ADVERTISEMENT

ರೈತರಿಗೆ ನಿವೇಶನ ಹಂಚಿಕೆ ರದ್ದು: ಬಿಡಿಎಗೆ ಮೇಲ್ವಿಚಾರಣೆ ಸಮಿತಿ ತಾಕೀತು

ಶಿವರಾಮಕಾರಂತ ಬಡಾವಣೆ: ಬಿಡಿಎಗೆ ಮೇಲ್ವಿಚಾರಣೆ ಸಮಿತಿ ತಾಕೀತು

ನವೀನ್‌ ಮಿನೇಜಸ್‌
Published 21 ಮಾರ್ಚ್ 2023, 22:36 IST
Last Updated 21 ಮಾರ್ಚ್ 2023, 22:36 IST
   

ಬೆಂಗಳೂರು: ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಅವಸರದಲ್ಲಿ ನಿವೇಶನಗಳನ್ನು ಹಂಚುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಕ್ರಿಯೆಗೆ ಶಿವರಾಮಕಾರಂತ ಬಡಾವಣೆಯ ರಚನೆಯ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್‌ ರಚಿಸಿರುವ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ ನೇತೃತ್ವದ ಸಮಿತಿ ವಿರೋಧ ವ್ಯಕ್ತಪಡಿಸಿದೆ.

ಮೂರು ಸದಸ್ಯರ ಸಮಿತಿಯ ಸಮ್ಮತಿ ಪಡೆಯದೆ ಬಿಡಿಎ ಮಾರ್ಚ್‌ 23ರಿಂದ ನಿವೇಶನಗಳನ್ನು ಹಂಚಿಕೆ ಮಾಡುತ್ತಿದೆ. ಸಮಿತಿಯ ಸೋಮವಾರದ ನಡಾವಳಿಗಳಲ್ಲಿ, ಅವಸರದಿಂದ ಹಂಚಿಕೆ ಮಾಡಿದರೆ ಮುಂದೆ ಹಂಚಿಕೆದಾರರಿಗೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಬಡಾವಣೆ ನಿರ್ಮಾಣವಾಗದೆ ಅರ್ಕಾವತಿ ಮತ್ತು ನಾಡಪ್ರಭು ಕೆಂಪೇಗೌಡ ಬಡಾವಣೆಗಳಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿದ್ದರಿಂದ ಉಂಟಾದ ಪರಿಣಾಮಗಳ ಉದಾಹಣೆಯನ್ನೂ ನೀಡಲಾಗಿದೆ.

‘ಪ್ರಸ್ತುತ, ಶೇ 10ರಷ್ಟು ಬಡಾವಣೆ ನಿರ್ಮಾಣ ಕಾಮಗಾರಿಗಳು (ರಸ್ತೆ, ಚರಂಡಿ, ನೀರಿನ ಪೂರೈಕೆ ಇತ್ಯಾದಿ) ಮಾತ್ರ ಮುಗಿದಿದ್ದು, ಒಂಬತ್ತರಲ್ಲಿ ಒಬ್ಬ ಗುತ್ತಿಗೆದಾರರೂ ಬಿಲ್‌ ಸಲ್ಲಿಸಿಲ್ಲ. ಮೊದಲ ಹಂತದ ಅವಧಿಯಾದ 18 ತಿಂಗಳು ಜುಲೈ 2025ಕ್ಕೆ ಮುಗಿಯಲಿದೆ. ಎರಡನೇ ಹಂತಕ್ಕೆ ಇನ್ನೂ ಟೆಂಡರ್‌ ಕರೆದಿಲ್ಲ’ ಎಂದು ನಡಾವಳಿಯಲ್ಲಿ ತಿಳಿಸಲಾಗಿದೆ.

ADVERTISEMENT

ಬಡಾವಣೆಯ ಕರಡು ನಕ್ಷೆಯ ಆಧಾರದಲ್ಲಿ ನಿವೇಶನಗಳನ್ನು ಹಂಚಬೇಡಿ ಎಂದು ಬಿಡಿಎಗೆ ಸಮಿತಿ ಎಚ್ಚರಿಕೆ ನೀಡಿದೆ. ನಿವೇಶನಗಳು ಭೌತಿಕವಾಗಿ ನಿರ್ಮಾಣವಾಗದೆ, ಅವಕ್ಕೆ ಸಂಖ್ಯೆ ನೀಡದೆ, ಚೆಕ್ಕುಬಂದಿ ಇಲ್ಲದೆ ಕಾಗದದ ಮೇಲಿನ ಆಧಾರದಲ್ಲಿ ನಿವೇಶನ ಹಂಚಿಕೆ ಮಾಡಬಾರದು ಎಂದಿದೆ.

ಏಳು ಪುಟಗಳ ನಡಾವಳಿಯನ್ನು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ ಕಳುಹಿಸಲಾಗಿದ್ದು, ಬಿಡಿಎಯ ನಿವೇಶನ ಹಂಚಿಕೆಯನ್ನು ರದ್ದು ಮಾಡಬೇಕು. ಅದರ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಬಿಡಿಎಯ ಹಿಂದಿನ ಪ್ರಕಟಣೆಯಂತೆ 2023ರ ಅಂತ್ಯದಲ್ಲಿ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ನಿರ್ಮಾಣವಾಗದ ಬಡಾಣೆಯಲ್ಲಿ ಹಂಚಿಕೆ ಮಾಡುವ ಒತ್ತಡ ಅಧಿಕಾರಿಗಳ ಮೇಲಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.