ADVERTISEMENT

ವಾಹನ ರಿಟೇಲ್‌ ಮಾರಾಟ ಇಳಿಕೆ

ಪಿಟಿಐ
Published 4 ಆಗಸ್ಟ್ 2022, 21:00 IST
Last Updated 4 ಆಗಸ್ಟ್ 2022, 21:00 IST
   

ನವದೆಹಲಿ: ವಾಹನಗಳ ರಿಟೇಲ್‌ ಮಾರಾಟವು 2021ರ ಜುಲೈಗೆ ಹೋಲಿಸಿದರೆ 2022ರ ಜುಲೈನಲ್ಲಿ ಶೇ 8ರಷ್ಟು ಇಳಿಕೆ ಕಂಡಿದೆ ಎಂದು ಭಾರತೀಯ ವಾಹನ ವಿತರಕರ ಒಕ್ಕೂಟ (ಎಫ್‌ಎಡಿಎ) ಗುರುವಾರ ತಿಳಿಸಿದೆ.

ಪ್ರಯಾಣಿಕ ವಾಹನಗಳು, ದ್ವಿಚಕ್ರ ಮತ್ತು ಟ್ರ್ಯಾಕ್ಟರ್‌ಗಳ ಮಾರಾಟದಲ್ಲಿ ಇಳಿಕೆ ಆಗಿರುವುದೇ ಇದಕ್ಕೆ ಕಾರಣ ಎಂದು ಅದು ಹೇಳಿದೆ. 2021ರ ಜುಲೈನಲ್ಲಿ 15.59 ಲಕ್ಷ ವಾಹನಗಳು ಮಾರಾಟ ಆಗಿದ್ದವು. 2022ರ ಜುಲೈನಲ್ಲಿ 14.36 ಲಕ್ಷ ವಾಹನಗಳು ಮಾರಾಟ ಆಗಿವೆ ಎಂದು ಅದು ಮಾಹಿತಿ ನೀಡಿದೆ.

ತ್ರಿಚಕ್ರ ವಾಹನ ಮತ್ತು ವಾಣಿಜ್ಯ ಬಳಕೆ ವಾಹನಗಳ ಮಾರಾಟವು 2021ರ ಜುಲೈಗೆ ಹೋಲಿಸಿದರೆ 2022ರ ಜುಲೈನಲ್ಲಿ ಏರಿಕೆ ಆಗಿದೆ.

ADVERTISEMENT

ಮಾರಾಟದಲ್ಲಿ ಇಳಿಕೆ ಕಂಡಿದ್ದರೂ ಹೊಸ ಮಾದರಿಗಳು ಅದರಲ್ಲಿಯೂ ಮುಖ್ಯವಾಗಿ ಕಾಂಪ್ಯಾಕ್ಟ್‌ ಎಸ್‌ಯುವಿ ಬಿಡುಗಡೆ ಆಗುತ್ತಿರುವುದು ಬೆಳವಣಿಗೆಗೆ ನೆರವಾಗುತ್ತಿದೆ. ಜೊತೆಗೆ, ಪೂರೈಕೆ ವ್ಯವಸ್ಥೆಯು ಸುಧಾರಿಸುತ್ತಿರುವುರಿಂದ ಗ್ರಾಹಕರು ವಾಹನಗಳಿಗಾಗಿ ಹೆಚ್ಚಿನ ಅವಧಿಯವರೆಗೆ ಕಾಯುವುದು ತಪ್ಪಲಿದೆ ಎಂದು ಒಕ್ಕೂಟದ ಅಧ್ಯಕ್ಷ ವಿಂಕೇಶ್‌ ಗುಲಾಟಿ ತಿಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಬೇಡಿಕೆ ಕಡಿಮೆ ಇರುವುದರಿಂದ ದ್ವಿಚಕ್ರವಾಹನ ಬೇಡಿಕೆಯು ಇಳಿಕೆ ಕಂಡಿದೆ. ಹಣದುಬ್ಬರ ಗರಿಷ್ಠ ಮಟ್ಟದಲ್ಲಿ ಇರುವುದು, ಪ್ರತಿಕೂಲ ಹವಾಮಾನ ಮತ್ತು ಬೆಲೆ ಏರಿಕೆಯಿಂದಾಗಿ ಗ್ರಾಮೀಣ ಭಾಗದ ಗ್ರಾಹಕರು ಖರೀದಿಯಿಂದ ಹಿಂದೆ ಸರಿಯುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಮೂಲಸೌಕರ್ಯಕ್ಕೆ ಉತ್ತೇಜನ ನೀಡುವ ಯೋಜನೆಗಳನ್ನು ಘೋಷಿಸಿರುವುದರಿಂದ ವಾಣಿಜ್ಯ ಬಳಕೆಯ ವಾಹನಗಳಿಗೆ ಉತ್ತಮ ಬೇಡಿಕೆ ಇದೆ. ಶಿಕ್ಷಣ ಸಂಸ್ಥೆಗಳು ಮತ್ತು ಕಚೇರಿಗಳು ಸಹಜ ಸ್ಥಿತಿಗೆ ಮರಳಿರುವುದರಿಂದ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತೈವಾನ್‌–ಚೀನಾ ಬಿಕ್ಕಟ್ಟು ತೀವ್ರಗೊಂಡಲ್ಲಿ ಚಿಪ್‌ ಪೂರೈಕೆ ವ್ಯವಸ್ಥೆಯಲ್ಲಿ ಹೆಚ್ಚಿನ ಸಮಸ್ಯೆ ಎದುರಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.