ADVERTISEMENT

ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು: ಎಚ್.ಡಿ.ಕುಮಾರಸ್ವಾಮಿ

ಶ್ರೀಕಂಠೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 15:52 IST
Last Updated 28 ಮಾರ್ಚ್ 2024, 15:52 IST
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಎಚ್.ಡಿ.ಕುಮಾರಸ್ವಾಮಿ ದೇವರಿಗೆ ತುಲಾಭಾರ ಸೇವೆ ಸಲ್ಲಿಸಿದರು
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಎಚ್.ಡಿ.ಕುಮಾರಸ್ವಾಮಿ ದೇವರಿಗೆ ತುಲಾಭಾರ ಸೇವೆ ಸಲ್ಲಿಸಿದರು   

ನಂಜನಗೂಡು: ‘ಜೆಡಿಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಲು ಕೆಲಸ ಮಾಡಬೇಕು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಗುರುವಾರ ಭೇಟಿ ನೀಡಿ ತುಲಾಭಾರ ಸೇವೆ ಹಾಗೂ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದ ಮುಖ್ಯಮಂತ್ರಿ ಜ್ಯೋತಿಷ್ಯ ಹೇಳಲು ಆರಂಭಿಸಿದ್ದಾರೆ. ಮಂಡ್ಯದಲ್ಲಿ ನಾನು ಸೋಲುವ ಬಗ್ಗೆ ಭವಿಷ್ಯ ಹೇಳಿದ್ದಾರೆ. ಉಳಿದವರ ಸೋಲು ಗೆಲುವಿನ ಬಗ್ಗೆಯೂ ಅವರನ್ನೇ ಕೇಳಬಹುದು’ ಎಂದು ವ್ಯಂಗ್ಯವಾಡಿದರು.

‘ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುವ ಗುರಿಯೊಂದಿಗೆ ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಕಣಕ್ಕಿಳಿದಿದೆ. ಅಭ್ಯರ್ಥಿಗಳ ಸೋಲು-ಗೆಲುವನ್ನು ತೀರ್ಮಾನಿಸುವವರು ಮತದಾರರು ಎಂಬುದು ಸಿದ್ದರಾಮಯ್ಯ ಅವರಿಗೆ ತಿಳಿದಿರಲಿ. ರಾಜ್ಯದೆಲ್ಲೆಡೆ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರದ ಆಡಳಿತದ ಪರಿಣಾಮ ತಿಳಿಸಿಕೊಡಲಿದ್ದಾರೆ’ ಎಂದರು.

ADVERTISEMENT

ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ ಹಿನ್ನಲೆಯಲ್ಲಿ ತಾಲ್ಲೂಕಿನ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರ ಅಪೇಕ್ಷೆಯಂತೆ ದೇವಾಲಯಕ್ಕೆ ಭೇಟಿ ನೀಡಿ ಅಕ್ಕಿ- ಬೆಲ್ಲದ ತುಲಾಭಾರ ಸೇವೆ ಸಲ್ಲಿಸುವ ಮೂಲಕ ಹರಕೆ ತೀರಿಸಿದರು. ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿದೇವಿ, ಸುಬ್ರಹ್ಮಣ್ಯ, ನಾರಾಯಣಸ್ವಾಮಿ ಗುಡಿಗಳಲ್ಲೂ ವಿಶೇಷ ಪೂಜೆ ಸಲ್ಲಿಸಿದರು.

ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ, ಮುಖಂಡರಾದ ಸಾ.ರಾ.ಮಹೇಶ್, ಅಶ್ವಿನ್‍ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಆರ್.ವಿ.ಮಹದೇವಸ್ವಾಮಿ, ಅಂಬಿ ಗೌಡ, ಸಂಜಯ್‌ ಗೌಡ, ಉಮೇಶ್‌, ನಗರಸಭೆ ಸದಸ್ಯ ಸಿದ್ದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.