ADVERTISEMENT

ಕೈ ಬಿಸಿ ಮಾಡಿದರಷ್ಟೇ ಕಾಲಬದ್ಧ ವೇತನ ಬಡ್ತಿ!

ಪದವಿಪೂರ್ವ ಶಿಕ್ಷಣ ಇಲಾಖೆ–ಉಪನ್ಯಾಸಕರ ಅಳಲು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಮಾರ್ಚ್ 2020, 19:29 IST
Last Updated 2 ಮಾರ್ಚ್ 2020, 19:29 IST
   

ಬೆಂಗಳೂರು: ಸರ್ಕಾರಿ ಪದವಿಪೂರ್ವ ಕಾಲೇಜುಗಳ ಸುಮಾರು 1,800ರಷ್ಟು ಉಪನ್ಯಾಸಕರು ಕಾಲಬದ್ಧ ವೇತನ ಬಡ್ತಿಗಾಗಿ ಸೇವಾ ಪುಸ್ತಕ ಮತ್ತು ದಾಖಲೆಗಳನ್ನು ಸಲ್ಲಿಸಿ5 ತಿಂಗಳು ಕಳೆದಿದ್ದರೂ, ಅವರ ಅರ್ಜಿ ವಿಲೇ ಆಗಿಲ್ಲ. ‘ಕೈ ಬಿಸಿ’ ಮಾಡಿದವರ ಅರ್ಜಿಗಳನ್ನಷ್ಟೇ ಪುರಸ್ಕರಿಸಲಾಗುತ್ತಿದೆ ಎಂದು ಕೆಲವು ಉಪನ್ಯಾಸಕರು ದೂರಿದ್ದಾರೆ.

‘ಕಾಲಬದ್ಧ ವೇತನ ಬಡ್ತಿಗಾಗಿ ಸಾವಿರಾರು ದಾಖಲೆಗಳು ಬಂದಿವೆ. ಅವುಗಳನ್ನು ಆದ್ಯತೆಯ ಮೇಲೆ ವಿಲೇ ವಾರಿ ಮಾಡುತ್ತೇವೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ನಾವು ಅರ್ಜಿ ಸಲ್ಲಿಸಿದ್ದು ಅಕ್ಟೋಬರ್‌ನಲ್ಲಿ.ಜನವರಿ, ಫೆಬ್ರುವರಿ ತಿಂಗಳಲ್ಲಿ ಅರ್ಜಿ ಕಳುಹಿಸಿದ ಉಪನ್ಯಾಸಕರಿಗೆ 2–3 ದಿನಗಳಲ್ಲೇ ಕಾಲಬದ್ಧ ವೇತನ ಬಡ್ತಿ ನೀಡಿದ ನಿದರ್ಶನಗಳಿವೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಹಲವು ಉಪನ್ಯಾಸಕರು ‘ಪ್ರಜಾವಾಣಿ’ ಬಳಿ ಗೋಳು ಹೇಳಿಕೊಂಡರು.

‘ವಿವಿಧ ಹಂತಗಳಲ್ಲಿ ಅಧಿಕಾರಿಗಳಿಗೆ ಸುಮಾರು ₹ 4 ಸಾವಿರ ದವರೆಗೆ ಲಂಚ ನೀಡಬೇಕು. ತುರ್ತಾಗಿ ಆಗಬೇಕು ಎಂದರೆ ಲಂಚದ ಮೊತ್ತ ಇನ್ನಷ್ಟು ಹೆಚ್ಚುತ್ತದೆ. ದೂರದ ಜಿಲ್ಲೆಗಳಿಂದ ಬಂದವರು ಬೇರೆ ದಾರಿ ಇಲ್ಲದೆ ಕೇಳಿ ದಷ್ಟು ದುಡ್ಡು ಕೊಟ್ಟು ಹೋಗುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಒಂದು ಕಾಲೇಜಿನಿಂದ 3-4 ಮಂದಿ ಉಪನ್ಯಾಸಕರು ಏಕ ಕಾಲದಲ್ಲಿ ದಾಖಲೆಗಳನ್ನು ಸಲ್ಲಿಸಿದರೂ ಕೂಡ ಯಾರು ಕಚೇರಿಗೆ ಬಂದು ಮಾತುಕತೆ, ವ್ಯವಹಾರ ನಡೆಸುತ್ತಾರೋ ಅಂಥವರಿಗೆ ಮಾತ್ರ ವ್ಯಕ್ತಿಗತ ಆದೇಶಗಳು ಆಗುತ್ತಿವೆ’ ಎಂದರು.

‘ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕೆಲಸಗಳು ಸಮರ್ಪ ಕವಾಗಿ ಆಗುತ್ತಲೇ ಇಲ್ಲ. ಪದವಿಪೂರ್ವ ಪರೀಕ್ಷೆ ನಡೆಸುವುದಷ್ಟೇ ಇಲಾಖೆಯ ಕೆಲಸ ಅಲ್ಲ’ ಎಂದು ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದರು.

ಸಚಿವ ಭರವಸೆ: ‘ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನನ್ನ ಗಮನದಲ್ಲಿದೆ. ಕೂಡಲೇ ಇಂತಹ ಎಲ್ಲಾ ಪ್ರಕರಣಗಳನ್ನು ಆದ್ಯತೆ ಮೇರೆಗೆ ಇತ್ಯರ್ಥ ಮಾಡಲು ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್‌ ಹೇಳಿದರು. ಈ ಬಗ್ಗೆ ಇಲಾಖೆಯ ನಿರ್ದೇಶಕರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

**

ಲಂಚ ಪಡೆಯತ್ತಿರುವುದರ ಆರೋಪದ ಕುರಿತು ಸೂಕ್ತ ದಾಖಲೆ‌‌ ಒದಗಿಸಿದಲ್ಲಿ ಸಂಬಂಧಿತರ ಮೇಲೆ‌ ಕ್ರಮ ಕೈಗೊಳ್ಳಲಾಗುವುದು.
–ಎಸ್‌.ಸುರೇಶ್ ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

**

ಸಮರ್ಥ ಅಧಿಕಾರಿಗಳ ಕೊರತೆ ಯನ್ನು ಇಲಾಖೆಯ ಸಿಬ್ಬಂದಿ ಚೆನ್ನಾಗಿ ಬಳಸಿಕೊಂಡು ತಮಗಿಷ್ಟ ಬಂದಂತೆ ಕೆಲಸ ಮಾಡುತ್ತಿದ್ದಾರೆ.
–ತಿಮ್ಮಯ್ಯ ಪುರ್ಲೆ, ಗೌರವಾಧ್ಯಕ್ಷ, ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.