿಲ್ಲ. ಮಹಿಳೆ ಅತ್ಯಂತ ಘೋರವಾದ ಅಪರಾಧವೆಸಗಿದ್ದು ಆಕೆಯನ್ನು ರಾತ್ರಿಯಾಗಿದ್ದರೂ ಕೂಡಲೇ ದಸ್ತಗಿರಿ ಮಾಡುವುದು ಅನಿವಾರ್ಯ ಎಂಬಂಥ ಸಂದರ್ಭದಲ್ಲಿ ರಾತ್ರಿಯಲ್ಲಿ ದಸ್ತಗಿರಿ ಮಾಡುವುದು ಏಕೆ ಅಗತ್ಯ ಎಂಬುದನ್ನು ವಿವರಿಸಿ ಮ್ಯಾಜಿಸ್ಟ್ರೇಟರಿಂದ ಲಿಖಿತ ಅನುಮತಿ ಪಡೆದು ನಂತರವಷ್ಟೇ ದಸ್ತಗಿರಿ ಮಾಡಬಹುದು.

ಒಬ್ಬರು ಮಹಿಳಾ ಪೊಲೀಸು ಅಧಿಕಾರಿಯ ಉಪಸ್ಥಿತಿ- ಒಬ್ಬರು ಮಹಿಳಾ ಪೊಲೀಸು ಅಧಿಕಾರಿಯ ಉಪಸ್ಥಿತಿಯಲ್ಲಿ ಮಾತ್ರ ಮತ್ತು ಮಹಿಳೆಯ ಗೌರವಕ್ಕೆ ಕುಂದುಂಟಾಗದ ರೀತಿಯಲ್ಲಿ ಮಾತ್ರವೇ ಒಬ್ಬ ಮಹಿಳೆಯನ್ನು ದಸ್ತಗಿರಿ ಮಾಡಬಹುದು.

ಮಹಿಳೆಯ ದೇಹದ ಶೋಧನೆ- ಮಹಿಳೆಯ ದೇಹದ ಶೋಧನೆ ನಡೆಸಬೇಕಾದ ಸಂದರ್ಭದಲ್ಲಿ ಸಭ್ಯತೆಯನ್ನು ಮೀರದ ರೀತಿಯಲ್ಲಿ ಮತ್ತೊಬ್ಬ ಮಹಿಳೆಯೇ ನಡೆಸಬೇಕು.

ಲಾಕ್‌ಅಪ್- ದಸ್ತಗಿರಿಯಾದ ಮಹಿಳೆಯನ್ನು ಮಹಿಳೆಯರಿಗಾಗಿ ಇರುವ ಲಾಕ್‌ಅಪ್‌ನಲ್ಲಿ ಮಾತ್ರವೇ ಇರಿಸತಕ್ಕದ್ದು. ಅಂಥ ಲಾಕ್‌ಅಪ್ ಲಭ್ಯವಿಲ್ಲದಿದ್ದರೆ, ಆಕೆಯನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸುವ ವ್ಯವಸ್ಥೆಯನ್ನು ಮಾಡಬೇಕು.

ಗರ್ಭಿಣಿ ಮಹಿಳೆ-ದಸ್ತಗಿರಿಯಾದ ಮಹಿಳೆ ಗರ್ಭಿಣಿಯಾಗಿದ್ದರೆ, ಆಕೆಗೆ ಯಾವುವೇ ದೈಹಿಕ ನಿರ್ಬಂಧಗಳನ್ನು ಹೇರಬಾರದು ಮತ್ತು ಭ್ರೂಣದ ಸುರಕ್ಷೆಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಬೇಕು.

ಜಾಮೀನು-ಮರಣ ದಂಡನೆಯನ್ನು ವಿಧಿಸಬಹುದಾದಂಥ ಮತ್ತು ಜಾಮೀನೀಯವಲ್ಲದ ಗುರುತರವಾದ ಅಪರಾಧಕ್ಕಾಗಿ ಮಹಿಳೆಯನ್ನು ದಸ್ತಗಿರಿ ಮಾಡಿದ್ದರೆ ಆಗ,    ಜಾಮೀನು ನೀಡುವ ವಿವೇಚನೆಯನ್ನು ನ್ಯಾಯಾಲಯ ಹೊಂದಿರುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.