ADVERTISEMENT

ದೂರಸಂಪರ್ಕ: ಶೇ 100ರಷ್ಟು ಎಫ್‌ಡಿಐಗೆ ಅವಕಾಶ

ಎಜಿಆರ್‌ ವ್ಯಾಖ್ಯಾನ ಬದಲಿಸಿದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 21:17 IST
Last Updated 15 ಸೆಪ್ಟೆಂಬರ್ 2021, 21:17 IST
   

ನವದೆಹಲಿ: ದೂರಸಂಪರ್ಕ ವಲಯಕ್ಕೆ ಸಂಬಂಧಿಸಿದಂತೆ ಭಾರಿ ಸುಧಾರಣಾ ಕ್ರಮಗಳನ್ನು ಬುಧವಾರ ಘೋಷಿಸಿರುವ ಕೇಂದ್ರ ಸರ್ಕಾರವು, ಈ ವಲಯದಲ್ಲಿ ಪೂರ್ವಾನುಮತಿ ಇಲ್ಲದೆಯೇ ಶೇಕಡ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಕಲ್ಪಿಸಿದೆ. ಇದುವರೆಗೆ ದೂರಸಂಪರ್ಕ ವಲಯದಲ್ಲಿ ಪೂರ್ವಾನುಮತಿ ಇಲ್ಲದೆ ಶೇ 49ರಷ್ಟು ಎಫ್‌ಡಿಐಗೆ ಮಾತ್ರ ಅವಕಾಶ ಇತ್ತು.

ಆದರೆ, ಶೇ 100ರಷ್ಟು ಎಫ್‌ಡಿಐಗೆ ಅವಕಾಶ ಎನ್ನುವ ನಿಯಮವು ಭಾರತದ ಜೊತೆ ಗಡಿಯನ್ನು ಹಂಚಿಕೊಂಡಿರುವ ದೇಶಗಳಿಗೆ ಅನ್ವಯ ಆಗುವುದಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ, ನೇಪಾಳ, ಮ್ಯಾನ್‌ಮಾರ್ ಮತ್ತು ಭೂತಾನ್ ದೇಶಗಳು ಭಾರತದ ಜೊತೆ ಗಡಿ ಹಂಚಿಕೊಂಡಿವೆ.

ದೇಶಿ ಉದ್ಯಮಗಳನ್ನು ವಿದೇಶಿ ಉದ್ಯಮಗಳು ಬಲವಂತವಾಗಿ ಸ್ವಾಧೀನಕ್ಕೆ ತೆಗೆದುಕೊಳ್ಳುವುದನ್ನು ತಡೆಯುವ ಉದ್ದೇಶದಿಂದ 2020ರಲ್ಲಿ ಕೇಂದ್ರವು, ಭಾರತದ ಜೊತೆ ಗಡಿ ಹಂಚಿಕೊಂಡಿರುವ ದೇಶಗಳಿಂದ ಬರುವ ಎಫ್‌ಡಿಐ ವಿಚಾರವಾಗಿ ಕೆಲವು ನಿರ್ಬಂಧಗಳನ್ನು ಜಾರಿಗೆ ತಂದಿದೆ.

ADVERTISEMENT

ದೂರಸಂಪರ್ಕ ವಲಯದ ಕಂಪನಿಗಳು ಸರ್ಕಾರಕ್ಕೆ ಕೊಡಬೇಕಿರುವ ಬಾಕಿ ಮೊತ್ತ ಪಾವತಿಗೆ ನಾಲ್ಕು ವರ್ಷಗಳ ಕಾಲಾವಕಾಶ ನೀಡುವ ತೀರ್ಮಾನವನ್ನೂ ಕೇಂದ್ರ ಸಂಪುಟವು ಕೈಗೊಂಡಿದೆ. ಕೇಂದ್ರಕ್ಕೆ ಸಹಸ್ರಾರು ಕೋಟಿ ರೂಪಾಯಿ ಪಾವತಿಸಬೇಕಿರುವ ವೊಡಾಫೋನ್ ಐಡಿಯಾದಂತಹ ಕಂಪನಿಗಳಿಗೆ ಈ ತೀರ್ಮಾನದಿಂದಾಗಿ ಸಹಾಯ ಆಗಲಿದೆ ಎಂದು ಹೇಳಲಾಗಿದೆ.

ಹೊಂದಾಣಿಕೆ ಮಾಡಿದ ಒಟ್ಟು ಆದಾಯದ (ಎಜಿಆರ್) ವ್ಯಾಖ್ಯಾನದಲ್ಲಿ ಬದಲಾವಣೆ ತಂದಿರುವ ಕೇಂದ್ರವು, ದೂರಸಂಪರ್ಕ ವಲಯದ ಕಂಪನಿಗಳು ದೂರಸಂಪರ್ಕ ಸೇವೆ ಅಲ್ಲದೆ ಇತರ ಸೇವೆಗಳಿಂದ ಪಡೆಯುವ ಆದಾಯವನ್ನು ಎಜಿಆರ್‌ ಲೆಕ್ಕಾಚಾರದಿಂದ ಹೊರಗೆ ಇರಿಸಿದೆ. ಈ ವಲಯದಲ್ಲಿ ಹಣಕಾಸಿನ ಬಿಕ್ಕಟ್ಟು ಸೃಷ್ಟಿಯಾಗಲು ಎಜಿಆರ್‌ ಒಂದು ಪ್ರಮುಖ ಕಾರಣವಾಗಿತ್ತು.

ಸಂಪುಟದ ಈ ತೀರ್ಮಾನ ಹೊರಬೀಳುತ್ತಿದ್ದಂತೆಯೇ ದೂರಸಂಪರ್ಕ ವಲಯದ ಕಂಪನಿಗಳ ಷೇರು ಮೌಲ್ಯ ಹೆಚ್ಚಳ ಆಗಿದೆ. ಭಾರ್ತಿ ಏರ್‌ಟೆಲ್‌ ಷೇರು ಶೇ 4.53ರಷ್ಟು, ವೊಡಾಫೋನ್ ಐಡಿಯಾ ಷೇರು ಶೇ 2.76ರಷ್ಟು ಮೌಲ್ಯ ಹೆಚ್ಚಿಸಿಕೊಂಡವು. ಟಾಟಾ ಕಮ್ಯುನಿಕೇಷನ್ಸ್ ಷೇರು ಮೌಲ್ಯ ಶೇ 1.38ರಷ್ಟು ಜಾಸ್ತಿ ಆಯಿತು.

ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಪುಟದ ಈ ತೀರ್ಮಾನವನ್ನು ಸುದ್ದಿಗಾರರಿಗೆ ತಿಳಿಸಿದರು. ಈ ತೀರ್ಮಾನಗಳು ಕಂಪನಿಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಶುರು ಮಾಡುತ್ತವೆ, ಕಂಪನಿಗಳಲ್ಲಿನ ಹಣಕಾಸಿನ ಬಿಕ್ಕಟ್ಟನ್ನು ನಿವಾರಿಸಲು ನೆರವಾಗುತ್ತವೆ ಎಂದರು.

ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದಾಗಿ ಆನ್‌ಲೈನ್‌ ಶಿಕ್ಷಣ, ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ, ಆನ್‌ಲೈನ್‌ ಮೂಲಕವೇ ಕಚೇರಿಯ ಸಭೆಗಳನ್ನು ನಡೆಸುವ ಪದ್ಧತಿ ಶುರುವಾಗಿದೆ. ಈಗ ಕೈಗೊಂಡಿರುವ ಸುಧಾರಣಾ ಕ್ರಮಗಳು ದೇಶದಲ್ಲಿ ಬ್ರಾಡ್‌ಬ್ಯಾಂಡ್‌ ಸಂಪರ್ಕ ಹೆಚ್ಚಳಕ್ಕೆ ಪೂರಕ ಆಗಬಲ್ಲವು ಎಂಬ ನಿರೀಕ್ಷೆ ಇರುವುದಾಗಿ ಸಚಿವರು ಹೇಳಿದರು.

5ಜಿ ವ್ಯವಸ್ಥೆಗೆ ಹೆಚ್ಚಿನ ಹೂಡಿಕೆಗೆ ಪೂರಕ ವಾತಾವರಣ ನಿರ್ಮಾಣಕ್ಕೆ ಕೂಡ ಈ ಕ್ರಮಗಳು ಉತ್ತೇಜನ ನೀಡುವ ಸಾಧ್ಯತೆ ಇದೆ. ದೂರಸಂಪರ್ಕ ಕಂಪನಿಗಳು ತರಂಗಾಂತರಗಳನ್ನು 30 ವರ್ಷಗಳವರೆಗೆ ತಮ್ಮ ಬಳಿ ಇರಿಸಿಕೊಳ್ಳಬಹುದು ಎಂಬ ತೀರ್ಮಾನವನ್ನೂ ಸಂಪುಟ ಕೈಗೊಂಡಿದೆ. ಈಗಿರುವ ನಿಯಮಗಳ ಅನ್ವಯ ಕಂಪನಿಗಳು 20 ವರ್ಷಗಳವರೆಗೆ ತರಂಗಾಂತರವನ್ನು ತಮ್ಮಲ್ಲಿ ಇರಿಸಿಕೊಳ್ಳಲು ಅವಕಾಶ ಇತ್ತು.

ತಂತ್ರಜ್ಞಾನದಲ್ಲಿ ಬದಲಾವಣೆಗಳು ಆದರೆ, ತರಂಗಾಂತರವನ್ನು 10 ವರ್ಷಗಳ ನಂತರ ಸರ್ಕಾರಕ್ಕೆ ಮರಳಿಸಲು ಕೂಡ ಈಗ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.