ADVERTISEMENT

ಸಾರಸ್ವತ, ಸಿನಿಮಾ, ಸುಗಮ ಸಂಗೀತ ಕ್ಷೇತ್ರದ ಗಣ್ಯರ ನಿಸಾರ್ ನೆನಪು

​ಪ್ರಜಾವಾಣಿ ವಾರ್ತೆ
Published 4 ಮೇ 2020, 2:54 IST
Last Updated 4 ಮೇ 2020, 2:54 IST
   
""

ಸುವರ್ಣ ಮಾಧ್ಯಮ ಮಾರ್ಗ

ನಾನು ಪದ್ಯಗಳನ್ನು ಬರೆಯುವುದು ಗೊತ್ತಾಗಿ, ನಿಸಾರ್ ಅವರೇ ನನ್ನನ್ನು ತಮ್ಮ ಬಳಿ ಕರೆಸಿಕೊಂಡು ಪ್ರೋತ್ಸಾಹಿಸಿದ್ದರು. ನಮ್ಮ ಸಂಬಂಧ ನಿಕಟವಾಗಲು ಅದೇ ಕಾರಣ. ಅವರಿಲ್ಲದ ನಂತರವೂ ಸಂಬಂಧ ಹಾಗೇ ಇರುತ್ತದೆ. ನವ್ಯದ ವಿಜೃಂಭಣೆಯ ಕಾಲದಲ್ಲಿ ನಿಸಾರ್ ಬರೆಯಲು ಆರಂಭಿಸಿದರು. ಆದರೆ, ನವ್ಯದ ಸಂವಹನಶೀಲತೆ ಕಡಿಮೆ ಇತ್ತು. ಆಗ ನಿಸಾರ್ ಅವರು ವಿಮರ್ಶಕರಿಗೂ ಓದುಗರಿಗೂ ಪ್ರಿಯವಾಗುವ ಸುವರ್ಣ ಮಧ್ಯಮ ಮಾರ್ಗ ಹುಡುಕಿಕೊಂಡರು.

- ಎಚ್.ಎಸ್. ವೆಂಕಟೇಶಮೂರ್ತಿ, ಕವಿ

ADVERTISEMENT

***

ಅವರಲ್ಲಿ ಅಪ್ಪಾಜಿ ಕಾಣುತ್ತಿದ್ದೆವು

ನಮ್ಮ ತಂದೆ ನಟ ಸಾರ್ವಭೌಮನಾದರೆ, ನಿಸಾರ್‌ ಸಾಹಿತಿ ಸಾರ್ವಭೌಮ. ಇಬ್ಬರೂ ಅವರವರ ಕ್ಷೇತ್ರಗಳಲ್ಲಿ ರಾಜಕುಮಾರರೇ. ಆಗಾಗ ಎರಡೂ ಕುಟುಂಬಗಳು ಒಟ್ಟಿಗೆ ಸೇರುತ್ತಿದ್ದೆವು.ಊಟ ಮಾಡಿ ಕುಳಿತರೆ ಅವರು ಮತ್ತು ಅಪ್ಪಾಜಿ ಮಧ್ಯೆ ತಾಸುಗಟ್ಟಲೆ ಮಾತುಕತೆ. ಅಪ್ಪಾಜಿ ತೀರಿಕೊಂಡ ನಂತರವೂ ಅವರ ಒಡನಾಟ ಉಳಿಸಿಕೊಂಡಿದ್ದರು. ಅವರ ಮೊಗದಲ್ಲಿ ಅಪ್ಪಾಜಿ ಕಾಣುತ್ತಿದ್ದೆವು.

- ರಾಘವೇಂದ್ರ ರಾಜ್‌ಕುಮಾರ್‌, ನಟ

***

ಜನಪ್ರಿಯ, ಶ್ರೇಷ್ಠಕನ್ನಡದ ವಿಶಿಷ್ಟ ದನಿ ನಿಸಾರ್.

ನವೋದಯದ ಆಶಯಗಳಿಂದ ಪ್ರಭಾವಿತರಾದರು, ನವ್ಯದ ಶೈಲಿಯಲ್ಲಿ ಬರೆದರು. ‘ನಿಮ್ಮೊಳಗಿದ್ದೂ ನಿಮ್ಮಂತಾಗದೆ’ಎಂಬುದು ಅವರು ಬರೆದ ಅತ್ಯಂತ ಧ್ವನಿಪೂರ್ಣ ಸಾಲು. ಶ್ರೇಷ್ಠತೆ ಹಾಗೂ ಜನಪ್ರಿಯತೆ ಒಟ್ಟಿಗೆ ಹೋಗುವುದು ಕಷ್ಟ. ನಿಸಾರ್ ಅದನ್ನು ಸಾಧಿಸಿದ್ದರು. ನಿಸಾರ್ ಅವರು ಬಹಳ ಒಳ್ಳೆಯ ಅನುವಾದಕರೂ ಹೌದು.

- ನರಹಳ್ಳಿ ಬಾಲಸುಬ್ರಹ್ಮಣ್ಯ, ವಿಮರ್ಶಕ

***

ಸಾವಿರದ ಕವಿ

‘ಜೋಗದ ಸಿರಿ’ ಹಾಡನ್ನು ನಿಸಾರ್ ಬಹಳ ಚೆನ್ನಾಗಿ ವರ್ಣಿಸುತ್ತಿದ್ದರು. ಅವರು ಹೇರಳ ಸಾಹಿತ್ಯವನ್ನು ಸುಗಮ ಸಂಗೀತ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಅವರು ಎಂದೆಂದಿಗೂ ಸಾವು ಇರದ (ಸಾವಿರದ) ಕವಿ.

- ವೈ.ಕೆ.ಮುದ್ದುಕೃಷ್ಣ, ಗಾಯಕ

***

ಸಾಹಿತ್ಯದ ಧ್ರುವತಾರೆ

ನಿಸಾರ್ ಸಾಹಿತ್ಯ ಲೋಕದ ಧ್ರುವತಾರೆ. ಬಹಳ ಸರಳ ವ್ಯಕ್ತಿ. ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಎಲ್ಲರನ್ನೂ ಬಹಳ ಪ್ರೀತಿ ಮತ್ತು ಗೌರವದಿಂದ ಕಾಣುತ್ತಿದ್ದರು.

- ರತ್ನಮಾಲಾ ಪ್ರಕಾಶ್, ಗಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.