ADVERTISEMENT

ದಿನದ ಸೂಕ್ತಿ: ಅಧರ್ಮದ ಫಲ

ಎಸ್.ಸೂರ್ಯಪ್ರಕಾಶ ಪಂಡಿತ್
Published 5 ಫೆಬ್ರುವರಿ 2021, 0:52 IST
Last Updated 5 ಫೆಬ್ರುವರಿ 2021, 0:52 IST
ದುರ್ಗಾ
ದುರ್ಗಾ   

ಯದಿ ನಾತ್ಮನಿ ಪುತ್ರೇಷು ನ ಚೇತ್ಪುತ್ರೇಷು ನಪ್ತೃಷು ।

ನ ತ್ವೇವ ತು ಕೃತೋsಧರ್ಮಃ ಕರ್ತುಭರ್ವತಿ ನಿಷ್ಫಲಃ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಅಧರ್ಮದ ಆಚರಣೆಯಿಂದ ಆ ಕೂಡಲೇ ತನಗೆ ತೊಂದರೆ ಆಗದಿದ್ದರೂ ಮಕ್ಕಳಿಗೆ ತೊಂದರೆ ಆಗುತ್ತದೆ; ಇಲ್ಲವೆ ಮೊಮ್ಮಕ್ಕಳಿಗೆ, ಮರಿಮಕ್ಕಳಿಗೆ ಅದರ ಫಲ ಉಂಟಾಗಿಯೇ ತೀರುತ್ತದೆ. ಮಾಡಿದ ಅಧರ್ಮವು ಫಲವನ್ನು ಕೊಡದೆ ಇರುವುದಿಲ್ಲ.’

ನಾವು ಮಾಡಿದ ಕೆಟ್ಟ ಕೆಲಸದ ಪರಿಣಾಮ ನಮ್ಮ ಮೇಲೆ ತತ್‌ಕ್ಷಣದಲ್ಲಿ ಆಗದೆಹೋಗಬಹುದು; ಅದರೆ ಅದು ಫಲವನ್ನು ಕೊಟ್ಟೇ ಕೊಡುತ್ತದೆ ಎಂದು ಸುಭಾಷಿತ ಹೇಳುತ್ತಿದೆ.

ಮಾಡಿದ್ದುಣ್ಣೋ ಮಹಾರಾಯ – ಎಂಬ ಮಾತಿನ ವಿಸ್ತೃತರೂಪದಂತಿದೆ ಈ ಸುಭಾಷಿತ.

ನಮಗೆ ಕೆಟ್ಟ ಕೆಲಸಗಳನ್ನು ಮಾಡುವಾಗ ಅಂಜಿಕೆ ಇರದು. ಇದಕ್ಕೆ ಕಾರಣ ಏನಾಗಿರಬಹುದು? ನಮಗೆ ಯಾವುದಾದರೂ ಕೆಲಸದಿಂದ ತೊಂದರೆ ಆಗುವಂತಿದ್ದರೆ ಆಗ ಆ ಕೆಲಸವನ್ನು ಮಾಡಲು ಹಿಂಜರಿಯುತ್ತೇವೆ ಅಲ್ಲವೆ? ಆದರೆ ಕೆಟ್ಟ ಕೆಲಸಗಳಿಂದ ನಮಗೆ ಕೆಟ್ಟದ್ದು ಆಗಿದೆ, ಅನಾಹುತ ಆಗಿದೆ – ಎಂಬುದನ್ನು ನಾವು ಅನುಭವಿಸಿರುವುದು ತುಂಬಾ ಕಡಿಮೆ. ಈ ವಿಶ್ವಾಸದಿಂದಲೇ ನಾವು ಕೆಟ್ಟ ಕೆಲಸವನ್ನು ಸ್ವಲ್ಪವೂ ಭಯವಿಲ್ಲದೆ ಮಾಡುತ್ತಿದ್ದೇವೆ. ಒಳ್ಳೆಯ ಕೆಲಸಗಳನ್ನು ಮಾಡಲು ತುಂಬ ಶ್ರಮ ಪಡಬೇಕು. ಆದರೆ ಕೆಟ್ಟ ಕೆಲಸಗಳನ್ನು ಮಾಡುವುದು ಸುಲಭ. ಮಾತ್ರವಲ್ಲ, ಹೀಗೆ ಸುಲಭದಿಂದ ಮಾಡಿದ ಕೆಟ್ಟ ಕೆಲಸಗಳಿಂದ ನಮಗೆ ತೊಂದರೆಗಳೂ ಎದುರಾಗುತ್ತಿಲ್ಲ; ಇದಕ್ಕೆ ಬದಲಾಗಿ ಲಾಭವೇ ಹೆಚ್ಚಾಗುತ್ತಿದೆ. ಆದುದರಿಂದಲೇ ನಾವೆಲ್ಲ ಕೆಟ್ಟದ್ದರಲ್ಲಿಯೇ ಮುಳುಗಿದ್ದೇವೆ, ಅಲ್ಲವೆ?

ಆದರೆ ಸುಭಾಷಿತ ಹೇಳುತ್ತಿದೆ; ಹೌದು, ಅಧರ್ಮದ ಕೆಲಸಗಳಿಂದ ಬರುವ ಕೆಟ್ಟ ಫಲ ಆ ಕೂಡಲೇ ನಮಗೆ ಅನುಭವಕ್ಕೆ ಬರದೇಹೋಗಬಹುದು. ಆದರೆ ಅದರ ಫಲವನ್ನು ಮಾತ್ರ ನಾವು ಅನುಭವಿಸಲೇಬೇಕಾಗುತ್ತದೆ. ಒಂದು ವೇಳೆ ನಾವು ಆ ಫಲವನ್ನು ಅನುಭವಿಸದೆಹೋಗಬಹುದು; ಖಂಡಿತವಾಗಿಯೂ ನಮ್ಮ ಮಕ್ಕಳು ಅಥವಾ ಮೊಮ್ಮಕ್ಕಳು ಅಥವಾ ಮರಿಮಕ್ಕಳು – ಅನುಭವಿಸಿಯೇ ಅನುಭವಿಸುತ್ತಾರೆ. ಎಂದರೆ ಒಟ್ಟಿನಲ್ಲಿ ನಾವು ಮಾಡುವ ಕೆಟ್ಟ ಕೆಲಸಗಳ ಫಲವನ್ನು ನಾವು ಅಥವಾ ನಮ್ಮ ಕುಟುಂಬದವರು ಇಂದಲ್ಲ, ನಾಳೆ ಅಥವಾ ನಾಳಿದ್ದು, ವಾರದಲ್ಲಿ, ವರ್ಷದಲ್ಲಿ, ಮುಂದಿನ ಜನ್ಮದಲ್ಲಿ – ಎಂದಾದರೂ ಒಂದು ದಿನ ಅನುಭವಿಸಿಯೇ ತೀರಬೇಕು.

ಸುಭಾಷಿತದ ಈ ಎಚ್ಚರಿಕೆಯನ್ನು ನಮ್ಮ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ಖಂಡಿತ ಗಮನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.