ADVERTISEMENT

ಪ್ರಜಾವಾಣಿ ಕ್ಲಬ್‌ಹೌಸ್‌ ‘ಆಲದ ಮರ’: ಶ್ರಾವಣ ಕವಿಯ ಕಾವ್ಯಕ್ಕೆ ಕಿವಿಯಾದರು...

‘ಆಲದಮರ’ದಡಿ ‘ಬೇಂದ್ರೆ ಹಾಡು–ಪಾಡು’ ಕಾರ್ಯಕ್ರಮದಲ್ಲಿ ಕಾವ್ಯದ ಸೋನೆ ಮಳೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 2:11 IST
Last Updated 6 ಸೆಪ್ಟೆಂಬರ್ 2021, 2:11 IST
ಡಾ ಜಿ ಕೃಷ್ಣಪ್ಪ
ಡಾ ಜಿ ಕೃಷ್ಣಪ್ಪ   

ಆಲದಮರ (ಪ್ರಜಾವಾಣಿ ಕ್ಲಬ್‌ ಹೌಸ್‌): ಹೆಚ್ಚಿನವರು ವಸಂತ ಮಾಸದ ಕವಿಗಳು. ದ.ರಾ. ಬೇಂದ್ರೆ ಅವರು ಶ್ರಾವಣದ ಕವಿ. ಕಿವಿಯನ್ನು ಕಣ್ಣಾಗಿಸಿ ಪ್ರಕೃತಿ, ಬದುಕನ್ನು ಆಸ್ವಾದಿಸಿದ ಕವಿ....

–ಇದು ಬೇಂದ್ರೆ ಕಾವ್ಯ ಪರಿಚಾರಕ ಡಾ.ಜಿ.ಕೃಷ್ಣಪ್ಪ ಅವರ ಭಾವುಕ ಮಾತು. ‘ಆಲದಮರ’ದ ಅಡಿಯಲ್ಲಿ ಭಾನುವಾರ ಬೆಳಿಗ್ಗೆಯಿಂದ ‘ಬೇಂದ್ರೆ ಹಾಡು–ಪಾಡು’ ಕಾರ್ಯಕ್ರಮದಲ್ಲಿ ಕಾವ್ಯದ ಸೋನೆ ಮಳೆಯೇ ಹರಿಯಿತು. ಶ್ರಾವಣ ಬಂತು ನಾಡಿಗೆ... ಹಾಡಿಗೆ ಗಾಯಕಿ ಎಂ.ಡಿ. ಪಲ್ಲವಿ ಅವರು ಧ್ವನಿಯಾಗಿ ನಾಂದಿ ಹಾಡಿದರು.

‘ಶ್ರಾವಣವನ್ನು ಧ್ಯಾನಿಸುವ ಕವಿ ಬೇಂದ್ರೆ. ರಸವೇ ಜೀವನ–ವಿರಸವೇ ಮರಣ–ಸಮರಸವೇ ಜೀವನ ಎಂಬ ಅನುಭಾವವನ್ನು ಜಗತ್ತಿಗೆ ಕೊಟ್ಟಿದ್ದಾರೆ’ ಎಂದು ಕೃಷ್ಣಪ್ಪ ನೆನಪಿಸಿದರು.

ADVERTISEMENT

‘ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದ...’ ಹಾಡು ಡಾ.ಶಮಿತಾ ಮಲ್ನಾಡ್‌ ಧ್ವನಿಯಲ್ಲಿ ಮೂಡಿಬಂದಿತು.

‘ಬೇಂದ್ರೆ ಅವರು ಶಬ್ದಗಳನ್ನು ಹೂವು, ತರಕಾರಿ ಮಾರುವವರು, ಶ್ರೀಸಾಮಾನ್ಯರಿಂದಲೇ ಪಡೆದಿದ್ದಾರೆ. ಹೀಗಾಗಿಯೇ ಅವರ ಕಾವ್ಯಸೃಷ್ಟಿ ಗಟ್ಟಿಯಾಗಿದೆ’ ಎಂದರುರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಪ್ರಹ್ಲಾದ ಬಿ. ಮಹಿಷಿ.

ಉಪರಾಷ್ಟ್ರಪತಿಗೆ ಹಾವು ತೋರಿಸಿದ್ದು!: ‘ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಹಾವಾಡಿಗನೊಬ್ಬನನ್ನು ಸಮಾರಂಭದ ಸ್ಥಳಕ್ಕೆ ಕರೆತಂದಿದ್ದ ಬೇಂದ್ರೆ ಅವರು, ವೈವಿಧ್ಯಮಯ ಹಾವುಗಳನ್ನು ಉಪರಾಷ್ಟ್ರಪತಿಯವರಿಗೆ ತೋರಿಸಬೇಕು ಎಂದು ಪಟ್ಟು ಹಿಡಿದಿದ್ದರು. ಕೊನೆಗೂ ಹಾವಾಡಿಗನಿಗೆ ಉಪರಾಷ್ಟ್ರಪತಿಯವರಿಗೆ ಹಾವು ತೋರಿಸಲು ಬಿಟ್ಟೆವು’ ಎಂದು ನೆನಪಿಸಿದರು ಪ್ರಹ್ಲಾದ ಮಹಿಷಿ.

‘ನೀ ಹಿಂಗ ನೋಡಬ್ಯಾಡ ನನ್ನ... ಈ ಹಾಡಿನ ಹಿಂದೆ ಬೇಂದ್ರೆಯವರ ಅಪಾರ ದುಃಖವಿದೆ. ಲಲಿತಾ ಎಂಬ ಮಗು ಸಾವಿನ ಅಂಚಿನಲ್ಲಿದ್ದಾಗ ಪುಣೆಯಿಂದ ಬರುತ್ತಿದ್ದ ಅವರು ಭಾವತೀವ್ರತೆಯಲ್ಲಿ ಬರೆದ ಹಾಡು ಅದು’ ಎಂದರು ಜಿ.ಕೃಷ್ಣಪ್ಪ.

‘ಬೇಂದ್ರೆ ಅವರಿಗೆ ಡಾಕ್ಟರೇಟ್‌ ಸಿಕ್ಕಾಗ, ನಾನು ಹುಟ್ತಾನೆ ಡಿ.ಆರ್‌. ಬೇಂದ್ರೆ (ದತ್ತಾತ್ರೇಯ ರಾಮಚಂದ್ರ ಬೇಂದ್ರೆ). ಇದರಲ್ಲೇನು ವಿಶೇಷ ಎಂದರಂತೆ’ ಎಂದು ಬೇಂದ್ರೆ ಮಾತನ್ನು ನೆನಪಿಸಿದರು ಪ್ರಹ್ಲಾದ ಮಹಿಷಿ.

ಗಾಯಕ ಬಸವಲಿಂಗಯ್ಯ ಹಿರೇಮಠ, ಬೇಂದ್ರೆಯವರ ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ....’ ಗೀತೆ ಹಾಡಿದರು.

ಕಿನ್ನರಿ ಆಡಿಯೊ ಸಂಸ್ಥೆ ಮಾಲೀಕರಾದ ಪದ್ಮಪಾಣಿ ಜೋಡಿದಾರ್‌ ಮಾತನಾಡಿ, ‘ಬೇಂದ್ರೆಯವರ ಹಾಡುಗಳ ಕ್ಯಾಸೆಟ್‌ ಹೊರತಂದಾಗ ದಕ್ಷಿಣ ಕನ್ನಡ, ಕಾಸರಗೋಡಿನಲ್ಲಿ ಸಾಕಷ್ಟು ಮಾರಾಟ ಆದವು. ಆದರೆ, ಧಾರವಾಡದಲ್ಲಿ ಎರಡೇ ಕ್ಯಾಸೆಟ್‌ ಮಾರಾಟವಾದವು’ ಎಂದು ಸ್ಮರಿಸಿದರು.

ಬೇಂದ್ರೆ ಅವರ ಎರಡು ಕವನಗಳನ್ನು ನಾನು ಬರೆದಿದ್ದೇನೆ (ಅವರು ಹೇಳಿದ್ದನ್ನು ಬರೆದುಕೊಟ್ಟದ್ದು) ಎಂದರು ಪದ್ಮಪಾಣಿ.

ನಾಕುತಂತಿ ಕವನಸಂಕಲನದ ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿತ್ತು. ಸಾಹಿತಿಗಳಾದ ಉಷಾ ಪಿ. ರೈ, ಎಂ.ಆರ್‌.ಕಮಲಾ ಸೇರಿದಂತೆ ನೂರಾರು ಕೇಳುಗರು ಭಾಗವಹಿಸಿದ್ದರು. ಪ್ರಜಾವಾಣಿ ಸಹ ಸಂಪಾದಕ ಬಿ.ಎಂ. ಹನೀಫ್‌ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.