ADVERTISEMENT

ಸ್ಟಾರ್ಟ್‌ಅಪ್‌ ಪೋಷಣೆಗೆ ಟರ್ಬೊಸ್ಟಾರ್ಟ್‌

ಇನೊವೇಷನ್‌ಕೋರ್‌ ಕಂಪನಿಯು ರಾಷ್ಟ್ರ ಮಟ್ಟದ ಕಾರ್ಯಕ್ರಮ / ಸ್ಟಾರ್ಟ್‌ಅಪ್‌ಗಳಿಗೆ ಟರ್ಬೊಸ್ಟಾರ್ಟ್‌ ನೆರವಿನ ಹಸ್ತ

ವಿಶ್ವನಾಥ ಎಸ್.
Published 15 ಅಕ್ಟೋಬರ್ 2019, 19:45 IST
Last Updated 15 ಅಕ್ಟೋಬರ್ 2019, 19:45 IST
ಗಣೇಶ್‌ ರಾಜು
ಗಣೇಶ್‌ ರಾಜು   

ಬಂಡವಾಳ ನೆರವು ನೀಡಿದಾಕ್ಷಣ ನವೋದ್ಯಮಗಳು ಯಶಸ್ಸು ಕಾಣುತ್ತವೆ ಎಂದು ಹೇಳಲಾಗದು. ಏಕೆಂದರೆ ಹೊಸ ರೀತಿಯ ಆಲೋಚನಾ ಕ್ರಮ, ಸ್ವಂತ ಉದ್ದಿಮೆಯ ಕನಸು ಇದ್ದಾಕ್ಷಣ ಅದಕ್ಕೆ ಬಂಡವಾಳ ನೆರವು ದೊರೆತರೆ ಬೆಳವಣಿಗೆಯ ಮೆಟ್ಟಲು ಸುಲಭವಾಗುತ್ತದೆ ಎಂದು ಭಾವಿಸುವವರೆ ಹೆಚ್ಚು. ಆದರೆ, ಆ ಆಲೋಚನೆ, ಕನಸನ್ನು ಒಂದು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಬಂಡವಾಳಕ್ಕಿಂತಲೂ ಮಿಗಿಲಾದ ಮಹತ್ವದ ಸಂಗತಿಗಳಿವೆ.

ಕಂಡ ಕನಸು ವಾಸ್ತವದಲ್ಲಿ ಸಾಧ್ಯವೇ ಎಂದು ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಬೇಕು. ಅದಕ್ಕೆ ಈಗಾಗಲೇ ಉದ್ದಿಮೆಯಲ್ಲಿ ಮುಳುಗಿ ಎದ್ದಿರುವ ತಜ್ಞರು, ಪರಿಣತರ ನೆರವು ಬೇಕಾಗುತ್ತದೆ. ಅದಾದ ಬಳಿಕ ಉದ್ದಿಮೆ ಮುನ್ನಡೆಸಲು ಒಂದು ಉತ್ತಮ ತಂಡ ಬೇಕಾಗುತ್ತದೆ. ಇಷ್ಟು ಮಾತ್ರವಲ್ಲ. ಸವಾಲುಗಳನ್ನು ಎದುರಿಸುವುದು ಹೇಗೆ ಎನ್ನುವ ಮಾರ್ಗದರ್ಶನ ಮಾಡುವವರೂ ಬೇಕು. ಇದೆಲ್ಲದರ ಜತೆಗೆ ಬಂಡವಾಳ ನೆರವು ಸಿಕ್ಕರೆ ಆಗ ಯಶಸ್ಸಿನ ಮೆಟ್ಟಿಲೇರುವುದು ಸುಲಭವಾಗುತ್ತದೆ. ಉದ್ದಿಮೆ ಸ್ಥಾಪನೆಯ ಜತೆಗೆ ಅದರ ಪೋಷಣೆಯ ಕಾರ್ಯವೂ ಅಗತ್ಯವಾಗಿ ನಡೆಯಬೇಕು.

ಹೀಗೆ,ನವೋದ್ಯಮಗಳನ್ನು ಗುರುತಿಸಿ ಅವುಗಳನ್ನು ಪೋಷಿಸುವ ಉದ್ದೇಶದಿಂದ ಬೆಂಗಳೂರಿನಇನೊವೇಷನ್‌ಕೋರ್‌ ಕಂಪನಿಯು ರಾಷ್ಟ್ರ ಮಟ್ಟದಲ್ಲಿ ಟರ್ಬೊಸ್ಟಾರ್ಟ್‌ ಕಾರ್ಯಕ್ರಮ ಹಮ್ಮಿಕೊಂಡಿದೆ.

ADVERTISEMENT

‘ಜನವರಿಯಿಂದ ಜೂನ್‌ವರೆಗೆ ಪ್ರತಿ ಆರು ತಿಂಗಳಿಗೊಮ್ಮೆ ಈ ಕಾರ್ಯಕ್ರಮ ನಡೆಸಲಾಗುವುದು. ‌ದೇಶದಾದ್ಯಂತ ಇರುವ ನವೋದ್ಯಮಗಳು ಭಾಗವಹಿಸಬಹುದಾಗಿದೆ. ಸ್ಪರ್ಧೆಯ ರೂಪದಲ್ಲಿ ಪ್ರಮುಖ10 ನವೋದ್ಯಮಗಳನ್ನು ಗುರುತಿಸಲಾಗುತ್ತದೆ. ಆ ಬಳಿಕಪ್ರತಿಯೊಂದಕ್ಕೆ ಗರಿಷ್ಠ ₹ 2 ಕೋಟಿ ಬಂಡವಾಳ ನೀಡಲಾಗುವುದು’ಎಂದು ಇನೊವೇಷನ್‌ಕೋರ್‌ನ ಸ್ಥಾಪಕ ಗಣೇಶ್ ರಾಜು ಅವರು ಹೇಳುತ್ತಾರೆ.

‘ಮಾರುಕಟ್ಟೆ ಪ್ರವೇಶ, ಮಾರುಕಟ್ಟೆ ಮೌಲ್ಯವರ್ಧನೆ, ಉದ್ದಿಮೆಯ ಸಂಪರ್ಕ ಹಾಗೂ ಎಲ್ಲಾ ರೀತಿಯ ಗ್ರಾಹಕರ ವಹಿವಾಟು ಬೆಂಬಲವನ್ನೂ ಒದಗಿಸಲಾಗುವುದು.ಈ ಕಾರ್ಯಕ್ರಮದ ಮೂಲಕ ಐದು ವರ್ಷಗಳಲ್ಲಿ 100 ನವೋದ್ಯಮಗಳಿಗೆ ಬಂಡವಾಳ ನೆರವು ನೀಡುವ ಗುರಿಯನ್ನು ಹೊಂದಲಾಗಿದೆ. ಟರ್ಬೊಸ್ಟಾರ್ಟ್‌ನಲ್ಲಿ ಇರುವ ಆಡಳಿತ ತಂಡವು ಪೂರ್ಣಾವಧಿಗೆ ನವೋದ್ಯಮಗಳಿಗೆ ಅಗತ್ಯವಾದ ನೆರವು, ಸಲಹೆಗಳನ್ನು ಒದಗಿಸಲಿದೆ.

‘ಭಾರತ ಮತ್ತು ಹೊರಗಡೆ ಕಾನೂನಾತ್ಮಕ / ಕಾರ್ಯಾಚರಣೆಯ ರಚನೆಯನ್ನು ರೂಪಿಸುವಲ್ಲಿ ಮತ್ತು ಬಂಡವಾಳಕ್ಕೆ ಸಂಬಂಧಿಸಿದಂತೆ ಯೋಜನಾತ್ಮಕ ಮತ್ತು ಕೌಶಲ್ಯಪೂರ್ಣ ವಿಷಯಗಳ ನಿರ್ವಹಣೆಯಲ್ಲಿ ಕೂಡ ನಾವು ಸಹಾಯ ಮಾಡಲಿದ್ದೇವೆ.

‘12 ತಿಂಗಳವರೆಗೆ ಈ ಯೋಜನೆಯಡಿ ಬರುವ ಸ್ಟಾರ್ಟ್ಅಪ್‌ಗಳು ಕಾನೂನಾತ್ಮಕ ಮತ್ತು ನಿಯಂತ್ರಣಾ ಸೇವೆಗಳು, ತೆರಿಗೆ ಯೋಜನೆ, ಲೆಕ್ಕಪತ್ರ ಮತ್ತು ಹಣಕಾಸು ವರದಿ, ನಿಯಮಾವಳಿಗಳ ಪಾಲನೆ ಸೇರಿದಂತೆ ಹಲವು ವಿಷಯಗಳಲ್ಲಿ ಬೆಂಬಲ ಸೇವೆಗಳನ್ನು ಪಡೆಯಲಿವೆ. ಇತರೆ ಪೋಷಣಾ ಸಂಸ್ಥೆಗಳು, ವೇಗವರ್ಧಕ ಸಂಸ್ಥೆಗಳ ಜೊತೆಗೆ ನಾವು ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಮೊದಲ ಹೆಜ್ಜೆಯಾಗಿ ನಾವು ಏಟ್ರಿಯಾ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇಲ್ಲಿ ನಾವು ಸ್ಟಾರ್ಟ್ಅಪ್‌ಗಳಿಗೆ ಕೆಲಸ ಮಾಡುವ ಸ್ಥಳಾವಕಾಶವನ್ನು ಪೂರೈಸಲಿದ್ದೇವೆ.

‘ಈಗಿರುವ ಪೋಷಕ ಸಂಸ್ಥೆಗಳು ಮತ್ತು ವೇಗವರ್ಧಕ ಸಂಸ್ಥೆಗಳಿಗೆ ಪೂರಕವಾಗಿ ಟರ್ಬೊಸ್ಟಾರ್ಟ್‌ ಕೆಲಸ ಮಾಡಲಿದೆ. ವಾಸ್ತವವಾಗಿ ನಮ್ಮ ತಂಡಗಳು ಎಲ್ಲ ಪೋಷಕ ಸಂಸ್ಥೆಗಳು ಮತ್ತು ವೇಗವರ್ಧಕ ಸಂಸ್ಥೆಗಳಿಗೆ ಭೇಟಿ ನೀಡಲಿದ್ದು, ಟರ್ಬೋಸ್ಟಾರ್ಟ್ ಮತ್ತು ಅದರೊಂದಿಗೆ ಕೈಜೋಡಿಸುವಲ್ಲಿ ಇರುವ ಲಾಭಗಳನ್ನು ಕುರಿತು ಜಾಗೃತಿ ಮೂಡಿಸಲಿವೆ. ಎರಡನೇ ಮತ್ತು ಮೂರನೇ ಹಂತದ ನಗರಗಳಿಂದ ಗುಣಮಟ್ಟದ ಸ್ಟಾರ್ಟ್ಅಪ್‌ಗಳನ್ನು ಆಕರ್ಷಿಸುವ ಭರವಸೆಯನ್ನು ನಾವು ಹೊಂದಿದ್ದೇವೆ’ ಎಂದು ಗಣೇಶ್ ಹೇಳುತ್ತಾರೆ.

ಗೆಲುವಿನ ಮಟ್ಟಿಲು

‘ಗೆಲುವಿಗಿಂತಲೂ ಸೋಲು ಕಟ್ಟಿಕೊಡುವ ಅನುಭವವೇ ಹೆಚ್ಚು. ಸೋಲು ಕಂಡಿರುವ ನವೋದ್ಯಮಗಳಿಗೆ ಬೆಂಬಲ, ಉತ್ತೇಜನ ನೀಡಲು ನಾನು ಹೆಚ್ಚು ಇಷ್ಟಪಡುತ್ತೇನೆ‘ಎಂದು ಇನೊವೇಷನ್‌ಕೋರ್‌ನ ಸಲಹಾ ಮಂಡಳಿ ಸದಸ್ಯರಲ್ಲಿ ಒಬ್ಬರಾಗಿರುವ ಜ್ಯೋತಿ ಲ್ಯಾಬೊರೇಟರೀಸ್‌ನ ಜಂಟಿ ಆಡಳಿತ ನಿರ್ದೇಶಕ ಉಲ್ಲಾಸ್ ಕಾಮತ್ ಹೇಳುತ್ತಾರೆ.

‘ಎರಡು ವರ್ಷದಲ್ಲೇ ನವೋದ್ಯಮವೊಂದನ್ನು ಮುಚ್ಚುವ ಸ್ಥಿತಿ ಎದುರಾಯಿತು. ಆಗ ಅದರ ಸ್ಥಾಪಕ, ಅವರ ಕುಟುಂಬ ಮತ್ತು ಇನ್ನೂ ಕೆಲವು ನವೋದ್ಯಮಗಳನ್ನು ಕರೆದು ಒಂದು ಔತಣಕೂಟ ಏರ್ಪಡಿಸಿದೆ. ಅಲ್ಲಿ ವೈಫಲ್ಯ ಕಂಡ ನವೋದ್ಯಮದ ಸ್ಥಾಪಕನಿಗೆ ತನ್ನ ಅಭಿಪ್ರಾಯ ಹಂಚಿಕೊಳ್ಳಲು ಹೇಳಲಾಯಿತು. ಆತ ತನ್ನ ಏಳು–ಬೀಳುಗಳನ್ನು ವಿವರವಾಗಿ ತಿಳಿಸಿದ. ಆತನ ಪರಿಶ್ರಮವನ್ನು ಕೇಳಿ ಕುಟುಂಬದವರು ಸೋಲಿನಲ್ಲೂ ಸಂಭ್ರಮಪಟ್ಟರೆ, ಬೇರೆ ನವೋದ್ಯಮದ ಸ್ಥಾಪಕರು ಭಾವುಕರಾದರು. ಕೊನೆಗೆ ಒಬ್ಬ ನವೋದ್ಯಮಿ ಎದು ನಿಂತು ‘ನಿನ್ನ ಸಿಬ್ಬಂದಿಯನ್ನು ಮನೆಗೆ ಕಳುಹಿಸಬೇಡ. ನನ್ನ ಕಂಪನಿಯ ಪಾಲುದಾರನಾಗು. ಅವರಿಗೂ ಕೆಲಸ ಸಿಗುತ್ತದೆ’ ಎಂದು ಆಹ್ವಾನ ನೀಡಿದ. ಅಲ್ಲಿಗೆ ಸೋಲಿನ ಔತಣಕೂಟದ ಸಂಭ್ರಮ ಇನ್ನೊಬ್ಬರ ಜಯಕ್ಕೆ ಮುನ್ನುಡಿಯಾಯಿತು’ ಎಂದು ಉಲ್ಲಾಸ್‌ ಅವರು ನವೋದ್ಯಮದಲ್ಲಿ ತಮ್ಮ ಹೂಡಿಕೆಯ ಅನುಭವವನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.