ADVERTISEMENT

ತೋಟಗಾರಿಕೆ ಮೇಳದಲ್ಲಿ ಪ್ರಶ್ನೋತ್ತರ ವಿನಿಮಯ

ಮೇಳದ ಮೆರುಗು ಹೆಚ್ಚಿಸಿದ ಪ್ರಾತ್ಯಕ್ಷಿಕೆ ತಾಕುಗಳು l ಕೋವಿಡ್‌ ನಿರ್ಬಂಧದಿಂದ ರೈತರ ಸಂಖ್ಯೆ ಕ್ಷೀಣ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 19:47 IST
Last Updated 8 ಫೆಬ್ರುವರಿ 2021, 19:47 IST
ಐಐಎಚ್‌ಆರ್‌ ಆವರಣದಲ್ಲಿ ಬೆಳೆಸಲಾಗಿದ್ದ ಹೂವಿನ ಸಾಲಿನಲ್ಲಿ ಮಾಹಿತಿ ಪಡೆದ ಸಾರ್ವಜನಿಕರು                  –ಪ್ರಜಾವಾಣಿ ಚಿತ್ರ ಪಿ.ಎಸ್. ಕೃಷ್ಣಕುಮಾರ್‌
ಐಐಎಚ್‌ಆರ್‌ ಆವರಣದಲ್ಲಿ ಬೆಳೆಸಲಾಗಿದ್ದ ಹೂವಿನ ಸಾಲಿನಲ್ಲಿ ಮಾಹಿತಿ ಪಡೆದ ಸಾರ್ವಜನಿಕರು       –ಪ್ರಜಾವಾಣಿ ಚಿತ್ರ ಪಿ.ಎಸ್. ಕೃಷ್ಣಕುಮಾರ್‌   

ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಆವರಣದಲ್ಲಿ ಸೋಮವಾರದಿಂದ ಆರಂಭವಾದ ರಾಷ್ಟ್ರೀಯ ತೋಟಗಾರಿಕೆ ಮೇಳ ಪ್ರಶ್ನೆ–ಉತ್ತರಗಳ ವಿನಿಮಯಕ್ಕೆ ಸಾಕ್ಷಿಯಾಯಿತು.

ಪ್ರಾತ್ಯಕ್ಷಿಕೆ ತಾಕುಗಳು, ನೂರಾರು ಮಳಿಗೆಗಳು, ತೋಟಗಾರಿಕಾ ಯಂತ್ರೋಪಕರಣಗಳು, ಹೊಸ ತಳಿಯ ಹಣ್ಣು, ತರಕಾರಿ ಬೆಳೆಗಳ ಬಗ್ಗೆ ತಿಳಿದುಕೊಂಡ ರೈತರು, ವಿಜ್ಞಾನಿಗಳು, ಉದ್ಯಮಿಗಳ ಜೊತೆ ಗೊಂದಲ ಪರಿಹರಿಸಿಕೊಂಡರು.

ಕೋವಿಡ್‌ ನಿರ್ಬಂಧದ ನಡುವೆಯೂ ಮೇಳದತ್ತ ಹೆಜ್ಜೆ ಹಾಕಿದ ರೈತರು ಸಂರಕ್ಷಿತ ಬೇಸಾಯ, ತೋಟಗಾರಿಕೆ ಬೇಸಾಯ ಪದ್ಧತಿಗಳ ಸಮಗ್ರ ಮಾಹಿತಿ ಪಡೆದರು. 720 ಎಕರೆ ಭೂ ವಿಸ್ತೀರ್ಣದಲ್ಲಿ ವಿಜ್ಞಾನಿಗಳು ಆವಿಷ್ಕರಿಸಿರುವ ವಿವಿಧ ಜಾತಿಗಳ ಹೂವು, ಹಣ್ಣು, ಮತ್ತು ತರಕಾರಿಗಳ ಸಸ್ಯರಾಶಿಯನ್ನು ಕಣ್ತುಂಬಿಕೊಂಡರು. ಮೇಳದಲ್ಲಿ 211 ಪ್ರಾತ್ಯಕ್ಷಿಕೆಗಳು ಇದ್ದವು. 11 ಕೇಂದ್ರಗಳ 721 ಕೆವಿಕೆಗಳಲ್ಲಿ ನೋಂದಣಿ ಮಾಡಿಕೊಂಡು ಆನ್‌ಲೈನ್ ಮೂಲಕವೂ ರೈತರು ಭಾಗವಹಿಸಿದ್ದು ವಿಶೇಷವಾಗಿತ್ತು.

ADVERTISEMENT

ಈ ಬಾರಿಯ ಮೇಳದಲ್ಲಿ, ತೋಟಗಾರಿಕೆಯನ್ನು ಉದ್ಯಮವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಆದ್ಯತೆ ನೀಡಲಾಗಿತ್ತು. ತೋಟಗಾರಿಕೆಯ ಮಾದರಿಗಳನ್ನು ರೈತರಿಗೆ ತೋರಿಸಿ, ಮಾಹಿತಿ ನೀಡಲಾಯಿತು.

ಕೃಷಿಕರಿಗೆ ನೆರವು: ಬಿತ್ತನೆಬೀಜ, ರಸಗೊಬ್ಬರ, ಯಂತ್ರೋಪಕರಣ, ಹೂವಿನ ಗಿಡ, ಅಲಂಕಾರಿಕ, ಔಷಧೀಯ ಮತ್ತು ಸೌಗಂಧಿಕ ಬೆಳೆ ಹಾಗೂ ಅಣಬೆ ಬೆಳೆಗಳ ಉತ್ಪಾದನೆ ಮತ್ತು ಸಸ್ಯ-ಸಂರಕ್ಷಣಾ ತಂತ್ರಜ್ಞಾನಗಳ ಸಂತೆಯೇ ನೆರೆದಿತ್ತು. ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ರೈತರು ಕೃಷಿ ತಜ್ಞರೊಂದಿಗೆ ಸಂವಾದ ನಡೆಸಿ ಅನುಮಾನಗಳನ್ನು ಬಗೆಹರಿಸಿಕೊಂಡರು.

ತೋಟಗಾರಿಕಾ ತಜ್ಞರು ಒಬ್ಬೊಬ್ಬ ರೈತರ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಆಲಿಸಿ ಪರಿಹರಿಸಲು ಪ್ರಯತ್ನಿ
ಸುತ್ತಿರುವುದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.