ADVERTISEMENT

ಪ್ರಶ್ನೋತ್ತರ: ನನ್ನ ಬಿಡುವಿನ ಸಮಯದಲ್ಲಿ ಜೀವನೋಪಾಯಕ್ಕೆ ಏನಾದರೂ ದಾರಿ ತೋರಿಸಿರಿ?

ಯು.ಪಿ.ಪುರಾಣಿಕ್
Published 30 ಮಾರ್ಚ್ 2021, 19:30 IST
Last Updated 30 ಮಾರ್ಚ್ 2021, 19:30 IST
ಪುರಾಣಿಕ್
ಪುರಾಣಿಕ್   

ಶಶಿಕುಮಾರ್, ಊರು ಬೇಡ

l ಪ್ರಶ್ನೆ: ನಾನು ಪೊಲೀಸ್‌ ಕಾನ್‌ಸ್ಟೆಬಲ್ ಆಗಿ ಈ ವರ್ಷ ನೇಮಕಗೊಂಡಿದ್ದೇನೆ. ನನ್ನ ವಯಸ್ಸು 27 ವರ್ಷ. ನನ್ನ ಸಂಬಳದ ಶ್ರೇಣಿ ₹ 23,500–₹ 47,650 (ಬೇಸಿಕ್ ಪೇ), ಕೈಗೆ ₹ 30 ಸಾವಿರ ಬರುತ್ತದೆ. ಅವಿವಾಹಿತ. ಇಷ್ಟರವರೆಗೆ ಏನೂ ಆದಾಯವಿರಲಿಲ್ಲ. ಈಗ ನೌಕರಿ ಸಿಕ್ಕಿದೆ. ನನ್ನ ಜೀವನ ಹಸನಾಗಲು ಹೇಗೆ ಉಳಿತಾಯ ಮಾಡಬಹುದು ಎಂಬುದನ್ನು ತಿಳಿಸಿ.

ಉತ್ತರ: ನೀವು ಕೆಲಸಕ್ಕೆ ಸೇರಿದ ತಕ್ಷಣ ಉಳಿತಾಯದ ವಿಚಾರದಲ್ಲಿ ಪ್ರಶ್ನೆ ಕೇಳಿರುವುದು ಸಂತಸದ ವಿಚಾರ. ವ್ಯಕ್ತಿ ಕೆಲಸಕ್ಕೆ ಸೇರಿದ ತಕ್ಷಣ ಆದಾಯಕ್ಕೆ ಅನುಗುಣವಾಗಿ ಉಳಿತಾಯದ ಅಭ್ಯಾಸ ಅಳವಡಿಸಿಕೊಳ್ಳಬೇಕು. ನೀವು ಗರಿಷ್ಠ ₹ 10 ಸಾವಿರ ನಿಮ್ಮ ಖರ್ಚಿಗೆ ಇರಿಸಿ, ಉಳಿದ ₹ 20 ಸಾವಿರ ಈ ರೀತಿ ಉಳಿತಾಯ ಮಾಡಿ. ಜೀವ ವಿಮೆ ₹ 3,000, ಪಿಪಿಎಫ್‌ ₹ 2,000, ಒಂದು ವರ್ಷದ ಆರ್‌.ಡಿ. ₹ 15,000 ಮಾಡಿ. ಜೀವ ವಿಮೆ ನಿಮ್ಮ ಆದಾಯದ ಶೇ 10ರಷ್ಟು ಇದ್ದು, ಇದು ಪ್ರತಿ ವ್ಯಕ್ತಿಗೂ ಅಗತ್ಯ. ಪಿಪಿಎಫ್ 15 ವರ್ಷಗಳ ದೀರ್ಘಾವಧಿ ಯೋಜನೆ. ಮುಂದೆ ₹ 5 ವರ್ಷಗಳಂತೆ ಮುಂದುವರಿಸುತ್ತಾ ನಿವೃತ್ತಿ ತನಕ ಹಣ ಹೂಡಿರಿ.

ADVERTISEMENT

ಜೀವನದ ಸಂಜೆಗೆ ಈ ಮೊತ್ತ ನೆರವಾಗುತ್ತದೆ. ನೀವು ಅವಿವಾಹಿತರಾಗಿದ್ದು ಒಂದೆರಡು ವರ್ಷಗಳಲ್ಲಿ ಮದುವೆ ಆಗಬೇಕಾಗಿರುವುದರಿಂದ ₹ 15,000 ಆರ್‌.ಡಿ. ಒಂದೇ ವರ್ಷಕ್ಕೆ ಮಾಡಿರಿ. ವರ್ಷ ಕಳೆದಾಗ ಮದುವೆ ನಿಶ್ಚಯವಾಗದಿರುವಲ್ಲಿ ಇಲ್ಲಿ ಬರುವ ಮೊತ್ತ ಅದೇ ಬ್ಯಾಂಕ್‌ನಲ್ಲಿ ಒಂದು ವರ್ಷದ, ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿ ಹಾಗೂ ಪುನಃ ಹೊಸ ಆರ್‌.ಡಿ.
₹ 15,000ದಂತೆ ಒಂದು ವರ್ಷಕ್ಕೆ ಮಾಡಿರಿ. ಹೀಗೆ ಮಾಡಿದಲ್ಲಿ ನಿಮ್ಮ ಉದ್ದೇಶ ಸಫಲವಾಗುತ್ತದೆ. ನೀವು ಪದವೀಧರರೆಂದು ತಿಳಿಯುತ್ತೇನೆ. ಸಬ್‌ ಇನ್‌ಸ್ಪೆಕ್ಟರ್‌ ಪರೀಕ್ಷೆ ಬರೆದು ಬಡ್ತಿ ಹೊಂದಿರಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

***

ಅಶೋಕ್, ಗದಗ

l ಪ್ರಶ್ನೆ: ನಾನು ಬುಕ್ ಬೈಂಡಿಂಗ್‌ ಕೆಲಸ ಮಾಡುತ್ತೇನೆ. ನನ್ನ ತಿಂಗಳ ವರಮಾನ ₹ 10 ಸಾವಿರ. ನಾನು ಒಂದು ಆರ್‌.ಡಿ. ಮಾಡಿ ಒಂದು ಸಣ್ಣ ನಿವೇಶನ ಕೊಂಡಿದ್ದೇನೆ. ನಾನು ತಿಂಗಳಿಗೆ ₹ 600ರಂತೆ ಪ್ರತೀ ವರ್ಷವೂ ಆರ್‌.ಡಿ. ಮಾಡುತ್ತಾ ಬಂದಿದ್ದೇನೆ. ಇನ್ನೆರಡು ವರ್ಷಗಳಲ್ಲಿ ಆರ್‌.ಡಿ. ಅವಧಿ ಮುಗಿಯುತ್ತದೆ. ನನ್ನ ಎಲ್ಲಾ ಆರ್‌.ಡಿ.ಗಳೂ
ಶೇ 9.5ರ ಬಡ್ಡಿದರ ಇರುವಾಗ 10 ವರ್ಷಗಳ ಅವಧಿಗೆ ಮಾಡಿದ್ದಾಗಿವೆ. ಇನ್ನು ಇವುಗಳು ಮುಗಿಯುತ್ತಲೇ ಏನು ಮಾಡಲಿ? ನನ್ನ
ಬಿಡುವಿನ ಸಮಯದಲ್ಲಿ ಜೀವನೋಪಾಯಕ್ಕೆ ಏನಾದರೂ ದಾರಿ ತೋರಿಸಿರಿ.

ಉತ್ತರ: ನೀವು ನನ್ನ ಸಲಹೆಯಂತೆ ಆರ್‌.ಡಿ. ಮಾಡಿ ನಿವೇಶನ ಕೊಂಡಿರುವುದು ಹಾಗೂ ಈ ಹಿಂದೆ ಶೇ 9.5ರ ಬಡ್ಡಿದರ ಇರುವಾಗ 10 ವರ್ಷಗಳ ಆರ್‌.ಡಿ. ಮಾಡಿರುವುದು ತುಂಬಾ ಖುಷಿ ಕೊಟ್ಟಿದೆ. ಸಣ್ಣ ಆದಾಯದಲ್ಲಿ ಕೂಡಾ ಕ್ರಮಬದ್ಧವಾದ ಉಳಿತಾಯ ಮಾಡಬಹುದು ಎನ್ನುವುದನ್ನು ನಿಮ್ಮಿಂದ ಯುವಜನರು ತಿಳಿಯಬೇಕಾಗಿದೆ. ನೀವು ಆರ್‌.ಡಿ. ಮುಗಿಯುತ್ತಲೇ ಬರುವ ಮೊತ್ತ ಅದೇ ಬ್ಯಾಂಕ್‌ನಲ್ಲಿ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ 5 ವರ್ಷಗಳ ಅವಧಿಗೆ ಇಡಿ. ನಿಮ್ಮ ಬಿಡುವಿನ ಸಮಯದಲ್ಲಿ ಜೀವ ವಿಮಾ ಪಾಲಿಸಿ ಮಾಡಲು, ಎಲ್‌ಐಸಿ ಆಫೀಸಿನಲ್ಲಿ ವಿಚಾರಿಸಿ. ನಿಮಗೆ ಜನ ಸಂಪರ್ಕ ಇರುವುದರಿಂದ ಈ ಉದ್ಯೋಗ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.