ADVERTISEMENT

ರಾಜ್ಯದಲ್ಲಿ ಶೇ 69.23 ಮತದಾನ: ಮಂಡ್ಯದಲ್ಲಿ ಹೆಚ್ಚು, ಈ ಕ್ಷೇತ್ರದಲ್ಲಿ ಕಡಿಮೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 16:27 IST
Last Updated 26 ಏಪ್ರಿಲ್ 2024, 16:27 IST
<div class="paragraphs"><p>ಬೆಂಗಳೂರಿನ ಸಿ.ವಿ.ರಾಮನ್ ನಗರದಲ್ಲಿರುವ ಡಿಆರ್‌ಡಿಒ ಕೇಂದ್ರೀಯ ವಿದ್ಯಾಲಯದ ಮತಗಟ್ಟೆಯಲ್ಲಿ ಮತದಾನ ಮಾಡಿದ ಕುಟುಂಬದ ಸದಸ್ಯರು ಸಾಮೂಹಿಕ ಸೆಲ್ಪಿ ಕ್ಲಿಕ್ಕಿಸಿಕೊಂಡರು</p></div>

ಬೆಂಗಳೂರಿನ ಸಿ.ವಿ.ರಾಮನ್ ನಗರದಲ್ಲಿರುವ ಡಿಆರ್‌ಡಿಒ ಕೇಂದ್ರೀಯ ವಿದ್ಯಾಲಯದ ಮತಗಟ್ಟೆಯಲ್ಲಿ ಮತದಾನ ಮಾಡಿದ ಕುಟುಂಬದ ಸದಸ್ಯರು ಸಾಮೂಹಿಕ ಸೆಲ್ಪಿ ಕ್ಲಿಕ್ಕಿಸಿಕೊಂಡರು

   

– ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ಪೂರ್ಣಗೊಂಡಿದ್ದು, ಅರ್ಹ ಮತದಾರರಲ್ಲಿ ಸರಾಸರಿ ಶೇ 69.23ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ.

ADVERTISEMENT

ಮತದಾನ ಮುಕ್ತಾಯವಾದ ಬಳಿಕ ಸಂಗ್ರಹಿಸಿದ ಅಂಕಿಅಂಶಗಳ ಆಧಾರದಲ್ಲಿ ಕೇಂದ್ರ ಚುನಾವಣಾ ಆಯೋಗವು ಸರಾಸರಿ ಮತದಾನದ ಪ್ರಮಾಣದ ತಾತ್ಕಾಲಿಕ ಅಂದಾಜು ಕುರಿತ ಮಾಹಿತಿ ನೀಡಿದೆ. 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಹಲವು ಕ್ಷೇತ್ರಗಳಲ್ಲಿ ಮತದಾನದಲ್ಲಿ ಏರಿಕೆಯಾಗಿದೆ.

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಶೇ 80.59ರಷ್ಟು ಮತದಾನದೊಂದಿಗೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದ ಮಂಡ್ಯ ಲೋಕಸಭಾ ಕ್ಷೇತ್ರವು, ಈ ಬಾರಿಯೂ ಅದೇ ಸ್ಥಾನದಲ್ಲಿದೆ. ಸರಾಸರಿ ಮತದಾನದಲ್ಲಿ ಆಗ ಕೊನೆಯ ಸ್ಥಾನದಲ್ಲಿದ್ದ ಬೆಂಗಳೂರು ದಕ್ಷಿಣ ಈ ಬಾರಿ ಯಥಾಸ್ಥಿತಿಯಲ್ಲಿದೆ.

ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಮತದಾನದಲ್ಲಿ ಅಲ್ಪ ಪ್ರಮಾಣದ ಕುಸಿತವಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತದಾನದಲ್ಲಿ ಏರಿಕೆಯಾಗಿದೆ.

ಇವಿಎಂ ಧ್ವಂಸ: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಇಂಡಿಗನತ್ತ ಮತಗಟ್ಟೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದ ಮತದಾರರು ದಾಂಧಲೆ ನಡೆಸಿದ್ದು, ವಿದ್ಯುನ್ಮಾನ ಮತಯಂತ್ರಕ್ಕೆ ಹಾನಿ ಮಾಡಿದ್ದಾರೆ. ಅಲ್ಲಿ ಮರು ಮತದಾನ ನಡೆಯುವ ಸಾಧ್ಯತೆ ಇದೆ.

ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಅವರ ತಾಯಿ ಹೊಳೆನರಸೀಪುರ ತಾಲ್ಲೂಕಿನ ಕೆ.ಬಿ. ಪಾಳ್ಯ ಮತಗಟ್ಟೆಗೆ ಭೇಟಿನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌–ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ. ಕಾಂಗ್ರೆಸ್‌ ಕಾರ್ಯಕರ್ತ ಮೋಹನ್‌ ಕುಮಾರ್‌ ಗಾಯಗೊಂಡಿದ್ದಾರೆ. ಉಳಿದಂತೆ ಬಹುತೇಕ ಶಾಂತಿಯುತ ಮತದಾನ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.