ADVERTISEMENT

ಪ್ರೇಮ ಮತ್ತು ಕ್ರಾಂತಿಯ ನಡುವಣ ಯುದ್ಧ!

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 19:30 IST
Last Updated 4 ಫೆಬ್ರುವರಿ 2018, 19:30 IST
ಮಂಜುಳಾ, ವಿಶಾಲ್
ಮಂಜುಳಾ, ವಿಶಾಲ್   

‘ಇದು ಕ್ರಾಂತಿ ಮತ್ತು ಪ್ರೀತಿಯ ನಡುವಿನ ಯುದ್ಧ. ಹೇಗೆ ಪ್ರೀತಿ ಕ್ರಾಂತಿಯನ್ನು ಗೆಲ್ಲುತ್ತದೆ ಎನ್ನುವುದನ್ನು ಈ ಸಿನಿಮಾದ ಮೂಲಕ ಹೇಳಹೊರಟಿದ್ದೇವೆ’ ಎಂದರು ‘ನಾನು l/o ಜಾನು’ ಸಿನಿಮಾದ ನಿರ್ದೇಶಕ ಸುರೇಶ್‌.

ಆದರೆ ಅವರ ಮಾತಿನ ಬಗ್ಗೆ ಅವರಿಗೇ ಸ್ಪಷ್ಟತೆ ಇದ್ದಂತಿರಲಿಲ್ಲ. ‘ಯಾವ ಬಗೆಯ ಕ್ರಾಂತಿಯನ್ನು ಸಿನಿಮಾದಲ್ಲಿ ತೋರಿಸಹೊರಟಿದ್ದೀರಿ?’ ಎಂದು ಕೇಳಿದರೆ ‘ಎರಡು ಮೂರು ಬಗೆಯ ಕ್ರಾಂತಿಗಳು ಈ ಸಿನಿಮಾದಲ್ಲಿವೆ. ಒಂದು ಸಣ್ಣ ತಪ್ಪಿನಿಂದಾದ ಕ್ರಾಂತಿಯನ್ನು ಪ್ರೀತಿಯ ಮೂಲಕ ಹೇಗೆ ಸರಿಪಡಿಸುತ್ತಾರೆ ಎನ್ನುವುದೇ ಕಥೆ’ ಎಂದರು. ಕ್ರಾಂತಿ ಎಂಬುದರ ಅರ್ಥವೇ ಸುರೇಶ್‌ ಅವರಿಗೆ ತಿಳಿದಂತಿರಲಿಲ್ಲ.

ಹತ್ತು ವರ್ಷಗಳ ಹಿಂದೆ ಜ್ಯೂನಿಯರ್‌ ಆರ್ಟಿಸ್ಟ್‌ ಆಗಿ ಬಣ್ಣದ ಬದುಕಿಗೆ ಕಾಲಿಟ್ಟ ವಿಶಾಲ್‌, ‘...ಜಾನು’ವಿನ ಮೂಲಕ ನಾಯಕನಾಗುತ್ತಿದ್ದಾರೆ. ಕಿರುತೆರೆ ಧಾರಾವಾಹಿಯೊಂದರಲ್ಲಿ ಅವರ ಜತೆ ನಟಿಸುತ್ತಿದ್ದ ಮಂಜುಳಾ ಅವರೇ ನಾಯಕಿ.

ADVERTISEMENT

‘ನಾನು ನಟಿಸಿದ ಮೊದಲ ಸಿನಿಮಾ ಬಿಡುಗಡೆಯ ಭಾಗ್ಯ ಕಾಣಲೇ ಇಲ್ಲ. ಈಗ ನಾಯಕನಾಗುವ ಕನಸು ನನಸಾದ ಖುಷಿಯಲ್ಲಿದ್ದೇನೆ. ಈ ಚಿತ್ರದಲ್ಲಿ ಪಕ್ಕದ್ಮನೆ ಹುಡ್ಗನ ಭಾವನೆ ಹುಟ್ಟಿಸುವ ಪಾತ್ರ. ಓದಿ ನಾನ್ಯಾಕೆ ಇನ್ನೊಬ್ಬನ ಕೈಕೆಳಗೆ ಕೆಲಸ ಮಾಡಬೇಕು ಎಂಬ ಸ್ವಭಾವದ ಹುಡುಗ ಅವನು’ ಎಂದು ತಮ್ಮ ಪಾತ್ರದ ಬಗ್ಗೆ ಸ್ವಲ್ಪೇ ಸ್ವಲ್ಪ ಹೇಳಿ ಮಾತು ಮುಗಿಸಿದರು.

ಮಂಜುಳಾ ಅವರು ಈ ಚಿತ್ರದಲ್ಲಿ ಘಾಟಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ‘ನನ್ನದು ತುಂಬ ವಯಲೆಂಟ್‌ ಪಾತ್ರ. ಯಾರನ್ನು ನೋಡಿದರೂ ಸಿಡುಕುವ ಹುಡುಗಿ. ನಂತರದಲ್ಲಿ ನಗುನಗುತ್ತಲೇ ಒಬ್ಬ ಹುಡುಗನನ್ನು ಪ್ರೇಮಿಸುತ್ತೇನೆ’ ಎಂದರು.

ಈ ಚಿತ್ರಕ್ಕೆ ಶ್ರೀನಾಥ್‌ ವಿಜಯ್‌ ಸಂಗೀತ ಸಂಯೋಜಿಸಿದ್ದಾರೆ. ನಾಗೇಂದ್ರ ಪ್ರಸಾದ್‌ ಹಾಡುಗಳಿಗೆ ಪದ ಪೋಣಿಸಿದ್ದಾರೆ. ಮಂಗಳೂರು, ತುಮಕೂರು, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಚಂದ್ರು, ರವಿಶಂಕರ್‌, ವಿಷ್ಣು ಭಂಡಾರಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಫೆ. 9ಕ್ಕೆ ಚಿತ್ರ ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.