ADVERTISEMENT

ಶರಣು ವಿಶ್ವಾತ್ಮ ಮಂಕುತಿಮ್ಮನಿಗೆ

ಲಲಿತಾ ಕೆ ಹೊಸಪ್ಯಾಟಿ.
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ಅವನ ಓಡಾಟ ದೇವರಿಗೆ ಹಿಡಸಲಿಲ್ಲ. ಚೆಂಡಾಟವಾಡುವ ಕಾಲುಗಳು ಬೆನ್ನು ಹುರಿ ಚಿಕಿತ್ಸೆಯಿಂದ ಜಡವಾದವು. ವೀಲ್ ಚೇರ್ ಆಧಾರವಾಯಿತು. ವಿಧಿಗೆ ಸಮಾಧಾನವಿಲ್ಲ. ಕಾಲಿಗೆ ಗ್ಯಾಂಗ್ರಿನ್ ಆಯಿತು. ಮತ್ತೆ ಕೆಇಎಲ್ ಆಸ್ಪತ್ರೆ ಮುಂಬೈಗೆ ಓಟ. ಕಾಲು ಬೇಕೋ, ಜೀವ ಬೇಕೋ..? ವೈದ್ಯರ ಪ್ರಶ್ನೆ. ‘ಜೀವ’ ಎಂದೆವು. ಅರ್ಧಕಾಲು ಡಸ್ಟ್‌ಬಿನ್ ಸೇರಿತು. ಮಾಯದ ಗಾಯ. ಗಂಡನೊಂದಿಗೆ ಊರಿಗೆ ಬಂದೆ. ಮತ್ತೆ ತೊಡೆ ಸಂಧಿವರೆಗೆ ನೀಲಿ ಗಟ್ಟಿತು. ಜೀವ ತಳಮಳಿಸಿತು. ಗಂಡನ ಬದುಕಿಗಾಗಿ ಹೋರಾಟ. ಈ ಸಲ ಬೆಳಗಾವಿಗೆ ಪಯಣ. ತೊಡೆ ಸಂಧಿವರೆಗೆ ಕತ್ತರಿಸಲು ಬಾರದೆಂದರು. ಇಷ್ಟೆಲ್ಲಾ ಕಣ್ಣಾರೆ ಕಾಣುವ ಕರ್ಮ. ಬೇಡವೆಂದರೂ ಕಣ್ಣು ಹನಿಯೊಡೆದವು.

ಜೊತೆಗೆ ಬಂದಿದ್ದ ಬಂಧುಗಳು ಸಾಂತ್ವನ ಹೇಳಿ, ಮನೆಗೆ ಕರೆದೊಯ್ದರು. ಮುಗಳ್ನಕ್ಕು ಸ್ವಾಗತಿಸಿದ ಅವರ ಹೆಂಡತಿ, ಮೂಗು ಮುಚ್ಚಿಕೊಂಡು ಒಳಹೋದಳು. ಬಾತ್‌ರೂಮ್ಗೆ ಹೊರಟಿದ್ದೆ. ‘ಸ್ಟಾರ್ಚ ಹಾಕಿದ ಸೀರಿ ಉಟಕೊಂಡು ಬಂದ್ರ ಆತೇನು..? ಕಾಲು ನೋಡಂಗಿಲ್ಲ. ಹೊಲಸ ನಾರತಾನ ಗಂಡ. ನಾನಾಗಿದ್ದರ.. ಉರಲ ಹಾಕೋತಿದ್ದೆ. ಇಂತವನನ್ನ ಕರಕೊಂಡು ಮಂದಿ ಮನಿಗೆ ಬರೂದಾ..? ಫ್ರೀಜ್ನಾಗ ಉಪ್ಪಟ್ಟೈತಿ ಕೊಡು’ ಕೆಲಸದವಳಿಗೆ ನನ್ನ ಬೆನ್ನ ಹಿಂದೆ ಹೇಳಿದರೂ ಅದು ನನ್ನ ಎದೆಗೆ ಇರಿದಿತ್ತು. ಅವರು ನಮ್ಮನೆಗೆ ಬಂದಾಗ ರಾಜೋಪಚಾರ ಮಾಡಿಸಿದ್ದ ನನ್ನ ಗಂಡ. ಮಣ ಭಾರದ ಲಗೇಜ್ ಹೊತ್ತು ಬಸ್ಸು ಹತ್ತಿಸಿದ್ದ. ಈಗ..

ಸಮಾಧಾನಿಸದಿದ್ದರೆ ಸುಮ್ಮನಿದ್ದರೂ ಸಾಕಾಗಿತ್ತು. ಮರಳಿ ಕಾರಿನಲ್ಲಿ ಕುಳಿತಾಗ, ಅವರಾಡಿದ ಮಾತು ಮೈ ಮನಸ್ಸನ್ನು ಕೊರೆಯುತ್ತಿತ್ತು. ನನ್ನ ದಾರಿಯಲ್ಲೇ ಬರೀ ಮುಳ್ಳು. ನನ್ನ ಪಾಲಿಗೆ ಎಲ್ಲರೂ ಇದ್ದು ಯಾರೂ ಇಲ್ಲ ಎನಿಸಿತು. ಸುರಿಯುತ್ತಿದ್ದ ಕಣ್ಣೀರು-ಸವೆಯುತ್ತಿದ್ದ ದಾರಿ ಮುಗಿಯುವಂತೆನಿಸಲಿಲ್ಲ. ಬ್ಯಾಗನಲ್ಲಿದ್ದ ಮಂಕುತಿಮ್ಮನ ಕಗ್ಗ ನೆನಪಾಯಿತು. ಓದತೊಡಗಿದೆ. ಒಂದೋಂದೇ ಪುಟ.  ಒಂದೊಂದೇ ಸಾಲು. ಒಂದೊಂದು ನುಡಿಯಲ್ಲೂ ಒಂದೊಂದು ಸಮಾಧಾನ. ಒಂದೊಂದು ಶಬ್ದದಲ್ಲೂ ಎಷ್ಟೊಂದು ಧೈರ್ಯ. ಬಂದದ್ದನ್ನು ಎದುರಿಸಬೇಕು ಬೇರೆ ದಾರಿ ಇಲ್ಲ ಎಂಬ ವಾಸ್ತವ ತಿಳಿಸುವ ನುಡಿ ಮುತ್ತುಗಳು. ಓದಿದಂತೆ ಸಮಾಧಾನಕ್ಕೆ ತಲೆ ಸವರುವ ಕೈಗಳಿವೆ ಎನಿಸಿತು. ಪುಸ್ತಕ ಓದಿ ಮುಗಿಸಿದಾಗ ಮನೆ ಬಂದಿತ್ತು. ಮರುದಿನ ತಮ್ಮ ಡಾ. ಸಂತೋಷ ತಾಡಪತ್ರಿ ಮನೆಗೆ ಬಂದ. ಲೀಚ್ (ಜಿಗಣೆ) ಹಚ್ಚಿದರೆ ಅದು ಗ್ಯಾಂಗ್ರೀನ್ ರಕ್ತ ಹೀರುತ್ತೆ. ನಾಕೈದು ದಿನವಿದ್ದು ತೋರಿಸಿ ಹೋಗುವೆ. ನೀ ಹಚ್ಚಲು ಗಟ್ಟಿ ಇರಬೇಕು ಎಂದ. ಮುನ್ನಾ ಡಾಕ್ಟರ್‌ನೂ ಜೊತೆಗಿದ್ದ. ಆ ವೇಳೆಗೆ ಬೆಂಕಿಯಲ್ಲಿ ನಡೆಯೆಂದರೂ ಸಿದ್ಧಳಿದ್ದೆ. ಉಡುಪಿಗೆ ಹೋಗಿ ಜಿಗಣೆಗಳನ್ನು ತಂದ ಮೇಲೆ ಚಿಕಿತ್ಸೆ ಶುರುವಾಯಿತು. ಗೈಂಗ್ರೀನ್ ಕಡಿಮೆಯಾಯಿತು. ಅವನೂ ನಕ್ಕ. ಜೊತೆಗೆ ಮನೆ ಮಂದಿಯೂ.

‘ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ
ಭವಿಷ್ಯವ ಚಿಂತಿಸದೇ ಬದುಕು ನೂಕುತಿರು
ವಿವರಗಳ ಜೋಡಿಸುವ ಯಜಮಾನ ಬೇರಿಹನು
ಸವೆಸು ನೀಂ ಜನುಮವನು ಮಂಕುತಿಮ್ಮ .’

ಈಗಲೂ ಕಿವಿಯಲ್ಲಿ ಗುಂಯ್‌ಗುಡುತ್ತದೆ.  ಈಗ ಅವನಿಲ್ಲ. ನಿಮಿಷಕ್ಕೂ ದಿವಸಕ್ಕೂ ಭವಿಷ್ಯ ನೂಕುವಾಗ ಸುಮ್ಮನೇ ನೆನಪಾಗುತ್ತಾನೆ. ಜಿಗಣೆಯ ರೂಪದಲ್ಲಿ, ಡಾ. ಸಂತೋಷನ ರೂಪದಲ್ಲಿ ಬಂದು ಗ್ಯಾಂಗ್ರೀನ್ ಗುಣಪಡಿಸಿದ್ದ ಮೇಲಿನ ಯಜಮಾನ ಭವದ ಯಜಮಾನರನ್ನು ಕರೆದೊಯ್ದ. ಭವಿಷ್ಯಕ್ಕೆ ದಾರಿ ತೋರಿಸುತ್ತಾನೆಂಬ ಭರವಸೆಯನ್ನು ಮಂಕುತಿಮ್ಮನ ಕಗ್ಗ ಪುಸ್ತಕದಿಂದ ಎದೆ ತುಂಬಿಕೊಂಡಿದ್ದೇನೆ. ನಾಳಿನ ದಿವಸದಲ್ಲಿ ನಿಮಿಷದಲ್ಲಿ ಬೆಳಕೋ ಕತ್ತಲೆಯೋ ಗೊತ್ತಿಲ್ಲ. ಬದುಕಿರುವವರೆಗೆ ಬಂದದ್ದನ್ನು ಎದುರಿಸಲು ಸಿದ್ಧಳಾಗಿದ್ದೇನೆ. ಶರಣು ವಿಶ್ವಾತ್ಮನಲಿ ಎಂಬ ಮಂಕುತಿಮ್ಮನ ಕಗ್ಗದ ಕೊನೆಯ ಸಾಲಿಗೆ ಶರಣಾಗಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.