ADVERTISEMENT

ರಶೀದಾ–ಚಂಪಾ

ಭೋಪಾಲ್‌ ದುರಂತದ ‘ಚಿಂಗಾರಿ’

ಅನಿತಾ ಎಚ್.
Published 27 ಫೆಬ್ರುವರಿ 2015, 19:30 IST
Last Updated 27 ಫೆಬ್ರುವರಿ 2015, 19:30 IST

ಡಿಸೆಂಬರ್‌ 2ರ 1984, ಭೋಪಾಲ್‌ ಜನರ ಪಾಲಿಗೆ ದುರಂತದ ದಿನ. ಅಮೆರಿಕ ಮೂಲದ ಯೂನಿಯನ್‌ ಕಾರ್ಬೈಡ್‌ ಇಂಡಿಯಾ ಲಿಮಿಟೆಡ್‌ (ಯುಸಿಐಎಲ್‌) ರಾಸಾಯನಿಕ ಕಾರ್ಖಾನೆಯಲ್ಲಿ ಮೀಥೈಲ್‌ ಐಸೋಸೈನೇಟ್‌ ಸೇರಿದಂತೆ ಇತರೆ ವಿಷಾನಿಲ ಸುತ್ತಮುತ್ತಲ ಪ್ರದೇಶಗಳಿಗೆ ವ್ಯಾಪಕವಾಗಿ ಹರಡುತ್ತಿದ್ದಂತೆ ಜನರ ಆಕ್ರಂದನ ಮುಗಿಲು ಮುಟ್ಟಿತ್ತು. 

ಅಂದು ಓಡಿ ಪ್ರಾಣವನ್ನು ಉಳಿಸಿಕೊಂಡಿದ್ದ ರಶೀದಾ ಬೀ ಹಾಗೂ ಚಂಪಾದೇವಿ ಶುಕ್ಲಾ ಇಬ್ಬರಿಗೂ ಈಗ 60–63ರ ಆಸುಪಾಸು. ದುರಂತದಲ್ಲಿ ಮಕ್ಕಳು, ಗಂಡನನ್ನು ಕಳೆದುಕೊಂಡವರು. ‘ಭೋಪಾಲ್‌ ವಿಷಾನಿಲ ಪೀಡಿತ ಮಹಿಳಾ ಸ್ಟೇಷನರಿ ಕರ್ಮಚಾರಿ’ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಸಂತ್ರಸ್ತರ ಪುನರ್ವಸತಿ, ಚಿಕಿತ್ಸೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಪರಿಸರ ರಕ್ಷಣೆ ಸಂಬಂಧಿ ಚಟುವಟಿಕೆಗಳಿಗೆ ನೀಡಲಾಗುವ ಅಮೆರಿಕದ ‘ದಿ ಗೋಲ್ಡ್‌ಮ್ಯಾನ್‌ ಎನ್‌ವಿರಾನ್ಮೆಂಟಲ್‌’ ಪ್ರಶಸ್ತಿ ಲಭಿಸಿದೆ.

ನಿತ್ಯ ಅಗ್ನಿಪರೀಕ್ಷೆಯ ಬದುಕು!
ರಶೀದಾ ಬೀ ಮಧ್ಯಪ್ರದೇಶದ ಹೊಶಾನ್ಗಾಬಾದ್‌ ಜಿಲ್ಲೆಯ ಸೋಹಾಗ್‌ಪುರ ತೆಹಸಿಲ್‌ನ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದವರು. ‘ಬುರ್ಖಾ’ ಪದ್ಧತಿಯಿಂದಾಗಿ ಶಾಲೆಯ ಮೆಟ್ಟಿಲು ಹತ್ತಲಿಲ್ಲ. ಅನಾರೋಗ್ಯದಿಂದಾಗಿ ಅವರ ತಂದೆ ವ್ಯಾಪಾರ ನಿಲ್ಲಿಸಿದರು.   ಕುಟುಂಬ ನಿರ್ವಹಣೆಗಾಗಿ ಮನೆಯಲ್ಲಿಯೇ ಊದುಬತ್ತಿ ಹೊಸೆಯಲು ಆರಂಭಿಸಿದರು. ಹದಿಮೂರನೇ ವಯಸ್ಸಿನಲ್ಲಿಯೇ ಮದುವೆ. ಬಡತನ ಅಲ್ಲಿಯೂ ಬೆನ್ನಟ್ಟಿತ್ತು. ಗಂಡ ದರ್ಜಿ ಕೆಲಸ ಮಾಡುತ್ತಿದ್ದರೂ ದುಡಿಮೆ ಮಾತ್ರ ಇಲ್ಲ. ತನ್ನ ಪತಿ ಅಲ್ಪ ಪ್ರಮಾಣದ ಮಾನಸಿಕ ಅಸ್ವಸ್ಥ ಎಂಬ ಕಾರಣಕ್ಕೆ ಮನೆಯವರಿಂದ ಸಿಗುತ್ತಿದ್ದ ಗೌರವವೂ ಅಷ್ಟಕ್ಕಷ್ಟೆ. ಸಾವಿರ ಊದುಬತ್ತಿ ಹೊಸೆದರೇನೇ ರಶೀದಾಗೆ ಊಟ.

‘ಒಂದು ದಿನ ಇದ್ದಕ್ಕಿದ್ದಂತೆ ಜನ ಚೀರುತ್ತಾ ಓಡುತ್ತಿದ್ದರು. ಹಲವರಿಗೆ ಓಡುತ್ತಿರುವ ಕಾರಣವೂ ತಿಳಿದಿರಲಿಲ್ಲ. ಆದರೆ ಕಣ್ಣು ತೆರೆಯಲಾರದಷ್ಟು ಉರಿ. ಏಕೆ ಹೀಗಾಗುತ್ತಿದೆ ಎಂಬ ಅರಿವೂ ಇಲ್ಲ. ಎಲ್ಲರಂತೆ ಕುರುಡಾಗಿ ಓಡಿ ಪುಲ್‌ ಬೋಗ್ದಾ ಪ್ರದೇಶ ತಲುಪಿದೆವು.  ಯಾರೋ ನಮ್ಮನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದರು. ಸುಮಾರು ದಿನಗಳ ನಂತರ ಯೂನಿಯನ್‌ ಕಾರ್ಬೈಡ್‌ ಕಂಪೆನಿಯಿಂದ ಆಗುತ್ತಿದ್ದ ಅನಿಲ ಸೋರಿಕೆ ನಿಂತಿದೆಯಂತೆ ಎಂಬ ಮಾತು ಕೇಳಿದಾಗಲೇ ಕಾರಣ ತಿಳಿಯಿತು. ಅಲ್ಲಿಯವರೆಗೆ ಕಂಪೆನಿಯ ಹೆಸರನ್ನೇ ಕೇಳಿರಲಿಲ್ಲ’ ಎಂದು ರಶೀದಾ ಬೀ ಆ ದಿನಗಳನ್ನು ನೆನೆಯುತ್ತಾರೆ.

ಉಸಿರಾಟದ ತೊಂದರೆಯಿಂದಾಗಿ ತಂದೆ ಮೃತಪಟ್ಟರೆ, ಪತಿ ಉಸಿರಾಟ ತೊಂದರೆಯಿಂದಾಗಿ ಮೃತಪಟ್ಟರು. ಕೆಲವು ದಿನಗಳ ನಂತರ ಸರ್ಕಾರದಿಂದ ಆರಂಭಿಸಿದ್ದ ‘ಸ್ಟೇಷನರಿ’ ಕಾರ್ಖಾನೆಯಲ್ಲಿ ರಶೀದಾ ಕೆಲಸಕ್ಕೆ ಸೇರಿದರು. ಆಗಲೂ ಹೊಟ್ಟೆ ತುಂಬ ಊಟ ಹೊಂದಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದರೂ, ಸಮುದಾಯ ಅಭಿವೃದ್ಧಿ ಕೇಂದ್ರದಲ್ಲಿ ವಿತರಿಸುವ ಹಾಲು ಮತ್ತು ಬ್ರೆಡ್‌ ತಿನ್ನುತ್ತಲೇ ಹೋರಾಟದ ಮುಂದಾಳತ್ವವಹಿಸುವ ಗಟ್ಟಿತನ ರೂಢಿಸಿಕೊಂಡರು.

ಹೋರಾಟವೇ ಸಾಂತ್ವನ!
ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಜನಿಸಿದ ಚಂಪಾದೇವಿ ಶುಕ್ಲಾ ಅವರು ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಹದಿಮೂರನೇ ವಯಸ್ಸಿಗೇ ವಿವಾಹವಾಯಿತು. ಮನೆಯಲ್ಲಿಯೇ ಹೊಲಿಗೆ ಕೆಲಸ ಮಾಡಿಕೊಂಡು ದಿನಗೂಲಿ ಪತಿಗೆ ಹೆಗಲು ನೀಡಿದ್ದರು.

ಪತಿ ಕೃಷಿ ಇಲಾಖೆಗೆ ನೇಮಕವಾದ ಬಳಿಕ ಭೋಪಾಲ್‌ನಲ್ಲಿ ನೆಲೆಸಿದ್ದರು. ಅಕ್ಕಪಕ್ಕದವರೊಂದಿಗೆ ಸುತ್ತಾಟಕ್ಕೆ ತೆರಳಿದ್ದಾಗ ಯೂನಿಯನ್‌ ಕಾರ್ಬೈಡ್‌ ಕಂಪೆನಿ ಕಣ್ಣಿಗೆ ಬಿದ್ದಿತ್ತು. ತಾವಿದ್ದ ಪ್ರದೇಶದಲ್ಲಿ ಕುಡಿಯುವ ನೀರಿಗೂ ಕಡುಕಷ್ಟ. ಕಂಪೆನಿಯ ಹಿಂದೆ ಒಂದು ಬಾವಿ ಇದೆಯಂತೆ. ಅಲ್ಲಿ ಸಾಕಷ್ಟು  ನೀರು ಸಿಗುತ್ತದಂತೆ ಎಂದು ಯಾರೋ ಹೇಳಿದ್ದರಿಂದ ನಿತ್ಯವೂ ಬಟ್ಟೆಗಳನ್ನು ಸ್ವಚ್ಛ ಮಾಡಲು ಅಲ್ಲಿಗೆ ತೆರಳುತ್ತಿದ್ದರು. ಆ ವೇಳೆ ಕೈಗಳು, ಬಟ್ಟೆಗಳು ಸುಟ್ಟ ಅನುಭವ ಅವರಿಗಾಗಿತ್ತು.

ಒಂದು ದಿನ ಇದ್ದಕ್ಕಿದ್ದಂತೆ ಜನರು ಕೆಮ್ಮುತ್ತಾ, ಚೀರುತ್ತಾ ಓಡುತ್ತಿದ್ದರು. ಶುಕ್ಲಾ ಅವರು ಬಾಗಿಲು ತೆರೆಯುತ್ತಿದ್ದಂತೆ ಕೂಡಲೇ ಕೆಟ್ಟ ಗಾಳಿ ಮನೆಯನ್ನೆಲ್ಲ ಆವರಿಸಿತು. ಕಣ್ಣುಗಳನ್ನು ಬಿಡಲಾರದಷ್ಟು ಉರಿಯ ಅನುಭವ. ಕುಟುಂಬ ಸಮೇತರಾಗಿ ಓಡಿದರಾದರೂ ಅಪಾಯದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಅವರ ಮೂರು ಗಂಡು ಮಕ್ಕಳಲ್ಲಿ ಒಬ್ಬ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಮೃತಪಟ್ಟರೆ, ಮತ್ತೊಬ್ಬ ಆತ್ಮಹತ್ಯೆ ಮಾಡಿಕೊಂಡ, ಇನ್ನೊಬ್ಬ ಮಗ ಅಪಘಾತದಲ್ಲಿ ಮೃತಪಟ್ಟ. ಮಗಳು ಇಂದಿಗೂ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾಳೆ.

ಚಂಪಾದೇವಿ ಶುಕ್ಲಾ ಅವರ ಪತಿ ಮೂತ್ರಕೋಶ ಕ್ಯಾನ್ಸರ್‌ಗೆ ಬಲಿಯಾದರು. ಮಕ್ಕಳು, ಪತಿಯನ್ನು ಉಳಿಸಲು ಶುಕ್ಲಾ ಅವರು ನಡೆಸಿದ ಯತ್ನ ಫಲ ನೀಡಲಿಲ್ಲ. ನಂತರ ತಮ್ಮ ಮಿಕ್ಕ ದಿನಗಳನ್ನು ಸಂತ್ರಸ್ತರ ಪರವಾದ ಹೋರಾಟಕ್ಕೆ ಮೀಸಲಿರಿಸಿದ್ದಾರೆ.

ಸಂತ್ರಸ್ತರಿಗೆ ನೆರವು
ಸರ್ಕಾರ, ಸಂತ್ರಸ್ತರಿಗಾಗಿ ಪುನರ್‌ವಸತಿ ಯೋಜನೆ ಅಡಿ ನವೆಂಬರ್‌ 25, 1985ರಲ್ಲಿ ‘ಸ್ಟೇಷನರಿ’ ಕಾರ್ಖಾನೆ ಆರಂಭಿಸಿತು. ಲೇಖನ ಸಾಮಗ್ರಿಗಳನ್ನು ತಯಾರಿಸುತ್ತಿದ್ದ ಮಹಿಳೆಯರಿಗೆ ತಿಂಗಳಿಗೆ ಸಿಗುತ್ತಿದ್ದ ಸಂಬಳ ಕೇವಲ ₨ 150. ಅಲ್ಲಿಯೇ ಕೆಲಸಕ್ಕೆ ಸೇರಿದ್ದ ರಶೀದಾ ಬೀ ಹಾಗೂ ಚಂಪಾದೇವಿ ಶುಕ್ಲಾ ಅವರು 1986ರಲ್ಲಿ ‘ಭೋಪಾಲ್‌ ವಿಷಾನಿಲ ಪೀಡಿತ ಮಹಿಳಾ ಸ್ಟೇಷನರಿ ಕರ್ಮಚಾರಿ’ ಎಂಬ ಸಂಘಟನೆ ಹುಟ್ಟುಹಾಕಿ ವೇತನ ಹೆಚ್ಚಳ, ಕಾಯಂ ಉದ್ಯೋಗ ಮತ್ತು ಹೊಸ ಉದ್ಯೋಗಗಳ ಸೃಷ್ಟಿ,  ಮೂಲಸೌಕರ್ಯಗಳ ಬೇಡಿಕೆಗಳ ಈಡೇರಿಕೆಗೆ ಇಲ್ಲಿಯವರೆಗೆ ಹಲವಾರು ಹೋರಾಟಗಳನ್ನು ರೂಪಿಸಿದ್ದಾರೆ.

ಚಿಕಿತ್ಸೆ ನೆರವಿಗೆ ಚಿಂಗಾರಿ ಟ್ರಸ್ಟ್‌: ದುರಂತ ಸಂಭವಿಸಿದ ಎರಡೇ ವಾರಗಳಲ್ಲಿ ಸುಮಾರು 55 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡು, 8 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ವಿಷಾನಿಲ ಸೋರಿಕೆ ಸಂಬಂಧಿ ಕಾಯಿಲೆಗಳಿಂದ ಅಂದಿನಿಂದ ಇಲ್ಲಿವರೆಗೆ ಸುಮಾರು 8 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ 2006ರಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದೆ. ಇಂದಿಗೂ ನವಜಾತ ಶಿಶುವಿನಲ್ಲೂ ಅಂಗವೈಕಲ್ಯ ಸಾಮಾನ್ಯವಾಗಿದೆ.

ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಪರಿಸ್ಥಿತಿ ಸುಧಾರಿಸಲು ಮಾರ್ಚ್‌ 22, 2005ರಲ್ಲಿ ‘ಚಿಂಗಾರಿ ಟ್ರಸ್ಟ್‌’ ಸ್ಥಾಪಿಸಿದರು. ತಮ್ಮ ಹೋರಾಟದ ಚಟುವಟಿಕೆಗಳನ್ನು ಗುರುತಿಸಿ ನೀಡಲಾದ ‘ದಿ ಗೋಲ್ಡ್‌ಮ್ಯಾನ್‌ ಎನ್‌ವಿರಾನ್ಮೆಂಟಲ್‌’ ಪ್ರಶಸ್ತಿಯ 1.06 ಕೋಟಿ ರೂಪಾಯಿಗಳನ್ನೂ ಟ್ರಸ್ಟ್‌ಗೆ ಧಾರೆ ಎರೆದಿದ್ದಾರೆ.

ಪ್ರಮುಖ ಹೋರಾಟಗಳು
1986ರಲ್ಲಿ ರಾಜ್ಯ ಸಚಿವಾಲಯದ ಮುಂದೆ ಮೂರು ತಿಂಗಳು ಧರಣಿ ನಡೆಸಿದ್ದರು. 1987ರಲ್ಲಿ ಸರ್ಕಾರದ ಮುದ್ರಣಾಲಯಗಳಲ್ಲಿ ಮಹಿಳೆಯರ ನೇಮಕಕ್ಕೆ ಒತ್ತಾಯಿಸಿ ಧರಣಿ. 1989ರಲ್ಲಿ ನೂರು ಮಹಿಳೆಯರು ಮತ್ತು 25 ಮಕ್ಕಳು ಪ್ರಧಾನಿ ಅವರನ್ನು ಭೇಟಿ ಮಾಡಲು ಕೈಗೊಂಡಿದ್ದ ಕಾಲ್ನಡಿಗೆ ಜಾಥಾ.

2001ರಲ್ಲಿ ಆಸ್ಪತ್ರೆಗಳ  ಔಷಧ ದಾಸ್ತಾನಿನ ಮೇಲೆ ದಾಳಿ ನಡೆಸಿ, ರೋಗಿಗಳಿಗೆ ಸೂಕ್ತ ಔಷಧ ನೀಡದೆ ಸತಾಯಿಸುತ್ತಿದ್ದುದನ್ನು ಬಯಲಿಗೆಳೆದಿದ್ದರು.   ಯೂನಿಯನ್‌ ಕಾರ್ಬೈಡ್‌ ಕಂಪೆನಿಯನ್ನು ಖರೀದಿಸಿದ್ದ ಡವ್‌ ಕಂಪೆನಿಯ ಮುಂಬೈನ ಪ್ರಧಾನ ಕಚೇರಿ ಮುಂದೆ ಏಪ್ರಿಲ್‌ 5, 2002ರಲ್ಲಿ ‘ಝಾಡೂ ಮಾರೊ ಡವ್‌ ಕೊ’(ಡವ್‌ ಕಂಪೆನಿಗೆ ಪೊರಕೆಯಿಂದ ಹೊಡೆಯಿರಿ ಚಳವಳಿ ಹಮ್ಮಿಕೊಂಡಿದ್ದರು).

2003ರಲ್ಲಿ ದುರಂತದ 18ನೇ ವರ್ಷಾಚರಣೆ ಅಂಗವಾಗಿ ವಿಷಯುಕ್ತ ತ್ಯಾಜ್ಯವನ್ನು ಭೋಪಾಲ್‌ನಿಂದ ಡವ್‌ ಕಂಪೆನಿಯಿರುವ ದೇಶಗಳಿಗೆ ಸ್ಥಳಾಂತರಿಸಲು ಆಗ್ರಹಿಸಿದ್ದರು.

ಬೃಹತ್ ರ್‌್್ಯಾಲಿ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ (ಮಾ.8) ಅಂಗವಾಗಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನ ಸೆನೆಟ್‌ ಹಾಲ್‌ನಲ್ಲಿ ಮಾರ್ಚ್‌ 7ಕ್ಕೆ ವಿಚಾರ ಸಂಕಿರಣ, ಮಾರ್ಚ್ 8ಕ್ಕೆ ಫ್ರೀಡಂ ಪಾರ್ಕ್‌ನಿಂದ ಮಲ್ಲೇಶ್ವರದ ಚಂದ್ರಶೇಖರ ಆಜಾದ್‌ ಮೈದಾನದವರೆಗೆ ಬೃಹತ್ ರ್‌್್ಯಾಲಿ ಮತ್ತು ಬಹಿರಂಗ ಸಮಾವೇಶ ಆಯೋಜಿಸಿದ್ದು, ರಶೀದಾ ಬೀ ಮತ್ತು ಚಂಪಾದೇವಿ ಶುಕ್ಲಾ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.