ADVERTISEMENT

ಆನೇಕಲ್ | 100 ಅಡಿಯ ಮೂರು ತೇರಿನ ವೈಭವ

ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆ l ಕಳೆಗಟ್ಟಿದ ಮೂರು ಗ್ರಾಮಗಳ ಕುರ್ಜು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 4:36 IST
Last Updated 19 ಮಾರ್ಚ್ 2023, 4:36 IST
ಆನೇಕಲ್‌ ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆ ಪ್ರಯುಕ್ತ ಎತ್ತುಗಳ ಮೂಲಕ ಅಲಂಕೃತ ತೇರನ್ನು ಎಳೆದು ತರುತ್ತಿರುವ ದೃಶ್ಯ
ಆನೇಕಲ್‌ ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆ ಪ್ರಯುಕ್ತ ಎತ್ತುಗಳ ಮೂಲಕ ಅಲಂಕೃತ ತೇರನ್ನು ಎಳೆದು ತರುತ್ತಿರುವ ದೃಶ್ಯ   

ಆನೇಕಲ್ : ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆ ಶನಿವಾರ ವೈಭವದಿಂದ ನಡೆಯಿತು. ಸಹಸ್ರಾರು ಮಂದಿ ಭಕ್ತರು ವೈಭವದ ರಥೋತ್ಸವಕ್ಕೆ ಸಾಕ್ಷಿಯಾದರು.

ವಿವಿಧ ಗ್ರಾಮಗಳಿಂದ ಬಂದ ಮೂರು ತೇರುಗಳು(ಕುರ್ಜುಗಳು) ರಾತ್ರಿ 7.30ರ ವೇಳೆಗೆ ಹುಸ್ಕೂರು ತಲುಪಿದವು. ಸುಮಾರು 100 ಅಡಿಗೂ ಎತ್ತರದ ಲಕ್ಷ್ಮೀನಾರಾಯಣಪುರದ ಕುರ್ಜು ದೇವಾಲಯದ ಆವರಣಕ್ಕೆ ಬಂದಿತು. ರಾಯಸಂದ್ರ ಮತ್ತು ದೊಡ್ಡನಾಗಮಂಗಲ ತೇರು ನಂತರ ಜೊತೆಯಾದವು. ಮೂರು ತೇರುಗಳ ಸಂಗಮವನ್ನು ಸಹಸ್ರಾರು ಮಂದಿ ಕಣ್ತುಂಬಿಕೊಂಡರು.

100 ಅಡಿಗೂ ಎತ್ತರದ ತೇರುಗಳನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಭಕ್ತರು ಸಿದ್ಧಪಡಿಸಿ ಶುಕ್ರವಾರ ತಮ್ಮ ಗ್ರಾಮಗಳಲ್ಲಿ ಪೂಜೆ ಸಲ್ಲಿಸಿ ಶನಿವಾರ ಮಧ್ಯಾಹ್ನ 1ರ ವೇಳೆಗೆ ತಮ್ಮ ಗ್ರಾಮದಿಂದ ಹುಸ್ಕೂರು ಮದ್ದೂರಮ್ಮ ದೇವಾಲಯದ ಆವರಣಕ್ಕೆ ತೇರನ್ನು ತಂದರು.

ADVERTISEMENT

ಜೆಸಿಬಿಗಳ ಮೂಲಕ ದಾರಿ ಮಾಡಿಕೊಂಡು ತೇರನ್ನು ಎತ್ತುಗಳು ಮತ್ತು ಜನರು ಎಳೆದು ತರುವ ವಿಶಿಷ್ಟ ರಥೋತ್ಸವ ಇದಾಗಿದೆ. ತೇರಿನ ಹಾದಿಯುದ್ದಕ್ಕೂ ತಮಟೆ ವಾದನದೊಂದಿಗೆ ಭಕ್ತರು ಕುಣಿದು ಸಂಭ್ರಮದಿಂದ ತೇರುಗಳನ್ನು ಎಳೆದು ತಂದರು.

ತೇರಿನೊಂದಿಗೆ ಬಂದ ಗ್ರಾಮದ ಮಹಿಳೆಯರು, ಯುವಕ, ಯುವತಿಯರು ತಮಟೆಯ ವಾದನಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು. ತೇರು ಬರುವ ಹಾದಿಯಲ್ಲಿ ಗ್ರಾಮಗಳ ಜನರು ರಾಸುಗಳಿಗೆ ಬೂಸ ನೀಡಿ ಎತ್ತುಗಳಿಗೆ ಆಹಾರ ಪೂರೈಕೆ ಮಾಡಿದರು.

ಬರುವ ಜನರಿಗೆ ದಾರಿಯುದ್ದಕ್ಕೂ ಅರವಂಟಿಕೆಗಳನ್ನು ಸ್ಥಾಪಿಸಿ ಕೋಸಂಬರಿ, ಮಜ್ಜಿಗೆ, ಪಾನಕ ವಿತರಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು. ಒಂದೊಂದು ತೇರು ದೇವಾಲಯದ ಆವರಣಕ್ಕೆ ಬರುತ್ತಿದ್ದಂತೆ ಗ್ರಾಮಸ್ಥರ ಉತ್ಸಾಹ ಮುಗಿಲುಮುಟ್ಟುತ್ತಿತ್ತು. ಮದ್ದೂರಮ್ಮ ದೇವಿಯ ಜಯಘೋಷ ಮಾಡುತ್ತಾ ದೇವಾಲಯದ ಆವರಣ ತಲುಪಿದರು.

ಲಕ್ಷ್ಮೀನಾರಾಯಣಪುರ, ದೊಡ್ಡನಾಗಮಂಗಲ, ರಾಯಸಂದ್ರ ಗ್ರಾಮಗಳ ತೇರುಗಳು ಸುಮಾರು 5-6ಕಿ.ಮೀ. ದೂರದಿಂದ ಬಂದವು. 100ಅಡಿಗೂ ಎತ್ತರದ ತೇರುಗಳನ್ನು ರಸ್ತೆಗಳಲ್ಲಿ ಎತ್ತುಗಳು ಎಳೆದು ತರುವುದು ವಿಶೇಷವಾಗಿದ್ದು ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ಜನರು ನಿಂತು ವೈಭವದ ತೇರು ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಎಲ್ಲಾ ಗ್ರಾಮಗಳ ತೇರುಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಬಣ್ಣ ಬಣ್ಣದ ವಸ್ತ್ರಗಳಿಂದ ತೇರನ್ನು ಸಿಂಗರಿಸಲಾಗಿತ್ತು. ಪ್ರತಿ ತೇರು ಸಹ 10-12 ಟನ್ ತೂಕವಿತ್ತು. ಇದನ್ನು ಎಳೆದು ತರಬೇಕಾದರೆ ನೇತೃತ್ವ ವಹಿಸಿರುವವರು ಎತ್ತುಗಳ ಜೊತೆಗಿರುವವರಿಗೆ ಹಾಗೂ ವಾಲದಂತೆ ಹಗ್ಗಗಳನ್ನು ಹಿಡಿದಿರುವವರಿಗೆ ಆಗಿಂದ್ದಾಗೆ ಮೈಕ್ ಮೂಲಕ ಸೂಚನೆ ಕೊಟ್ಟು ತುಂಬಾ ಜತನದಿಂದ ತೇರನ್ನು ಸಾಗಿಸಿದರು.

ಜಾತ್ರೆಯ ಅಂಗವಾಗಿ ಭಾನುವಾರ ಮಕ್ಕಳ ಸಿಡಿ, ಗ್ರಾಮದೇವತೆಗಳ ಉತ್ಸವ ಹಾಗೂ ರಾತ್ರಿ ಧರ್ಮರಾಯಸ್ವಾಮಿ ದ್ರೌಪದಮ್ಮನವರ ಕರಗ ಮಹೋತ್ಸವ ನಡೆಯಲಿದೆ.

ಈ ಮೊದಲು 10–15 ತೇರು ಬರುತ್ತಿದ್ದವು: ಹುಸ್ಕೂರು ಮದ್ದೂರಮ್ಮ ದೇವಿಯ ಪ್ರಮುಖ ಆಕರ್ಷಣೆ ವಿವಿಧ ಗ್ರಾಮಗಳ ಕುರ್ಜುಗಳು. ಪ್ರತಿ ವರ್ಷ 10-15 ತೇರುಗಳು ಮದ್ದೂರಮ್ಮ ದೇವಿ ಜಾತ್ರೆಗೆ ಬರುತ್ತಿದ್ದವು. ಆದರೆ ರೈಲು ಹಳಿ ವಿದ್ಯುದೀಕರಣದ ಹಿನ್ನೆಲೆಯಲ್ಲಿ ತೇರುಗಳ ಸಂಖ್ಯೆ ಮೂರಕ್ಕೆ ಕುಸಿತಗೊಂಡಿದೆ. ಲಕ್ಷ್ಮೀನಾರಾಯಣಪುರ, ರಾಯಸಂದ್ರ ಮತ್ತು ದೊಡ್ಡನಾಗಮಂಗಲ ಗ್ರಾಮಗಳ ತೇರುಗಳು ಜಾತ್ರೆಯಲ್ಲಿ ಪಾಲ್ಗೊಂಡಿವೆ. ಕೊಡತಿ, ನಾರಾಯಣಘಟ್ಟ, ಚೊಕ್ಕಸಂದ್ರ, ರಾಮಸಾಗರ, ಹೀಲಲಿಗೆ, ಸಿಂಗೇನಅಗ್ರಹಾರ, ಕಗ್ಗಲಿಪುರ, ಸೂಲಕುಂಟೆ, ಹಾರೋಹಳ್ಳಿ ಗ್ರಾಮಗಳಿಂದ ಪ್ರತಿ ವರ್ಷ ತೇರುಗಳು ಬರುತ್ತಿದ್ದವು. ಆದರೆ ಈ ವರ್ಷ ತೇರುಗಳ ಆಗಮನವಾಗಲಿಲ್ಲ. ಪರಂಪರೆಯಿಂದ ನಡೆದು ಬಂದಿರುವ ಪದ್ಧತಿಯನ್ನು ಬಿಡಬಾರದು ಎಂದು ಗ್ರಾಮಸ್ಥರು ಪುಟ್ಟ ತೇರುಗಳನ್ನು ನಿರ್ಮಿಸಿ ದೇವಾಲಯದ ಸಮೀಪ
ನಿಲ್ಲಿಸಿದ್ದ ದೃಶ್ಯ ಕಂಡು ಬಂದಿತು.

ವಾಹನ ದಟ್ಟಣೆ: ಹುಸ್ಕೂರು ಗ್ರಾಮಗಳ ಜೊತೆಗೆ ಜೊತೆಗೆ ಬೆಂಗಳೂರು, ತಮಿಳುನಾಡು ಸೇರಿದಂತೆ ನೂರಾರು ಗ್ರಾಮಗಳ ಸಹಸ್ರಾರು ಜನರು ಹುಸ್ಕೂರಿನ ಜಾತ್ರೆಯ ಸಂಭ್ರಮವನ್ನು ಸವಿಯಲು ಆಗಮಿಸಿದ್ದರಿಂದ ಹುಸ್ಕೂರು ರಸ್ತೆಯಲ್ಲಿ ತಾಸುಗಟ್ಟಲೆ ವಾಹನ ದಟ್ಟಣೆ ಉಂಟಾಗಿತ್ತು. ತೇರುಗಳು ಆಗಮಿಸುವ ಮಾರ್ಗದಲ್ಲಿ ಕಿ.ಮೀ.ಗೂ ಹೆಚ್ಚು ದೂರ ವಾಹನಗಳು ಜಮಾವಣೆಗೊಂಡಿದ್ದವು.

ಪೊಲೀಸರು ಹರಸಾಹಸ ಮಾಡಿ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದರು. ಪೊಲೀಸ್‌ ಚೌಕಿಯನ್ನು ನಿರ್ಮಿಸಿ ಸಿಸಿಕ್ಯಾಮರ ಅಳವಡಿಸಿ ಚಲನವಲನಗಳ ಬಗ್ಗೆ ಗಮನಹರಿಸಿ ಬಿಗಿ ಭದ್ರತೆ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.