ADVERTISEMENT

ನವೀಕರಿಸಬಲ್ಲ ಇಂಧನ: ₹ 1.48 ಲಕ್ಷ ಕೋಟಿ ಹೂಡಿಕೆ ಮಾಡಲಿರುವ ಅದಾನಿ

ಪಿಟಿಐ
Published 21 ಸೆಪ್ಟೆಂಬರ್ 2021, 13:36 IST
Last Updated 21 ಸೆಪ್ಟೆಂಬರ್ 2021, 13:36 IST
ಉದ್ಯಮಿ ಗೌತಮ್‌ ಅದಾನಿ
ಉದ್ಯಮಿ ಗೌತಮ್‌ ಅದಾನಿ   

ನವದೆಹಲಿ: ಅದಾನಿ ಸಮೂಹವು ನವೀಕರಿಸಬಲ್ಲ ಇಂಧನ ಕ್ಷೇತ್ರದಲ್ಲಿ ಮುಂದಿನ 10 ವರ್ಷಗಳಲ್ಲಿ ₹ 1.48 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಎಂದು ಉದ್ಯಮಿ ಗೌತಮ್‌ ಅದಾನಿ ಅವರು ಮಂಗಳವಾರ ತಿಳಿಸಿದ್ದಾರೆ.

ಜೆಪಿ ಮಾರ್ಗನ್‌ ಇಂಡಿಯಾದ ಹೂಡಿಕೆ ಸಮಾವೇಶದಲ್ಲಿ ಮಾತನಾಡಿದ ಅದಾನಿ ಅವರು, ‘ನವೀಕರಿಸಬಲ್ಲ ಇಂಧನ ಉತ್ಪಾದನೆ, ಬಿಡಿಭಾಗಗಳ ತಯಾರಿಕೆ, ಪ್ರಸರಣ ಮತ್ತು ವಿತರಣೆಯ ದೃಷ್ಟಿಯಿಂದ ಈ ಹೂಡಿಕೆ ಮಾಡಲಾಗುವುದು’ ಎಂದು ಹೇಳಿದ್ದಾರೆ. ಜಗತ್ತಿನಲ್ಲಿಯೇ ಅತಿ ಕಡಿಮೆ ಬೆಲೆಯ ಪರಿಸರಪೂರಕ ಎಲೆಕ್ಟ್ರಾನ್‌ ಉತ್ಪಾದನೆ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.

ಮುಂದಿನ ನಾಲ್ಕು ವರ್ಷಗಳಲ್ಲಿ ಸಮೂಹವು ನವೀಕರಿಸಬಲ್ಲ ಇಂಧನ ಉತ್ಪಾದನೆ ಸಾಮರ್ಥ್ಯವನ್ನು ಮೂರುಪಟ್ಟು ಹೆಚ್ಚಿಸುವ ಯೋಜನೆ ಹೊಂದಿದೆ. ಹೈಡ್ರೋಜನ್‌ ಉತ್ಪಾದನೆ, ನವೀಕರಿಸಬಲ್ಲ ಇಂಧನದ ಮೂಲಕ ಎಲ್ಲಾ ದತ್ತಾಂಶ ಕೇಂದ್ರಗಳಿಗೂ ವಿದ್ಯುತ್‌, ಸಮೂಹದ ಎಲ್ಲ ಬಂದರುಗಳು ಹೊರಸೂಸುವ ಇಂಗಾಲದ ಪ್ರಮಾಣವನ್ನು 2025ರ ಒಳಗಾಗಿ ಶೂನ್ಯಕ್ಕೆ ತರುವುದು ಹಾಗೂ 2025ರವರೆಗೆ ಒಟ್ಟು ಬಂಡವಾಳ ವೆಚ್ಚದ ಶೇಕಡ 75ಕ್ಕೂ ಹೆಚ್ಚಿನ ಮೊತ್ತವನ್ನು ಹಸಿರು ತಂತ್ರಜ್ಞಾನದ ಮೇಲೆ ವಿನಿಯೋಗಿಸುವ ಯೋಜನೆಯನ್ನೂ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಶುದ್ಧ ಇಂಧನ ಮತ್ತು ಹೈಡ್ರೋಜನ್‌ ಇಂಧನ ಉತ್ಪಾದನೆಗಾಗಿ ‌ಮೂರು ವರ್ಷಗಳಲ್ಲಿ ₹ 75 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ದೇಶದ ಸಿರಿವಂತ ಉದ್ಯಮಿ ಮುಕೇಶ್‌ ಅಂಬಾನಿ ಅವರು ಈಚೆಗಷ್ಟೇ ಘೋಷಿಸಿದ ಬಳಿಕ ಅದಾನಿ ಅವರಿಂದ ಈ ಹೇಳಿಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.