ADVERTISEMENT

ಹಣ್ಣು–ತರಕಾರಿ ಮಾರಾಟಕ್ಕೆ ಸೌರಚಾಲಿತ ತ್ರಿಚಕ್ರ ವಾಹನ!

ಗಾಣಧಾಳು ಶ್ರೀಕಂಠ
Published 12 ಫೆಬ್ರುವರಿ 2021, 12:01 IST
Last Updated 12 ಫೆಬ್ರುವರಿ 2021, 12:01 IST
ತ್ರಿಚಕ್ರ ವಾಹನ  ಚಿತ್ರ: ಇರ್ಷಾದ್ ಅಹಮದ್‌
ತ್ರಿಚಕ್ರ ವಾಹನ ಚಿತ್ರ: ಇರ್ಷಾದ್ ಅಹಮದ್‌   

ಮುಂಜಾನೆ ಗಾಡಿ ತಳ್ಳುತ್ತಾ, ವೈವಿಧ್ಯಮಯವಾಗಿ ಸೊಪ್ಪು.. ತರಕಾರಿಗಳ ಹೆಸರು ಕೂಗುತ್ತಾ ಮಾರಾಟ ಆರಂಭಿಸಿರುವ ಸಣ್ಣ ವ್ಯಾಪಾರಸ್ಥರು ಬಿಸಿಲು ಏರಿದಂತೆ ದಣಿದು, ಬಳಲುತ್ತಾರೆ, ಕೂಗುವ ಜೋಷ್ ಕಡಿಮೆಯಾಗುತ್ತದೆ. ಜತೆಗೆ ಗಾಡಿ ಮೇಲಿರುವ ತರಕಾರಿಗಳೂ ಸೊರಗುತ್ತವೆ. ಎಷ್ಟು ನೀರು ಕುಡಿದರೂ ದಣಿವಾರುವುದಿಲ್ಲ. ಎಷ್ಟು ನೀರು ಚಿಮುಕಿಸಿದರೂ ತರಕಾರಿಗಳು ತಾಜಾವಾಗಿರುವುದಿಲ್ಲ. ಇದರಿಂದ ವ್ಯಾಪಾರವೂ ಅಷ್ಟಕ್ಕಷ್ಟೇ ಎನ್ನುವಂತಾಗುತ್ತದೆ.

ಈ ಸಂಕಷ್ಟಕ್ಕೆ ಪರಿಹಾರವಾಗಿ ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌), ಅರ್ಕಾ ಹೆಸರಿನ ಸೌರಚಾಲಿತ ತ್ರಿಚಕ್ರ ವಾಹನವೊಂದನ್ನು ಅಭಿವೃದ್ಧಿಪಡಿಸಿದೆ. ಈ ವಾಹನ ಸಣ್ಣ ವ್ಯಾಪಾರಸ್ಥರ ಮೇಲಿನ ಒತ್ತಡ ತಗ್ಗಿಸಿ, ವ್ಯಾಪಾರ ವೃದ್ಧಿಗೂ ನೆರವಾಗುತ್ತದೆ.

ವಾಹನದ ವಿನ್ಯಾಸ
ಮೇಲ್ನೋಟಕ್ಕೆ ಥೇಟ್‌ ಮೊಪೆಡ್‌ನಂತೆ ಕಾಣುವ ಈ ತ್ರಿಚಕ್ರ ವಾಹನದ ಚಾಲಕನ ಸೀಟಿನ ಹಿಂಬದಿಯಲ್ಲಿ ದೊಡ್ಡ ಪೆಟ್ಟಿಗೆಯನ್ನು(ಬಾಕ್ಸ್) ಕೂರಿಸಲಾಗಿದೆ. ಪೆಟ್ಟಿಗೆ ಮೇಲ್ಭಾಗದಲ್ಲಿ ಎರಡು ಸೌರಶಕ್ತಿ ಫಲಕಗಳಿವೆ. ಕೆಳಭಾಗದಲ್ಲಿ ಒಂದು ಎಚ್‌ಪಿ ಸಾಮರ್ಥ್ಯದ ಮೋಟಾರ್, 20 ಲೀಟರ್ ನೀರಿನ ಕ್ಯಾನ್, ಬ್ಯಾಟರಿಯ ಜೋಡಣೆ ಇದೆ.

ADVERTISEMENT

ಪೆಟ್ಟಿಗೆಯ ಎರಡೂ ಭಾಗದಲ್ಲಿ ಗಾಜಿನ ಸ್ಲೈಡ್ ಡೋರ್‌ಗಳಿವೆ. ಒಳಗಡೆ 10 ಕೆ.ಜಿ ತರಕಾರಿ ಹಿಡಿಯುವಂತಹ 20 ಕ್ರೇಟ್‌ಗಳನ್ನು ಕೂರಿಸಬಹುದು. ಮಧ್ಯದಲ್ಲಿ ಡ್ರಿಪ್‌ ಪೈಪ್‌ ತರಹದ ಕೊಳವೆ ಇದ್ದು, ಇದಕ್ಕೆ ಕೆಳಭಾಗದಲ್ಲಿರುವ ಕ್ಯಾನ್‌ಗೆ ಸಂಪರ್ಕ ಕಲ್ಪಿಸಿದ್ದಾರೆ. ಇದರಿಂದ ನೀರು ಚಿಮ್ಮುತ್ತಾ ತರಕಾರಿಯನ್ನು ತಾಜಾವಾಗಿಡುತ್ತದೆ.

ಪರಿಸರ ಸ್ನೇಹಿ ವಾಹನ
ಸೌರಫಲಕಗಳು ವಾಹನ ಚಾಲನೆಗೆ ಬೇಕಾದ ವಿದ್ಯುತ್ ತಯಾರಿಸಿಕೊಡುತ್ತವೆ. ಬಿಸಿಲು ಕಡಿಮೆಯಾದರೂ, ವಿದ್ಯುತ್‌ನಿಂದ ಚಾರ್ಜ್ ಮಾಡಿಕೊಂಡು ಚಾಲನೆ ಮಾಡಲು ಬ್ಯಾಟರಿ ವ್ಯವಸ್ಥೆ ಇದೆ. ಸೌರಶಕ್ತಿ, ವಿದ್ಯುತ್ ಶಕ್ತಿ ಎರಡೂ ಕೈಕೊಟ್ಟರೂ ಕೊನೆಯದಾಗಿ ಪೆಡಲ್‌ ತುಳಿಯುತ್ತಾ ವಾಹನ ನಡೆಸಬಹುದು. ಹಾಗಾಗಿ ಪೆಟ್ರೋಲ್, ಡೀಸೆಲ್ ಖರ್ಚಿಲ್ಲ. ಹೊಗೆ ಉಗುಳಿ ಪರಿಸರಕ್ಕೆ ಹಾನಿ ಮಾಡುವುದಿಲ್ಲ.

‘ಸೌರಶಕ್ತಿಯಿಂದ ವಾಹನ ಚಲಿಸುತ್ತದೆ. ವಿದ್ಯುತ್‌ನಿಂದ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 20 ಕಿ.ಮೀವರೆಗೂ ಓಡಬಹುದು’ ಎನ್ನುತ್ತಾರೆ ಐಐಎಚ್ಆರ್‌ ಪ್ರಧಾನ ವಿಜ್ಞಾನಿ ಜಿ.ಸೇಂಥಿಲ್ ಕುಮಾರನ್‌.

2 ಕ್ವಿಂಟಲ್ ಸಾಗಿಸುವ ಸಾಮರ್ಥ್ಯ
ಪೆಟ್ಟಿಗೆಯಲ್ಲಿ 200 ಕೆ.ಜಿವರೆಗೂ ಹಣ್ಣು ತರಕಾರಿ ಇಡಬಹುದು. ‘ಪೆಟ್ಟಿಗೆಯೊಳಗೆ ನಿಯಮಿತವಾಗಿ ನೀರು ಚಿಮುಕಿಸುವ ವ್ಯವಸ್ಥೆ ಇರುವುದರಿಂದ, ತರಕಾರಿಗಳನ್ನು ದೀರ್ಘಕಾಲ ತಾಜಾವಾಗಿಟ್ಟು‌ ಮಾರಾಟ ಮಾಡಬಹುದು‘ ಎನ್ನುತ್ತಾರೆ ಸೇಂಥಿಲ್‌ ಕುಮಾರನ್.

ರಾತ್ರಿ ವೇಳೆಯಲ್ಲೂ ವ್ಯಾಪಾರ ಮಾಡಲು ಅನುಕೂಲವಾಗುವಂತೆ ಪೆಟ್ಟಿಗೆಯೊಳಗೆ ವಿದ್ಯುತ್ ದೀಪವನ್ನು ಅಳವಡಿಸಲಾಗಿದೆ. ಒಂದು ತೂಕ ಮಾಡುವ ಇದೆ. ತರಕಾರಿ ಕೂಗುವುದಕ್ಕೆ ಮೈಕ್ ಇದೆ. ವಾಹನದಲ್ಲಿರುವ ಈ ಎಲ್ಲ ಚಟುವಟಿಕೆಗಳೂ ಸೌರಶಕ್ತಿಯಿಂದಲೇ ನಡೆಯುತ್ತವೆ. ಸಣ್ಣ ವ್ಯಾಪಾರಸ್ಥರಿಗೆ ಈ ವಾಹನ ತುಂಬಾ ಪ್ರಯೋಜನವಾಗಲಿದೆ. ಸದ್ಯ, ಬೆಂಗಳೂರಿನ ಕಂಪನಿಯೊಂದು, ಐಐಎಚ್‌ಆರ್‌ನಿಂದ ತಂತ್ರಜ್ಞಾನ ಮತ್ತು ಪರವಾನಗಿ ಪಡೆದು ಈ ವಾಹನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ.

ಕಳೆದ ವರ್ಷ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ವಾಹನವನ್ನು ಉದ್ಘಾಟಿಸಿದ್ದಾರೆ. ಐಐಎಚ್‌ಆರ್ ಪರಿಶಿಷ್ಟ ವರ್ಗದ ಮೂವರಿಗೆ ಈ ವಾಹನವನ್ನು ಉಚಿತವಾಗಿ ವಿತರಿಸಿದೆ. ಸರ್ಕಾರದ ಯಾವುದಾದರೂ ಯೋಜನೆಯಡಿ ಅಥವಾ ಯಾವುದಾದರೂ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯಂತಹ ಯೋಜನೆಯಡಿ ಈ ವಾಹನಗಳನ್ನು ವಿತರಿಸಲು ಆಸಕ್ತಿಯಿಂದ ಮುಂದೆ ಬಂದರೆ, ಈ ವಾಹನ ತಯಾರಿಸಿ ಕೊಡಲು ಸಂಸ್ಥೆ ಸಿದ್ಧವಿದೆ ಎನ್ನುತ್ತಾರೆ ಐಐಎಚ್‌ಆರ್ ನಿರ್ದೇಶಕ ಎಂ.ಆರ್. ದಿನೇಶ್.

ಈ ತ್ರಿಚಕ್ರ ವಾಹನದ ಅಂದಾಜು ಬೆಲೆ ₹1.5 ಲಕ್ಷ(ತಯಾರಿಕೆಯ ಹಂತದ ಬೆಲೆ). ವಾಹನ ತಯಾರಿಕೆ ಕುರಿತು ಆಸಕ್ತಿಯುಳ್ಳವರಿಗೆ ಐಐಎಚ್‌ಆರ್‌ ತಂತ್ರಜ್ಞಾನ ಮತ್ತು ಪರವಾನಗಿ ನೀಡಲಿದೆ ಎನ್ನುತ್ತಾರೆ ಸೇಂಥಿಲ್ ಕುಮಾರನ್‌.

ವಾಹನದ ಕುರಿತ ಹೆಚ್ಚಿನ ಮಾಹಿತಿಗೆ: 080–23086100, ಇಮೇಲ್: director.iihr@icar.gov.in www.iihr.res.in ಜಾಲತಾಣವನ್ನೂ ಸಂಪರ್ಕಿಸಬಹುದು.

ಏನೇನು ಪ್ರಯೋಜನ?
* ಮಾರಾಟಗಾರರಿಗೆ ಶ್ರಮ ಕಡಿಮೆಯಾಗುತ್ತದೆ. ಹಣ್ಣು– ತರಕಾರಿಗಳು ದೂಳಿನಿಂದ ಮುಕ್ತವಾಗಿದ್ದು, ಸದಾ ತಾಜಾವಾಗಿರುತ್ತವೆ. ಕಡಿಮೆ ಅವಧಿಯಲ್ಲಿ ಹೆಚ್ಚು ಗ್ರಾಹಕರನ್ನು ತಲುಪಬಹುದು.
* ವಾಹನದ ತಯಾರಿಕೆ ಹಂತದ ಬೆಲೆ ₹1.5 ಲಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.