ADVERTISEMENT

ಸರ್ಕಾರಿ ಕೆಲಸದ ಬೆನ್ನಟ್ಟಿ...

​ಪ್ರಜಾವಾಣಿ ವಾರ್ತೆ
Published 3 ಮೇ 2017, 19:30 IST
Last Updated 3 ಮೇ 2017, 19:30 IST
ಸರ್ಕಾರಿ ಕೆಲಸದ ಬೆನ್ನಟ್ಟಿ...
ಸರ್ಕಾರಿ ಕೆಲಸದ ಬೆನ್ನಟ್ಟಿ...   

‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಸಾಲು ಕೇಳಿದ ತಕ್ಷಣ ನಮಗೆ ನೆನಪಿಗೆ ಬರುವುದು ವಿಧಾನಸೌಧ. ಶಕ್ತಿಕೇಂದ್ರದ ದ್ವಾರದಲ್ಲಿ ಎದ್ದು ಕಾಣುವ ಈ ಸಾಲುಗಳು ಇದೀಗ ಸಿನಿಮಾವೊಂದರ ಶೀರ್ಷಿಕೆ. ಸರ್ಕಾರದ ಕೆಲಸ ಹೇಗೆ ದೇವರ ಕೆಲಸವಾಗಿದೆ ಎಂಬ ಕಥಾಹಂದರ ಇಟ್ಟುಕೊಂಡು ಆ್ಯಕ್ಷನ್–ಕಟ್ ಹೇಳಲು ಮುಂದಾಗಿರುವವರು ಎ. ರವೀಂದ್ರ.

ಟೀಸರ್ ಬಿಡುಗಡೆಯ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರತಂಡ ಮಾಧ್ಯಮದವರ ಮುಂದೆ ಬಂದಿತ್ತು.

‘ಪ್ರತಿಯೊಬ್ಬರಿಗೂ ಹತ್ತಿರವಾಗುವ ಸಿನಿಮಾ ಇದು. ವಿಧಾನಸೌಧದಲ್ಲಿ ಎಷ್ಟು ಕಚೇರಿಗಳು, ಕ್ಯಾಬಿನ್‌ಗಳು, ಅಧಿಕಾರಿಗಳು ಇದ್ದಾರೋ ಗೊತ್ತಿಲ್ಲ. ಆದರೆ ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಎಲ್ಲಾ ಅಂಶಗಳಿಗೆ ಪೂರಕವಾಗುವಂತೆ ಸಿನಿಮಾ ಮಾಡಲಾಗಿದೆ’ ಎಂದು ರವೀಂದ್ರ ಚಿತ್ರದ ತಿರುಳನ್ನು ಬಿಚ್ಚಿಟ್ಟರು.

ADVERTISEMENT

‘ನಿರ್ಮಾಪಕ ಅಶ್ವಿನ್ ರಾಮಪ್ರಸಾದ್ ಅವರಿಗೆ ಸಿನಿಮಾ ಎಂಬುದು ಪ್ಯಾಶನ್. ಅವರು ನಿರ್ಮಿಸಿದ್ದ ‘ಜೋಗಿ’ ಬಿಡುಗಡೆಯಾದಾಗ ನನ್ನ ‘ಮಠ’ವೂ ತೆರೆಗೆ ಬಂದಿತ್ತು’ ಎಂದು ನೆನಪಿಸಿಕೊಂಡರು ಸಂಭಾಷಣೆ ಬರೆದಿರುವ ಗುರುಪ್ರಸಾದ್. ‘ಈ ಚಿತ್ರಕ್ಕೆ ಸಂಭಾಷಣೆ ಬರೆದು ಕೊಟ್ಟಾಗ, ಅವರ ಮಗ ಆ ಸಾಲುಗಳನ್ನು ನೋಡಿ ತುಂಬಾ ನಗುತ್ತಿದ್ದ. ಆಗಲೇ ಇದು ಖಂಡಿತ ಜನರಿಗೆ ತಲುಪುತ್ತೆ ಅನಿಸಿತು’ ಎಂದು ಮಾತು ಮುಗಿಸಿದರು.

ಚಿತ್ರತಂಡಕ್ಕೆ ಶುಭ ಹಾರೈಸಲು ಬಂದಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ‘ನಿರ್ಮಾಪಕರು ಮತ್ತು ನನ್ನ ಸ್ನೇಹದ ಗುರುತಿಗಾಗಿ, ಚಿತ್ರದ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದೇನೆ’ ಎಂದರು.

‘ಸಿನಿಮಾದಲ್ಲಿ ಯಾರೂ ನಾಯಕರಲ್ಲ. ಬದಲಿಗೆ ಕಥೆಯೇ ನಾಯಕ. ಅದಕ್ಕೆ ಶಕ್ತಿ ತುಂಬಿರುವುದು ಸಂಭಾಷಣೆ ಮತ್ತು ಹಾಡುಗಳು’ ಎಂದು ನಿರ್ಮಾಪಕ ಅಶ್ವಿನಿ ರಾಮಪ್ರಸಾದ್ ಹೇಳಿದರು.

ನಾಗೇಂದ್ರಪ್ರಸಾದ್ ಬರೆದಿರುವ ಎರಡು ಗೀತೆಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಮಂಜುನಾಥ್ ನಾಯಕ್ ಛಾಯಾಗ್ರಹಣ  ಹಾಗೂ ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.