ADVERTISEMENT

ವಯ ವಂದನಾ ಪಿಂಚಣಿ ಮಾರ್ಚ್‌ಗೆ ಅಂತ್ಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 19:30 IST
Last Updated 3 ಮಾರ್ಚ್ 2020, 19:30 IST
ವಯ ವಂದನಾ ಯೋಜನೆ
ವಯ ವಂದನಾ ಯೋಜನೆ   
""
""

ಅರವತ್ತು ವರ್ಷ ಮೀರಿದ ಹಿರಿಯ ನಾಗರಿಕರು ಹೂಡಿಕೆ ಮಾಡಿ ಪಿಂಚಣಿ ಪಡೆಯಲು ಅವಕಾಶ ಕಲ್ಪಿಸಿರುವ ಪ್ರಧಾನಮಂತ್ರಿ ವಯ ವಂದನಾ ಯೋಜನೆಯಲ್ಲಿ ಹೂಡಿಕೆ ಅವಕಾಶ ಇದೇ ಮಾರ್ಚ್‌ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಈ ಯೋಜನೆಯ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ.

ಕೇಂ ದ್ರ ಸರ್ಕಾರವು ಜಾರಿಗೆ ತಂದಿದ್ದ ‘ಪ್ರಧಾನಮಂತ್ರಿ ವಯ ವಂದನಾ ಯೋಜನೆ’ಯಲ್ಲಿ (Pradhan Mantri Vaya Vandana Yojana scheme– ಪಿಎಂವಿವಿವೈ) ಅರವತ್ತು ವರ್ಷ ಮೀರಿದ ಹಿರಿಯ ನಾಗರಿಕರು ಹಣ ಹೂಡಿಕೆ ಮಾಡುವುದಕ್ಕೆ ಕಲ್ಪಿಸಿದ್ದ ಅವಕಾಶವು 2020ರ ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿದೆ.

ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳು ಮತ್ತು ಬ್ಯಾಂಕ್‌ ಠೇವಣಿಗಳ ಮೇಲಿನ ಬಡ್ಡಿ ದರಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಹಿರಿಯ ನಾಗರಿಕರು ಮತ್ತು ನಿವೃತ್ತರು ನಿಯಮಿತ ಪಿಂಚಣಿ ಪಡೆಯುವುದಕ್ಕೆ ನೆರವಾಗಲು ಈ ಯೋಜನೆಯನ್ನು ಆರಂಭಿಸಲಾಗಿತ್ತು. ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಸಹಯೋಗದಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗಿದೆ.

ADVERTISEMENT

ಹಿರಿಯ ನಾಗರಿಕರೊಬ್ಬರು ದೊಡ್ಡ ಮೊತ್ತದ (₹ 1.50 ಲಕ್ಷದಿಂದ ₹ 15 ಲಕ್ಷದವರೆಗೆ) ಹಣ ಹೂಡಿಕೆ ಮಾಡಿದರೆ, ಮರು ತಿಂಗಳಿನಿಂದಲೇ ಆರಂಭಿಸಿ ಹತ್ತು ವರ್ಷಗಳವರೆಗೆ ಪಿಂಚಣಿ ಪಡೆಯುವ ಸೌಲಭ್ಯವು ಈ ಯೋಜನೆಯ ವಿಶೇಷತೆಯಾಗಿದೆ.

ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) 2017ರ ಮೇ 4ರಿಂದಲೇ ಇದನ್ನು ಜಾರಿಗೆ ತಂದಿತ್ತು. ‘ಎಲ್‌ಐಸಿ’ಯು, ಈ ಯೋಜನೆ ಕಾರ್ಯಗತಗೊಳಿಸುವ ಏಕೈಕ ವಿಮೆ ಕಂಪನಿಯಾಗಿದೆ. 60 ವರ್ಷ ಮೀರಿದ ಹಿರಿಯ ನಾಗರಿಕರಿಗೆ ನಿಗದಿತ ಮಾಸಿಕ ಪಿಂಚಣಿ ನೀಡುವ ಸಲುವಾಗಿ 2014ರ ಆಗಸ್ಟ್‌ ತಿಂಗಳಲ್ಲಿ ಸರ್ಕಾರ ‘ವರಿಷ್ಠ ಬಿಮಾ ಯೋಜನೆ’ ಜಾರಿ ಮಾಡಿತ್ತು. ‘ಪಿಎಂವಿವಿವೈ’ ಯೋಜನೆಯ ಉದ್ದೇಶವೂ ಅದೇ ಆಗಿದೆ. ದಿನೇ ದಿನೇ ಬಡ್ಡಿ ದರಗಳು ಕುಸಿಯುತ್ತಿರುವ ಸಂದರ್ಭದಲ್ಲಿ ನಿವೃತ್ತರಿಗೆ ಈ ಯೋಜನೆಯು ಹೆಚ್ಚು ಪ್ರಯೋಜನಕಾರಿಯಾಗಿದೆ.

ಯೋಜನೆಯ ವಿಶೇಷತೆಗಳು

ಹಿರಿಯ ನಾಗರಿಕರೊಬ್ಬರು ದೊಡ್ಡ ಮೊತ್ತದ ಹಣ ತೊಡಗಿಸಿ ಈ ಸ್ಕೀಮ್‌ ಖರೀದಿಸಿದ ಮರು ತಿಂಗಳಿನಿಂದಲೇ ಪೂರ್ವ ನಿಗದಿತ ಪಿಂಚಣಿ ಬರಲು ಆರಂಭವಾಗುತ್ತದೆ. ಹೂಡಿಕೆ ಮಾಡಿದ ನಂತರ ಹತ್ತು ವರ್ಷಗಳವರೆಗೆ ಪಿಂಚಣಿ ಪಡೆಯುವ ಸೌಲಭ್ಯ ಇದರಲ್ಲಿ ಇದೆ.

ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಹೀಗೆ ಯಾವಾಗ ಪಿಂಚಣಿ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಹೂಡಿಕೆದಾರರಿಗೆ ಅವಕಾಶವಿದೆ. ಈ ಆಯ್ಕೆಯ ಆಧಾರದಲ್ಲಿ ಪಿಂಚಣಿಯ ಮೊತ್ತ ನಿರ್ಧಾರವಾಗುತ್ತದೆ. ಹೂಡಿಕೆದಾರರು ಮಾಸಿಕ ಪಿಂಚಣಿ ಆಯ್ಕೆ ಮಾಡಿಕೊಂಡರೆ ಶೇ 8 ರಷ್ಟು ಹಾಗೂ ವಾರ್ಷಿಕ ಪಿಂಚಣಿ ಆಯ್ಕೆ ಮಾಡಿಕೊಂಡರೆ ಶೇ 8.30ರಷ್ಟು ಬಡ್ಡಿ ಆದಾಯದ ಖಚಿತತೆಯನ್ನು ಈ ಯೋಜನೆ ನೀಡುತ್ತದೆ.

ಆರಂಭದಲ್ಲಿ ಒಬ್ಬ ಹೂಡಿಕೆದಾರರಿಗೆ ಗರಿಷ್ಠ ₹ 7.50ಲಕ್ಷ ಹೂಡಿಕೆಯ ಮಿತಿ ಇತ್ತು. ಆನಂತರ ಇದನ್ನು ಗರಿಷ್ಠ ₹ 15 ಲಕ್ಷಕ್ಕೆ ಹೆಚ್ಚಿಸಲಾಗಿತ್ತು.

ಹೂಡಿಕೆದಾರ (ಪಿಂಚಣಿದಾರ) ಅಥವಾ ಅವರ ಪತಿ ಇಲ್ಲವೆ ಪತ್ನಿ ಗಂಭೀರ ಕಾಯಿಲೆಗೆ ತುತ್ತಾದರೆ ಅವಧಿಗೂ ಪೂರ್ವದಲ್ಲಿ ಹೂಡಿಕೆ ಮಾಡಿದ ಹಣ ವಾಪಸ್‌ ಪಡೆಯಲು ಅವಕಾಶ ಇದೆ.

ಹತ್ತು ವರ್ಷ ಪೂರ್ಣಗೊಂಡ ಬಳಿಕ ಮೂಲ ಹೂಡಿಕೆಯ ಹಣವನ್ನು ಕೊನೆಯ ಕಂತು ಸೇರಿ ಹೂಡಿಕೆದಾರರಿಗೆ ಮರಳಿಸಲಾಗುವುದು. ಒಂದು ವೇಳೆ 10 ವರ್ಷದ ಒಳಗಿನ ಅವಧಿಯಲ್ಲಿ ಹೂಡಿಕೆದಾರರು ನಿಧನ ಹೊಂದಿದರೆ ಅವರು ನಾಮನಿರ್ದೇಶನ ಮಾಡಿದ ವ್ಯಕ್ತಿಗೆ ಹಣ ಸಂದಾಯವಾಗುತ್ತದೆ. ಹೂಡಿಕೆ ಮಾಡಿದ ಮೂರು ವರ್ಷಗಳ ಬಳಿಕ ಹೂಡಿಕೆ ಮೊತ್ತದ ಶೇ 75ರಷ್ಟನ್ನು ಸಾಲದ ರೂಪದಲ್ಲಿ ಪಡೆಯಲೂ ಅವಕಾಶ ಇದೆ. ಎಲ್‌ಐಸಿಯಿಂದ ಆನ್‌ಲೈನ್‌ (www.licindia.in) ಅಥವಾ ಆಫ್‌ ಲೈನ್‌ ಮೂಲಕ ಈ ಯೋಜನೆಯಲ್ಲಿ ಹೂಡಿಕೆಗೆ ಅವಕಾಶ ಇದೆ.

ಯೋಜನೆಯ ನಿಯಮಗಳು ಇಷ್ಟವಾಗದಿದ್ದರೆ ಆನ್‌ಲೈನ್‌ನಲ್ಲಿ ಖರೀದಿಸಿದ್ದರೆ 1 ತಿಂಗಳಲ್ಲಿ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಿದ್ದರೆ 15 ದಿನಗಳಲ್ಲಿ ಹೂಡಿಕೆ ವಾಪಸ್‌ ಪಡೆಯಬಹುದು. ಈ ಯೋಜನೆ ಎಷ್ಟು ಪ್ರಯೋಜನಕಾರಿ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇದನ್ನು ಇಂಥದ್ದೇ ಇನ್ನೊಂದು ಯೋಜನೆಯ ಜೊತೆ ಹೋಲಿಸಿ ನೋಡಬೇಕಾಗುತ್ತದೆ. ಅದಕ್ಕಾಗಿ ಅಂಚೆ ಕಚೇರಿಗಳಲ್ಲಿ ಲಭ್ಯವಿರುವ ‘ಹಿರಿಯ ನಾಗರಿಕರ ಉಳಿತಾಯ ಯೋಜನೆ’ಯ ಜೊತೆ ಇದನ್ನು ಹೋಲಿಕೆ ಮಾಡುವುದು ಸೂಕ್ತ.

ಅಂಚೆ ಕಚೇರಿಯ ಉಳಿತಾಯ ಯೋಜನೆಗೆ ಆದಾಯ ತೆರಿಗೆ 80ಸಿ ಅಡಿ ರಿಯಾಯ್ತಿಗಳಿವೆ. ‘ಪಿಎಂವಿವಿವೈ’ಗೆ ಈ ರಿಯಾಯ್ತಿ ಅನ್ವಯವಾಗುವುದಿಲ್ಲ. ಆದರೆ, ಪಿಂಚಣಿಯ ಅವಧಿ ಹಾಗೂ ಕಂತುಗಳ ಆಯ್ಕೆ ವಿಚಾರದಲ್ಲಿ ‘ಪಿಎಂವಿವಿವೈ’ ಹೆಚ್ಚು ಅನುಕೂಲಕರವಾಗಿದೆ.

ಯೋಜನೆಯ ಮಿತಿಗಳು

‘ಪಿಎಂವಿವಿವೈ’ ಹೂಡಿಕೆಯ ಗರಿಷ್ಠ ಮಿತಿ 15 ಲಕ್ಷ ಇದ್ದು, ಮಾಸಿಕ ಗರಿಷ್ಠ ₹ 10,000 ಪಿಂಚಣಿ ಪಡೆಯಲು ಮಾತ್ರ ಅವಕಾಶ ಇದೆ. ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ ನೀಡುವುದು ಸರ್ಕಾರದ ಉದ್ದೇಶವಾಗಿರುವುದರಿಂದ ಯೋಜನೆಯ ಅವಧಿಯನ್ನು 10 ವರ್ಷಕ್ಕೆ ಮಿತಿಗೊಳಿಸಿರುವುದು ಒಂದು ಕೊರತೆಯಾಗಿ ಕಾಣುತ್ತದೆ.

ಭಾರತೀಯರ ಜೀವಿತಾವಧಿ ಏರಿಕೆ ಆಗುತ್ತಲೇ ಇದೆ. ಯೋಜನೆ ಖರೀದಿಸಿದ ನಿವೃತ್ತರು ಒಂದು ವೇಳೆ 10 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಬದುಕಿದ್ದರೆ ನಂತರದ ಅವಧಿಗೆ ಈ ಯೋಜನೆ ನೆರವಿಗೆ ಬರುವುದಿಲ್ಲ. ಬಡ್ಡಿ ದರ ಕುಸಿಯುತ್ತಿರುವ ದಿನಗಳಲ್ಲಿ ವಯೋವೃದ್ಧ ನಾಗರಿಕರು ಹಣವನ್ನು ಬೇರೆ ಎಲ್ಲಾದರೂ ಹೂಡಿಕೆ ಮಾಡಬೇಕಾದ ಒತ್ತಡಕ್ಕೆ ಸಿಲುಕಬಹುದು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಸಿ ಅಡಿ ರಿಯಾಯ್ತಿಗಳನ್ನು ನೀಡದಿರುವುದು ಈ ಯೋಜನೆಯ ಪ್ರಮುಖ ಲೋಪವಾಗಿದೆ ಎಂದು ಹೇಳಬಹುದು.

ಪ್ರಯೋಜನಗಳು

* 10 ವರ್ಷಗಳವರೆಗೆ ವಾರ್ಷಿಕ ಶೇ 8ರ ಬಡ್ಡಿ ದರ

* 3 ವರ್ಷಗಳ ನಂತರ ಹೂಡಿಕೆಯ ಶೇ 75ರಷ್ಟು ಮೊತ್ತವನ್ನು ಶೇ 10ರ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು

* ಪಾಲಿಸಿ ಅವಧಿಯಲ್ಲಿ ಪಾಲಿಸಿದಾರ ಮೃತಪಟ್ಟರೆ ನಾಮಿನಿಗೆ ಹಣ ವಾಪಸ್‌

* ಪಾಲಿಸಿ ಅವಧಿ ಪೂರ್ಣಗೊಂಡ ನಂತರ ಹೂಡಿಕೆ ಮೊತ್ತ ವಾ‍ಪಸ್‌

* ಅನ್ವಯವಾಗದ 80ಸಿ ರಿಯಾಯ್ತಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.