ADVERTISEMENT

ಸಮಗ್ರ ಬೆಳೆಯತ್ತ ಯೋಗಾನಂದರ ಚಿತ್ತ

ತೋಟಗಾರಿಕೆ, ಕೃಷಿ ಕ್ಷೇತ್ರದಲ್ಲಿನ ಸಾಧನೆಗೆ ಗೌರವ ಡಾಕ್ಟರೇಟ್ ಪಡೆದ ಕೃಷಿಕ

ಕೆ.ಎಸ್.ಪ್ರಣವಕುಮಾರ್
Published 2 ಜುಲೈ 2019, 19:45 IST
Last Updated 2 ಜುಲೈ 2019, 19:45 IST
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹರವಿಗೊಂಡನಹಳ್ಳಿಯ ಕೃಷಿಕ ಎಚ್.ಎಂ.ಯೋಗಾನಂದ ಮೂರ್ತಿ ಅವರು ತೋಟದಲ್ಲಿ ಮಾವು ಬೆಳೆದಿರುವುದು. 
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹರವಿಗೊಂಡನಹಳ್ಳಿಯ ಕೃಷಿಕ ಎಚ್.ಎಂ.ಯೋಗಾನಂದ ಮೂರ್ತಿ ಅವರು ತೋಟದಲ್ಲಿ ಮಾವು ಬೆಳೆದಿರುವುದು.    

ಚಿತ್ರದುರ್ಗ:ಕೃಷಿಕರೊಬ್ಬರ ತೋಟ ಹೊಕ್ಕರೆ ಕಣ್ಣಿಗೆ ತಂಪು, ಮನಸಿಗೆ ಹಿತ. ಎತ್ತ ನೋಡಿದರೂ ಹಸಿರಿನಿಂದಲೇ ಕಂಗೊಳಿಸುವ ತರಹೇವಾರಿ ಹಣ್ಣಿನ ಗಿಡಗಳ ರಾಶಿ. ಈ ಸುಂದರ ಅನುಭವ ಮೆದುಳಿಗೂ ಜ್ಞಾನ ನೀಡುತ್ತದೆ. ನಾವು ಏಕೆ ಈ ರೀತಿಯ ತೋಟ ಮಾಡಬಾರದು ಎಂಬ ಆಲೋಚನೆಗೂ ಮನಸು ತೆರೆದುಕೊಳ್ಳುತ್ತದೆ.

ಇದು ಮಲೆನಾಡಿನ ರೈತನ ತೋಟಗಾರಿಕೆ ಬೆಳೆಗಳ ಯಶೋಗಾಥೆ ಅಂದುಕೊಂಡಿರಾ? ಖಂಡಿತ ಅಲ್ಲ. ಮಳೆಯ ಕೊರತೆ, ಸತತ ಬರ, ಅಂತರ್ಜಲ ಮಟ್ಟ ಕುಸಿತದಿಂದ ಅನೇಕ ರೈತರು ಜಿಲ್ಲೆಯಲ್ಲಿ ಈಗಾಗಲೇ ನಲುಗಿದ್ದಾರೆ. ಇದರ ಮಧ್ಯೆಯೂ ಚಳ್ಳಕೆರೆಯ ತಾಲ್ಲೂಕಿನ ಹರವಿಗೊಂಡನಹಳ್ಳಿಯ ಕೃಷಿಕ ಎಚ್.ಎಂ.ಯೋಗಾನಂದಮೂರ್ತಿ ಅವರ ಕೃಷಿ ಭೂಮಿ ಬರದ ಬೆಂಗಾಡಿನಲ್ಲೂ ಹಚ್ಚ ಹಸಿರಿನ ಅನುಭವ ನೀಡುತ್ತದೆ.

ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡಿ, ವಿನೂತನ ಪ್ರಯೋಗಗಳೊಂದಿಗೆ ತೋಟಗಾರಿಕೆ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ. ಕೃಷಿಯನ್ನೇ ಕಾಯಕ ಮಾಡಿಕೊಂಡು ತೋಟಗಾರಿಕೆ ಬೆಳೆಗಳನ್ನು ನೈಪುಣ್ಯತೆಯಿಂದ ಬೆಳೆಯುವ ವಿಧಾನ ಕಂಡುಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಸಮಗ್ರ ಕೃಷಿಗೆ ಆದ್ಯತೆ ನೀಡುವ ಮೂಲಕ ಸಮೃದ್ಧ ಬೆಳೆ ಬೆಳೆದು ಆದಾಯ ಗಳಿಸುತ್ತಿದ್ದಾರೆ. ಅನೇಕ ಪ್ರಶಸ್ತಿಗಳನ್ನೂ ಪಡೆದು ಪ್ರಗತಿಪರ ರೈತ ಎನಿಸಿಕೊಂಡಿದ್ದಾರೆ.

ADVERTISEMENT

ಒಂದು ಬೆಳೆ ಬೆಳೆಯಲ್ಲ. ಒಂದು ಊಟ ಊಟವಲ್ಲ ಎಂಬ ಮಾತಿಗೆ ಬದ್ಧರಾಗಿದ್ದಾರೆ. 34 ಎಕರೆ ಜಮೀನು ಹೊಂದಿರುವ ಇವರು, 24 ಎಕರೆಯಲ್ಲಿ ತೋಟಗಾರಿಕೆಗೆ ಸಂಬಂಧಿಸಿದ ಬಹು ಬೆಳೆಗಳಿವೆ. 10 ಎಕರೆಯಲ್ಲಿ ರಾಗಿ, ಭತ್ತ ಬೆಳೆಯುತ್ತಾರೆ. ಬಹುತೇಕ ವಾಣಿಜ್ಯ ಬೆಳೆಗಳಾಗಿವೆ. ಹೀಗಾಗಿಯೇ ಯೋಗಾನಂದಮೂರ್ತಿ ಅವರ ವಿಧಾನವನ್ನು ‘ವಾಣಿಜ್ಯ ಬೆಳೆಗಳ ಸಮ್ಮಿಶ್ರ ತೋಟಗಾರಿಕೆ ಕೃಷಿ’ ಎನ್ನಬಹುದು.

ತೋಟದಲ್ಲಿ ಏನೇನು ಬೆಳೆಯುತ್ತಾರೆ?: ತೋಟದಲ್ಲಿ ಮಾವಿನ ವಿವಿಧ ತಳಿ, ನೇರಳೆ, ದ್ರಾಕ್ಷಿ, ಅಂಜೂರ, ಸ್ಟಾರ್‌ಫ್ರೂಟ್‌, ಬೆಟ್ಟದ ನೆಲ್ಲಿ, ಕಿರುನೆಲ್ಲಿ, ದಾಳಿಂಬೆ, ಚೆರ್ರಿಫ್ರೂಟ್‌, ಸೇಬು ಹಣ್ಣಿನ ಗಿಡಗಳಿವೆ. ದೇಶೀಯ ತಳಿಗಳ ಜತೆಗೆ ಮಲೇಷಿಯಾ ಸೇಬು, ಗಾಬ್‌ ಫ್ರೂಟ್, ಬಿಳಿ ನೇರಳೆ, ಬಟರ್‌ಫ್ರೂಟ್, ವೆಲಿವೇಟ್ ಸೇಬೂ ಸೇರಿ ಅನೇಕ ವಿದೇಶಿ ತಳಿಗಳನ್ನು ಬೆಳೆಯುತ್ತಿದ್ದಾರೆ. ತಿಂಗಳ ಹಿಂದೆಯಷ್ಟೇ ಅನೇಕ ಹಣ್ಣುಗಳನ್ನು ಮಾರಾಟ ಮಾಡಿ ಲಾಭ ಗಳಿಸಿದ್ದಾರೆ.

ನದಿ ದಂಡೆಯಲ್ಲಿ ಮರಳಿರಬೇಕು: ತೋಟದಲ್ಲಿ ಬೆಳೆ ಹಾಳಾಗದಂತೆ ನಿತ್ಯವೂ ಹಸಿರಿನಿಂದ ಕಂಗೊಳಿಸಲು ಆರು ಕೊಳವೆಬಾವಿ ಕೊರೆಸಿದ್ದಾರೆ. ಅಂತರ್ಜಲ ಮಟ್ಟ ಕುಸಿಯಬಾರದು, ಕೊಳವೆಬಾವಿಗಳಲ್ಲೂ ಸದಾ ನೀರಿರಬೇಕು ಎಂದರೆ ನದಿ ತೀರದ ಮರಳನ್ನು ರಕ್ಷಿಸಬೇಕು ಎಂಬುದು ಅವರ ವಾದ. ಈ ಕಾರಣದಿಂದಾಗಿ ಗ್ರಾಮದ ವೇದಾವತಿ ದಂಡೆಯ ಮರಳು ರಕ್ಷಣೆಗಾಗಿ ಅನೇಕ ವರ್ಷದಿಂದ ಹೋರಾಟದ ಜತೆಗೆ ಜಾಗೃತಿ ಮೂಡಿಸುತ್ತ ಬಂದಿದ್ದಾರೆ.

ಹನಿ ನೀರಾವರಿ ಪದ್ಧತಿ:ತುಂತುರು ಹನಿ ನೀರಾವರಿ ಪದ್ಧತಿ ಮೂಲಕ ಪ್ರತಿ ಗಿಡದ ಬುಡಕ್ಕೂ ಹನಿ ಹನಿ ನೀರು ಪೂರೈಸಿ, ಉತ್ತಮ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ತೋಟಗಾರಿಕೆ ಹಾಗೂ ಕೃಷಿ ಬೆಳೆ ಬೆಳೆಯುವಲ್ಲಿ ಸಾಧನೆಗೈದ ಅವರಿಗೆ ಇತ್ತೀಚೆಗೆ ಇಂಟರ್‌ನ್ಯಾಷನಲ್ ಗ್ಲೊಬಲ್ ಪೀಸ್ ಯೂನಿವರ್ಸಿಟಿ ‘ಡಾಕ್ಟರ್ ಆಫ್‌ ಅಗ್ರಿಕಲ್ಚರ್’ ಹೆಸರಿನಡಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

‘ನಾನು ಬೆಳೆಯುವ ಹಣ್ಣುಗಳನ್ನು ಸ್ಥಳೀಯ ಮಾರುಕಟ್ಟೆಗೆ ತೆಗೆದುಕೊಂಡು ಬರುವುದಿಲ್ಲ. ಬೆಂಗಳೂರಿನಲ್ಲಿ ಸ್ವಂತ ಮಾರುಕಟ್ಟೆ ಇದೆ. ಅಲ್ಲಿ ಬೇಡಿಕೆ ಹೆಚ್ಚಿರುವ ಕಾರಣ ಮಾವು, ಸಪೋಟಾ, ಹಲಸು, ನೇರಳೆ ಸೇರಿ ಬಹುತೇಕ ಹಣ್ಣುಗಳನ್ನು ಅಲ್ಲಿಯೇ ಮಾರಾಟ ಮಾಡುತ್ತೇನೆ. ಅನೇಕರು ಕರೆ ಮಾಡಿ ಹಣ್ಣುಗಳು ಮಾರುಕಟ್ಟೆಗೆ ಬರುವುದು ಯಾವಾಗ ಎಂದು ವಿಚಾರಿಸುತ್ತಾರೆ. ಇದಕ್ಕಿಂತ ಸಂತೋಷ ನನಗೆ ಮತ್ತೊಂದಿಲ್ಲ’ ಎನ್ನುತ್ತಾರೆ ಕೃಷಿಕ ಯೋಗಾನಂದಮೂರ್ತಿ.

‘ನನ್ನ ಹಣ್ಣುಗಳಲ್ಲಿನ ಸ್ವಾದಿಷ್ಟ ರುಚಿಗೆ ಶೇ 95ರಷ್ಟು ಸಾವಯವ ಗೊಬ್ಬರ ಪದ್ಧತಿ ಕಾರಣ. ಹಣ್ಣಿನ ಗಿಡಗಳಲ್ಲಿ ಹೂ ಬಿಡುವ ಸಂದರ್ಭದಲ್ಲಿ ಮಾತ್ರ ಶೇ 5ರಷ್ಟು ರಸಗೊಬ್ಬರ ಬಳಸಿ ಸ್ಪ್ರೇ ಮಾಡುತ್ತೇನೆ. ವಿವಿಧೆಡೆ ಮಾವಿನ ಹಣ್ಣು ₹ 80ರಂತೆ ಮಾರಾಟವಾದರೆ, ನಾನೂ ₹ 120ರಂತೆ ಮಾರಿದ್ದೇನೆ. ಅದೃಷ್ಟವೆಂಬಂತೆ ಈ ಬಾರಿ ನೇರಳೆ ಎರಡು ಬೆಳೆ ಸಿಕ್ಕಿತು. ಉತ್ತಮ ಬೆಲೆಗೆ ಮಾರಾಟ ಮಾಡಿದೆ. ಒಂದು ಬೆಳೆ ಮಾತ್ರ ಸಾವಿರಾರು ಪಕ್ಷಿಗಳ ಪಾಲಾಯಿತಾದರೂ ಬೇಸರವಾಗಿಲ್ಲ’ ಎನ್ನುತ್ತಾರೆ ಅವರು.

‘ತೋಟದಲ್ಲಿ 1,500 ಅಡಿಕೆ ಗಿಡಗಳಿವೆ. 400ರಿಂದ 500 ತೆಂಗಿನ ಗಿಡಗಳಿದ್ದು, ಫಸಲಿಗೆ ಬಂದಾಗ ಕಾಯಿ ವ್ಯಾಪಾರ ಮಾಡುವುದಿಲ್ಲ. ಬದಲಿಗೆ ಕೊಬ್ಬರಿ ಮಾರಾಟ ಮಾಡುತ್ತೇನೆ. ಗುಜರಾತಿನ ಗೀ ತಳಿಯ 15 ಹಸುಗಳು ಸೇರಿ ಒಟ್ಟು 40 ನಾಟಿ ಹಸುಗಳನ್ನು ಸಾಕಿದ್ದೇನೆ. ನಮ್ಮಲ್ಲಿನ ಭತ್ತದ ಹುಲ್ಲು ಹಸುಗಳಿಗೆ ಆಹಾರವಾಗುತ್ತದೆ. ಹಾಲನ್ನು ಮಾರಾಟ ಮಾಡುವುದಿಲ್ಲ. ಬೆಣ್ಣೆ ತಯಾರಿಸಿ ಕುಟುಂಬಕ್ಕೆ ಬಳಸಿಕೊಳ್ಳುತ್ತೇವೆ. ಅಧಿಕವಾದರೆ ಮಾತ್ರ ಮಾರುತ್ತೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.