ADVERTISEMENT

ಪೊಲೀಸರ ಕೈ ಬಲಪಡಿಸಲು ಕ್ರಮ: ಆರಗ ಜ್ಞಾನೇಂದ್ರ

ಮಳೆಯ ನಡುವೆಯೇ ನಡೆದ ನಿರ್ಗಮನ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 11:49 IST
Last Updated 8 ಸೆಪ್ಟೆಂಬರ್ 2021, 11:49 IST
ಬೆಳಗಾವಿಯ ಕೆಎಸ್‌ಆರ್‌ಪಿ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಬುಧವಾರ ನಡೆದ ನಿರ್ಗಮನ ಪಥಸಂಚಲನದ ವೇಳೆ ಕಾನ್‌ಸ್ಟೆಬಲ್‌ ಪ್ರಶಿಕ್ಷಣಾರ್ಥಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಗೌರವ ವಂದನೆ ಸಲ್ಲಿಸಿದರುಪ್ರಜಾವಾಣಿ ವಾರ್ತೆ
ಬೆಳಗಾವಿಯ ಕೆಎಸ್‌ಆರ್‌ಪಿ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಬುಧವಾರ ನಡೆದ ನಿರ್ಗಮನ ಪಥಸಂಚಲನದ ವೇಳೆ ಕಾನ್‌ಸ್ಟೆಬಲ್‌ ಪ್ರಶಿಕ್ಷಣಾರ್ಥಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಗೌರವ ವಂದನೆ ಸಲ್ಲಿಸಿದರುಪ್ರಜಾವಾಣಿ ವಾರ್ತೆ   

ಬೆಳಗಾವಿ: ‘ಅಪರಾಧ ಜಗತ್ತಿನವರು ಈಗ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ದುಷ್ಕೃತ್ಯಗಳನ್ನು ನಡೆಸುತ್ತಿದ್ದಾರೆ. ಅವರನ್ನು ಹೆಡೆಮುರಿ ಕಟ್ಟುವುದಕ್ಕಾಗಿ ಪೊಲೀಸರ ಕೈ ಬಲಪಡಿಸಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಇಲ್ಲಿನ ಕಂಗ್ರಾಳಿಯಲ್ಲಿರುವ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಬುಧವಾರ ನಡೆದ 1ನೇ ತಂಡದ 171 ಸಶಸ್ತ್ರ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಗೌರವವಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘1.10 ಲಕ್ಷ ಪೊಲೀಸ್ ಪಡೆ ರಾಜ್ಯ ಸರ್ಕಾರದ ಸೈನ್ಯ. ಗಡಿಯಲ್ಲಿ ಸೈನ್ಯ ಸರ್ವ ಸನ್ನದ್ಧವಾಗಿದ್ದು, ದೇಶ ಕಾಯುತ್ತಿದೆ. ಗಡಿಯೊಳಗೆ ಆಂತರಿಕ ಭದ್ರತೆ ಕಾಪಾಡುತ್ತಿರುವ ಪೊಲೀಸ್ ಪಡೆಗೆ ಅನೇಕ ಬಾರಿ ನಮ್ಮವರೇ ಶತ್ರುಗಳಾಗಿ ಕಾಣುತ್ತಾರೆ. ಗಡಿ ಭಾಗದಲ್ಲಿ ಸೈನಿಕರು ಪ್ರಾಣವನ್ನೂ ಲೆಕ್ಕಿಸದೆ ದೇಶಕ್ಕಾಗಿ ಹೋರಾಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಹೊಣೆಗಾರಿಕೆ ನಿರ್ವಹಣೆ:‘ದೇಶದೊಳಗಿರುವ ಭ್ರಷ್ಟಾಚಾರಿಗಳು, ರಾಜ್ಯ ದ್ರೋಹಿಗಳು ಹಾಗೂ ಕಾನೂನು ಬಾಹಿರವಾಗಿ ನಡೆದುಕೊಳ್ಳುವವರ ವಿರುದ್ಧವಾಗಿ ಪೋಲಿಸರು ಹೋರಾಡುತ್ತಿದ್ದಾರೆ. ಗಡಿಯಲ್ಲಿ ಶತ್ರುಗಳು ನೇರವಾಗಿ ಕಾಣಿಸುತ್ತಾರೆ. ಆದರೆ, ದೇಶದ ಒಳಗಿನ ಅಪರಾಧಿಗಳನ್ನು ಹುಡುಕಿ ಶಿಕ್ಷೆ ಕೊಡಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಸವಾಲುಗಳನ್ನು ಮೆಟ್ಟಿ ನಿಂತು ಪೊಲೀಸರು ಹೊಣೆಗಾರಿಕೆ ನಿರ್ವಹಿಸುತ್ತಿದೆ’ ಎಂದರು.

‘ಪೊಲೀಸರ ಕಾರ್ಯವೈಖರಿ‌ ಹಿಂದೆ ಸೀಮಿತವಾಗಿತ್ತು. ಆದರೆ, ಈಗ ವಿಸ್ತಾರವಾಗಿದೆ. ಸೈಬರ್ ಕ್ರೈಮ್ ವಿಭಾಗವನ್ನು ಬಲಪಡಿಸಲಾಗುತ್ತಿದೆ. ಹಿಂದೆ ಪೊಲೀಸರಾಗುವುದು ಕೊನೆಯ ಆದ್ಯತೆ ಆಗುತ್ತಿತ್ತು. ಈಗ ಐಟಿ-ಬಿಟಿಯವರಿಗೆ ಸರಿಸಮನಾಗಿ ಕಾನ್‌ಸ್ಟೆಬಲ್‌ಗಳಿಗೂ ಉತ್ತಮ ವೇತನ ಕೊಡಲಾಗುತ್ತಿದೆ. ಶೇ 49ರಷ್ಟು ಮಂದಿಗೆ 2 ಕೋಣೆಗಳ ವಸತಿ ವ್ಯವಸ್ಥೆ ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.

‘70 ವರ್ಷಗಳಲ್ಲಿ ದೇಶವನ್ನು ಉತ್ತಮವಾಗಿ ಕಟ್ಟಿದ್ದೇವೆ. ಹಿಂದೆ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ದೀಪಾವಳಿ ಪಟಾಕಿ ರೀತಿಯಲ್ಲಿ ಬಾಂಬ್‌ಗಳು ಸಿಡಿಯುತ್ತಿದ್ದವು. ಅದೆಲ್ಲವನ್ನೂ ನಮ್ಮ ಪೊಲೀಸ್ ಪಡೆ ಹತ್ತಿಕ್ಕಿದೆ. ಶಾಂತಿಯುತ ಭಾರತ ಹಾಗೂ ಕರ್ನಾಟಕ ಕಟ್ಟಲು ಕ್ರಮ ವಹಿಸಲಾಗುತ್ತಿದೆ’ ಎಂದರು.

‘ಪೋಲಿಸರ ಕುಟುಂಬಕ್ಕೆ ಸಹಾಯಕವಾಗುವ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅವರ ಮಕ್ಕಳಿಗೆ ಕೌಶಲ ಅಭಿವೃದ್ಧಿ ತರಬೇತಿಗಳನ್ನು ನೀಡಲಾಗುತ್ತಿದೆ’ ಎಂದು ಹೇಳಿದರು.

ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ,ಉತ್ತರ ವಲಯದ ಐಜಿ‍ಪಿ ಸತೀಶ್‌ಕುಮಾರ್‌, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ ಪಾಲ್ಗೊಂಡಿದ್ದರು.

ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್ ಸ್ವಾಗತಿಸಿದರು.ಆಗಾಗ ಬೀಳುತ್ತಿದ್ದ ಮಳೆಯ ನಡುವೆಯೇ ಪಥಸಂಚಲನ ನಡೆಯಿತು.

ವರದಿ ವಾಚಿಸಿದ ಕೆಎಸ್ಆರ್‌ಪಿ ತರಬೇತಿ ಶಾಲೆಯ ಪ್ರಾಂಶುಪಾಲ ರಮೇಶ ಬೋರಗಾವೆ, ‘ಬುನಾದಿ ತರಬೇತಿ ಮುಗಿಸಿದ 171 ಪ್ರಶಿಕ್ಷಣಾರ್ಥಿಗಳಲ್ಲಿ 10 ಮಂದಿ ಎಸ್ಸೆಸ್ಸೆಲ್ಸಿ, 34 ಪಿ.ಯು.ಸಿ, 85 ಪದವಿ, 18 ಸ್ನಾತಕೋತ್ತರ, 4 ಡಿಪ್ಲೊಮಾ, 17 ಐ.ಟಿ.ಐ, ಹಾಗೂ 12 ಮಂದಿ ಎಂಜಿನಿಯರಿಂಗ್ ಪದವೀಧರರಿದ್ದಾರೆ. ಉನ್ನತ ಶಿಕ್ಷಣ ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿ ಇಲಾಖೆ ಸೇರುತ್ತಿದ್ದಾರೆ’ ಎಂದರು.

ತರಬೇತಿಯಲ್ಲಿ ಉತ್ತಮ ಪ್ರದರ್ಶನ ತೋರಿದವರು ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಚಿವರು ಬಹುಮಾನ ವಿತರಿಸಿದರು. ಹೊರಾಂಗಣ ಸ್ಪರ್ಧೆಯಲ್ಲಿ ಶರತ್ ಎಸ್.ವಿ. ಪ್ರಥಮ ಮತ್ತು ನಿಂಗಪ್ಪ ಮನಗಾವಿ ದ್ವಿತೀಯ, ಒಳಾಂಗಣದಲ್ಲಿ ಶ್ರೀಧರ್ ಕೋರ್ಟಿ ಪ್ರಥಮ ಮತ್ತು ವಿಶಾಲ ಕತ್ತಿ ದ್ವಿತೀಯ ಸ್ಥಾನ ಪಡೆದರು.

ಗುಂಡು ಹಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಮತ್ತು ಸಮಗ್ರ ಪ್ರಶಸ್ತಿಯನ್ನು ಧರ್ಮೇಶ್ ಗಳಿಸಿದರು. ಗುಂಡು ಹಾರಿಸುವ ಸ್ಪರ್ಧೆಯಲ್ಲಿ ಚಂದನ್‌ ಎಂ.ಸಿ. ದ್ವಿತೀಯ ಸ್ಥಾನ ಗಳಿಸಿದರು. ರಾವುತಪ್ಪ ಕೋಲಕಾರ ಸರ್ವೋತ್ತಮ ಮತ್ತುಡಿಜಿ ಹಾಗೂ ಐಜಿಪಿಯವರ ರೋಲಿಂಗ್ ಟ್ರೋಫಿ ಪಡೆದರು.

---

ಸೌಲಭ್ಯ ಒದಗಿಸಲಾಗುತ್ತಿದೆ

ಪೊಲೀಸ್ ಇಲಾಖೆಯಲ್ಲಿ ಉತ್ತಮ ತಂತ್ರಜ್ಞಾನದ ಬಳಕೆ ಮೂಲಕ ಆಧುನಿಕತೆಯ ಸ್ಪರ್ಶ ನೀಡುವ ಕಾರ್ಯವನ್ನು ಮತ್ತು ಸೌಲಭ್ಯವನ್ನು ಒದಗಿಸಲಾಗುತ್ತಿದೆ.

–ಆರಗ ಜ್ಞಾನೇಂದ್ರ, ಗೃಹ ಸಚಿವ

ವೃತ್ತಿಪರ ಕೌಶಲ

ಪೊಲೀಸರಿಗೆ ವೃತ್ತಿಪರ ಕೌಶಲ ತರಬೇತಿ ನೀಡಲಾಗಿದೆ. ಭಯ ಅಥವಾ ದಾಕ್ಷಿಣ್ಯ ಮೊದಲಾದ ಪ್ರಭಾವಗಳಿಗೆ ಒಳಗಾಗದೆ ಸೇವೆ ಸಲ್ಲಿಸಬೇಕು. ಒತ್ತಡಗಳಿಗೆ ಮಣಿಯಬಾರದು.

–ಅಲೋಕ್‌ಕುಮಾರ್‌, ಎಡಿಜಿಪಿ, ಕೆಎಸ್‌ಆರ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.