ADVERTISEMENT

PV Web Exclusive | ಬಂಗಾರದಂತೆ ಹೊಳೆಯುತ್ತಿದೆ ‘ಮುತ್ತೂಟ್‌ ಫೈನಾನ್ಸ್‌’ ಷೇರು

ಷೇರಿನ ಮೌಲ್ಯ ಒಂದು ವರ್ಷದಲ್ಲೇ ಶೇ 77ರಷ್ಟು ಹೆಚ್ಚಳ

ವಿನಾಯಕ ಭಟ್ಟ‌
Published 15 ಫೆಬ್ರುವರಿ 2021, 7:50 IST
Last Updated 15 ಫೆಬ್ರುವರಿ 2021, 7:50 IST
ಮುತ್ತೂಟ್‌ ಫೈನಾನ್ಸ್‌
ಮುತ್ತೂಟ್‌ ಫೈನಾನ್ಸ್‌   

ಒಂದು ವರ್ಷದ ಅವಧಿಯಲ್ಲಿ ಶೇ 77ರಷ್ಟು ಲಾಭಾಂಶವನ್ನು ಹೂಡಿಕೆದಾರರಿಗೆ ತಂದುಕೊಟ್ಟಿರುವ ಮುತ್ತೂಟ್‌ ಫೈನಾನ್ಸ್‌ ಕಂಪನಿಯ ಷೇರಿಗೆ ಷೇರುಪೇಟೆಯಲ್ಲೀಗ ಚಿನ್ನದ ಬೆಲೆ ಬಂದಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವವರು ಈ ಕಂಪನಿಯತ್ತಲೂ ಚಿತ್ತ ಹರಿಸಬಹುದು...

ಷೇರುಪೇಟೆಯಲ್ಲೀಗ ‘ಮುತ್ತೂಟ್‌ ಫೈನಾನ್ಸ್‌’ ಕಂಪನಿಯ ಷೇರು ಬಂಗಾರದಂತೆ ಹೊಳೆಯುತ್ತಿದೆ. ಚಿನ್ನದ ಮೇಲೆ ಸಾಲ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಮುತ್ತೂಟ್‌ ಫೈನಾನ್ಸ್‌ ಕಂಪನಿಯು ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಿಸಿಕೊಳ್ಳುತ್ತಿದ್ದು, ಷೇರುಪೇಟೆಯಲ್ಲಿ ಇದರ ಷೇರು ಚಿನ್ನದಂತೆ ಬೆಲೆಬಾಳುತ್ತಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವ ಈ ಕಂಪನಿಯು ಕಳೆದ ಒಂದು ವರ್ಷದ ಅವಧಿಯಲ್ಲಿ ಹೂಡಿಕೆದಾರರಿಗೆ ಶೇ 77ರಷ್ಟು ಲಾಭವನ್ನು ತಂದುಕೊಟ್ಟಿದೆ. ಕಳೆದ ವಾರ ಪ್ರಕಟಗೊಂಡ ಕಂಪನಿಯ ತ್ರೈಮಾಸಿಕ ವರದಿಯಲ್ಲಿನ ಸಕಾರಾತ್ಮಕ ಅಂಶಗಳಿಂದಾಗಿ ಕೇವಲ ಐದು ದಿನಗಳ ವಹಿವಾಟಿನಲ್ಲಿ ಷೇರಿನ ಬೆಲೆಯು ಶೇ 11ರಷ್ಟು ಹೆಚ್ಚಾಗುವ ಮೂಲಕ ಹೂಡಿಕೆದಾರರ ಗಮನ ಸೆಳೆದಿದೆ.

ADVERTISEMENT

ಮುತ್ತೂಟ್‌ ಫೈನಾನ್ಸ್‌ ಕಂಪನಿಯ ಷೇರಿನ ಬೆಲೆಯು 52 ವಾರಗಳ ಅವಧಿಯಲ್ಲಿ 2020ರ ಮಾರ್ಚ್‌ 24ರಂದು ₹ 476.80ಕ್ಕೆ ಕುಸಿಯುವ ಮೂಲಕ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ನಂತರ 2020ರ ಜುಲೈ 28ರಂದು ₹ 1,405.75ಕ್ಕೆ ತಲುಪುವ ಮೂಲಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು.

ಚಿನ್ನದ ಬೆಲೆಯ ಏರಿಳಿತಕ್ಕೆ ತಕ್ಕಂತೆ ಈ ಕಂಪನಿಯ ಷೇರಿನ ಮೌಲ್ಯದಲ್ಲೂ ಬದಲಾವಣೆಗಳಾಗುತ್ತಿವೆ. ಹೀಗಾಗಿ ತುಸು ರಿಸ್ಕ್‌ ತೆಗೆದುಕೊಳ್ಳಲು ಸಿದ್ಧರಿರುವವರು ಷೇರುಪೇಟೆಯಲ್ಲಿ ‘ಇಟಿಎಫ್‌ ಗೋಲ್ಡ್‌’ಗೆ ಬದಲಾಗಿ ಮುತ್ತೂಟ್‌ ಫೈನಾನ್ಸ್‌ ಷೇರಿನ ಮೇಲೆ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ.

ಷೇರಿನ ಬೆಲೆ ಶೇ 77 ಹೆಚ್ಚಳ: 2020ರ ಫೆಬ್ರುವರಿ 12ರಂದು ₹ 741.65ರಲ್ಲಿ ವಹಿವಾಟು ಅಂತ್ಯಗೊಳಿಸಿದ್ದ ಈ ಕಂಪನಿಯ ಷೇರಿನ ಬೆಲೆಯು ಒಂದು ವರ್ಷದ ಅವಧಿಯಲ್ಲಿ ₹ 1,315ಕ್ಕೆ ತಲುಪುವ ಮೂಲಕ ₹ 573.35ರಷ್ಟು (ಶೇ 77.30) ಹೆಚ್ಚಾಗಿದೆ. ಆಗಸ್ಟ್‌ 12ರಂದು ₹ 1,146.95ರಲ್ಲಿ ವಹಿವಾಟು ಅಂತ್ಯಗೊಳಿಸಿದ್ದ ಕಂಪನಿಯ ಷೇರಿನ ಮೌಲ್ಯವು ಆರು ತಿಂಗಳಲ್ಲಿ ₹ 168.05ರಷ್ಟು (ಶೇ 14.65) ಏರಿಕೆ ಕಂಡಿದೆ. ಕಳೆದ ಮೂರು ತಿಂಗಳಲ್ಲಿ ಶೇ 12.46 ಹಾಗೂ ಒಂದು ತಿಂಗಳಲ್ಲಿ ಶೇ 3ರಷ್ಟು ಷೇರಿನ ಮೌಲ್ಯ ವೃದ್ಧಿಯಾಗಿದೆ.

ಲಾಭ ಗಳಿಕೆಯಲ್ಲಿ ಶೇ 23 ಹೆಚ್ಚಳ: ಕೋವಿಡ್‌ ಸಂಕಷ್ಟದ ನಡುವೆಯೂ ಲಾಭ ಗಳಿಕೆಯಲ್ಲಿ ಹಿಂದೆ ಬೀಳದ ಮುತ್ತೂಟ್‌ ಫೈನಾನ್ಸ್‌ ಕಂಪನಿಯು ಲಾಭ ಗಳಿಕೆಯ ಓಟವನ್ನು ಮುಂದುವರಿಸಿದೆ. ಕಂಪನಿಯು 2020–21ನೇ ಆರ್ಥಿಕ ಸಾಲಿನ ಮೂರನೇ ತ್ರೈಮಾಸಿಕ ವರದಿಯನ್ನು ಫೆಬ್ರುವರಿ 10ರಂದು ಪ್ರಕಟಿಸಿದ್ದು, ಅಂದು ಕಂಪನಿಯ ಷೇರಿನ ಬೆಲೆ ₹ 81.30ರಷ್ಟು (ಶೇ 6.85) ಹೆಚ್ಚಾಗಿತ್ತು.

2019ರ ಡಿಸೆಂಬರ್‌ ಅಂತ್ಯಕ್ಕೆ ₹ 861.04 ಕೋಟಿ ಲಾಭ ಗಳಿಸಿದ್ದ ಕಂಪನಿಯು 2020ರ ಡಿಸೆಂಬರ್‌ ಅಂತ್ಯಕ್ಕೆ ₹ 1,006.63 ಕೋಟಿ ಲಾಭ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭ ಗಳಿಕೆಯ ಪ್ರಮಾಣವು ₹ 145.59 ಕೋಟಿ (ಶೇ 16.90) ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಆದಾಯ ಪ್ರಮಾಣವು ₹ 2,588.43 ಕೋಟಿಯಿಂದ ₹ 3,000.78 ಕೋಟಿಗೆ (ಶೇ 15.93) ಏರಿಕೆಯಾಗಿದೆ. ಪ್ರತಿ ಷೇರಿನ ಮೇಲಿನ ಗಳಿಕೆ (ಇ.ಪಿ.ಎಸ್‌) ಪ್ರಮಾಣ ಕೂಡ 21.28ರಿಂದ 25.15ಕ್ಕೆ ವೃದ್ಧಿಯಾಗಿದೆ.

ಕಂಪನಿಯು 2019–20ನೇ ಸಾಲಿನಲ್ಲಿ ಡಿಸೆಂಬರ್‌ ಅಂತ್ಯಕ್ಕೆ ಒಟ್ಟು ₹ 2,332.90 ಕೋಟಿ ಲಾಭ ದಾಖಲಿಸಿತ್ತು. ವರ್ಷದ ಅಂತ್ಯಕ್ಕೆ ಒಟ್ಟು ₹ 3,168.68 ಕೋಟಿ ಲಾಭ ಗಳಿಸಿತ್ತು. 2020–21ನೇ ಸಾಲಿನಲ್ಲಿ ಡಿಸೆಂಬರ್‌ ಅಂತ್ಯಕ್ಕೆ ಒಟ್ಟು ₹ 2,795.10 ಕೋಟಿ ಲಾಭವನ್ನು ಈಗಾಗಲೇ ಗಳಿಸಿದ್ದು, ವರ್ಷಾಂತ್ಯದಲ್ಲಿ ಲಾಭ ಗಳಿಕೆ ಪ್ರಮಾಣ ಕಳೆದ ಸಾಲಿಗಿಂತಲೂ ಹೆಚ್ಚುವುದರಲ್ಲಿ ಸಂಶಯವಿಲ್ಲ.

2019ರಲ್ಲಿ ₹ 43,436 ಕೋಟಿ ಇದ್ದ ಕಂಪನಿಯ ಸಾಲ ಆಸ್ತಿ ಪ್ರಮಾಣವು ಈಗ ಶೇ 28ರಷ್ಟು ಹೆಚ್ಚಾಗುವುದರೊಂದಿಗೆ ₹ 55,800 ಕೋಟಿಗೆ ತಲುಪುವ ಮೂಲಕ ಹೊಸ ಮೈಲುಗಲ್ಲು ನಿರ್ಮಿಸಿದೆ.

ಕಳೆದ ವರ್ಷ ಕಂಪನಿಯು ₹ 10 ಮುಖಬೆಲೆಯ ಪ್ರತಿ ಷೇರಿಗೆ ₹ 15 ಲಾಭಾಂಶವನ್ನು ಹಂಚಿದೆ. ಹೂಡಿಕೆದಾರರಿಗೆ ಎರಡು ವರ್ಷಗಳಲ್ಲಿ ಶೇ 156.49 ಹಾಗೂ ಮೂರು ವರ್ಷಗಳಲ್ಲಿ ಶೇ 214.82ರಷ್ಟು ಲಾಭವನ್ನು ತಂದುಕೊಟ್ಟಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸರಾಸರಿ ಶೇ 70ರಷ್ಟು ಲಾಭವನ್ನು ತಂದುಕೊಟ್ಟಿರುವ ಈ ಕಂಪನಿಯ ಷೇರನ್ನು ಹೂಡಿಕೆದಾರರು ತಮ್ಮ ‘ವಾಚ್‌ಲಿಸ್ಟ್‌’ಗೆ ಸೇರಿಸಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.