ADVERTISEMENT

ಶ್ರಾವಣದ ಸಂಭ್ರಮ

ನಳಿನಿ ಟಿ.ಭೀಮಪ್ಪ
Published 28 ಜುಲೈ 2017, 19:30 IST
Last Updated 28 ಜುಲೈ 2017, 19:30 IST
ಶ್ರಾವಣದ ಸಂಭ್ರಮ
ಶ್ರಾವಣದ ಸಂಭ್ರಮ   

ಆಷಾಢದಲ್ಲಿ ಬಟ್ಟೆ ಅಂಗಡಿಗಳು ಹಾಕುವ ಡಿಸ್ಕೌಂಟ್ ಸೇಲ್‌ನ ಪಾಂಪ್ಲೆಟ್ಟುಗಳು ದಿನಪತ್ರಿಕೆಯಲ್ಲಿ ಅಡಗಿಕೊಂಡು ಬಂದು ಬಿದ್ದು ಶ್ರಾವಣಕ್ಕೆ ನಾಂದಿ ಹಾಡುತ್ತವೆ. ಯಾವಾಗ, ಯಾವ್ಯಾವ ಅಂಗಡಿಗಳಿಗೆ ಭೇಟಿ ನೀಡಬೇಕು - ಎಂಬ ಪಟ್ಟಿ ಗೆಳತಿಯರ ವಾಟ್ಸ್ಯಾಪ್ ಗುಂಪಿನಲ್ಲಿ ವಿನಿಮಯವಾಗುತ್ತಿರುತ್ತದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸೇಲ್ ಅಂಗಡಿಗಳಿಗೆ ಮಹೂರ್ತ ನಿಗದಿಯಾಗಿಬಿಡುತ್ತದೆ. ಮನೆಯ ಕೆಲಸ ಸರಭರನೆ ಮುಗಿಸಿಕೊಂಡು, ಗೆಳತಿಯರೆಲ್ಲಾ ಸೇರಿಕೊಂಡು ಹಾರುವ ಹಕ್ಕಿಗಳ ಹಾಗೆ ಹೊರಬೀಳುತ್ತೇವೆ. ಮನೆಯಲ್ಲಿ ಹೇಳುವುದು ಮಾತ್ರ ‘ವರಮಹಾಲಕ್ಷ್ಮಿಗೆ ಹಬ್ಬಕ್ಕೆ ಲಕ್ಷ್ಮಿಗೆ ಉಡಿಸಲು ಸೀರೆ ತರಬೇಕು’ ಎಂಬ ನೆಪ.

ದೇವರಿಗೆ ಅಂದಾಕ್ಷಣ ಹೋಗು ಎನ್ನದೆ ಬೇರೆ ದಾರಿ ಇಲ್ಲವಲ್ಲ?. ಸಾಕಷ್ಟು ಡಿಸ್ಕೌಂಟು ಅಂಗಡಿಗಳ ಸೀರೆಗಳ ರಾಶಿಯಲ್ಲಿ ಮುಳುಗೇಳುತ್ತೇವೆ. ದೇವರಿಗೊಂದು, ಮನೆಯ ಹೆಣ್ಣುಮಗಳಿಗೊಂದು, ಉಡುಗೊರೆ ನೀಡುವುದಕ್ಕೊಂದು – ಹೀಗೆ ಮನಮೋಹಕ ಸೀರೆಗಳಿಗೆ ಮನಸೋತು ಒಂದೆಂಟು ಹತ್ತು ಸೀರೆಗಳನ್ನಾದರೂ ಖರೀದಿಸುತ್ತೇವೆ. ಕೊಡುತ್ತೇವೋ ಅಥವಾ ಎಲ್ಲವನ್ನೂ ನಾವೇ ಇಟ್ಟುಕೊಳ್ಳುತ್ತೇವೋ – ಅದು ಬೇರೆ ಮಾತು (ಆದರೆ ಅಷ್ಟೊಂದು ಸೀರೆಗಳ ಖರೀದಿಗೆ ಮನೆಯಲ್ಲಿ ಕಾರಣ ಹೇಳಬೇಕಲ್ಲ!).

ಇನ್ನು ಶ್ರಾವಣ ಹತ್ತಿರ ಬರುತ್ತಿದ್ದಂತೆ ಮನೆಕೆಲಸದವಳಿಗೆ ಪೂಸಿ ಹೊಡೆಯಲು ಶುರುಮಾಡುತ್ತೇವೆ. ಕಿಟಕಿ, ಬಾಗಿಲು, ಕರ್ಟೆನ್, ಬೆಡ್‌ಶೀಟ್, ಟೈಲ್ಸ್ ಯಾವಾಗ ತೊಳೆದು ಕೊಡುತ್ತೀಯಾ - ಎಂದು ಪೀಡಿಸಲು ತೊಡಗುತ್ತೇವೆ. ಬೇಸನ್ ಲಾಡು, ಹೆಸರು ಉಂಡೆ, ಸೇವು ಉಂಡೆ, ಲಡಿಗಿ ಲಡ್ಡು, ಅರಳಿನ ಉಂಡೆ, ಚೂಡಾ, ಚಕ್ಕುಲಿ - ಹೀಗೆ ಎಲ್ಲದಕ್ಕೂ ಸಾಮಾನು ತರಿಸಿ ಹಿಟ್ಟು ಮಾಡಿಸಿ ಅಣಿಗೊಳಿಸುವಷ್ಟರಲ್ಲಿ ಶ್ರಾವಣದ ಹಬ್ಬಗಳು ಶುರುವಾಗತೊಗುತ್ತವೆ. ಎಲ್ಲರ ಮನೆಯಲ್ಲೂ ಬೆಲ್ಲದ ಪಾಕ, ಕರಿದ ತಿಂಡಿಗಳ ಘಮಲು ತೇಲಿ ಬರುತ್ತದೆ. ಡಬ್ಬಿಗಳಲ್ಲಿ ತಿನಿಸುಗಳು ತುಂಬಿ ಮಕ್ಕಳ ಕಣ್ಣುಗಳೆಲ್ಲ ಇದನ್ನೆಲ್ಲಾ ಯಾವಾಗ ಕಬಳಿಸುತ್ತೇವೆಯೋ – ಎಂದು ಹಾತೊರೆಯುತ್ತಿರುತ್ತಾರೆ. ಹೀಗೆ ಹಬ್ಬಗಳ ಸಾಲಿಗೆ ಮುನ್ನುಡಿ ಬರೆಯುವ ಶ್ರಾವಣ ಪ್ರತಿವರ್ಷ ಎಲ್ಲರಿಗೂ ಸಂಭ್ರಮ ತರುವುದಕ್ಕೆ ಕಾರಣವಾಗುತ್ತದೆ.

ADVERTISEMENT

**

‘ದೇವರಿಗೊಂದು, ಮನೆಯ ಹೆಣ್ಣುಮಗಳಿಗೊಂದು, ಉಡುಗೊರೆ ನೀಡುವುದಕ್ಕೊಂದು – ಹೀಗೆ ಮನಮೋಹಕ ಸೀರೆಗಳಿಗೆ ಮನಸೋತು ಒಂದೆಂಟು ಹತ್ತು ಸೀರೆಗಳನ್ನಾದರೂ ಖರೀದಿಸುತ್ತೇವೆ. ಕೊಡುತ್ತೇವೋ ಅಥವಾ ಎಲ್ಲವನ್ನೂ ನಾವೇ ಇಟ್ಟುಕೊಳ್ಳುತ್ತೇವೋ – ಅದು ಬೇರೆ ಮಾತು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.