ADVERTISEMENT

ರೈಲೆಂಬ ಬೋಧಿವೃಕ್ಷ!

ಸ್ಮಿತಾ ಅಮೃತರಾಜ್
Published 7 ಏಪ್ರಿಲ್ 2017, 19:30 IST
Last Updated 7 ಏಪ್ರಿಲ್ 2017, 19:30 IST
ರೈಲೆಂಬ ಬೋಧಿವೃಕ್ಷ!
ರೈಲೆಂಬ ಬೋಧಿವೃಕ್ಷ!   

ಮೊದಲ ಬಾರಿಗೆ ಮೊನ್ನೆ ಮೊನ್ನೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ‘ಇವಳ್ಯಾವ ಕಾಲದಲ್ಲಿದ್ದಾಳಪ್ಪ’ ಅಂತ ಅಚ್ಚರಿಯಾಗುತ್ತಿದೆಯಾ? ಸಹಜ ಬಿಡಿ. ಯಾಕೆಂದರೆ ನಾನೊಬ್ಬಳು ಗೃಹಿಣಿ. ಅದರಲ್ಲೂ ಹಳ್ಳಿಯಲ್ಲಿರುವ ಕೃಷಿಕ ಮಹಿಳೆ. ರೈಲು, ವಿಮಾನವನ್ನು ಚಿತ್ರದಲ್ಲಿ ಕಣ್ಣರಳಿಸಿ ನೋಡಿದ್ದು ಬಿಟ್ಟರೆ, ನಿಜವಾದ ರೈಲು ಹತ್ತಿದ್ದು ಮೊನ್ನೆಯೇ. ಇನ್ನು ನಮ್ಮ ವೃತ್ತಿಯೇ ಕೃಷಿ ಆಗಿರುವುದರಿಂದ, ರೈಲು ವಿಮಾನದ ಪ್ರಯಾಣಕ್ಕಾಗುವ ಪ್ರಸಂಗಗಳು, ಅನುಕೂಲತೆಗಳು, ಅವಕಾಶಗಳು ತೀರಾ ಕಡಿಮೆಯೇ.


ಹಾಗಾದರೆ, ಮತ್ಯಾಕೆ ಇವಳು ರೈಲು ಹತ್ತಿದಳು? ರೈಲು ಬಿಡುತ್ತಿಲ್ಲ ತಾನೇ ಅಂದುಕೊಳ್ಳಬೇಡಿ. ನಿಜಕ್ಕೂ ರೈಲಿನಲ್ಲೇ ಕೂತಿದ್ದೆ ಕಣ್ರಿ. ಅದರಲ್ಲೂ ಡ್ರೈವರ್‌ ಅನ್ನು ಕಾಣದೆ, ಸೀಟಿ ಊದುವ ಕಂಡಕ್ಟರ್‌ನ ಸದ್ದೇ ಇಲ್ಲದೆ ಅಷ್ಟು ದೂರದ ರಾಯಚೂರಿನವರೆಗೆ ಏನೂ ಅನಾಹುತಗಳಾಗದೆ ಹೋಗಿ ಬಂದೆ! ರೈಲು ಹತ್ತಿದ ಮೇಲೆಯೇ ನಾವು ಆಗಾಗ್ಗೆ ಬಳಸುವ ‘ರೈಲು ಬಿಡೋದು’ ಎನ್ನುವ ಗೇಲಿ ಮಾತಿನ ನಿಜವಾದ ಅರ್ಥ ಹೊಳೆದದ್ದು. ಅನುಭವಿಸದಿದ್ದರೆ ಯಾವ ಅರ್ಥವೂ ಸಹಜವಾಗಿ ಅರ್ಥವಾಗುವುದಿಲ್ಲ ಎಂಬುದು ನಿಜ ತಾನೇ? ಅದಿರಲಿ... ನಾನು ರೈಲು ಹತ್ತಿದಂತೂ ದೇವರಾಣೆಗೂ ನಿಜ.


ರೈಲಿನಲ್ಲಿ ಮೊದಲ ಬಾರಿಗೆ ಹೋಗ್ತಿರೋದು ಅಲ್ವಾ? ನನ್ನತ್ತೆ ತಿನ್ನಲು ಸಾಕಷ್ಟು ಕುರುಕುಲು ತಿಂಡಿಗಳನ್ನು, ರಾತ್ರಿ–ಮಧ್ಯಾಹ್ನಕ್ಕೆ ಆಗುವಷ್ಟು ಊಟವನ್ನು ಅಗತ್ಯಕ್ಕಿಂತ ಜಾಸ್ತಿಯೇ ಕಟ್ಟಿಕೊಟ್ಟಿದ್ದರು. ನಾನೂ ಅಷ್ಟೆ, ಅಲ್ಲಿ ಇಲ್ಲಿ ಅಂತ ಹೋಟೆಲಲ್ಲಿ ಊಟಕ್ಕೆ ಕೂತ್ರೆ ರೈಲು  ಹೋಗಿಯೇ ಬಿಟ್ರೆ ಗತಿ ಏನು ಅಂತ ಕಂಗಾಲಾಗಿ, ಎರಡು ದಿನಕ್ಕಾಗುವಷ್ಟು ಬುತ್ತಿಗಂಟು ಗಟ್ಟಿಯಾಗಿ ಕಟ್ಟಿಕೊಂಡಿದ್ದೆ. ನನ್ನ ಬುತ್ತಿಯ ಚೀಲವೇ ಒಂದು ಹೊರೆಯಾಗಿತ್ತು. ನೋಡಿದವರಿಗೆ ತಿನ್ನಲಿಕ್ಕಾಗಿಯೇ ಹೊರಟಂತಿತ್ತು ನನ್ನ ಅವಸ್ಥೆ.

ಕೂತಲ್ಲಿ ಎಲ್ಲೂ ಅಲ್ಲಾಡದೆ ಚಲಿಸುವ ರೈಲು ನೋಡುವಾಗ ನಿಜಕ್ಕೂ ನಾನು ಹತ್ತಿದಲ್ಲಿಯೇ ರೈಲು ಇದೆಯಾ ಅಥವಾ ಮುಂದೆ ಹೋಗುತ್ತಿದೆಯಾ ಅಂತ ಅನುಮಾನ ಬಂದದ್ದು ಸುಳ್ಳಲ್ಲ. ಅಕ್ಕಪಕ್ಕದವರೆಲ್ಲಾ ಆರಾಮವಾಗಿ ಕುಳಿತಿರುವಾಗ, ನನ್ನ ಸಂಶಯವನ್ನು ಅವರ ಮುಂದೆ ಹೇಳಿ ಪೆದ್ದು ಮೂಸೆಯಾಗುವುದು ಬೇಡ ಅಂತ ಸುಮ್ಮಗೆ ಹೊರಗೆ ನೋಡುತ್ತಾ ಕುಳಿತುಕೊಂಡೆ. ಬೇರೆ ಬೇರೆ ಸ್ಥಳಗಳು ಗೋಚರಿಸುವಾಗಲೇ ರೈಲು ಚಲಿಸುತ್ತಿದೆ ಅಂತ ಗೊತ್ತಾದದ್ದು. ಆದರೂ ಯಾಕೋ ರೈಲಿಗಿಂತ ನಮ್ಮೂರಿನ ‘ರಾಮ’ ಬಸ್ಸೇ ಸಕತ್ ಸ್ಪೀಡಾಗಿ ಹೋಗುತ್ತಿತ್ತೇನೋ ಅಂತ ಅನ್ನಿಸುತ್ತಿತ್ತು.

ರಾಮ ಬಸ್ಸು ಹೋಗುವಾಗ ಗಿಡ, ಮರ, ಕಟ್ಟಡ, ಮಹಲುಗಳೆಲ್ಲಾ ಹೆದರಿ ದಡಬಡನೇ ಹಿಂದಕ್ಕೆ ಓಡುತ್ತಿದ್ದವು. ಇದನ್ನೆಲ್ಲಾ ನೋಡಿ ಡ್ರೈವರ್‌ಗೆ ಹುಕಿ ಬಂತೆಂದರೆ, ಗುಂಡಿಗೊಮ್ಮೆ ಎತ್ತಿ ಹಾಕಿ, ನಿಂತಲ್ಲೇ ಹಾರಿಸಿ, ಅಲುಗಾಡಿಸಿ, ಕುಂತಲ್ಲೇ ಕೂತ ನಮ್ಮ ದೇಹವನ್ನು ಆಚೆ ಈಚೆ ಕುಲುಕಿ ವ್ಯಾಯಾಮ ಮಾಡಿಸಿಬಿಡುತ್ತಿದ್ದ. ಜೊತೆಗೆ ಕಂಡಕ್ಟರ್ ಆಗಾಗ್ಗೆ ‘ಟಿಕೇಟ್ ಟಿಕೇಟ್’ ಅಂತ ಹಾಜರಿ ಕರೆಯುತ್ತಾ, ‘ಇಳೀರಿ, ಹತ್ತಿ’ ಅಂತ ಇಳಿಯುವವರನ್ನು ಇಳಿಸಿ, ಹತ್ತುವವರನ್ನು ಹತ್ತಿಸಿಕೊಂಡು ಸಾಗುವಾಗ ನಮ್ಮ ತಂಗುದಾಣವನ್ನು ಊಹೆ ಮಾಡಲಿಕ್ಕೆ ಸಾಧ್ಯವಾಗುತ್ತಿತ್ತು. ನಿಜಕ್ಕೂ ಪ್ರಯಾಣದ ಅನುಭವ ದಕ್ಕುತ್ತಿತ್ತು. ಆದರೆ ಈ ರೈಲಿನಲ್ಲಿ ಡ್ರೈವರಣ್ಣನ ತಲೆಯೂ ಕಾಣುವುದಿಲ್ಲ. ಸೀಟಿ ಊದುವ ಕಂಡಕ್ಟರಣ್ಣನ ಪತ್ತೆಯೂ ಇಲ್ಲ. ಹೀಗಿರುವಾಗ ನನಗೆ ಅನುಮಾನ ಬರುವುದು ದಿಟ ತಾನೇ.

ನನ್ನ ಬುತ್ತಿಗಂಟಿನ ವಿಚಾರ ಆಗಲೇ ಹೇಳಿದೆನಲ್ಲ? ನಂಗೆ ಬುತ್ತಿಗಂಟು ಬಿಚ್ಚುವ ಪ್ರಸಂಗ ಬರಲೇ ಇಲ್ಲ. ಆಗಾಗ್ಗೆ ಚಾಯ್, ಕಾಫಿ, ವಡೆ, ಪಲಾವ್, ಇಡ್ಲಿ, ಸಾಂಬಾರ್... ಇನ್ನೂ ಏನೇನು ಬೇಕು? ಹೊಟೇಲಿನಲ್ಲಿ ಸಿಗದಕ್ಕಿಂತ ತರಾವರಿ ನಮೂನೆಗಳು ಆಗಾಗ್ಗೆ ಬಂದು ಕಕ್ಕುಲಾತಿಯಿಂದ ವಿಚಾರಿಸಿಕೊಂಡು ಹೋಗುವಾಗ, ಅದರ ಸುವಾಸನೆಗೆ ಮೂಗು ಹೊರಳಿಕೊಳ್ಳುವಾಗ ಒಂದು ಬಾರಿಯಾದರೂ ಅವನ್ನೆಲ್ಲಾ ಸವಿಯದಿರಲು ಸಾಧ್ಯವೇ? ಎಲ್ಲಕ್ಕಿಂತ ಹೆಚ್ಚಾಗಿ ನಾವು ಉಪವಾಸ ಬೀಳಬಾರದೆಂಬ ಏಕೈಕ ಕಾರಣದಿಂದ ಅವರುಗಳು ಅಷ್ಟೊಂದು ನಿಗಾವಹಿಸುತ್ತಿರುವಾಗ, ನಾವು ಅದನ್ನು ಕೊಂಡುಕೊಳ್ಳದೆ ನಮ್ಮ ಬುತ್ತಿಗಂಟು ಬಿಚ್ಚಿದರೆ ಏನು ಒಳ್ಳೆಯತನ ಇರುತ್ತೆ ಹೇಳಿ? ಒಬ್ಬೊಬ್ಬರ ಉದ್ಯೋಗವನ್ನು ಬೇರೆ ಬೇರೆ ರೀತಿಯಲ್ಲಿ ಸಹಕರಿಸುತ್ತಾ ಬೆಳೆಸುವುದು, ಉಪಕಾರ ಮಾಡಿದವರನ್ನು ನಾವೂ ನೆನೆಯುವುದು ಮಾನವಧರ್ಮ ಅಲ್ಲವಾ? ಅದಕ್ಕೆಂದೇ ದಿನದಲ್ಲಿ ಒಂದೇ ಒಂದು ಬಾರಿ ಟೀ ಕುಡಿಯುತ್ತಿದ್ದವಳು ರೈಲಿನಲ್ಲಿ ಮೂರು–ನಾಲ್ಕು ಬಾರಿ ಟೀ ಕುಡಿದು ಬಿಟ್ಟೆ.

ಬೇರೆ ಬೇರೆ ರುಚಿಯ ತಿಂಡಿಗಳ ಸವಿಯನ್ನು ಮೆದ್ದೆ. ರೈಲಿನಲ್ಲಿ ಬಂದ ಪ್ರತೀ ಭಿಕ್ಷುಕನಿಗೂ ಚಿಲ್ಲರೆ ಕಾಸು ಕೊಟ್ಟೆ. ಇವೆಲ್ಲ ಅನುಭವಗಳು ರೈಲಿನಲ್ಲಿ ಮಾತ್ರ ಸಿಗೋದಿಕ್ಕೆ ಸಾಧ್ಯ ತಾನೇ ಅಂತ ನಾನೂ ಪೂರ್ಣ ಪ್ರಮಾಣದಲ್ಲಿ ಅನುಭವಿಸಲಿಕ್ಕೆ ಪ್ರಯತ್ನಿಸಿದೆ. ಪಕ್ಕದಲ್ಲಿರುವ ಪ್ರಯಾಣಿಕರಿಗೆ ನನ್ನ ಅವಸ್ಥೆ ನೋಡಿ ಒಳಗೊಳಗೆ ನಗು ಬಂದಿರಲೂ ಬಹುದು. ಇವಳು ನಾಲ್ಕು ಬಾರಿ ಹೀಗೆ ರೈಲು ಪ್ರಯಾಣ ಮಾಡುವಾಗ ಭಿಕ್ಷುಕರಿಗೆ ದಾನ ಮಾಡಿದರೆ, ಮುಂದೊಂದು ದಿನ ಇವಳೂ ಇದೇ ಕೆಲಸವನ್ನು ಮಾಡಬೇಕಾದಿತೇನೋ ಅಂತ ಮನಸಿನಲ್ಲಿ ಅಂದುಕೊಂಡಿರಬಹುದೇನೋ. ಏನಾದರೂ ಅಂದುಕೊಳ್ಳಲಿ. ನನಗೆ ಕೊಡಬೇಕೆನ್ನಿಸಿತು. ನನ್ನಿಂದ ನಾಲ್ಕು ಕಾಸು ಅವನಿಗೆ ಹೆಚ್ಚಾಗಿ, ಭಿಕ್ಷುಕನ ಮೊಗದಲ್ಲಿ ಮುಗುಳುನಗೆ ಬಂದರೆ, ಪರೋಕ್ಷವಾಗಿ ನಾನೂ ಕಾರಣಳು ತಾನೇ? ಎಂಬುದ ನೆನೆದು ಒಳಗೊಳಗೇ ಖುಷಿಯಾಯಿತು.

ಬಸ್ಸಿನಲ್ಲಿ ಕೂತಾಗ ಯಾರೂ ಅಕ್ಕಪಕ್ಕದವರು ಅಷ್ಟಾಗಿ ಮಾತನಾಡಿದ್ದಾಗಲೀ, ಅಥವಾ ನಾನೇ ಮೇಲೆ ಬಿದ್ದು ಮಾತನಾಡಿಸಿದ್ದಾಗಲೀ ನೆನಪಿಲ್ಲ. ರೈಲಿನಲ್ಲಿ ಹೋಗುವಾಗ ಒಂದಷ್ಟು ಜನ, ಬರುವಾಗ ಒಂದಷ್ಟು ಜನ ಪರಿಚಯ ಆದರು. ನಮ್ಮ ಗ್ರಾಂಥಿಕ ಭಾಷೆ ಕೇಳಿ... ‘ನೀವು ಮಂಗಳೂರಿನವರಾ..?’ ಅಂತ ಮಾತನಾಡಿಸತೊಡಗಿದರು. ನಾನು ಸಾಹಿತ್ಯ ಕಾರ್ಯಕ್ರಮಕ್ಕೆ ಹೋದದ್ದು ಅಂತ ತಿಳಿದು ಮತ್ತಷ್ಟು ಗೌರವಿಸತೊಡಗಿದರು. ನಾನು ನಾಲ್ಕಕ್ಷರ ಬರೆದದ್ದನ್ನು ಮಹಾನ್ ಸಾಧನೆ ಮಾಡಿದವರ ಹಾಗೆ ಕಣ್ಣರಳಿಸಿ ಮಾತನಾಡುವಾಗ, ನಿಜಕ್ಕೂ ಮುಜುಗರವೂ ಹೆಮ್ಮೆಯೂ ಒಟ್ಟಿಗೆ ಆಗುತ್ತಿತ್ತು.

ಇಷ್ಟೆಲ್ಲಾ ಸಂಗತಿಗಳ ನಡುವೆ ಒಂದು ವಿಚಾರ ಹೇಳೋಕೆ ಮರೆತೇಹೋಯ್ತು ನೋಡಿ! ನಾವೆಲ್ಲಾ ಅಕ್ಕಪಕ್ಕದವರು ಒಂದೇ ಊರು, ಮನೆಯವರಂತೆ ಹರಟಿಕೊಂಡಿರುವಾಗ, ನಮ್ಮ ಎದುರಿನ ಸೀಟಿನಲ್ಲಿ  ಹುಡುಗಿಯೊಬ್ಬಳು ನಡುಮಧ್ಯಾಹ್ನ ಆದರೂ ಏಳದೆ ಆರಾಮವಾಗಿ ಮಲಗಿದ್ದಳು. ಪಾಪ! ಹುಡುಗಿಗೆ ಸುಸ್ತಾಗಿದೆ, ಮಲಗಿಕೊಳ್ಳಲಿ ಅಂತ  ನಾವುಗಳು ಅವಳ ಸೀಟಿನಲ್ಲಿರುವ ಪ್ರಯಾಣಿಕರನ್ನು ನಮ್ಮ ಸೀಟಿನಲ್ಲಿ ಕೂರಿಸಿಕೊಂಡು ಇಕ್ಕಟ್ಟಿನಲ್ಲಿ ಪ್ರಯಾಣಿಸುತ್ತಿದ್ದೆವು.

ನಮ್ಮ ಮಾತಿಗೆ ಎಚ್ಚರಗೊಳ್ಳುತ್ತಾ, ಅವಳು ನಿದ್ದೆಗಣ್ಣಿನಲ್ಲಿಯೇ ‘ನೀವೆಲ್ಲಿಗೆ ಹೋದದ್ದು? ಸಾಹಿತ್ಯ ಅಂದರೆ ಏನು? ಕವಿತೆ ಯಾಕೆ ಬರಿತೀರ?’ ಅಂತ ಕೇಳ್ತಾ – ‘ನೀವು ಒಡಲಾಳ ಕೃತಿ ಓದಿದ್ದೀರ? ಇಷ್ಟನೇ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರು ಯಾರು ಗೊತ್ತಾ?’ ಅಂತ ಕೇಳಿದಳು. ‘ಪರವಾಗಿಲ್ಲ ಹುಡುಗಿ, ಸಾಹಿತ್ಯ ಓದುಕೊಂಡಿದ್ದಾಳೆ’ ಅಂತ ವಿಚಾರಿಸಿದ್ರೆ, ‘ಇಲ್ಲಪ್ಪ! ನಾನು ಸಾಪ್ಟ್‌ವೇರ್ ಇಂಜಿನಿಯರ್.  ಆ ವೃತ್ತಿ ಇಷ್ಟ ಇಲ್ಲ. ಹಾಗಾಗಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ಪರೀಕ್ಷೆ ಬರೆಯೋಕೆ ಹೋಗಿದ್ದೆ. ಆದರಿಂದ ಇಂಥ ಪ್ರಶ್ನೆಗಳಿಗೆಲ್ಲಾ ಉತ್ತರವಷ್ಟೇ  ಗೊತ್ತು’ ಅಂದಳು.

ನನ್ನ ಕೈಯಲ್ಲಿದ್ದ ಅಷ್ಟೂ ಪುಸ್ತಕಗಳನ್ನು ನೋಡಿ, ‘ಇವೆಲ್ಲಾ ಎಂಥಾ ಪುಸ್ತಕಗಳು?’ ಎಂದು ಕೇಳಿದಳು. ‘ಸಾಹಿತ್ಯ ಕೃತಿಗಳು’ ಅಂದೆ. ‘ಇವನ್ನೆಲ್ಲಾ ಯಾಕೆ ಓದ್ತೀರ? ಪರೀಕ್ಷೆ ಬರಿಯೋದಿದೆಯಾ?’ ಅಂದಳು. ‘ಇಲ್ಲ, ಖುಷಿಗಾಗಿ, ಆತ್ಮತೃಪ್ತಿಗಾಗಿ ಓದ್ತೇನೆ’ ಅಂದೆ. ನನ್ನ ಉತ್ತರ ಅವಳಿಗೆ ಹಾಸ್ಯಾಸ್ಪದ ಅನ್ನಿಸಿರಬೇಕು. ‘ನೀವೇನು ಕೆಲ್ಸ ಮಾಡ್ತಿದ್ದೀರ?’ ಅಂತ ಪೊಲೀಸ್ ಧಾಟಿಯಲ್ಲಿಯೇ ಪ್ರಶ್ನೆ ಹಾಕಿದಾಗ, ನಾನು ಸಣ್ಣ ಧ್ವನಿಯಲ್ಲಿ ‘ಗೃಹಿಣಿ’ ಅಂದೆ. ‘ಹೋ! ಹಾಗಾದರೆ ಆರಾಮ. ಏನು ಕೆಲಸ ಇಲ್ಲ’ ಅಂದಳು. ‘ಹಾಗಾದರೆ ನಿನ್ನ ಅಮ್ಮನಿಗೆ ಮನೆಯಲ್ಲಿ ಏನು ಕೆಲಸ ಇಲ್ಲವಾ?’ ಅಂದೆ. ‘ಏನಿರುತ್ತೆ? ಅಡುಗೆ ಮಾಡೋದು, ಪಾತ್ರೆ ತೊಳೆಯೋದು ಅಷ್ಟೇ ತಾನೇ?’ ಎಂದಳು. ಅದೊಂದು ಕೆಲಸವ? ಅದೊಂದು ಬದುಕಾ... ಅನ್ನುವಂತಿತ್ತು ಧೋರಣೆ.

‘ಸಾಹಿತ್ಯ, ಕತೆ, ಕವಿತೆ ಇದರಿಂದ ಬದುಕು ಕಟ್ಟೋದಿಕ್ಕೆ ಸಾಧ್ಯವಾಗೋದಿಲ್ಲ. ನಾನು ಏನಾದರೂ ಅದರಿಂದ ಪ್ರಯೋಜನ ಸಿಗುವ ಹಾಗಿದ್ದರೆ ಮಾತ್ರ ಓದುತ್ತೀನಿ. ಸುಮ್ಮನೆ ಕಾಲಹರಣ ಮಾಡಲ್ಲ. ಮೊದಲು ನಾವು ಬೆಳೀಬೇಕು. ನಾವು ಉದ್ದಾರ ಆಗಬೇಕು. ನಮ್ಮ ಬದುಕಷ್ಟೇ ಮುಖ್ಯ’ ಅಂದಳು.
ಅವಳ ಮಾತಿಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ‘ನೀವು ಸಾಹಿತಿಗಳು. ಬೇರೆಯವರ ಸಾವಕಾಶವನ್ನು ಹೆಚ್ಚು ಬಯಸುತ್ತೀರಿ. ಆದ ಕಾರಣ ನನ್ನ ಸೀಟಿನವರನ್ನು ನೀವೇ ಉದಾರ ಮನಸಿನಿಂದ ಕುಳ್ಳಿರಿಸಿಕೊಳ್ಳಿ’ ಅಂತ ಆರಾಮವಾಗಿ ನಿದ್ದೆಗೆ ಜಾರಿದಳು.

ನಾನು ಅವಳ ಮನೋಭಾವಕ್ಕೆ   ಮರುಗುತ್ತಾ, ಹಳ್ಳಿಯ ಮೂಲೆಯಲ್ಲಿ ಕುಳಿತಿದ್ದ ನನ್ನನ್ನು ಸಾಹಿತ್ಯದ ನೆವ ಎಲ್ಲಿಂದ ಎಲ್ಲಿಗೆ ಕೊಂಡೊಯ್ಯುತ್ತಿದೆಯಲ್ಲ? ದೂರದೂರಿನ ಜನರನ್ನೆಲ್ಲಾ ಹತ್ತಿರ ತರುತ್ತಿದೆಯಲ್ಲ? ನನ್ನ ಕಿರಿಯ ಪ್ರಪಂಚವನ್ನು ವಿಸ್ತಾರಗೊಳಿಸುತ್ತಿರುವ ಅಕ್ಷರದ ಸಾಧ್ಯತೆಗೆ ಬೆರಗಾಗಿ ತಲೆಬಾಗುತ್ತಾ, ರೈಲಿನೊಳಗೆ ಹರಡಿಕೊಂಡ ಮಿನಿ ಪ್ರಪಂಚವನ್ನು, ಅದರೊಳಗಿನ ಮನಸುಗಳನ್ನು ಏಕಕಾಲದಲ್ಲಿ ಮನಸಿನೊಳಗೆ ತುಂಬಿಸಿಕೊಳ್ಳುತ್ತಾ ಸಾಗತೊಡಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.