ADVERTISEMENT

‘ರಾಜಭವನದ ಫ್ಯಾಕ್ಸ್‌ ಮೆಷಿನ್‌ ಬಗ್ಗೆ ಕಾಳಜಿವಹಿಸಿ’; ಪತ್ರಕರ್ತ ರವೀಶ್‌ ಕುಮಾರ್‌

ರಾಜ್ಯಪಾಲರ ಸಮ್ಮುಖದಲ್ಲೇ ಫ್ಯಾಕ್ಸ್ ಮೆಷಿನ್‌ ಬಗ್ಗೆ ಪ್ರಸ್ತಾಪ

ಏಜೆನ್ಸೀಸ್
Published 27 ನವೆಂಬರ್ 2018, 7:55 IST
Last Updated 27 ನವೆಂಬರ್ 2018, 7:55 IST
   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಮುಖ್ಯ ಅತಿಥಿಯಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ರವೀಶ್‌ ಕುಮಾರ್‌ ‘ವಿದ್ಯಾರ್ಥಿಗಳು ಶ್ರೀನಗರದಲ್ಲಿರುವ ರಾಜ ಭವನದ ಫ್ಯಾಕ್ಸ್‌ ಮೆಷಿನ್‌ ಬಗ್ಗೆಯೂ ಕಾಳಜಿ ವಹಿಸಬೇಕು’ ಎಂದು ವ್ಯಂಗ್ಯವಾಡಿದ್ದಾರೆ.

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯನ್ನು ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ವಿಸರ್ಜನೆ ಮಾಡಿದರು. ಅದೇ ದಿನ ರಾತ್ರಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸರ್ಕಾರ ರಚನೆಯ ಹಕ್ಕು ಮಂಡನೆಯ ಪತ್ರವನ್ನು ಫ್ಯಾಕ್ಸ್‌ ಮೂಲಕ ರಾಜ್ಯಪಾಲರಿಗೆ ಕಳುಹಿಸಲು ಬಯಸಿದ್ದರು. ಆದರೆ, ರಾಜಭವನದ ಫ್ಯಾಕ್ಸ್‌ ಯಂತ್ರ ಹಾಳಾಗಿದ್ದರಿಂದ ರಾಜಭವನಕ್ಕೆ ಫ್ಯಾಕ್ಸ್‌ ಸ್ವೀಕೃತಿ ಆಗಲಿಲ್ಲ. ಫೋನ್‌ ಮೂಲಕ ರಾಜ್ಯಪಾಲರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ ಮೆಹಬೂಬಾ ಟ್ವಿಟರ್‌ನಲ್ಲಿ ಪತ್ರಪ್ರಕಟಿಸಿ ರಾಜ್ಯಪಾಲರನ್ನು ಟ್ಯಾಗ್‌ ಮಾಡಿದ್ದರು.

ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ನ್ಯಾಷನಲ್‌ ಕಾನ್ಫರೆನ್ಸ್‌(ಎನ್‌.ಸಿ) ನಾಯಕ ಒಮರ್‌ ಅಬ್ದುಲ್ಲಾ, ’ತುರ್ತಾಗಿ ಜಮ್ಮು ಮತ್ತು ಕಾಶ್ಮೀರ ರಾಜಭವನಕ್ಕೆ ಹೊಸ ಫ್ಯಾಕ್ಸ್‌ ಮೆಷಿನ್‌ ಬೇಕಾಗಿದೆ’ ಎಂದು ಟೀಕಿಸಿದ್ದರು.

ಶನಿವಾರ ಗ್ವಾಲಿಯರ್‌ನ ಕಾಲೇಜು ಒಂದರ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪತ್ರಕರ್ತ ರವೀಶ್‌ ಕುಮಾರ್‌, ’ಮುಂಬರುವ ದಿನಗಳಲ್ಲಿ ನೀವು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಲಿದ್ದೀರಿ. ಚಂಬಲ್‌ ನದಿಯ ನಾಡಿನ ಬಗ್ಗೆ ನೀವು ಕಾಳಜಿ ಹೊಂದಿರಬೇಕು, ಹಾಗೇ ಶ್ರೀನಗರದಲ್ಲಿರುವ ರಾಜಭವನದ ಫ್ಯಾಕ್ಸ್‌ ಮೆಷಿನ್‌ ಬಗೆಗೂ’ ಎಂದು ಹೇಳಿದ್ದರು.

‘ಸರ್ಕಾರ ರಚನೆ ಬಗ್ಗೆ ಮೆಹಬೂಬರಿಂದ ಫ್ಯಾಕ್ಸ್‌ ತಲುಪಿಲ್ಲ’ ಎಂದು ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಹೇಳಿಕೆ ನೀಡಿದ್ದರು. ಸಂಜೆ ಏಳರ ನಂತರವೂ ಕಾರ್ಯನಿರ್ವಹಿಸುವಂತಹ ಫ್ಯಾಕ್ಸ್‌ ಮೆಷಿನ್‌ನನ್ನು ಸಿದ್ಧಪಡಿಸಿ ಎಂದು ಸತ್ಯಪಾಲ್‌ ಅವರ ಮುಂದೆಯೇ ವಿದ್ಯಾರ್ಥಿಗಳಿಗೆ ಕರೆ ನೀಡುವ ಮೂಲಕ ರವೀಶ್ ಪ್ರಜಾತಂತ್ರವನ್ನು ನೆನಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.