ADVERTISEMENT

ಓಲಾ ವಿದ್ಯುತ್ ಚಾಲಿತ ಸ್ಕೂಟರ್‌ ಬಿಡುಗಡೆ: ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಆಗಸ್ಟ್ 2021, 12:55 IST
Last Updated 15 ಆಗಸ್ಟ್ 2021, 12:55 IST
ಇ–ಸ್ಕೂಟರ್‌ ಮಾದರಿ ಚಿತ್ರ
ಇ–ಸ್ಕೂಟರ್‌ ಮಾದರಿ ಚಿತ್ರ   

ಓಲಾ ಕಂಪನಿಯು ತನ್ನ ವಿದ್ಯುತ್ ಚಾಲಿತ ಸ್ಕೂಟರ್‌ ಅನ್ನು ಇಂದು(ಆ.15) ಬಿಡುಗಡೆ ಮಾಡಿದೆ.

ಎರಡು ವೇರಿಯಂಟ್‌ಗಳಲ್ಲಿ (S1 ಮತ್ತು S1 Pro) ಬಿಡುಗಡೆಗೊಂಡಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ₹99,000ರಿಂದ ಆರಂಭವಾಗುತ್ತದೆ.

ಓಲಾ (S1) ಸ್ಕೂಟರ್‌ ₹ 99,000 ಹಾಗೂ ಓಲಾ (S1 Pro) ಸ್ಕೂಟರ್‌ ₹ 1,29,999 ಬೆಲೆಗೆ ಲಭ್ಯವಿದೆ ಎಂದು ಓಲಾಕ್ಯಾಬ್ಸ್ ಸಹ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಿಷ್ ಅಗರ್‌ವಾಲ್ ತಿಳಿಸಿದ್ದಾರೆ.

ADVERTISEMENT

ಒಂದು ಬಾರಿ ಸಂಪೂರ್ಣ ಬ್ಯಾಟರಿ ಚಾರ್ಜ್‌ ಮಾಡಿದರೆ ಓಲಾ(S1) ಸ್ಕೂಟರ್‌ನಲ್ಲಿ 150 ಕಿ.ಮೀ. ವರೆಗೂ, ಓಲಾ (S2) ಸ್ಕೂಟರ್‌ನಲ್ಲಿ 180 ಕಿ.ಮೀ ವರೆಗೂ ಪ್ರಯಾಣಿಸಬಹುದಾಗಿದೆ.

ಗಂಟೆಗೆ ಗರಿಷ್ಠ 90 ಕಿ.ಮೀ. ವೇಗದಲ್ಲಿ ಚಲಿಸುವ ಓಲಾ ಸ್ಕೂಟರ್‌ಗಳನ್ನು ಮನೆಯಲ್ಲಿಯೇ ಚಾರ್ಜ್‌ ಮಾಡಬಹುದಾದ ವ್ಯವಸ್ಥೆ ಇರಲಿದೆ.

ದೇಶದ 100 ನಗರಗಳಲ್ಲಿ ಮೊದಲ ವರ್ಷ ಓಲಾ 5,000 ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಸ್ಥಾಪಿಸುತ್ತಿದೆ. ಚಾರ್ಜಿಂಗ್‌ ಕೇಂದ್ರಗಳಲ್ಲಿ ಕೇವಲ 18 ನಿಮಿಷಗಳಲ್ಲಿ ಸ್ಕೂಟರ್‌ನ ಬ್ಯಾಟರಿ ಶೇ 50ರಷ್ಟು ಚಾರ್ಜ್ ಆಗಲಿದೆ ಹಾಗೂ 75 ಕಿ.ಮೀ. ವರೆಗೂ ಸಾಗಬಹುದು. ಸ್ಮಾರ್ಟ್‌ಫೋನ್‌ ಅಪ್ಲಿಕೇಷನ್‌ ಮೂಲಕ ಸ್ಕೂಟರ್‌ನೊಂದಿಗೆ ಸಂಪರ್ಕ ಸಾಧಿಸುವ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗಿದೆ.

ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳನ್ನು ತಯಾರಿಸುವ ವ್ಯವಸ್ಥೆ ರೂಪಿಸಲು ಓಲಾ ಕಂಪನಿಯು ₹ 2,400 ಕೋಟಿ ಹೂಡಿಕೆ ಮಾಡಿದ್ದು, ತಮಿಳುನಾಡಿನಲ್ಲಿ ಎಲೆಕ್ಟ್ರಿಕ್‌ ವಾಹನ ತಯಾರಿಕಾ ಘಟಕ ಸ್ಥಾಪನೆಯಾಗಿದೆ.

ಓಲಾ ಕಂಪನಿಯು ತನ್ನ ವಿದ್ಯುತ್ ಚಾಲಿತ ಸ್ಕೂಟರ್‌ ಬುಕಿಂಗ್‌ ಸೇವೆಯನ್ನು ಜುಲೈನಲ್ಲಿ ಆರಂಭಿಸಿದ್ದು 24 ಗಂಟೆಗಳಲ್ಲಿ 1 ಲಕ್ಷ ಗ್ರಾಹಕರು ಬುಕಿಂಗ್‌ ಮಾಡಿದ್ದರು.

ಅಕ್ಟೋಬರ್‌ ಅಂತ್ಯಕ್ಕೆ 30 ಸಾವಿರ ಸ್ಕೂಟರ್‌ಗಳನ್ನು ಉತ್ಪಾದನೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.