ADVERTISEMENT

ಪ್ರಯಾಣಿಕ ವಾಹನ ರಿಟೇಲ್‌ ಮಾರಾಟ ಶೇ 39ರಷ್ಟು ಹೆಚ್ಚಳ

ಪಿಟಿಐ
Published 7 ಸೆಪ್ಟೆಂಬರ್ 2021, 11:02 IST
Last Updated 7 ಸೆಪ್ಟೆಂಬರ್ 2021, 11:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟವು 2020ರ ಆಗಸ್ಟ್‌ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಶೇಕಡ 39ರಷ್ಟು ಹೆಚ್ಚಾಗಿದೆ ಎಂದುಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಮಂಗಳವಾರ ತಿಳಿಸಿದೆ.

2020ರ ಆಗಸ್ಟ್‌ನಲ್ಲಿ 1.82 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟ ಆಗಿದ್ದವು. ಮಾರಾಟದ ಸಂಖ್ಯೆಯು ಈ ವರ್ಷದ ಆಗಸ್ಟ್‌ನಲ್ಲಿ 2.53 ಲಕ್ಷಕ್ಕೆ ಏರಿಕೆ ಕಂಡಿದೆ.

ದ್ವಿಚಕ್ರ ವಾಹನಗಳ ಮಾರಾಟವು ಶೇ 7ರಷ್ಟು ಹೆಚ್ಚಾಗಿದ್ದು 9.76 ಲಕ್ಷಕ್ಕೆ ತಲುಪಿದೆ. ವಾಣಿಜ್ಯ ವಾಹನಗಳ ಮಾರಾಟ ಶೇ 98ರಷ್ಟು ಹೆಚ್ಚಾಗಿದ್ದು, 26,851ರಿಂದ 53,150ಕ್ಕೆ ಏರಿಕೆ ಆಗಿದೆ.

ADVERTISEMENT

ತ್ರಿಚಕ್ರ ವಾಹನಗಳ ಮಾರಾಟ ಶೇ 80ರಷ್ಟು ಹೆಚ್ಚಾಗಿದೆ. ಎಲ್ಲಾ ವಿಭಾಗಗಳನ್ನೂ ಒಳಗೊಂಡ ಒಟ್ಟಾರೆ ಮಾರಾಟವು 12.09 ಲಕ್ಷದಿಂದ 13.84 ಲಕ್ಷಕ್ಕೆ, ಅಂದರೆ ಶೇ 14ರಷ್ಟು ಏರಿಕೆಯಾಗಿದೆ ಎಂದು ಅದು ಮಾಹಿತಿ ನೀಡಿದೆ.

ಹಬ್ಬದಲ್ಲಿ ಮಾರಾಟ ಇಳಿಕೆ ಸಂಭವ: ಸೆಮಿಕಂಡಕ್ಟರ್‌ ಕೊರತೆಯು ಹಬ್ಬದ ಋತುವಿನಲ್ಲಿ ಪ್ರಯಾಣಿಕ ವಾಹನ ಮಾರಾಟದ ಮೇಲೆ ಪರಿಣಾಮ ಬೀರುವ ಸಂಭವ ಇದೆ ಎಂದು ಎಫ್‌ಎಡಿಎ ಎಚ್ಚರಿಕೆ ನೀಡಿದೆ.

ಹಬ್ಬದ ಋತುವಿನಲ್ಲಿ ಅತ್ಯಂತ ಬೇಗನೆ ಮಾರಾಟ ಆಗುವ ಆವೃತ್ತಿಗಳ ಕೊರತೆ ಇರುವುದು ಹಾಗೂ ದಾಸ್ತಾನು ಮಟ್ಟವು ಕನಿಷ್ಠ ಮಟ್ಟದಲ್ಲಿ ಇರುವ ಕಾರಣಗಳಿಂದಾಗಿ ಪ್ರಯಾಣಿಕ ವಾಹನ ಮಾರಾಟ ಕಡಿಮೆ ಆಗಬಹುದು ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.