ADVERTISEMENT

ದಿನದ ಸೂಕ್ತಿ: ಎಲ್ಲದಕ್ಕೂ ಕರ್ಮವೇ ಕಾರಣ

ಎಸ್.ಸೂರ್ಯಪ್ರಕಾಶ ಪಂಡಿತ್
Published 18 ಫೆಬ್ರುವರಿ 2021, 1:35 IST
Last Updated 18 ಫೆಬ್ರುವರಿ 2021, 1:35 IST
ಕರ್ಮಭಾರ
ಕರ್ಮಭಾರ   

ನ ಬುದ್ಧಿರ್ಧನಲಾಭಾಯ ನ ಜಾಡ್ಯಮಸಮೃದ್ಧಯೇ ।

ಕರ್ಮಪರ್ಯಾಯವೃತ್ತಾಂತಂ ಪ್ರಾಜ್ಞೋ ಜಾನಾತಿ ನೇತರಃ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಹಣದ ಸಂಪಾದನೆಗೆ ಬುದ್ಧಿ ಕಾರಣವಾಗುವುದಿಲ್ಲ. ಬಡತನಕ್ಕೆ ದಡ್ಡತನ ಕಾರಣವಾಗದು. ಇವೆಲ್ಲವೂ ಅವನ ಕರ್ಮದ ಫಲವಾಗಿರುತ್ತದೆ. ಇದನ್ನು ಬುದ್ಧಿಶಾಲಿಯು ಮಾತ್ರ ಅರ್ಥಮಾಡಿಕೊಳ್ಳುತ್ತಾನೆ, ಬೇರೆಯವನಲ್ಲ.’

ಯಾವುದೋ ಕಾರ್ಯಕ್ಕೆ ಯಾವುದೋ ಕಾರಣವನ್ನು ಊಹಿಸಿಕೊಂಡು ಸಂಕಟಪಡುತ್ತಿರುತ್ತೇವೆ ಎನ್ನುವುದನ್ನು ಸುಭಾಷಿತ ಹೇಳುತ್ತಿದೆ.

ಬುದ್ಧಿಶಕ್ತಿಗೂ ಹಣದ ಸಂಪಾದನೆಗೂ ಸಂಬಂಧ ಇದೆ ಎಂದುಕೊಳ್ಳುತ್ತೇವೆ. ಆದರೆ ಅಂಥ ಸಂಬಂಧವೇನೂ ಇರದು ಎನ್ನುತ್ತಿದೆ ಸುಭಾಷಿತ. ಹೀಗೆಯೇ ಬಡತನಕ್ಕೂ ದಡ್ಡತನಕ್ಕೂ ಸಂಬಂಧ ಇದೆ ಎಂದುಕೊಳ್ಳುತ್ತೇವೆ; ಆದರೆ ದಡ್ಡತನಕ್ಕೂ ಬಡತನಕ್ಕೂ ಸಂಬಂಧವೇನೂ ಇರದು ಎನ್ನುತ್ತಿದೆ ಅದು.

ಕೆಲವರು ಬುದ್ಧಿವಂತರು ಶ್ರೀಮಂತರೂ ಆಗಿರುತ್ತಾರೆ, ಕೆಲವರು ಬುದ್ಧಿವಂತರು ಬಡವರೂ ಆಗಿರುತ್ತಾರೆ. ಹೀಗೆಯೇ ಕೆಲವರು ದಡ್ಡರು ಶ್ರೀಮಂತರೂ ಆಗಿರುತ್ತಾರೆ, ಕೆಲವರು ದಡ್ಡರು ಬಡವರೂ ಆಗಿರುತ್ತಾರೆ. ಈ ವಿಚಿತ್ರ ಪರಿಸ್ಥಿತಿಗೆ ಕಾರಣವಾದರೂ ಏನು?

ಸುಭಾಷಿತ ಹೇಳುತ್ತಿದೆ, ಇದಕ್ಕೆ ಕಾರಣ ಕರ್ಮವೇ ಹೌದು ಎಂದು.

ಹಾಗಾದರೆ ಕರ್ಮ ಎಂದರೆ ಏನು?

ನಮ್ಮ ಪಾಪ ಮತ್ತು ಪುಣ್ಯಗಳ ಲೆಕ್ಕಾಚಾರವೇ ಕರ್ಮ ಎಂಬ ಒಕ್ಕಣೆ ಒಂದಿದೆ. ಈ ಒಕ್ಕಣೆಯ ಪ್ರಕಾರ ಕರ್ಮಗಳು ಮೂರು ಎಂಬ ಎಣಿಕೆಯೂ ಉಂಟು – ಸಂಚಿತ, ಆಗಾಮಿ ಮತ್ತು ಪ್ರಾರಬ್ಧ ಎಂದು. ಆದರೆ ಕರ್ಮಕ್ಕೆ ಇನ್ನೊಂದು ಸಾಮಾನ್ಯವಾದ ಅರ್ಥವೂ ಉಂಟು. ನಾವು ಮಾಡುವ ಕೆಲಸಗಳೂ ಕರ್ಮವೇ. ಇದು ಇನ್ನೂ ಪಾಪ–ಪುಣ್ಯಗಳ ಆಕಾರವನ್ನು ಪಡೆಯುವ ಮುನ್ನ ಮಾಡುವ ಕೆಲಸಗಳು.

ಎಂದರೆ ನಮ್ಮ ಬಡತನಕ್ಕೂ ಸಿರಿತನಕ್ಕೂ ಕಾರಣ ಎಂದರೆ ನಮ್ಮ ಕರ್ಮಗಳೇ ಹೌದು. ಇದರ ಅರ್ಥ, ನಾವು ಮಾಡುವ ಕೆಲಸಗಳನ್ನು ಅವಲಂಬಿಸಿಯೇ ನಮ್ಮ ಭಾಗ್ಯ ಯಾವುದೆಂಬುದು ನಿರ್ಧಾರವಾಗುತ್ತದೆ ಎಂಬುದು ಸುಭಾಷಿತದ ಧ್ವನಿ.

ಕೇವಲ ನಮ್ಮ ಬುದ್ಧಿವಂತತನ ಅಥವಾ ದಡ್ಡತನಗಳಷ್ಟೆ ನಮ್ಮ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವುದಿಲ್ಲ. ನಾವು ಮಾಡುವ ಕೆಲಸವನ್ನು ಎಷ್ಟು ಪ್ರಾಮಾಣಿಕವಾಗಿಯೂ ಶ್ರದ್ಧೆಯಿಂದಲೂ ಮಾಡುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ಎಂದರೆ ನಮ್ಮ ಕರ್ಮಗಳು ನಮ್ಮ ಜೀವನದ ಭಾಗ್ಯವನ್ನು ನಿರ್ಧರಿಸುತ್ತವೆ. ಆದುದರಿಂದ ಸದಾ ನಾವು ಮಾಡುವ ಕರ್ಮಗಳ ಮೇಲೆ ನಮ್ಮ ಭಾವ–ಬುದ್ಧಿಗಳನ್ನು ಕೇಂದ್ರೀಕರಿಸಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.